PRK ಬ್ಯಾನರ್‌ನಡಿ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಿಸಿರುವ ‘ಆಚಾರ್ & ಕೋ’ ಸಿನಿಮಾ ಈ ವಾರ ತೆರೆಕಾಣುತ್ತಿದೆ. ತಮ್ಮ ನಿರ್ಮಾಣದ ಸಿನಿಮಾ, PRK ಮುಂದಿನ ಯೋಜನೆಗಳು, ಕನ್ನಡ ಸಿನಿಮಾ, OTT ಹಾಗೂ ಇನ್ನಿತರೆ ವಿಷಯಗಳ ಕುರಿತು ಅಶ್ವಿನಿಯವರು ಮಾತನಾಡಿದ್ದಾರೆ.
PRK ಪ್ರೊಡಕ್ಷನ್ಸ್ ಬ್ಯಾನರ್‌ನಡಿ ತಯಾರಾಗಿರುವ ‘ಆಚಾರ್ & ಕೋ’ ಸಿನಿಮಾ ಈ ವಾರ ತೆರೆಕಾಣುತ್ತಿದೆ. ಇದು ಪುನೀತ್ ರಾಜಕುಮಾರ್ ಇಷ್ಟಪಟ್ಟಿದ್ದ ಕತೆ. ಅಪ್ಪು ಅಕಾಲಿಕ ಅಗಲಿಕೆಯ ಕೆಲ ಸಮಯದ ನಂತರ ಅಶ್ವಿನಿಯವರು ಈ ಪ್ರಾಜೆಕ್ಟ್ ಕೈಗೆತ್ತಿಕೊಂಡರು. ಮೊದಲ ಬಾರಿ ಚಿತ್ರನಿರ್ಮಾಣದಲ್ಲಿ ಅವರು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಪ್ರಾಜೆಕ್ಟ್ ಇದು. ಸಿನಿಮಾ ತೆರೆಕಾಣುತ್ತಿರುವ ಸಂದರ್ಭದಲ್ಲಿ ಅಶ್ವಿನಿಯವರು ಪತ್ರಕರ್ತರೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವಿವಿಧ ವಿಚಾರಗಳ ಬಗೆಗಿನ ಅವರ ಮಾತುಗಳು ಇಲ್ಲಿವೆ…
ನಾನು ಸ್ಕ್ರಿಪ್ಟ್ ಓದಿದ್ದೆ | ‘ಆಚಾರ್ & ಕೋ’ ಸಿನಿಮಾದ ಕತೆ ನಮಗೆ ಬಂದದ್ದು ಮೂರು ವರ್ಷದ ಹಿಂದೆ. ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ಆರು ನಿಮಿಷಗಳ ಒಂದು ವೀಡಿಯೋ ಮಾಡಿಕೊಂಡು ಬಂದಿದ್ರು. ಅದನ್ನು ನೋಡಿಯೇ ಅಪ್ಪು ಸಿನಿಮಾಗೆ ಓಕೆ ಮಾಡಿದ್ದರು. ನಾನು ಸ್ಕ್ರಿಪ್ಟ್ ಕೂಡ ಓದಿದ್ದೆ. ನಿರ್ದೇಶಕಿ ಸಿಂಧು ಇನ್ನೂ ಚಿಕ್ಕ ಹುಡುಗಿ, ಹೇಗೆ ಮಾಡುತ್ತಾರೋ ಎಂದು ನನಗೆ ಅಳುಕಿತ್ತು. ಆದರೆ ಅಪ್ಪು ತುಂಬಾ ವಿಶ್ವಾಸದಲ್ಲಿದ್ದರು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ 2021ರ ಕೊನೆಯಲ್ಲಿ ಸಿನಿಮಾ ಶುರುವಾಗಬೇಕಿತ್ತು. ಅಪ್ಪು ಅವರು ಅಗಲಿದ್ದರಿಂದ ಪ್ರಾಜೆಕ್ಟ್ ಮುಂದಕ್ಕೆ ಹೋಯ್ತು. 2022ರ ಏಪ್ರಿಲ್‌ನಲ್ಲಿ ಸಿನಿಮಾ ಆರಂಭಿಸಿದೆವು.
ಹ್ಯೂಮರ್ – ಡ್ರಾಮಾ | ಇದೊಂದು ಸಿಂಪಲ್ ಫ್ಯಾಮಿಲಿ ಸ್ಟೋರಿ. ಎಲ್ಲಾ ವಯಸ್ಸಿನ ಪ್ರೇಕ್ಷಕರೂ ಎಂಜಾಯ್ ಮಾಡ್ಬಹುದು. 60 – 70ರ ಕಾಲಘಟ್ಟದ ಕತೆ. ಹ್ಯೂಮರ್ – ಡ್ರಾಮಾ ಜಾನರ್. ಚಿತ್ರದಲ್ಲಿ ಮಹಿಳಾ ಟೆಕ್ನೀಷಿಯನ್ಸ್ ಹೆಚ್ಚು ಕೆಲಸ ಮಾಡಿದ್ದಾರೆ. ಇದು ಕೋ ಇನ್ಸಿಡೆನ್ಸ್ ಅಷ್ಟೆ. ಇದು ವಿಮೆನ್ ಸೆಂಟ್ರಿಕ್ ಸಿನಿಮಾ ಅಲ್ಲ. ಆದರೆ ವುಮೆನ್ ಕ್ಯಾರಕ್ಟರ್ಸ್‌ಗೆ ಇಂಪಾರ್ಟೆನ್ಸ್ ಇದೆ. ಸಿನಿಮಾದ ಚಿತ್ರಕಥೆ ವಿಷಯದಲ್ಲಿ ನಾನೆಂದೂ ಮೂಗು ತೂರಿಸಿಲ್ಲ. ಅಪ್ಪು ಅವರು ಕೂಡ ನಿರ್ದೇಶಕರಿಗೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು ಎಂದು ಹೇಳುತ್ತಿದ್ದರು. ನಾನೂ ಅದನ್ನೇ ಅನುಸರಿಸಿದ್ದೇನೆ. ಸಹಜವಾಗಿ ಒಂದೆರೆಡು ಸಲಹೆ ನೀಡಿದ್ದೆ ಅಷ್ಟೆ. ಸಿಂಧು ಅವನ್ನು ಅಳವಡಿಸಿಕೊಂಡರು. ನನಗಿದು ಮೊದಲನೇ ನಿರ್ಮಾಣದ ಚಿತ್ರ. Excitement, ಭಯ ಎರಡೂ ಇದೆ.
ಮಿಸ್ಟೇಕ್ಸ್ ಆಗಿವೆ | ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕು ಎನ್ನುವ ಉದ್ದೇಶದಿಂದಲೇ ಅಪ್ಪು PRK ಪ್ರೊಡಕ್ಷನ್ಸ್ ಆರಂಭಿಸಿದ್ದು. ಬೇರೆ ಬೇರೆ ಜಾನರ್ ಪ್ರಯತ್ನಿಸಬೇಕು ಎನ್ನುವ ನಿಟ್ಟಿನಲ್ಲಿ ನಾವು ಹೆಜ್ಜೆ ಇಟ್ಟಿದ್ದೆವು. ಈ ಹಂತದಲ್ಲಿ
ಒಂದೆರೆಡು ಮಸ್ಟೇಕ್ಸ್ ಕೂಡ ಆಯ್ತು. ಕತೆ ಚೆನ್ನಾಗಿರುತ್ತಿದ್ದವು. ಆದರೆ ತೆರೆ ಮೇಲೆ ಪ್ರಸೆಂಟ್ ಮಾಡುವಾಗ ತಪ್ಪಾಗಿತ್ತು. ಇದೆಲ್ಲವೂ ಇದ್ದದ್ದೆ. ಅಮ್ಮ ಪಾರ್ವತಮ್ಮನವರ ಇನ್‌ಸ್ಪಿರೇಷನ್, ಅಪ್ಪು ಅವರ ಸಿನಿಮಾ ಬಗೆಗಿನ ಪ್ಯಾಷನ್ ನನಗೆ ಸ್ಫೂರ್ತಿ. ಮುಂದಿನ ದಿನಗಳಲ್ಲಿ ಒಳ್ಳೆಯ ಕತೆಗಳನ್ನು ಸಿನಿಮಾ ಮಾಡುತ್ತೇವೆ.
ಮೆಡಿಕಲ್ ಥ್ರಿಲ್ಲರ್ ‘O2’ | ಈ ವಾರ ನಮ್ಮ ‘ಆಚಾರ್ & ಕೋ’ ಸಿನಿಮಾ ತೆರೆಕಾಣುತ್ತಿದೆ. PRK ಬ್ಯಾನರ್‌ನ ಮುಂದಿನ ಸಿನಿಮಾ ‘O2’ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದು ಮೆಡಿಕಲ್ ಥ್ರಿಲ್ಲರ್ ಜಾನರ್. ಹೊಸಬರ ತಂಡ ಸಿನಿಮಾ ಮಾಡಿದೆ. ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ವರ್ಷಕ್ಕೆರಡಾದರೂ ಸಿನಿಮಾ ನಿರ್ಮಿಸಬೇಕು ಅಂದುಕೊಂಡಿದ್ದೇವೆ. ನಮ್ಮಲ್ಲಿಗೆ ಹಲವರು ಸ್ಕ್ರಿಪ್ಟ್ ತರುತ್ತಾರೆ. ನಾನು ಮೊದಲು ಓದುತ್ತೇನೆ. ಅದಾದ ನಂತರ ನಮ್ಮಲ್ಲಿನ ನಿರ್ದೇಶಕರ ಒಂದು ಟೀಮ್‌ಗೆ ಚಿತ್ರಕಥೆ ಓದುವಂತೆ ಹೇಳುತ್ತೇನೆ. ಅವರಿಗೆ ಕತೆ ಇಷ್ಟವಾಗಿ ನಮ್ಮ ಕ್ರೈಟೀರಿಯಾ ಹೊಂದಿಕೆಯಾದರೆ ಸಿನಿಮಾ ಮಾಡುವುದು.
OTT ಡೈನಾಮಿಕ್ಸ್ ಚೇಂಜ್ ಆಗಿದೆ | ನಮ್ಮ ಬ್ಯಾನರ್‌ನಡಿ ತಯಾರಾಗಿ ಥಿಯೇಟರ್‌ನಲ್ಲಿ ಬಿಡುಗಡೆ ಆಗುತ್ತಿರುವ ಎರಡನೇ ಚಿತ್ರವಿದು. ಉಳಿದಂತೆ ನಮ್ಮೆಲ್ಲಾ ಚಿತ್ರಗಳು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿವೆ. ‘ಆಚಾರ್ & ಕೋ’ ಸಿನಿಮಾದ ಬಜೆಟ್ ಅಂದುಕೊಂಡದ್ದಕ್ಕಿಂತ ಹೆಚ್ಚೇ ಆಗಿದೆ. ಸದ್ಯ ಈ ಸಿನಿಮಾದ ಥಿಯೇಟ್ರಿಕಲ್ ರಿಲೀಸ್ ಬಗ್ಗೆ ಅಷ್ಟೇ ಯೋಚಿಸುತ್ತಿದ್ದೇವೆ. ಓಟಿಟಿ ಕುರಿತು ಇನ್ನೂ ಆಲೋಚಿಸಿಲ್ಲ. ಕೋವಿಡ್ ನಂತರ ಓಟಿಟಿಯವರೇ ನಮ್ಮನ್ನು ಅಪ್ರೋಚ್ ಮಾಡಿದ್ದರು. ಈಗ ಓಟಿಟಿಗೆ ವಿವಿಧ ಭಾಷೆಗಳ ಕಂಟೆಂಟ್ ಯತೇಚ್ಛವಾಗಿ ಬರುತ್ತಿದೆ. ಸಹಜವಾಗಿಯೇ ವೀಕ್ಷಕರಲ್ಲೂ ಕಂಪಾರಿಷನ್ ಶುರುವಾಗಿದೆ. ಸಿನಿಮಾ ಮಾಡುವವರ ಜವಾಬ್ದಾರಿ ಹೆಚ್ಚಾಗಿದೆ.
ಪ್ರೊಡಕ್ಷನ್ ಕಷ್ಟ! | ಈ ಸಿನಿಮಾದ ನಿರ್ಮಾಣದಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದರಿಂದ ನನಗೆ ಚಿತ್ರನಿರ್ಮಾಣದ ಕಷ್ಟಗಳು ಅರಿವಾಗಿವೆ. ಇಲ್ಲಿ ರಿಸ್ಕ್ ತುಂಬಾ ಇದೆ. ಸಿನಿಮಾ ನಿರ್ಮಾಣ ಒಂದು ರೀತಿ ಗ್ಯಾಂಬ್ಲಿಂಗ್ ಥರ ಆಗಿದೆ. ಪರೀಕ್ಷೆ ಬರೆದು ರಿಸಲ್ಟ್ ಎದುರು ನೋಡುತ್ತಿರುವ ಸ್ಟೂಡೆಂಟ್ಸ್ ಥರ ಆಗಿದೀನಿ ನಾನೀಗ! ಅಪ್ಪು ಅವರು ಚಿತ್ರನಿರ್ಮಾಣ ಸಂಸ್ಥೆ ಆರಂಭಿಸುವಾಗ ಸಹಜವಾಗಿಯೇ ಕೆಲವರು ಎಚ್ಚರಿಕೆಯಿಂದ ಇರುವಂತೆ ಹೇಳಿದ್ದರು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶವೇ ಅಪ್ಪು ಅವರಿಗೆ ಮುಖ್ಯವಾಗಿತ್ತು. ಧೈರ್ಯದಿಂದ ಪ್ರೊಡಕ್ಷನ್ ಆರಂಭಿಸಿದರು. ‘ಆಚಾರ್ & ಕೋ’ ಸಿನಿಮಾ ಮಾಡುವಾಗ ಸ್ವಾಮಿ, ಸತೀಶ್ ಸದಾ ನೆರವಿಗೆ ಇರುತ್ತಿದ್ದರು. ಹಾಗಾಗಿ ನನಗೆ ಅಷ್ಟೇನೂ ಕಷ್ಟವಾಗಲಿಲ್ಲ.
ಮೊದಲಿನಿಂದಲೂ ಓದ್ತಿದ್ದೆ | ನಾನು ಸಿನಿಮಾ ನೋಡಲು ಶುರು ಮಾಡಿದ್ದು ಏಳೆಂಟು ವರ್ಷಗಳಿಂದೀಚೆಗೆ. ನಾವು ಪ್ರೊಡಕ್ಷನ್ಸ್ ಶುರು ಮಾಡಿದಾಗ ಸಿನಿಮಾ ನೋಡಲು ಆರಂಭಿಸಿದೆ. ಆದರೆ ಚಿಕ್ಕಂದಿನಿಂದಲೂ ಓದುವ ಅಭ್ಯಾಸವಿತ್ತು. ಹಾಗಾಗಿ ಸಿನಿಮಾಗೆ ಯಾವ ಕತೆ ಇದ್ದರೆ ಚೆನ್ನಾಗಿರುತ್ತೆ ಅನ್ನೋದನ್ನು ಗುರುತಿಸಬಲ್ಲೆ. ಪರ್ಸನಲ್ ಆಗಿ ನನಗೆ ಥ್ರಿಲ್ಲರ್ ಕತೆಗಳು ಇಷ್ಟ. ಸದ್ಯ ಕನ್ನಡದ ಸಣ್ಣಕಥೆಗಳನ್ನು ಓದ್ತಾ ಇದ್ದೀನಿ. ನಮ್ಮ ಬ್ಯಾನರ್‌ನಿಂದ ಬಿಗ್ ಬಜೆಟ್ ಸಿನಿಮಾ ಮಾಡೋಲ್ಲ. ಅದು ತುಂಬಾ ರಿಸ್ಕ್. ಜೇಕಬ್ ವರ್ಗಿಸ್ ನಿರ್ದೇಶನದಲ್ಲಿ ಒಂದು ಸಿನಿಮಾ ಆಗಬೇಕಿತ್ತು. ಅದು ಆಗಿದ್ದಿದ್ದರೆ ನಮ್ ಬ್ಯಾನರ್‌ನ ಮೊದಲ ದೊಡ್ಡ ಸಿನಿಮಾ ಆಗುತ್ತಿತ್ತು.
ಮಕ್ಕಳ ಆಸಕ್ತಿ | ನನ್ನ ಚಿಕ್ಕ ಮಗಳಿಗೆ ಸಿನಿಮಾ ಬಗ್ಗೆ ಆಸಕ್ತಿ ಇದೆ. ಅವರಣ್ಣ ವಿನಯ್ (ವಿನಯ್ ರಾಜಕುಮಾರ್) ಜೊತೆ ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮಾಡ್ತಾ ಇರ್ತಾಳೆ. ಈಗಿನ್ನೂ ಸೆಕೆಂಡ್ ಪಿಯೂಸಿ ಅವಳು. ಮುಂದೆ ಬರವಣಿಗೆ, ತಾಂತ್ರಿಕ ವಿಭಾಗಗಳಲ್ಲಿ ಅವಳು ತೊಡಗಿಸಿಕೊಳ್ಳಬಹುದು. ದೊಡ್ಡ ಮಗಳು ಒಳ್ಳೇ ಆರ್ಟಿಸ್ಟ್ (ಚಿತ್ರಕಲಾವಿದೆ). ಅವಳ ಆಸಕ್ತಿಗಳು ಆ ಕಡೆ ಇದೆ. ‘ಆಚಾರ್ & ಕೋ’ ಸಿನಿಮಾ ನೋಡಿ ಇಷ್ಟಪಟ್ಟಳು. ವಿನಯ್ (ವಿನಯ್ ರಾಜಕುಮಾರ್) ಕೆರಿಯರ್ ಚೆನ್ನಾಗಿ ಆಗ್ತಿದೆ. ಸ್ಲೋ ಆಗಿ ಶುರು ಮಾಡಿದ. ಈಗ ಡಿಫರೆಂಟ್ ಜಾನರ್ ಸಿನಿಮಾಗಳನ್ನು ಮಾಡ್ತಿದಾನೆ. ಯುವ ಈಗಷ್ಟೇ ಶುರು ಮಾಡಿದ್ದಾನೆ.
ಕನ್ನಡ ಸಿನಿಮಾಗಳ ನಿರ್ಲಕ್ಷ್ಯ | ಕನ್ನಡ ಸಿನಿಮಾಗಳನ್ನು ಓಟಿಟಿ ಪ್ಲಾಟ್‌ಫಾರ್ಮ್‌ಗಳು ಎನ್‌ಕರೇಜ್ ಮಾಡ್ತಿಲ್ಲ ಅನ್ನೋದು ಹೌದು. ಹಾಗೆ ನೋಡಿದರೆ ದಕ್ಷಿಣದ ಸಿನಿಮಾಗಳಿಗೇ ಹೀಗಾಗುತ್ತಿದೆ. ಮೊದಲ ಪ್ರಿಯಾರಿಟಿ ತೆಲುಗು, ತಮಿಳು, ಮಲಯಾಳಂಗೆ. ಕೊನೆಯ ಸ್ಥಾನದಲ್ಲಿ ಕನ್ನಡ ಸಿನಿಮಾಗಳಿವೆ. ಸಿನಿಮಾ ಖರೀದಿಸಲು ಅವರದ್ದೇ ಒಂದು ಕ್ರೈಟೀರಿಯಾ ಇದೆ. ವೀವರ್‌ಶಿಪ್ ಬೇಸ್ ಮೇಲೆ ತಗೋತಾ ಇದ್ದಾರೆ. ಮುಂದಿನ ದಿನಗಳಲ್ಲಿ ಲೆಕ್ಕಾಚಾರ ಬದಲಾಗಬಹುದು.
ಆಕಾಶ್, ರಾಜಕುಮಾರ ಇಷ್ಟ | ಅಪ್ಪು ಅವರು ಭಾರತೀಯ ಸಿನಿಮಾಗಳಷ್ಟೇ ಅಲ್ಲದೆ ವರ್ಲ್ಡ್ ಸಿನಿಮಾಗಳನ್ನೂ ನೋಡ್ತಾ ಇದ್ರು. ಅವರಿಗೆ ತುಂಬಾ ಇಷ್ಟವಾದ ಸಿನಿಮಾ ಆದ್ರೆ ನನ್ನನ್ನೂ ಆ ಸಿನಿಮಾ ನೋಡುವಂತೆ ಒತ್ತಾಯ ಮಾಡ್ತಿದ್ರು. ತಮ್ಮ ಸಿನಿಮಾಗಳು ಇನ್ನೆರೆಡು ವಾರದಲ್ಲಿ ರಿಲೀಸ್ ಆಗ್ತಿವೆ ಅನ್ನೋವಾಗ ಅವರು ಒಂಚೂರು ಒತ್ತಡದಲ್ಲಿ ಇರ್ತಾ ಇದ್ರು. ‘ನೀವಾಗ್ಲೇ ಪ್ರೂವ್ ಮಾಡಿದ್ದೀರಿ, ಆದ್ರೂ ಯಾಕೆ ಸ್ಟ್ರೆಸ್?’ ಅಂತ ನಾನು ಹೇಳ್ತಿದ್ದೆ. ಆಗ ನಾನು ಕೂಡ ಹೆಚ್ಚು ಅವರಲ್ಲಿ ವಾದ ಮಾಡೋಕೆ ಹೋಗ್ತಾ ಇರಲಿಲ್ಲ. ಅವರ ಸಿನಿಮಾಗಳ ಪೈಕಿ ನನಗೆ ಆಕಾಶ್, ರಾಜಕುಮಾರ ಇಷ್ಟ.
ಅಂಗಾಂಗದಾನ ರಾಯಭಾರಿ | ರಾಜ್ಯ ಸರ್ಕಾರದವರು ಅಂಗಾಂಗದಾನಕ್ಕೆ ರಾಯಭಾರಿಯಾಗುವಂತೆ ನನ್ನನ್ನು ಕೋರಿದ್ದಾರೆ. ಇದು ತುಂಬಾ ಒಳ್ಳೇ ಇನಿಷಿಯೇಟಿವ್. ಅಪ್ಪಾಜಿ ಸೇರಿದಂತೆ ಕುಟುಂಬದವರು ನೇತ್ರದಾನದ ಬಗ್ಗೆ ಕೆಲಸ ಮಾಡುತ್ತಿದ್ದಾರೆ. ಅಂಗಾಂಗದಾನ ತುಂಬಾ ಒಳ್ಳೇ ವಿಷಯ. ತುಂಬಾ ಜೀವಗಳನ್ನು ಉಳಿಸಬಹುದಾದ ಕೆಲಸ. ಖಂಡಿತ ರಾಜ್ಯಸರ್ಕಾರದ ಕೆಲಸಕ್ಕೆ ಕೈಜೋಡಿಸುತ್ತೇನೆ.