ಓಟಿಟಿಯನ್ನು ದೂಷಿಸುವುದು ಪಲಾಯನ ವಾದವಷ್ಟೇ. ದುಬಾರಿ ಟಿಕೇಟುಗಳು, ಕಂಟೆಂಟ್ ಕೊರತೆ, ಸ್ಟಾರ್ ನಟರು ಹಾಗೂ ದೊಡ್ಡ ಸಿನಿಮಾಗಳ ನಿರ್ಮಾಪಕ ಹಾಗೂ ನಿರ್ದೇಶಕರ greed, ಬೇಜವಾಬ್ದಾರಿತನ ಹಾಗೂ ಪ್ರತಿಷ್ಠೆಯ ಪೈಪೋಟಿಯಿಂದಾಗಿ ಮಾರುಕಟ್ಟೆ ಇರುವುದಕ್ಕಿಂತ ಹೆಚ್ಚು ಖರ್ಚಿನಲ್ಲಿ ಸಿನಿಮಾ ಮಾಡುತ್ತಿರುವುದರ ಕುರಿತು ಚರ್ಚೆಯಾಗುತ್ತಿದೆ.
ಅತಿ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆಗಳ ಚಿತ್ರಗಳನ್ನು ನೀಡಿ, ಭಾರತೀಯ ಚಿತ್ರರಂಗವನ್ನೇ ಆಳುವಷ್ಟು ಬಲಿಷ್ಠವಾಗಿದೆ ಎನ್ನಲಾದ ತೆಲುಗು ಚಿತ್ರರಂಗ ಆಗಸ್ಟ್ 1ರಿಂದ ಶೂಟಿಂಗ್ ನಿಲ್ಲಿಸಿ ಬಂದ್ ಆಗಿದೆ. ದೊಡ್ಡ ಲಾಭ ಮಾಡಿದ ನಾಲ್ಕೈದು ಸಿನಿಮಾಗಳು ಕಣ್ಣಿಗೆ ಕಾಣಿಸಬಹುದು, ಸಾಲು ಸಾಲಾಗಿ ಸೋತ ಸಿನಿಮಾಗಳ ನಷ್ಟ ಆ ಚಿತ್ರರಂಗಕ್ಕೆ ನುಂಗಲಾರದ ತುತ್ತಾಗಿದೆ. ದೊಡ್ಡ ನಟರ ಸಿನಿಮಾಗಳೇ ಅತಿ ದೊಡ್ಡ ನಷ್ಟಕ್ಕೂ ಕಾರಣವಾಗಿದೆ. ಥಿಯೇಟರಿನಲ್ಲಿ ಟಿಕೇಟ್ ದರ ಎಷ್ಟೇ ಏರಿಸಿದರೂ ಲಾಭ ಕಂಡುಕೊಳ್ಳಲಾಗದಷ್ಟು ಸಿನಿಮಾ ಬಜೆಟ್‌ಗಳು ಕೈ ಮೀರುತ್ತಿರುವುದೇ ಕಾರಣ ಅನ್ನುವುದು ಹಿರಿಯ ಅನುಭವಿ ನಿರ್ಮಾಪಕರು ಮತ್ತು ಹಿರಿಯ ನಟರ ಸ್ಪಷ್ಟನೆ.
ಓಟಿಟಿಯನ್ನು ದೂಷಿಸುವುದು ಪಲಾಯನ ವಾದವಷ್ಟೇ. ದುಬಾರಿ ಟಿಕೇಟುಗಳು, ಕಂಟೆಂಟ್ ಕೊರತೆ, ಸ್ಟಾರ್ ನಟರು ಹಾಗೂ ದೊಡ್ಡ ಸಿನಿಮಾಗಳ ನಿರ್ಮಾಪಕ ಹಾಗೂ ನಿರ್ದೇಶಕರ greed, ಬೇಜವಾಬ್ದಾರಿತನ ಹಾಗೂ ಪ್ರತಿಷ್ಠೆಯ ಪೈಪೋಟಿಯಿಂದಾಗಿ ಮಾರುಕಟ್ಟೆ ಇರುವುದಕ್ಕಿಂತ ಹೆಚ್ಚು ಖರ್ಚಿನಲ್ಲಿ ಸಿನಿಮಾ ಮಾಡುತ್ತಿರುವುದರ ಕುರಿತು ಮಾತನಾಡುತ್ತಿದ್ದಾರೆ. ಹಿರಿಯ ನಟ NTR, ಅಕ್ಕಿನೇನಿ ನಾಗೇಶ್ವರ ರಾವ್, ಶೋಬನ್ ಬಾಬು, ಕೃಷ್ಣಂ ರಾಜು, ಚಿರಂಜೀವಿ, ಬಾಲಕೃಷ್ಣರ ಕಾಲದಲ್ಲಿ ನಟರು ಪ್ರತಿ ದಿನ 8-10 ಗಂಟೆಗಳ ಕಾಲ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅವರ ಸಂಭಾವನೆಯೂ ಸಿನಿಮಾದಿಂದ ಸಿನಿಮಾಗೆ ಏರುತ್ತಿರಲಿಲ್ಲ. ಆದರೆ ಸಿನಿಮಾದಿಂದ ಸಿನಿಮಾಗೆ ಏರುತ್ತಿರುವ ಇಂದಿನ ನಟರ ಸಂಭಾವನೆಯ ಜೊತೆಗೆ ‘ಅವರ ಇತರೆ ಖರ್ಚುಗಳನ್ನೂ’ ನಿರ್ಮಾಪಕನೇ ಭರಿಸಬೇಕಾಗಿರುವ ಕಾರಣದಿಂದ ಸಿನಿಮಾದ ಬಜೆಟ್ ಹೆಚ್ಚಾಗುತ್ತಿದೆ. ಇಂದಿನ ನಟರು 4-5 ಗಂಟೆ ಚಿತ್ರೀಕರಣದಲ್ಲಿ ಭಾಗಿಯಾಗುತ್ತಾರೆ. ಚಿತ್ರೀಕರಣಕ್ಕೆ ಹೆಚ್ಚೆಚ್ಚು ದಿನಗಳನ್ನು ತೆಗೆದುಕೊಳ್ಳಲಾಗುತ್ತಿದೆ, ಹಾಗಾಗಿ ಅನವಶ್ಯಕ ಖರ್ಚುಗಳೂ ಹೆಚ್ಚಾಗಿದೆ. ಇಂದಿನ ನಿರ್ಮಾಪಕರೂ ಮಾರುಕಟ್ಟೆಯಲ್ಲಿ ಓಡುವ ನಟರಿಗೆ ಅಗತ್ಯಕ್ಕಿಂತ ಹೆಚ್ಚೇ ಸಂಭಾವನೆ ಮತ್ತು ಸೌಕರ್ಯಗಳನ್ನು ಕೊಡುವ ಸಂಪ್ರದಾಯ ಪಾಲಿಸಿಕೊಂಡಿದ್ದಾರೆ.
ಶಿಸ್ತಿಲ್ಲದೆ ಖರ್ಚು ಮಾಡಿ ಸಿನಿಮಾ ಬಜೆಟ್ ಜಾಸ್ತಿ ಮಾಡಿ, ಅಬ್ಬರದ ಪ್ರಚಾರ ಮಾಡಿ, ಟಿಕೇಟ್ ದರ ಏರಿಸಿದರೆ “ಆ ಸ್ಟಾರ್ ನಟರ ವೀರಾಭಿಮಾನಿಗಳಷ್ಟೇ ಥಿಯೇಟರಿಗೆ ಬರುತ್ತಾರೆ. ಉಳಿದ ಪ್ರೇಕ್ಷಕರು ಸಿನಿಮಾದಿಂದ ವಿಮುಖರಾಗ್ತಾರೆ..” ಎನ್ನುವ ಹಿರಿಯ ನಿರ್ಮಾಪಕರು, ಈ ವರ್ಷದಲ್ಲಿಯೇ ಬಿಡುಗಡೆಯಾದ, ಕಡಿಮೆ ಬಜೆಟ್‌ನಲ್ಲಿ ಮಾಡಿದ, ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಗೆದ್ದ ಉತ್ತಮ ಚಿತ್ರಗಳನ್ನು ಹೆಸರಿಸುತ್ತಾರೆ.. ಆ ಸಿನಿಮಾಗಳು ಗೆಲ್ಲಲು ಕಾರಣ ಟಿಕೇಟ್ ದರ ಕಡಿಮೆ ಇದ್ದು, ಕಂಟೆಂಟ್ ಕೂಡ ಪ್ರೇಕ್ಷಕರಿಗೆ ಇಷ್ಟವಾಗಿರುವ ಕಾರಣಕ್ಕೆ. ಪ್ರಾದೇಶಿಕತೆಗೆ ಒತ್ತು ಕೊಟ್ಟು ಸಿನಿಮಾ ಮಾಡಿದರೂ ಇಂದು ಎಲ್ಲ ಜನರಿಗೆ ಸಿನಿಮಾ ತಲುಪುತ್ತದೆ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಹೆಸರಿನಲ್ಲಿ ನೂರಾರು ಕೋಟಿಗಳನ್ನು ಸುರಿಯುವುದು ತಪ್ಪು ಅಂತಲೇ ಅಲ್ಲಿನ ಕೆಲ ಹಿರಿಯ ನಿರ್ಮಾಪಕರ ಅಭಿಪ್ರಾಯವಾಗಿದೆ.