ಸಿನಿಮಾ ವ್ಯಾಮೋಹಿ ಸಮಾನಮನಸ್ಕ ಐಟಿ ಉದ್ಯೋಗಿಗಳು ನಿರ್ಮಿಸಿರುವ ‘ಕಾನ್ಸೀಲಿಯಂ’ ಟ್ರೈಲರ್ ಬಿಡುಗಡೆಯಾಗಿದೆ. ಇದು ಕನ್ನಡದ ಮೊದಲ ವೈಜ್ಞಾನಿಕ ಕಾಲ್ಪನಿಕ ಸಿನಿಮಾ ಎಂದು ಚಿತ್ರತಂಡದವರು ಹೇಳಿಕೊಳ್ಳುತ್ತಾರೆ. ಸಮರ್ಥ್ ನಿರ್ದೇಶನದ ಸಿನಿಮಾ ಮುಂದಿನ ತಿಂಗಳು ತೆರೆಕಾಣಲಿದೆ.
ಐಟಿ ಉದ್ಯೋಗಿಗಳು ನಿರ್ಮಿಸುತ್ತಿರುವ ‘ಕಾನ್ಸೀಲಿಯಂ’ ಸಿನಿಮಾದಲ್ಲಿ ಡಿಎನ್‌ಎ, ಸ್ಪೇಸ್, ಟೆಕ್ನಾಲಜಿ ಇತ್ಯಾದಿ ವಿಷಯಗಳನ್ನಿಟ್ಟು ಸೈನ್ಸ್ ಫಿಕ್ಷನ್ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಕತೆ ಹೇಳಿದ್ದಾರೆ ಯುವ ನಿರ್ದೇಶಕ ಸಮರ್ಥ್. ಇದು ಕನ್ನಡದ ಮೊದಲ ವೈಜ್ಞಾನಿಕ ಕಾಲ್ಪನಿಕ ಸಿನಿಮಾ ಎಂದು ನಿರ್ದೇಶಕ ಸಮರ್ಥ್ ಹೇಳಿಕೊಳ್ಳುತ್ತಾರೆ. ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್‌ನಲ್ಲಿನ ಕೆಲವು ವಿಶ್ಯುಯಲ್ಸ್ ಕುತೂಹಲಕಾರಿಯಾಗಿವೆ. ‘ಕಾನ್ಸೀಲಿಯಂ’ ಅನ್ನೋದು ಲ್ಯಾಟಿನ್ ಪದ. ಪ್ಲ್ಯಾನಿಂಗ್, ಜಡ್ಜ್’ಮೆಂಟ್, ಅಡ್ವೈಸ್… ಈ ಪದಕ್ಕೆ ಇತ್ಯಾದಿ ಅರ್ಥಗಳಿವೆ. ಈ ಎಲ್ಲಾ ವಿಷಗಳನ್ನು ಒಳಗೊಂಡಿರುವುದರಿಂದ ಚಿತ್ರಕ್ಕೆ ‘ಕಾನ್ಸೀಲಿಯಂ’ ಎನ್ನುವ ಶೀರ್ಷಿಕೆಯಿದೆ. ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ಅನುಭವ ಇರುವ ಮಂಡ್ಯದ ಪ್ರತಿಭೆ ಸಮರ್ಥ್ ಚಿತ್ರ ನಿರ್ದೇಶಿಸಿದ್ದು, ನಾಯಕನಟನ ಪಾತ್ರವನ್ನೂ ನಿರ್ವಹಿಸಿದ್ದಾರೆ.
ಸೀತಾರಾಮ್ ಶಾಸ್ತ್ರೀ ಪ್ರೊಡಕ್ಷನ್‌ನಡಿ ತಯಾರಾಗಿರುವ ‘ಕಾನ್ಸೀಲಿಯಂ’ ಸಿನಿಮಾದಲ್ಲಿ ಪ್ರೀತಂ, ‘ಮನೆದೇವ್ರು’ ಸೀರಿಯಲ್ ಖ್ಯಾತಿಯ ಅರ್ಚನಾ ಲಕ್ಷ್ಮೀ ನರಸಿಂಹ ಸ್ವಾಮಿ, ‘ಲವ್ ಮಾಕ್ಟೇಲ್’ ಖ್ಯಾತಿಯ ಖುಷಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ನಟ ಜಗದೀಶ್ ಮಲ್ನಾಡ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಸಿನಿಮಾ ಬಳಗದಲ್ಲಿ ರೇಷ್ಮಾ ರಾವ್ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ‘ಕಾನ್ಸೀಲಿಯಂ’ ಮುಂದಿನ ತಿಂಗಳು ತೆರೆಗೆ ಬರಲಿದೆ.