ರಣವೀರ್‌ ಸಿಂಗ್‌ ಅಭಿನಯದ ’83’ ಹಿಂದಿ ಚಿತ್ರಕ್ಕೆ ಉತ್ತಮ ವಿಮರ್ಶೆಗಳೇನೋ ಬಂದವು. ಆದರೆ ಥಿಯೇಟರ್‌ಗೆ ಬಂದು ಜನ ಸಿನಿಮಾ ನೋಡಲಿಲ್ಲ. ಹಾಗಾಗಿ ದುಬಾರಿ ಬಜೆಟ್‌ನ ಸಿನಿಮಾ ಸುಮಾರು 80 ಕೋಟಿ ರೂಪಾಯಿ ನಷ್ಟ ಅನುಭವಿಸುವಂತಾಗಿದೆ ಎನ್ನಲಾಗಿದೆ.

ಕಬೀರ್‌ ಖಾನ್‌ ನಿರ್ದೇಶನದ ’83’ ಹಿಂದಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ನೆಲಕಚ್ಚಿದೆ. 1983ರ ಚೊಚ್ಚಲ ಕ್ರಿಕೆಟ್‌ ವರ್ಲ್ಡ್‌ ಕಪ್‌ ಹಿನ್ನೆಲೆಯ ಕತೆಯಲ್ಲಿ ರಣವೀರ್‌ ಸಿಂಗ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ದೊಡ್ಡ ತಾರಾಬಳಗ, ದುಬಾರಿ ಮೇಕಿಂಗ್‌ನಿಂದಾಗಿ ಸಿನಿಮಾದ ಬಜೆಟ್‌ 240 ಕೋಟಿ ರೂಪಾಯಿ ದಾಟಿತ್ತು. ಪ್ರೊಮೋಷನ್‌ ಬಜೆಟ್‌ ಸೇರಿದರೆ ಇದು 260 ಕೋಟಿ ರೂಪಾಯಿ. ಥಿಯೇಟರ್‌ ಶೇರ್‌, ಡಿಜಿಟಲ್‌, ಸ್ಯಾಟಲೈಟ್‌ ಹಕ್ಕುಗಳ ಗಳಿಕೆಯ ನಂತರವೂ ಸುಮಾರು 80 ಕೋಟಿಯಷ್ಟು ನಷ್ಟ ಭರಿಸುತ್ತಿದೆ ಎಂದು ಬಾಕ್ಸ್‌ ಆಫೀಸ್‌ ಇಂಡಿಯಾ ವೆಬ್‌ಸೈಟ್‌ ವರದಿ ಹೇಳುತ್ತದೆ.

ಈ ಹಿಂದೆ 2015ರಲ್ಲಿ ತೆರೆಕಂಡ ‘ಬಾಂಬೆ ವೆಲ್ವೆಟ್‌’ ಸಿನಿಮಾ ಸುಮಾರು 70 ಕೋಟಿಯಷ್ಟು ದುಬಾರಿ ಮೊತ್ತದ ನಷ್ಟ ಅನುಭವಿಸಿತ್ತು. ಶಾರುಖ್‌ ಖಾನ್‌ ಅಭಿನಯದ ‘ಝೀರೋ’ (2018) ಕೂಡ ದುಬಾರಿ ಬಜೆಟ್‌ನಲ್ಲಿ ತಯಾರಾಗಿದ್ದ ಸಿನಿಮಾ. ಈ ಚಿತ್ರದ ನಷ್ಟವೂ 70 ಕೋಟಿ ದಾಟಿತ್ತು. ಹೀರೋ ಶಾರುಖ್‌ ಅವರೇ ಚಿತ್ರದ ನಿರ್ಮಾಪಕರೂ ಆಗಿದ್ದರು. ಹಾಗಾಗಿ ಅವರ ಸಂಭಾವನೆ ಹೊರತುಪಡಿಸಿದರೆ ನಷ್ಟದ ಬಾಬತ್ತು ಕಡಿಮೆ ಎಂದಿದ್ದರು ಸಿನಿಮಾ ವಿಶ್ಲೇಷಕರು. ಒಂದೊಮ್ಮೆ ಇತರೆ ನಿರ್ಮಾಣ ಸಂಸ್ಥೆಯಡಿ ಈ ಸಿನಿಮಾ ತಯಾರಾಗಿದ್ದಿದ್ದರೆ ನಷ್ಟದ ಬಾಬತ್ತು ಹೆಚ್ಚುತ್ತಿತ್ತು. ಈಗ ’83’  ಸಿನಿಮಾ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದ ಹಿಂದಿ ಸಿನಿಮಾ ಆಗಲಿದೆ.

’83’ ಸಿನಿಮಾ ಎರಡು ರೀತಿಯಲ್ಲಿ ನಷ್ಟ ಅನುಭವಿಸಿದೆ. ಬಾಕ್ಸ್‌ ಆಫೀಸ್‌ ನಷ್ಟ ಒಂದೆಡೆಯಾದರೆ, OTT ಪ್ಲಾಟ್‌ಫಾರ್ಮ್‌ನಲ್ಲೂ (ಡಿಜಿಟಲ್‌) ಚಿತ್ರಕ್ಕೆ ನಿರೀಕ್ಷಿತ ಹಣಕಾಸಿನ ಬೆಂಬಲ ಸಿಗುತ್ತಿಲ್ಲ. ಮೊದಲು ಮಾಡಿಕೊಂಡ ಒಪ್ಪಂದದಿಂದ OTT ಪ್ಲಾಟ್‌ಫಾರ್ಮ್‌ ಹಿಂದೆ ಸರಿದಿದೆ. ಇದರ ಬದಲಿಗೆ ನಾಲ್ಕು ವಾರಗಳ ವಿಂಡೋ OTT ರಿಲೀಸ್‌ಗೆ ಓಕೆಯಾಗಿದೆ ಎನ್ನುವುದು ಲೇಟೆಸ್ಟ್‌ ವರದಿ. ಇದೇ ನಿರ್ಮಾಣ ಸಂಸ್ಥೆಯಡಿ ತಯಾರಾದ ಈ ಹಿಂದಿನ ಎರಡು ಚಿತ್ರಗಳಿಂದ ನಷ್ಟ ಅನುಭವಿಸಿರುವ ಓಟಿಟಿ ವೇದಿಕೆ ’83’ ವಿಚಾರದಲ್ಲಿ ಎಚ್ಚರಿಕೆ ವಹಿಸಿದೆ.

ಇಲ್ಲಿಯವರೆಗೆ ’83’ ಚಿತ್ರದ ಥಿಯೇಟರ್‌ ಗಳಿಕೆ 80 ಕೋಟಿ ರೂಪಾಯಿ. ನಾಲ್ಕು ವಾರಗಳ ವಿಂಡೋ OTT ಯಿಂದ 30ರಿಂದ 35 ಕೋಟಿ ರೂಪಾಯಿ ಗಳಿಕೆ ಸಾಧ್ಯವಾಗಲಿದೆ. ಸ್ಟಾರ್/ಹಾಟ್‌ಸ್ಟಾರ್‌ನ ಸ್ಯಾಟಲೈಟ್‌ ಮತ್ತು ಡಿಜಿಟಲ್‌ ರೈಟ್ಸ್‌ನಿಂದ 50 ಕೋಟಿ, ನೆಟ್‌ಫ್ಲಿಕ್ಸ್‌ ಡಿಜಿಟಲ್‌ ರೈಟ್ಸ್‌ 30 ಕೋಟಿ, ಮ್ಯೂಸಿಕ್‌ ಮತ್ತು ಪ್ರಾದೇಶಿಕ ಸ್ಯಾಟಲೈಟ್‌ನಿಂದ 20 ಕೋಟಿ ರೂಪಾಯಿ ಸೇರಿದಂತೆ 180 ಕೋಟಿ ರೂಪಾಯಿ ಸಿಗಲಿದೆ. ಚಿತ್ರದ ಬಜೆಟ್‌ 240 ಕೋಟಿ. ಪ್ರಚಾರ ಮತ್ತು ಜಾಹೀರಾತಿನ 20 ಕೋಟಿ ಸೇರಿದರೆ ಒಟ್ಟು ಖರ್ಚು 260 ಕೋಟಿ ದಾಟುತ್ತದೆ. ಕೋವಿಡ್‌ನಿಂದ ಸಿನಿಮಾದ ಬಿಡುಗಡೆ ವಿಳಂಬವಾಗಿ ಸಿನಿಮಾದ ಬಜೆಟ್‌ಗೆ ಬಡ್ಡಿಯೂ ಸೇರಿದರೆ ಖರ್ಚು ಇನ್ನೂ ಹಿಗ್ಗುತ್ತದೆ. ದೊಡ್ಡ ಮೊತ್ತದ ಡಿಜಿಟಲ್‌ ರೈಟ್ಸ್‌ ಸಿಕ್ಕಿದ್ದರೆ ನಷ್ಟದ ಬಾಬತ್ತು ಕಡಿಮೆಯಾಗುವ ಸಾಧ್ಯತೆಗಳಿದ್ದವು. ಆ ಅವಕಾಶವೂ ಇಲ್ಲವಾಗಿ ಚಿತ್ರದ ದುಬಾರಿ ನಷ್ಟ ಅನುಭವಿಸುವಂತಾಗಿದೆ. ಇದಕ್ಕೂ ಮುನ್ನ ತೆರೆಕಂಡ ಅಕ್ಷಯ್‌ ಕುಮಾರ್‌ ನಟನೆಯ ‘ಸೂರ್ಯವಂಶಿ’ ಸಿನಿಮಾ ಥಿಯೇಟರ್‌, ಸ್ಯಾಟಲೈಟ್‌, ಡಿಜಿಟಲ್‌ ಹಕ್ಕುಳಗಿಂದ 300 ಕೋಟಿ ರೂಪಾಯಿ ಕಮಾಯಿ ಮಾಡಿದೆ.

LEAVE A REPLY

Connect with

Please enter your comment!
Please enter your name here