‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡದ ವಿರುದ್ಧ ನಟಿ ರಮ್ಯ ನ್ಯಾಯಾಲಯಕ್ಕೆ ದೂರು ಕೊಟ್ಟಿದ್ದರು. ಅನುಮತಿ ಇಲ್ಲಿದೆ ತಮ್ಮ ಮೇಲೆ ಚಿತ್ರಿಸಿದ ವೀಡಿಯೋಗಳನ್ನು ಚಿತ್ರದಲ್ಲಿ ಬಳಕೆ ಮಾಡಿದ್ದಾರೆ ಎನ್ನುವುದು ಅವರ ಆರೋಪವಾಗಿತ್ತು. ನ್ಯಾಯಾಲದ ತೀರ್ಪು ಚಿತ್ರತಂಡದ ಪರವಾಗಿ ಬಂದಿದ್ದು ನಿಗದಿಯಂತೆ ಸಿನಿಮಾ ನಾಳೆ ತೆರೆಕಾಣುತ್ತಿದೆ.

ನಿತಿನ್‌ ಕೃಷ್ಣಮೂರ್ತಿ ನಿರ್ದೇಶನದ ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡ ನಿರಾಳವಾಗಿದೆ. ನಿನ್ನೆ ನಟಿ ರಮ್ಯ ಅವರು ಚಿತ್ರತಂಡದ ವಿರುದ್ಧ ನ್ಯಾಯಾಲಯಕ್ಕೆ ದೂರು ಕೊಟ್ಟಿದ್ದರು. ಅನುಮತಿ ಇಲ್ಲಿದೆ ತಮ್ಮ ಮೇಲೆ ಚಿತ್ರಿಸಿದ ವೀಡಿಯೋಗಳನ್ನು ಟ್ರೈಲರ್‌ ಹಾಗೂ ಚಿತ್ರದಲ್ಲಿ ಬಳಕೆ ಮಾಡಿದ್ದಾರೆ ಎನ್ನುವುದು ಅವರ ಆರೋಪವಾಗಿತ್ತು. ನಾಳೆ ತೆರೆಕಾಣಬೇಕಿದ್ದ ಸಿನಿಮಾಗೆ ಇದು ದೊಡ್ಡ ಸಮಸ್ಯೆಯಾಗಿ ತಲೆದೋರಿತ್ತು. ಸಿನಿಮಾ ತಂಡದವರೂ ಕೋರ್ಟ್‌ಗೆ ಹೋಗಿದ್ದರು. ದೂರುಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿದ ನಂತರ ಕಮರ್ಷಿಯಲ್ ಕೋರ್ಟ್, ಚಿತ್ರತಂಡದ ಪರವಾಗಿ ತೀರ್ಪು ನೀಡಿದೆ. ಮೊದಲೇ ನಿಗದಿಪಡಿಸಿದ್ದ ದಿನಾಂಕವಾದ ಜುಲೈ 21ಕ್ಕೆ (ನಾಳೆ) ಸಿನಿಮಾ ಬಿಡುಗಡೆಯಾಗುತ್ತಿದೆ.

ಈ ಬಗ್ಗೆ ಮಾತನಾಡಿರುವ ಚಿತ್ರದ ನಿರ್ದೇಶಕ ನಿತಿನ್‌ ಕೃಷ್ಣಮೂರ್ತಿ, ‘ನಾಳೆ ನಮ್ಮ ಸಿನಿಮಾ ರಿಲೀಸ್‌ಗೆ ಪ್ಲ್ಯಾನ್‌ ಮಾಡಿದ್ದೆವು. ಅದಕ್ಕೆ ರಮ್ಯ ಮೇಡಂ ತಡೆಯಾಜ್ಞೆ ತಂದಿದ್ದರು. ಆದ್ರೆ ಇವತ್ತು ಕೇಸ್ ತೆರವುಗೊಳಿಸಲಾಗಿದೆ. ರಿಲೀಸ್‌ಗೆ ತೊಂದರೆ ಇಲ್ಲ. ಅವರು ಖುಷಿಯಿಂದನೇ ನಮ್ಮ ಚಿತ್ರದಲ್ಲಿ ನಟಿಸಿದ್ದರು. ಅವರ ಮೇಲೆ ನಮಗೆ ತುಂಬಾ ಗೌರವ ಇದೆ. ಅವರು ಲೇಡಿ ಸೂಪರ್ ಸ್ಟಾರ್. ನಮ್ಮ ಸಿನಿಮಾಗೆ ಸ್ಟೇ ತಂದಿದ್ದು ಸ್ವಲ್ಪ ಬೇಜಾರಾಗಿದೆ’ ಎನ್ನುತ್ತಾರೆ. ‘ಯಾವುದೋ ಒಂದು ಮಿಸ್ ಅಂಡರ್‌ಸ್ಟ್ಯಾಂಡಿಂಗ್‌ನಿಂದ ಈ ರೀತಿ ಆಗಿದೆ. ನಮಗೆ ರಮ್ಯಾ ಮೇಡಂ ಬಗ್ಗೆ ಬೇಜಾರಿಲ್ಲ. ಇದೊಂದು ಚಿಕ್ಕ ಮನಸ್ತಾಪವಷ್ಟೆ’ ಎನ್ನುವುದು ನಿರ್ಮಾಪಕ ವರುಣ್‌ ಮಾತು.

ಕೇಸ್‌ ಜಾರಿಯಲ್ಲಿರುತ್ತದೆ | ಮೂಲಗಳ ಪ್ರಕಾರ ನಟಿ ರಮ್ಯ ಅವರ ಕೇಸ್‌ ಸಂಪೂರ್ಣ ಬಿದ್ದುಹೋಗಿಲ್ಲ. ಸದ್ಯಕ್ಕೆ ಸಿನಿಮಾ ರಿಲೀಸ್‌ಗೆ ತೊಂದರೆ ಇಲ್ಲ ಎನ್ನಲಾಗಿದೆ. ಒಂದೊಮ್ಮೆ ಚಿತ್ರದಲ್ಲಿ ರಮ್ಯ ಅವರಿರುವ ದೃಶ್ಯಗಳು ಬಳಕೆಯಾಗಿದ್ದರೆ, ಅವುಗಳನ್ನು ಕತ್ತರಿಸಿ ಸಿನಿಮಾ ರಿಲೀಸ್‌ ಮಾಡಲಾಗುತ್ತದೆ. ಆಗಸ್ಟ್‌ ಮೊದಲ ವಾರದಲ್ಲಿ ನ್ಯಾಯಾಲಯದ ಮುಂದಿನ ಹಿಯರಿಂಗ್‌ ಇದ್ದು, ಅಲ್ಲಿ ಚಿತ್ರತಂಡದವರು ರಮ್ಯ ಅವರನ್ನು ಮತ್ತೆ ಎದುರಿಸಬೇಕು. ರಮ್ಯ ಅವರು ಒಂದು ಕೋಟಿ ರೂಪಾಯಿ ನಷ್ಟ ಪರಿಹಾರ ಕೋರಿ ನ್ಯಾಯಾಲಕ್ಕೆ ದೂರು ಸಲ್ಲಿಸಿದ್ದರು. ಮುಂದಿನ ವಿಚಾರಣೆಯಲ್ಲಿ ಇದು ಪ್ರಸ್ತಾಪವಾಗಲಿದೆ.

LEAVE A REPLY

Connect with

Please enter your comment!
Please enter your name here