ಬೆಂಗಳೂರಿನ ಗಾಂಧಿ ಬಜಾರಿನಲ್ಲಿ ಸದಾ ಕೊಡೆ ಬಿಚ್ಚಿ ತಲೆ ಮೇಲೆ ಹಿಡಿದು ಓಡಾಡುತ್ತಿದ್ದವರು ಕನ್ನಡದ ಆಸ್ತಿಯೆಂದೇ ಖ್ಯಾತರಾಗಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು. ಅದೇ ರೀತಿ ಮೈಸೂರಿನಲ್ಲಿ ಓಡಾಡುತ್ತಿದ್ದವರು ಆರ್.ಕೆ.ನಾರಾಯಣ್. ಇಬ್ಬರ ನಡುವಿನ ವ್ಯತ್ಯಾಸವೇನೆಂದರೆ ನಾರಾಯಣ್ ಅವರು ಸದಾ ಮಡಿಚಿದ ಕೊಡೆ ಹಿಡಿದು ತಿರುಗಾಡುತ್ತಿದ್ದರು. ಕೊಡೆ ಅನ್ನುವುದು ಅವರಿಗೆ, ಒಂದು ರೀತಿಯಲ್ಲಿ ಗೌರವ ಹೆಚ್ಚಿಸುವ ‘Extra fitting’ ಆಗುವುದರ ಜೊತೆಗೆ, ನಡಿಗೆಯ ಸಂಗಾತಿಯೂ ಆಗಿತ್ತು. ಕೊಡೆಗಳ ಬಗ್ಗೆ ನಾರಾಯಣ್ ಅವರಿಗೆ ಎಂಥ ಪ್ರೀತಿ ಎಂದರೆ, ಅವರು ಜಗತ್ತಿನ ಹಲವು ದೇಶಗಳಿಂದ ಕೊಡೆಗಳನ್ನು ಸಂಗ್ರಹಿಸಿದ್ದರೂ ಕೂಡ, ಯಾರಿಗೂ ಯಾವ ಕಾರಣಕ್ಕೂ ಒಂದು ಕೊಡೆಯನ್ನೂ ಕೊಡಲು ಒಪ್ಪುತ್ತಿರಲಿಲ್ಲ.

ಸಣ್ಣ ಕತೆಗಳ ಜನಕ ಎಂದೇ ಹೆಸರಾಗಿದ್ದ ಮಾಸ್ತಿಯವರನ್ನೇನೋ “ಕನ್ನಡದ ಆಸ್ತಿ” ಯೆಂದು ಕರೆದು ಧನ್ಯರಾಗಿದ್ದೇವೆ. ಆದರೆ, ಇವರು ಬರೆದಿದ್ದೆಲ್ಲವೂ ಇಂಗ್ಲಿಷ್ ನಲ್ಲೇ ಆಗಿರುವುದರಿಂದ ಇವರನ್ನು ಭಾರತೀಯ ಇಂಗ್ಲಿಷ್ ಸಾಹಿತ್ಯದ “ಸ್ವಾಮಿ” ನಾರಾಯಣ್ ಅನ್ನಬಹುದು. ಬಿರುದು ಬಾವಲಿಗಳ ವಿಚಾರ ಏನೇ ಇರಲಿ, ಸುಮಾರು 80 ವರ್ಷಗಳ ಕಾಲ ಮೈಸೂರಿನಲ್ಲಿ ನೆಲೆಸಿದ್ದ ಇವರು, ಅಲ್ಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರವನ್ನು ತಮ್ಮ ಕತೆ, ಕಾದಂಬರಿಗಳ ಮೂಲಕ ಹಾಗೂ ಮಾಲ್ಗುಡಿ ಎಂಬ ಕಾಲ್ಪನಿಕ ಪಟ್ಟಣದ ಮೂಲಕ ಕಟ್ಟಿಕೊಟ್ಟಿದ್ದಾರೆ. ಭಾರತದ ಶ್ರೇಷ್ಠ ಬರಹಗಾರರಲ್ಲಿ ಒಬ್ಬರಾಗಿರುವ ಆರ್.ಕೆ.ನಾರಾಯಣ್ ಅವರ 115ನೇ ಜನ್ಮದಿನದ ಸಂದರ್ಭದಲ್ಲಿ ಅವರ ಬದುಕು ಮತ್ತು ಬರಹಗಳ ಬಗ್ಗೆ ಮಾಧ್ಯಮ ಅನೇಕ ಪ್ರಸ್ತುತ ಪಡಿಸುವ ಒಂದು ವಿಸ್ತೃತ ಲೇಖನ ಇಲ್ಲಿದೆ.

ಆರ್.ಕೆ.ನಾರಾಯಣ್ ಅಥವ ರಾಸಿಪುರಂ ಕೃಷ್ಣಸ್ವಾಮಿ ಅಯ್ಯರ್ ನಾರಾಯಣಸ್ವಾಮಿ ಅವರು 1906ನೇ ಇಸವಿ ಅಕ್ಟೋಬರ್ ತಿಂಗಳ 10ರಂದು ಆಗಿನ ಮದ್ರಾಸ್ ಪ್ರಾಂತ್ಯದ “ರಾಸಿಪುರಮ್ ” ಎಂಬ ಊರಿನಲ್ಲಿ ತಮ್ಮ ತಾಯಿ ತವರು ಮನೆಯಲ್ಲಿ ಜನಿಸಿದರು. ರಾಸಿಪುರಮ್, “ಪರಿಮಳ ಭರಿತ ತುಪ್ಪ”ಕ್ಕಾಗಿ ಹೆಸರಾಗಿದ್ದ ಊರಾಗಿತ್ತು. ಕೃಷ್ಣಸ್ವಾಮಿ ಅಯ್ಯರ್-ಜ್ಞಾನಾಂಬಾಳ್ ದಂಪತಿಯ 8 ಮಕ್ಕಳ ಪೈಕಿ ಮೂರನೆಯವರಾಗಿದ್ದ ಇವರಿಗೆ 5 ಜನ ಸೋದರರು ಮತ್ತು ಇಬ್ಬರು ಸೋದರಿಯರಿದ್ದರು. ಪ್ರಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್ ಇವರ ಕೊನೆಯ ಸೋದರ.

ಆರ್.ಕೆ.ನಾರಾಯಣ್ ಅವರ ತಂದೆ ಕೃಷ್ಣಸ್ವಾಮಿಯವರು ಸರ್ಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯರಾಗಿದ್ದರು. ತಂದೆಯವರು ಹೊಂದಿದ್ದ ಸ್ಥಾನ, ಬಾಲಕ ನಾರಾಯಣ್ ಗೆ ತಂದೆ ಕೆಲಸ ಮಾಡುತ್ತಿದ್ದ ಶಾಲೆಗೆ ಹೋಗಲು ಮತ್ತು ಅಲ್ಲಿನ ಗ್ರಂಥ ಭಂಡಾರದಲ್ಲಿದ್ದ ಪುಸ್ತಕಗಳನ್ನು ಓದಲು ಅವಕಾಶ ಸಿಗುವಂತೆ ಮಾಡಿತ್ತು. ಹೈಸ್ಕೂಲ್ ಮುಗಿಸುವ ವೇಳೆಗೆ ನಾರಾಯಣ್ ಅವರು Charles Dickens, P. G. Wodehouse, Sir Arthur Conan Doyle ಮತ್ತು Thomas Hardy  ಮುಂತಾದವರ ಪುಸ್ತಕಗಳನ್ನು ಓದಿಬಿಟ್ಟಿದ್ದರು. ಬಾಲ್ಯದಲ್ಲಿನ ಈ ಓದುವಿಕೆ, ಅವರ ಬದುಕು ಮತ್ತು ಬರವಣಿಗೆಗೆ ದೊಡ್ಡ ರೀತಿಯಲ್ಲಿ ಲಾಭದಾಯಕವಾಯಿತು. ನಾರಾಯಣ್ ಅವರ ತಂದೆಯವರನ್ನು ಆಗಾಗ್ಗೆ ಬೇರೆ ಬೇರೆ ಶಾಲೆಗಳಿಗೆ ವರ್ಗಾವಣೆ ಮಾಡಲಾಗುತ್ತಿತ್ತು. ಹೀಗಾಗಿ, ನಾರಾಯಣ್ ಅವರು ಮದ್ರಾಸಿನ the Lutheran Mission School, Christian Mission Schoolಗಳಲ್ಲಿ ಓದಿದ್ದರು.

ನಾರಾಯಣ್ ಅವರ ತಾಯಿ ಅಷ್ಟೇನೂ ಗಟ್ಟಿಮುಟ್ಟಾದ ಹೆಂಗಸಾಗಿರದಿದ್ದರಿಂದ ಮತ್ತು ಇತರೆ ಮಕ್ಕಳನ್ನು ನೋಡಿಕೊಳ್ಳಬೇಕಿದ್ದರಿಂದ, ನಾರಾಯಣ್ ತಮ್ಮ ರಜೆಯ ಹೆಚ್ಚಿನ ಸಮಯವನ್ನು ಅಜ್ಜಿಯ ಜೊತೆಯಲ್ಲಿ ರಾಸಿಪುರಮ್ ನಲ್ಲೇ ಕಳೆಯುತ್ತಿದ್ದರು. ಬಾಲಕ ನಾರಾಯಣಸ್ವಾಮಿಯನ್ನು ಅಜ್ಜಿ ಪಾರ್ವತಿ ಅವರು, “ಕುಂಜಪ್ಪ” ಎಂಬ ಅಡ್ಡ ಹೆಸರಿಟ್ಟು ಕರೆಯುತ್ತಿದ್ದರು. ಆ ನಂತರ ನಾರಾಯಣ್ ದೊಡ್ಡವರಾದಮೇಲೂ ಮನೆಯವರೆಲ್ಲ ಅದೇ ಹೆಸರಿನಿಂದಲೇ ಕರೆಯುತ್ತಿದ್ದರು. ಇಲ್ಲಿ, ಇನ್ನೊಂದು ವಿಚಾರವೇನು ಅಂದ್ರೆ, ಮಹಾನ್ ಗಾಯಕಿ ಎಂ.ಎಸ್.ಸುಬ್ಬಲಕ್ಷ್ಮಿ ಅವರನ್ನೂ ಕೂಡ “ಕುಂಜಮ್ಮ” ಎಂದೇ ಕರೆಯಲಾಗುತ್ತಿತ್ತು. ಹೀಗಾಗಿ, ತಮಿಳು ಭಾಷೆಯಲ್ಲಿ ಈ ಕುಂಜಪ್ಪ ಅಥವ ಕುಂಜಮ್ಮ ಅಂದ್ರೆ ಏನು ಅರ್ಥ ಅಂತ ತಿಳ್ಕೊಬೇಕಿದೆ.

ಅಜ್ಜಿ ಪಾರ್ವತಿ, ಬಾಲಕನಿಗೆ ಪುರಾಣದ ಕತೆಗಳು ಮತ್ತು ಶಾಸ್ತ್ರೀಯ ಸಂಗೀತವನ್ನೂ ಹೇಳಿಕೊಡುತ್ತಿದ್ದರು. ಮದ್ರಾಸಿನಲ್ಲಿ ನೆಲೆಸಿದ್ದ ಆರ್.ಕೆ.ನಾರಾಯಣ್ ಕುಟುಂಬ ಬಹುತೇಕ ಇಂಗ್ಲಿಷ್ ಭಾಷೆಯಲ್ಲೇ ವ್ಯವಹರಿಸುತ್ತಿತ್ತು. ಹೀಗಾಗಿ ನಾರಾಯಣ್ ಗೆ ತಮಿಳು ಭಾಷೆ ಕಲಿಸಲು ಮನೆಪಾಠದ ವ್ಯವಸ್ಥೆಯನ್ನೂ ಅಜ್ಜಿಯವರು ಮಾಡಿದ್ದರು. ಅಜ್ಜಿ ಮನೆಯಲ್ಲಿ ಸಾಕಿದ್ದ ಒಂದು ನವಿಲು ಮತ್ತು ಕೋತಿ ಮರಿಯೇ ನಾರಾಯಣ್ ಅವರ ಬಾಲ್ಯದ ದಿನಗಳ ಸಂಗಾತಿಗಳಾಗಿದ್ದವು. ಅಜ್ಜಿ ಪಾರ್ವತಿ, ಊರಿನಲ್ಲಿ ತುಂಬಾ ಜನರ ಪರಿಚಯವಿದ್ದ ಹೆಂಗಸು. ತಮ್ಮ ಜಾತಕ, ವಿವಾಹ ನಿಗದಿ ಇತ್ಯಾದಿಗಳ ಬಗ್ಗೆ ಕೇಳಲು ಸಾಕಷ್ಟು ಜನ ಅವರ ಮನೆಗೆ ಬರುತ್ತಿದ್ದರು. ಇವೆಲ್ಲವೂ ಕೂಡ ಬಾಲಕ ನಾರಾಯಣ್ ತನ್ನ ಚಿಂತನೆಗಳನ್ನು ವಿಸ್ತರಿಕೊಳ್ಳಲು ಮತ್ತು ಮುಂದೆ ಬರವಣಿಗೆ ಮಾಡಲು ನೆರವಾದವು. 12 ವರ್ಷದ ಬಾಲಕನಾಗಿದ್ದಾಗ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ಮದ್ರಾಸ್ ನಲ್ಲಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆರ್.ಕೆ.ನಾರಾಯಣ್, ಅದಕ್ಕಾಗಿ ತಮ್ಮ ಚಿಕ್ಕಪ್ಪನಿಂದ ಬೈಗುಳ ಕೇಳಬೇಕಾಗಿ ಬಂದಿತ್ತು. ಏಕೆಂದರೆ, ಅವರ ಕುಟುಂಬ ರಾಜಕೀಯದ ಬಗ್ಗೆ ನಿರ್ಲಿಪ್ತ ಧೋರಣೆ ಅನುಸರಿಸುತ್ತಿತ್ತು.

ಆರ್.ಕೆ.ನಾರಾಯಣ್ ಅವರ ತಂದೆಗೆ ಮದ್ರಾಸಿನಿಂದ ಮೈಸೂರಿನ ಮಹಾರಾಜ ಕಾಲೇಜಿನ ಹೈಸ್ಕೂಲ್ ವಿಭಾಗಕ್ಕೆ ವರ್ಗಾವಣೆ ಆಯಿತು. ಇಡೀ ಕುಟುಂಬ ತನ್ನ ವಾಸ್ತವ್ಯವನ್ನು ಮೈಸೂರಿಗೆ ಬದಲಾಯಿಸಿತು. ನಾರಾಯಣ್ ಕೂಡ ಅದೇ ಶಾಲೆಗೆ ಸೇರಿಕೊಂಡರು. ಆ ಶಾಲೆಯಲ್ಲಿದ್ದ ದೊಡ್ಡ ಗ್ರಂಥಾಲಯ ಬಾಲಕನಲ್ಲಿನ ಓದುವ ಹಸಿವನ್ನು ಹಿಂಗಿಸುವಲ್ಲಿ ನೆರವಾಗಿತ್ತು.

ಆದರೆ, ನಾರಾಯಣ್ ಮೇಷ್ಟ್ರ ಮಗನಾಗಿದ್ದರೂ ಕೂಡ ಬುದ್ಧಿವಂತ ಅನ್ನಿಸಿಕೊಳ್ಳುವ ವಿದ್ಯಾರ್ಥಿಯೇನೂ ಆಗಿರಲಿಲ್ಲ. 1926ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದ ನಾರಾಯಣ್, ಮೂರು ವರ್ಷದ ಪದವಿಯನ್ನು ನಾಲ್ಕು ವರ್ಷ ತೆಗೆದುಕೊಂಡು ಸಾಕಷ್ಟು ಪ್ರಯಾಸದಿಂದಲೇ ಪೂರೈಸಿದ್ದರು. ಆ ಬಳಿಕ ಮೈಸೂರು ವಿವಿಯಲ್ಲಿ ಎಂ.ಎ ಸೇರಲು ಅರ್ಜಿಸಲ್ಲಿಸಲು ಹೋಗಿದ್ದರು. ಆಗ ದಾರಿಯಲ್ಲಿ ಸಿಕ್ಕ ಗೆಳೆಯ “ಎಂ.ಎ ಮಾಡುವುದು ಸಾಹಿತ್ಯದ ಬಗ್ಗೆ ನಿನ್ನಲ್ಲಿರುವ ಆಸಕ್ತಿಯನ್ನು ನಾಶ ಮಾಡುತ್ತದೆ” ಎಂದು ಹೇಳಿದ್ದನಂತೆ, ಅವನ ಮಾತು ಕೇಳಿದ ಆರ್.ಕೆ.ನಾರಾಯಣ್ ಅರ್ಜಿ ಸಲ್ಲಿಸದೆ ಹಾಗೇ ವಾಪಸ್ ಮನೆಗೆ ವಾಪಸ್ ಬಂದಿದ್ದರು.

ಸರ್ಕಾರಿ ಸೇವೆಯಲ್ಲಿದ್ದ ತಂದೆ ನಿವೃತ್ತರಾದ ಮೇಲೆ ನಾರಾಯಣ್ ಅವರ ಕುಟುಂಬ ಸರ್ಕಾರಿ ವಸತಿ ಬಿಟ್ಟು ಲಕ್ಷ್ಮೀಪುರಮ್ ನಲ್ಲಿನ ಸಣ್ಣದು ಅನ್ನಿಸುವ ಮನೆಗೆ ವಾಸ್ತವ್ಯ ಬದಲಿಸಬೇಕಾಯಿತು. ಇಡೀ ಕುಟುಂಬ ತಂದೆಯ ಪಿಂಚಣಿಯನ್ನೇ ಆಧರಿಸಿದ್ದರಿಂದ, ಜೀವನ ನಡೆಸುವುದು ಕಷ್ಟವಾಯಿತು. ನಾರಾಯಣ್ ಅವರ ಅಣ್ಣ, ಖಾಸಗಿ ಬಸ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡು ತಿಂಗಳಿಗೆ 50 ರೂಪಾಯಿ ಗಳಿಸುತ್ತಿದ್ದರು. ಇದರಿಂದ ಕುಟುಂಬಕ್ಕೆ ಒಂದಿಷ್ಟು ನೆರವಾಗುತ್ತಿತ್ತು. ಪದವಿ ಮುಗಿದ ಮೇಲೆ ಮನೆಯಲ್ಲೇ ಇದ್ದ ನಾರಾಯಣ್ ಅವರ ಮೇಲೆ ದುಡಿಮೆಗೆ ಸೇರುವಂತೆ ಒತ್ತಾಯ ಹೆಚ್ಚಾಗಿತ್ತು. ಅದೇ ಸಂದರ್ಭದಲ್ಲಿ, ನಾರಾಯಣ್ ಅವರಿಗೆ ಚನ್ನಪಟ್ಟಣದ ಸರ್ಕಾರಿ ಶಾಲೆಯಲ್ಲಿ ಸಹಾಯಕ ಶಿಕ್ಷಕನಾಗಿ ಕೆಲಸ ಮಾಡಲು ಅವಕಾಶ ದೊರಕಿತ್ತು. ಅಲ್ಲಿ ಒಂದು ತಿಂಗಳ ಕಾಲ ಕೆಲಸ ಮಾಡಿದ ನಾರಾಯಣ್ ಗೆ ಮೇಷ್ಟ್ರಾಗಿ ಕೆಲಸ ಮಾಡುವುದು ಇಷ್ಟವಿರಲಿಲ್ಲ. ಒಂದು ದಿನ, ಶಾಲೆಯ ದೈಹಿಕ ಶಿಕ್ಷಣದ ಮೇಷ್ಟ್ರು ಬಂದಿಲ್ಲವಾದ ಕಾರಣ, ಇವರಿಗೆ ಆ ಜವಾಬ್ದಾರಿ ವಹಿಸಿಕೊಳ್ಳಲು ಹೇಳಿದ್ದರು, ಅಲ್ಲಿಯವರೆಗೂ ಹೇಗೋ ಸಹಿಸಿಕೊಂಡಿದ್ದ ನಾರಾಯಣ್ ಅವರಿಗೆ ಕೆಲಸಕ್ಕೆ ರಾಜೀನಾಮೆ ಕೊಡಲು ಅಷ್ಟು ನೆಪ ಸಾಕಾಯಿತು. ಮನೆಗೆ ವಾಪಸ್ ಬಂದ ನಾರಾಯಣ್, ತಾನು ಎಲ್ಲೂ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದು ಪುಸ್ತಕ ಬರೆಯುತ್ತೇನೆ ಎಂದು ಹೇಳಿ ಮನೆಯವರನ್ನು ಚಕಿತಗೊಳಿಸಿದ್ದರು. ಆದರೆ, ಆ ಹೊತ್ತಿನಲ್ಲಿ ನಾರಾಯಣ್ ಕೈಗೊಂಡ ನಿರ್ಧಾರ ಭಾರಿ ಧೈರ್ಯದಿಂದ ಕೂಡಿತ್ತು ಮತ್ತು ಅದರಿಂದ ಜಗತ್ತಿಗೆ ಒಬ್ಬ ಶ್ರೇಷ್ಠ ಲೇಖಕ ಸಿಗುವಂತಾಯಿತು ಜೊತೆಗೆ ಮಾಲ್ಗುಡಿ ಎಂಬ ಕಲ್ಪನಾ ಲೋಕವೂ ಸೃಷ್ಟಿಯಾಯಿತು. “ನಾನು ಬರಹಗಾರನಾಗಿ ಜೀವನ ಸಾಗಿಸಲು ನಿರ್ಧರಿಸಿದೆ, ಏಕೆಂದರೆ ಅದೊಂದೇ ವೃತ್ತಿ ನನಗೆ ಇಷ್ಟ ಬಂದಂತೆ ಬದುಕುವ ಸ್ವಾತಂತ್ರ್ಯವನ್ನು ಕೊಡಲು ಸಾಧ್ಯ ಅನ್ನಿಸಿತ್ತು” ಎಂದು ಸಂದರ್ಶನವೊಂದರಲ್ಲಿ ಆರ್.ಕೆ.ನಾರಾಯಣ್ ಹೇಳುತ್ತಾರೆ.

ಮನೆಯಲ್ಲಿ ಕುಳಿತ ನಾರಾಯಣ್ ಇಂಗ್ಲಿಷ್ Newspaper ಮತ್ತು Magazineಗಳಿಗಾಗಿ ಬರೆಯಲು ಆರಂಭಿಸುತ್ತಾರೆ. ಆದರೆ, ಅದರಿಂದ ಆಗುತ್ತಿದ್ದ ಸಂಪಾದನೆ ಅತ್ಯಲ್ಪ. ತಾವು ಬರೆಯಲು ಆರಂಭಿಸಿದ ಮೊದಲ ವರ್ಷ ನಾರಾಯಣ್ ಸಂಪಾದಿಸಿದ್ದು ಕೇವಲ 9 ರೂಪಾಯಿ 12 ಆಣಿ.

ಆರ್.ಕೆ.ನಾರಾಯಣ್, 1930ರಲ್ಲಿ ತಮ್ಮ ಮೊದಲ ಕಾದಂಬರಿ ಸ್ವಾಮಿ ಅಂಡ್ ಫ್ರೆಂಡ್ಸ್ ಬರೆದರು. ಆದರೆ ಯಾವುದೇ ಪ್ರಕಾಶಕನೂ ಅದನ್ನು ಪ್ರಕಟಿಸುವುದಕ್ಕೆ ಒಪ್ಪಿರಲಿಲ್ಲ.

1933ರಲ್ಲಿ ನಾರಾಯಣ್ ಅವರು ಕೊಯಮತ್ತೂರಿನ ತಮ್ಮ ಅಕ್ಕನ ಮನೆಯಲ್ಲಿದ್ದಾಗ, ಆ ಮನೆಯೆದುರಿನ ಬೀದಿನಲ್ಲಿಯಲ್ಲಿ ನೀರು ಹಿಡಿಯುತ್ತಿದ್ದ  15 ವರ್ಷದ ಹುಡುಗಿ ರಾಜಮ್ ಳನ್ನು ನೋಡಿ ಇಷ್ಟಪಡುತ್ತಾರೆ. ಆದರೆ, ಆಕೆಯನ್ನು ಮದುವೆಯಾಗಲು ಕುಟುಂಬದ ಸಂಪ್ರದಾಯಗಳು ಅಡ್ಡಿಬರುತ್ತವೆ. ಆದರೂ ಕೂಡ ಹಿಂದೆಸರಿಯದ ನಾರಾಯಣ್, ರಾಜಮ್ ಅವರ ತಂದೆ ಪುಸ್ತಕ ಪ್ರೇಮಿ ನಾಗೇಶ್ವರರಾಯರ ಸ್ನೇಹ ಸಂಪಾದಿಸುತ್ತಾರೆ. ಮುಂದಿನ ದಿನಗಳಲ್ಲಿ ಎರಡೂ ಮನೆಯವರನ್ನು ಒಪ್ಪಿಸಿ ರಾಜಮ್ ರನ್ನು ಮದುವೆಯಾಗುವಲ್ಲಿ ಸಫಲವಾಗುತ್ತಾರೆ.

ಆ ಬಳಿಕ, ಉದ್ಯೋಗಕ್ಕೆ ಸೇರುವುದು ಅನಿವಾರ್ಯವೆನ್ನಿಸಿದ್ದರಿಂದ ಮದ್ರಾಸಿನ The Justice ಪತ್ರಿಕೆಯ ವರದಿಗಾರನಾಗಿ ಸೇರಿಕೊಳ್ಳುತ್ತಾರೆ. ಬ್ರಾಹ್ಮಣೇತರ ಸಮುದಾಯದ ಜನರ ಹಕ್ಕುಗಳಿಗಾಗಿ ಶ್ರಮಿಸುತ್ತಿದ್ದ ಪತ್ರಿಕೆಗೆ ಬ್ರಾಹ್ಮಣ ವ್ಯಕ್ತಿ ಕೆಲಸ ಮಾಡಲು ಸಿಕ್ಕಿದ್ದು, ಆ ಪತ್ರಿಕೆಯವರಿಗೆ ಒಂದು ರೀತಿ ಕ್ರಾಂತಿಕಾರಿ! ಅನ್ನಿಸುತ್ತದೆ. ಅಲ್ಲಿ ಕೆಲಸ ಮಾಡುವಾಗ ನಾರಾಯಣ್ ಅವರಿಗೆ ಹಲವಾರು ವಿಚಾರಗಳು ತಿಳಿಯುತ್ತವೆ ಮತ್ತು ಸಾಕಷ್ಟು ಜನರ ಪರಿಚಯವೂ ಆಗುತ್ತದೆ.

ಇಂಗ್ಲೆಂಡಿನಲ್ಲಿ ಓದುತ್ತಿದ್ದ ತಮ್ಮ ಗೆಳೆಯ ಕಿಟ್ಟು ರಾಘವೇಂದ್ರ ಪೂರ್ಣ ಅವರ ವಿಳಾಸ ಕೊಟ್ಟು,  ತಮ್ಮ ಮೊದಲ ಪುಸ್ತಕ Swami and Friends ನ ಹಸ್ತ ಪ್ರತಿಯನ್ನು ಲಂಡನ್ ನಲ್ಲಿನ ಪ್ರಕಾಶಕರಿಗೆ ರವಾನಿಸುತ್ತಾರೆ. ಆ ಪುಸ್ತಕ ಮತ್ತೇನಾದರೂ ಪ್ರಕಾಶಕರಿಂದ ತಿರಸ್ಕರಿಸಲ್ಪಟ್ಟು ವಾಪಸ್ ಬಂದರೆ, ಅದಕ್ಕೆ ಒಂದು ಇಟ್ಟಿಗೆ ಕಟ್ಟಿ Thamesನದಿಗೆಸೆಯುವಂತೆ ಗೆಳೆಯನಿಗೆ ಹೇಳಿದ್ದರಂತೆ. ಆದರೆ Swami and Friends ಹಸ್ತಪ್ರತಿ, ಲೇಖಕ Graham Green ಕೈ ಸೇರುತ್ತದೆ ಮತ್ತು ಅವರ ಶಿಫಾರಸ್ಸಿನ ನಂತರ 1935ರಲ್ಲಿ ಪ್ರಕಟಣೆಯ ಭಾಗ್ಯ ಪಡೆಯುತ್ತದೆ.

ಆರ್.ಕೆ.ನಾರಾಯಣ್ ಅವರ ಬಾಲ್ಯದ ದಿನಗಳ ಅನುಭವ ಮತ್ತು ಘಟನಾವಳಿಗಳನ್ನು ಆಧರಿಸಿದ್ದ Swami and Friends ಪುಸ್ತಕಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆತರೂ ಕೂಡ ಹೆಚ್ಚಿನ ಪ್ರತಿಗಳು ಮಾರಾಟವಾಗುವುದಿಲ್ಲ. ಆ ಬಳಿಕ 1937ರಲ್ಲಿ ನಾರಾಯಣ್ The Bachelor of Arts ಎಂಬ ಕಾದಂಬರಿ ಬರೆದರು. ಅದೂಕೂಡ ಅವರ ಕಾಲೇಜಿನ ದಿನಗಳ ಅನುಭವಗಳಿಂದ ಪ್ರೇರಿತವಾಗಿದ್ದ ಪುಸ್ತಕವಾಗಿತ್ತು. ಹದಿಹರೆಯದಲ್ಲಿ ಬಂಡಾಯ ಪ್ರವೃತ್ತಿ ಹೊಂದಿದ್ದ ಬಾಲಕ, ಮುಂದಿನ ದಿನಗಳಲ್ಲಿ ಸಭ್ಯ ಯುವಕನಾಗಿ ಬದಲಾಗುವ ಕತೆ ಅದರಲ್ಲಿತ್ತು. 1938ರಲ್ಲಿ ನಾರಾಯಣ್ ಅವರ The Dark Room ಪುಸ್ತಕ ಪ್ರಕಟವಾಗುತ್ತದೆ. ಅದೊಂದು ಕೌಟುಂಬಿಕ ಕತೆಯಾಗಿದ್ದು, ಗಂಡಸು ತನ್ನ ಹೆಂಡತಿಯ ಮೇಲೆ  ತೋರಿಸುವ ದೌರ್ಜನ್ಯದ ಬಗ್ಗೆ ಅದರಲ್ಲಿ ವಿವರಣೆ ಇತ್ತು. ಈ ಪುಸ್ತಕಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಆರ್.ಕೆ. ನಾರಾಯಣ್ ಪತ್ನಿ ರಾಜಮ್ ಅವರಿಗೆ ಇಂಗ್ಲಿಷ್ ಭಾಷೆ ಓದಲು-ಬರೆಯಲು ಬರುತ್ತಿರಲಿಲ್ಲವಾದರೂ, ಪತಿಯ ಬರವಣಿಗೆ ಬಗ್ಗೆ ಅಪಾರ ಆಸಕ್ತಿ ವಹಿಸಿರುತ್ತಾರೆ. ಆದರೆ, ದುರದೃಷ್ಟವಶಾತ್ ನಾರಾಯಣ್ ದಾಂಪತ್ಯ ಜೀವನ ಅಲ್ಪಾಯುಷ್ಯದಿಂದ ಕೂಡಿರುತ್ತದೆ. ನಾರಾಯಣ್ ದಂಪತಿಗೆ ಹೇಮಾ ಎಂಬ ಹೆಣ್ಣುಮಗು ಜನಿಸಿದ ಮೂರೇ ವರ್ಷಗಳ ಬಳಿಕ 1939ರಲ್ಲಿ ರಾಜಮ್ ಅವರು Typhoid ಜ್ವರದಿಂದ ಸಾವಿಗೀಡಾಗುತ್ತಾರೆ. ಆ ಸನ್ನಿವೇಶದಲ್ಲಿ, ಮಗಳ ಭವಿಷ್ಯದ ಬಗ್ಗೆ ಚಿಂತಿತರಾಗುವ ನಾರಾಯಣ್ ಖಿನ್ನತೆಗೆ ಜಾರುತ್ತಾರೆ. ಪತ್ನಿಯ ಸಾವು ಅವರ ಬದುಕಿನಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗುತ್ತದೆ.

ತಮ್ಮ ಮೊದಲ ಮೂರು ಪುಸ್ತಕಗಳಿಗೆ ದೊರೆತ ಪ್ರಶಂಸೆಯ ಬಳಿಕ ಒಂದಿಷ್ಟು ಖುಷಿಯಾಗುವ ನಾರಾಯಣ್, 1940ರಲ್ಲಿ Indian Thought ಎಂಬ Journal ಆರಂಭಿಸುತ್ತಾರೆ, ಆದರೆ ಸರಿಯಾಗಿ ನಡೆಸಲು ಆಗದ ಕಾರಣ ಅದು ಒಂದೇ ವರ್ಷಕ್ಕೆ ನಿಂತುಹೋಗುತ್ತದೆ. ಆ ಬಳಿಕ, 1942ರಲ್ಲಿ ಮೊದಲ ಸಣ್ಣ ಕತೆಗಳ ಸಂಕಲನ Malgudi Days ಬರೆಯುತ್ತಾರೆ, 1945ರಲ್ಲಿ ಬಹುತೇಕ ಅವರ ಬದುಕಿನದ್ದೇ ಕತೆಯಾಗಿದ್ದ The English Teacher ನಂತರ Mr. Sampath(1948) ಕಾದಂಬರಿಗಳು ಪ್ರಕಟವಾಗುತ್ತವೆ. 2ನೇ ಮಹಾಯುದ್ಧದ(1939-45) ಸಂದರ್ಭದಲ್ಲಿ ಪುಸ್ತಕ ಪ್ರಕಟಣೆ ಕಷ್ಟವಾಗುತ್ತದೆ. ಆಗ ತಮ್ಮದೇ ಆದ Indian Thought Publications ಎಂಬ ಪ್ರಕಾಶನ ಕಂಪನಿ ಆರಂಭಿಸುತ್ತಾರೆ. ನಾರಾಯಣ್ ಅವರ ಈ ಪ್ರಯತ್ನ ಯಶಸ್ವಿಯಾಗುತ್ತದೆ.

ದಿನಗಳು ಕಳೆದಂತೆ ಆರ್.ಕೆ.ನಾರಾಯಣ್ ಅವರ ಪ್ರಸಿದ್ಧಿ ಹೆಚ್ಚಾಗುತ್ತದೆ. New York ನಿಂದ Moscowವರೆಗೆ ಅವರ ಓದುಗರು ಹುಟ್ಟಿಕೊಳ್ಳುತ್ತಾರೆ, ಹೆಚ್ಚು ಪುಸ್ತಕಗಳು ಖರ್ಚಾಗತೊಡಗುತ್ತವೆ.  ಅದೇವೇಳೆ ಮದ್ರಾಸಿನ ಜೆಮಿನಿ ಸ್ಟುಡಿಯೋಗಾಗಿ ತಮ್ಮ ಮಿಸ್ಟರ್ ಸಂಪತ್ ಕಾದಂಬರಿ ಆಧರಿಸಿದ ತಮಿಳು ಸಿನೆಮಾ ಮಿಸ್ ಮಾಲಿನಿಗೆ (1947) ಸಂಭಾಷಣೆ ಬರೆಯುತ್ತಾರೆ. ಮುಂದೆ  Moonru Pillaigal, Avvaiyar ಚಿತ್ರಗಳಿಗೂ ಸಂಭಾಷಣೆ ರಚಿಸುತ್ತಾರೆ.

The English Teacher ಕಾದಂಬರಿ ಬಳಿಕ ನಾರಾಯಣ್ ಅವರ ಬರಹಗಳು, ಆವರೆಗಿನ ಆತ್ಮಕಥಾನಕದ ನೆರಳಿನಿಂದ ಹೊರಬಂದು ಹೊಸ ತಿರುವು ಪಡೆದುಕೊಳ್ಳುತ್ತಾ ಹೋಗುತ್ತವೆ  1951ರಲ್ಲಿ ಬಂದ The Financial Expert ಕಾದಂಬರಿಯನ್ನು ಅವರ ಒಂದು ಅತ್ಯುತ್ತಮ ಕೃತಿ ಎಂದು ಹೇಳಲಾಗುತ್ತದೆ. ಆ ನಂತರ ಮಾಲ್ಗುಡಿಗೆ ಮಹಾತ್ಮ ಗಾಂಧಿಯವರ ಕಾಲ್ಪನಿಕ ಭೇಟಿ ಆಧರಿಸಿದ Waiting for the Mahatma ಬರೆಯುತ್ತಾರೆ. ಮಹಾತ್ಮರ ಸಂದೇಶ ಕೇಳಲು ಬಂದ ವ್ಯಕ್ತಿಗೆ, ಮಹಿಳೆಯೊಬ್ಬಳ ಮೇಲೆ ಪ್ರೇಮ ಬೆಳೆಯುವ ಆ ಕತೆಯಲ್ಲಿ, ಭಾರತದ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಪ್ರಸ್ತಾಪಗಳಿವೆ.

1953ರ ನಂತರದ ದಿನಗಳಲ್ಲಿ ನಾರಾಯಣ್ ಅವರ ಪುಸ್ತಕಗಳು ಅಮೆರಿಕದಲ್ಲೂ ಪ್ರಕಟಗೊಳ್ಳುತ್ತವೆ. ತಮ್ಮ ಜೀವನದ ಆ ಘಟ್ಟ ಮುಟ್ಟುವ ವೇಳೆಗೆ, ನಾರಾಯಣ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುತ್ತಾರೆ. ಇದರ ಜೊತೆಗೆ, ಅವರ ಆರ್ಥಿಕ ಪರಿಸ್ಥಿತಿ ಕೂಡ ಉತ್ತಮವಾಗಿರುತ್ತದೆ. ಮೈಸೂರಿನಲ್ಲಿ ಉತ್ತಮವಾದ ಮನೆ ಕಟ್ಟಿಸಿರುತ್ತಾರೆ. 1956ರಲ್ಲಿ ತಮ್ಮ ಪುತ್ರಿ ಹೇಮಾ ಅವರ ವಿವಾಹದ ಮಾಡುತ್ತಾರೆ. ಆ ಕಾಲಕ್ಕೆ ಐಶಾರಾಮಿ ಕಾರು ಅನ್ನಿಸಿಕೊಂಡಿದ್ದ Mercedes Benz ಕೊಳ್ಳುತ್ತಾರೆ. ಕೊಯಮತ್ತೂರಿನಲ್ಲಿ ನೆಲೆಸಿದ್ದ ಮಗಳ ಮನೆಗೆ ಕಾರಿನಲ್ಲೇ ಹೋಗಿ ಬರುತ್ತಾರೆ. ಆಗಾಗ ಪ್ರವಾಸ ಹೋಗುವುದನ್ನು ಆರಂಭಿಸುತ್ತಾರೆ, ಆದರೆ ಪ್ರವಾಸದ ವೇಳೆಯೂ ದಿನಕ್ಕೆ ಕನಿಷ್ಟ 1500 ಪದಗಳನ್ನು ಬರೆಯುವುದನ್ನು ಅವರು ತಪ್ಪಿಸುವುದಿಲ್ಲ.

1956ರಲ್ಲಿ Rockefeller Foundationನವರು ನೀಡುವ Travel Grant ಪಡೆದು ಅಮೆರಿಕ ಪ್ರವಾಸ ಕೈಗೊಳ್ಳುತ್ತಾರೆ. ಅಲ್ಲಿಂದ ವಾಪಸ್ ಬಂದ ಬಳಿಕ The Guide ಕಾದಂಬರಿ ಬರೆಯುತ್ತಾರೆ. ಇದು ಅವರ ಅತ್ಯಂತ ಕೌಶಲ್ಯಪೂರ್ಣ ಬರವಣಿಗೆ ಒಂದು ಉದಾಹರಣೆಯಾಗಿ ಕಂಡುಬರುತ್ತದೆ. ಇದಕ್ಕೆ 1958ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಿಗುತ್ತದೆ. ನಾರಾಯಣ್ ಅವರು ಆಗಾಗ ತಮ್ಮ ಚಿಂತನೆಗಳನ್ನು ಪ್ರಬಂಧಗಳ ರೂಪದಲ್ಲಿ ಪ್ರಕಟಿಸುತ್ತಿರುತ್ತಾರೆ. 1960ರಲ್ಲಿ Next Sunday ಮತ್ತು ಅಮೆರಿಕ ಪ್ರವಾಸದ ಅನುಭವಗಳನ್ನು ಕುರಿತು ಬರೆದಿರುವ My Dateless Diary ಪ್ರಕಟವಾಗುತ್ತದೆ. 1961ರಲ್ಲಿ The Man-Eater of Malgudi ಕಾದಂಬರಿ ಪ್ರಕಟಿಸುತ್ತಾರೆ,

ಆ ನಂತರ ಮತ್ತೆ ವಿದೇಶ ಪ್ರವಾಸ ಹೋಗುವ ನಾರಾಯಣ್, ಅಮೆರಿಕ ಮತ್ತು ಆಸ್ಟ್ರೇಲಿಯ ದೇಶಗಳಿಗೆ ಭೇಟಿ ಕೊಡುತ್ತಾರೆ. ಭಾರತೀಯ ಸಾಹಿತ್ಯಕ್ಕೆ ಸಂಬಂಧಿಸಿದಂತೆ Adelaide ಮತ್ತು Melbourne ನಗರಗಳಲ್ಲಿ ಭಾಷಣ ಮಾಡುತ್ತಾರೆ.

ಭಾರತ ಮತ್ತು ವಿದೇಶಗಳಲ್ಲೂ ತಮ್ಮ ಯಶಸ್ಸಿನಿಂದ ಹೆಸರು ಮಾಡಿದ ಬಳಿಕ The Hindu, The Atlantic ಮತ್ತಿತರ ಪತ್ರಿಕೆಗಳಿಗೆ ಅಂಕಣ ಬರೆಯಲು ಆರಂಭಿಸುತ್ತಾರೆ. 1964ರಲ್ಲಿ ನಾರಾಯಣ್ ಅವರು Gods, Demons and Others ಎಂಬ ಪೌರಾಣಿಕ ಕಥಾ ಸಂಕಲನ ಪ್ರಕಟಿಸುತ್ತಾರೆ. ಆ ಬಳಿಕ ಮತ್ತೊಮ್ಮೆ ಅಮೆರಿಕ ಪ್ರವಾಸ ಮಾಡುತ್ತಾರೆ. ಆ ಸಂದರ್ಭದಲ್ಲೇ ಅವರನ್ನು ಭೇಟಿ ಮಾಡಿದ್ದ ಪ್ರಸಿದ್ಧ ನಟಿ Greta Garbo ತಮಗೆ ಅಧ್ಯಾತ್ಮ ಮತ್ತು ಧ್ಯಾನದ ಬಗ್ಗೆ ಹೇಳಿಕೊಡಲು ಕೇಳುತ್ತಾರೆ. ಆದರೆ, ಆ ಬಗ್ಗೆ ತಮಗೆ ಹೆಚ್ಚೇನದೇನೂ ಗೊತ್ತಿಲ್ಲ ಎಂದಿದ್ದ ನಾರಾಯಣ್, Greta Garboಗೆ ಗಾಯತ್ರಿ ಮಂತ್ರ ಹೇಳಿಕೊಟ್ಟಿದ್ದರಂತೆ.

1967ರಲ್ಲಿ The Vendor of Sweets ಕಾದಂಬರಿ ಪ್ರಕಟವಾಗುತ್ತದೆ. ಆ ಬಳಿಕ ನಾರಾಯಣ್ ಮತ್ತೊಮ್ಮೆ ಇಂಗ್ಲೆಂಡಿಗೆ ಭೇಟಿ ಕೊಟ್ಟು University of Leedsನಿಂದ ಗೌರವ ಡಾಕ್ಟರೇಟ್ ಪಡೆಯುತ್ತಾರೆ. 1970ರಲ್ಲಿ A Horse and Two Goats ಸಣ್ಣ ಕತೆಗಳ ಸಂಕಲನ ಪ್ರಕಟಿಸುತ್ತಾರೆ. ಆ ನಂತರ ತಮ್ಮ ಚಿಕ್ಕಪ್ಪನಿಗೆ ಕೊಟ್ಟಿದ್ದ ಮಾತಿನಂತೆ ಕಂಬ ರಾಮಾಯಣವನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿ, The Ramayana (1972) ಪ್ರಕಟಿಸುತ್ತಾರೆ. 1977ರಲ್ಲಿ The Painter of Signs (1977) ಕಾದಂಬರಿ ಪ್ರಕಟವಾಗುತ್ತದೆ. ಇದರಲ್ಲಿ ನಾರಾಯಣ್ ಅವರು ಮೊದಲ ಬಾರಿಗೆ ಲೈಂಗಿಕತೆಯ ಬಗ್ಗೆಯೂ ಪ್ರಸ್ತಾಪ ಮಾಡುತ್ತಾರೆ. ಇದಾದ ಬಳಿಕ ಸಂಸ್ಕೃತದಿಂದ ಮಹಾಭಾರತವನ್ನು ಸಂಕ್ಷಿಪ್ತವಾಗಿ ಇಂಗ್ಲಿಷ್ ಭಾಷೆಗೆ ಅನುವಾದಿಸಿ 1978ರಲ್ಲಿ The Mahabharata ಪ್ರಕಟಿಸುತ್ತಾರೆ.

ಅದೇ ಸಮಯದಲ್ಲಿ ಅಂದಿನ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ಕೊಡಲು ನಾರಾಯಣ್ ಅವರಿಂದ ಪುಸ್ತಕ ಬರೆಸುತ್ತದೆ. 1980ರಲ್ಲಿ ಅದನ್ನೇ ನಾರಾಯಣ್ ಅವರು The Emerald Route ಎಂಬ ಶೀರ್ಷಿಕೆಯಡಿ ಪ್ರಕಟಿಸುತ್ತಾರೆ. ಅದೇ ವರ್ಷ ನಾರಾಯಣ್ ಅವರನ್ನು American Academy of Arts and Lettersನ ಗೌರವ ಸದಸ್ಯರಾಗಿ ಆಯ್ಕೆ ಮಾಡಲಾಗುತ್ತದೆ. ಹೆಚ್ಚೂ ಕಮ್ಮಿ ಅದೇ ಸಮಯದಲ್ಲಿ ನಾರಾಯಣ್ ಅವರ ಪುಸ್ತಕಗಳು ಚೀನಾದ ಮ್ಯಾಂಡರಿನ್ ಭಾಷೆಗೂ ಅನುವಾದಗೊಳ್ಳುತ್ತವೆ.

ಆ ಬಳಿಕ 1983ರಲ್ಲಿ ನಾರಾಯಣ್ ಅವರು A Tiger for Malgudi ಕಾದಂಬರಿ ಪ್ರಕಟಿಸುತ್ತಾರೆ. ಇದು ಒಂದು ಹುಲಿ ಮತ್ತು ಮನುಷ್ಯರ ಜೊತೆಗಿನ ಅದರ ಸಂಬಂಧದ ಕಥೆಯಾಗಿರುತ್ತದೆ. 1985ರಲ್ಲಿ Under the Banyan Tree and Other Stories ಪ್ರಕಟವಾಗುತ್ತದೆ. 1986ರಲ್ಲಿ ಮಾಲ್ಗುಡಿಯ ಒಬ್ಬ ಪತ್ರಕರ್ತನ ಬಗ್ಗೆ ತಿಳಿಸುವ Talkative Man ಕಾದಂಬರಿ ಬರೆಯುತ್ರಾರೆ.  1988ರಲ್ಲಿ ಜಾತಿ ಪದ್ಧತಿ, ಪ್ರೇಮ, ನೊಬೆಲ್ ಪ್ರಶಸ್ತಿ ವಿಜೇತರು, ಕಪಿಗಳು ಇತ್ಯಾದಿಗಳ ಬಗ್ಗೆ ಪ್ರಬಂಧಗಳನ್ನೊಳಗೊಂಡ A Writer’s Nightmare ಪುಸ್ತಕ ಬಿಡುಗಡೆ ಮಾಡುತ್ತಾರೆ.

1989ರಲ್ಲಿ ಕೇಂದ್ರ ಸರ್ಕಾರ ನಾರಾಯಣ್ ಅವರನ್ನು ರಾಜ್ಯಸಭೆಯ ಸದಸ್ಯರಾಗಿ ನಾಮಕರಣ ಮಾಡುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಹೆಚ್ಚಿನ ಹೋಮ್ ವರ್ಕ್ ಕೊಡುವುದು ಮತ್ತು  ಮಕ್ಕಳು ಪುಸ್ತಕ, ನೀರು ಮತ್ತು ಊಟದ ಬಾಕ್ಸ್ ಹೊರುವುದರ ವಿರುದ್ಧ ಸಂಸತ್ತಿನಲ್ಲಿ ತಾವು ಮಾಡಿದ ಚೊಚ್ಚಲ ಭಾಷಣದಲ್ಲಿ ಪ್ರಸ್ತಾಪಿಸುತ್ತಾರೆ. ನಾರಾಯಣ್ ಅವರ ಮಾತಿಗೆ ಬೆಲೆಕೊಡುವ ಸರ್ಕಾರ, ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರೊ.ಯಶ್ ಪಾಲ್ (ದೂರದರ್ಶನದಲ್ಲಿ Turning Point ಕಾರ್ಯಕ್ರಮ ನಡೆಸಿಕೊಡುತ್ತಿದ್ದವರು) ನೇತೃತ್ವದ ಸಮಿತಿ ರಚಿಸುತ್ತದೆ.

1990ರಲ್ಲಿ The World of Nagaraj ಎಂಬ ಹೊಸ ಕಾದಂಬರಿ ಪ್ರಕಟಿಸುತ್ತಾರೆ. ಅದೂ ಕೂಡ ಮಾಲ್ಗುಡಿಯ ಪರಿಸರದಲ್ಲಿ ನಡೆಯುವ ಕಥೆಯೇ ಆಗಿರುತ್ತದೆ. ಈ ಕಾದಂಬರಿ ಬರೆದ ನಂತರದ ದಿನಗಳಲ್ಲಿ ನಾರಾಯಣ್ ಅನಾರೋಗ್ಯಕ್ಕೊಳಗಾಗುತ್ತಾರೆ. ಮೈಸೂರು ಬಿಟ್ಟು, ತಮ್ಮ ಮಗಳ ಕುಟುಂಬದ ಜೊತೆಗಿರಲು ಚೆನ್ನೈಗೆ ತೆರಳುತ್ತಾರೆ. ಆ ನಂತರದ ದಿನಗಳಲ್ಲಿ ಚೇತರಿಸಿಕೊಂಡ ನಾರಾಯಣ್, ತಮ್ಮ ಕಡೆಯ ಪುಸ್ತಕ Grandmother’s Tale(1992) ಬರೆಯುತ್ತಾರೆ. ಅದೂಕೂಡ, ಮದುವೆ ಬಳಿಕ ಮನೆ ಬಿಟ್ಟು ಓಡಿಹೋದ ತಮ್ಮ ಗಂಡನನ್ನು ಹುಡುಕಲು ನಾರಾಯಣ್ ಅವರ ಮುತ್ತಜ್ಜಿ ಪಟ್ಟ ಕಷ್ಟಗಳನ್ನು ಆಧರಿಸಿದ ಕಾದಂಬರಿಯಾಗಿರುತ್ತದೆ. 1994ರಲ್ಲಿ ನಾರಾಯಣ್ ಅವರ ಮಗಳು ಹೇಮಾ ಕ್ಯಾನ್ಸರ್ ನಿಂದ ನಿಧನರಾಗುತ್ತಾರೆ. ಆ ಬಳಿಕ ಮೊಮ್ಮಗಳು ಭುವನೇಶ್ವರಿ  ನಾರಾಯಣ್ ಅವರ ಬಗ್ಗೆ ಮತ್ತು ಪ್ರಕಾಶನ ಸಂಸ್ಥೆ Indian Thought Publications ಬಗ್ಗೆ ಗಮನ ಹರಿಸುತ್ತಾರೆ.

ಸದಾ ಯಾರ ಜೊತೆಗಾದರೂ ಮಾತಿಗಿಳಿಯಲು ಇಷ್ಟಪಡುತ್ತಿದ್ದ ನಾರಾಯಣ್ ಅವರಿಗೆ ಪತ್ರಕರ್ತ The Hindu ಪತ್ರಿಕೆಯ ಎನ್.ರಾಮ್ ಅವರು ಜೊತೆಯಾಗುತ್ತಾರೆ. ರಾತ್ರಿ ತಡಹೊತ್ತಿನವರೆಗೆ ಅವರೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಾ ಆಗಾಗ್ಗೆ ಕಾಫಿ ಕುಡಿಯುತ್ತಾ ಕಾಲ ಕಳೆಯುತ್ತಿರುತ್ತಾರೆ. ಮತ್ತೊಮ್ಮೆ ತೀವ್ರ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆ ಸೇರುವ ನಾರಾಯಣ್ ಅವರು, 2001ರ ಮೇ 13ರಂದು ತಮ್ಮ 94ನೇ ವಯಸ್ಸಿನಲ್ಲಿ ಚೆನ್ನೈನಲ್ಲಿ ಕೊನೆಯುಸಿರೆಳೆಯುತ್ತಾರೆ.

ಆರ್.ಕೆ ನಾರಾಯಣ್ ಅವರು, ಭಾರತೀಯ ಇಂಗ್ಲಿಷ್ ಸಾಹಿತ್ಯದ ತ್ರಿಮೂರ್ತಿಗಳಲ್ಲಿ ಒಬ್ಬರು ಎಂದು ಗುರುತಿಸಲ್ಪಡುತ್ತಾರೆ. ಮತ್ತಿಬ್ಬರು ಮಹನೀಯರಲ್ಲಿ ಮುಲ್ಕ್ ರಾಜ್ ಆನಂದ್ ಮತ್ತು ಕನ್ನಡಿಗರೇ ಆದ ಹಾಸನ ರಾಜಾರಾವ್ ಅವರು ಸೇರಿದ್ದಾರೆ. ಆರ್.ಕೆ. ನಾರಾಯಣ್ ಅವರು ಹಲವುಬಾರಿ ಸಾಹಿತ್ಯ ಕ್ಷೇತ್ರದ ನೊಬೆಲ್ ಪಾರಿತೋಷಕದ ಸಂಭಾವಿತರ ಪಟ್ಟಿಯಲ್ಲಿದ್ದರೂ ಅವರಿಗೆ ಪ್ರಶಸ್ತಿ ದಕ್ಕುವುದಿಲ್ಲ. ಅದಕ್ಕೆ ಕಾರಣ, ಆಯ್ಕೆ ಸಮಿತಿಯ ಸದಸ್ಯರಿಗೆ ಆರ್.ಕೆ ನಾರಾಯಣ್ ಅವರ ಬರಹಗಳ ಮೌಲ್ಯ ಮತ್ತು ವ್ಯಾಪ್ತಿಯ ಬಗ್ಗೆ ತಿಳುವಳಿಕೆಯ ಕೊರತೆ ಕಾರಣವಾಗಿರಬಹುದು. ಆರ್.ಕೆ ನಾರಾಯಣ್ ಬರವಣಿಗೆ ಬಗ್ಗೆ ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯವರು ಬರೆದಿದ್ದರು ಎನ್ನಲಾದ ಅಭಿಪ್ರಾಯ ಹೀಗಿದೆ.

“His Writing is too Simple, and too readable, requiring no effort on the part of the reader. He has created a new map called Malgudi in which his characters live and die. Story after story is set in the same place, which is not progressive, a rather stagnant background. We hope someday, Narayan will develop in to a full fledged writer deserving our serious consideration”

ಕಾಲ್ಪನಿಕ ಪಟ್ಟಣ ಮಾಲ್ಗುಡಿ…

ಆರ್.ಕೆ ನಾರಾಯಣ್ ಅವರು ತಮ್ಮ ಬರಹಗಳಲ್ಲಿ ಮಾಲ್ಗುಡಿ ಎಂಬ ಕಾಲ್ಪನಿಕ ಊರನ್ನು ಸೃಷ್ಟಿಸಿದ್ದಾರೆ. ಇದರ ಸೃಷ್ಟಿಗೆ ತಾವು ಯಾವ ಊರು ಮತ್ತು ಪರಿಸರದಿಂದ ಸ್ಫೂರ್ತಿ ಪಡೆದಿದ್ದಾರೆ ಅನ್ನುವುದನ್ನು ಅವರು ಯಾವತ್ತೂ ಸ್ಪಷ್ಟಗೊಳಿಸಿಲ್ಲ. ಆದರೆ, ಅದು ಬೆಂಗಳೂರಿನ ಮಲ್ಲೇಶ್ವರಮ್ ಬಡಾವಣೆಯ MAL ಮತ್ತು ಬಸವನಗುಡಿ ಬಡಾವಣೆಯ GUDI ಸೇರಿ ಆಗಿರಬಹುದು ಎಂಬ ಮಾತೂ ಇದೆ.

ಆರ್.ಕೆ ನಾರಾಯಣ್ ಅವರ Swami and Friends ಕಾದಂಬರಿ ಆಧರಿಸಿ ಶಂಕರ್ ನಾಗ್ ಅವರು 1986ರಲ್ಲಿ ದೂರದರ್ಶನಕ್ಕಾಗಿ ನಿರ್ದೇಶಿಸಿದ್ದ ಮಾಲ್ಗುಡಿ ಡೇಸ್, ಹಿಂದಿ ಧಾರಾವಾಹಿ ಇವತ್ತಿಗೂ ಅತ್ಯಂತ ಜನಪ್ರಿಯವಾಗಿದೆ. ಟಿ.ಎಸ್.ನರಸಿಂಹನ್ ಅವರು ನಿರ್ಮಿಸಿದ್ದ ಈ ಧಾರಾವಾಹಿಯನ್ನು ಇತ್ತೀಚೆಗೆ ಕನ್ನಡ ಭಾಷೆಗೂ Dubbing ಮಾಡಿ ಪ್ರಸಾರ ಮಾಡಲಾಗಿತ್ತು. ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಸ್ವಾಮಿಯ ಪಾತ್ರ ಮಾಡಿದ್ದ ಮಂಜುನಾಥ್ ನಾಯ್ಕರ್ ಅವರನ್ನು ಕಾರ್ಯಕ್ರಮವೊಂದರಲ್ಲಿ ನೋಡಿದ್ದ ಆರ್.ಕೆ ನಾರಾಯಣ್, “ನಾನು ಸ್ವಾಮಿ ಹೇಗಿರುತ್ತಾನೆ ಎಂದು ಕಲ್ಪಿಸಿಕೊಂಡಿದ್ದೆನೋ, ಆ ರೀತಿಯೇ ನೀನು ಇದ್ದೀಯ” ಎಂದು ಹೇಳಿದ್ದರು.

ನಾರಾಯಣ್ ಅವರ The Guide ಕಾದಂಬರಿ, ವಿಜಯ್ ಆನಂದ್ ಅವರ ನಿರ್ದೇಶನದಲ್ಲಿ ಸಿನೆಮಾ ಆಗಿದೆ. ಈ ಚಿತ್ರದ ನಿರ್ಮಾಣಕ್ಕಾಗಿ, 1964ರಲ್ಲಿ ಹಿಂದಿ ಚಿತ್ರರಂಗದ Evergreen ಹೀರೋ ದೇವ್ ಆನಂದ್, ಆರ್.ಕೆ.ನಾರಾಯಣ್ ಅವರ ಮೈಸೂರಿನ ಮನೆಗೆ ಭೇಟಿ ನೀಡಿ ಅನುಮತಿ ಪಡೆಯುತ್ತಾರೆ. ಆರ್.ಕೆ.ನಾರಾಯಣ್ ಮತ್ತೊಂದು ಕಾದಂಬರಿ The Financial Expert, 1983ರಲ್ಲಿ ಬ್ಯಾಂಕರ್ ಮಾರ್ಗಯ್ಯ ಸಿನೆಮಾ ಆಗಿ ಹೆಸರು ಮಾಡಿತ್ತು.

ಮೈಸೂರಿನ ಯಾದವಗಿರಿಯಲ್ಲಿ ಆರ್.ಕೆ.ನಾರಾಯಣ್ ಅವರು ವಾಸ ಮಾಡಿದ ಮನೆಯನ್ನು ಖರೀದಿಸಿದ ರಾಜ್ಯಸರ್ಕಾರ ಅದನ್ನು ವಸ್ತು ಸಂಗ್ರಹಾಲಯವಾಗಿಸಿದೆ. ಅಲ್ಲಿ ಆರ್.ಕೆ.ನಾರಾಯಣ್ ಅವರ ಅಪರೂಪದ ಚಿತ್ರಗಳು, ಪುಸ್ತಕಗಳು ಮತ್ತು ವೈಯಕ್ತಿಕವಾಗಿ ಅವರು ಬಳಕೆ ಮಾಡುತ್ತಿದ್ದ ಹಲವಾರು ವಸ್ತುಗಳನ್ನು ವೀಕ್ಷಣೆಗೆ ಇರಿಸಲಾಗಿದೆ.

ಆರ್.ಕೆ.ನಾರಾಯಣ್, Walking ಮತ್ತು ಕಾಫಿ…

ಆರ್.ಕೆ.ನಾರಾಯಣ್ ಅವರಿಗೆ Walking ಅನ್ನುವುದು ಕೇವಲ ದೈನಂದಿನ ವ್ಯಾಯಾಮವಷ್ಟೇ ಆಗಿರಲಿಲ್ಲ, ಅದು ಅವರ ಚಿಂತನೆಗಳಿಗೆ, ಬರಹಕ್ಕೆ ಕಥಾವಸ್ತು ಒದಗಿಸುವ ಚಿಲುಮೆ ಆಗಿತ್ತು. ಅವರು Walk ಮಾಡಲು ಎಂದೂ ಉದ್ಯಾನವನಕ್ಕೆ ಹೋಗುತ್ತಿರಲಿಲ್ಲ, ಬದಲಿಗೆ ಪೇಟೆ ಬೀದಿ ಮತ್ತು ಮಾರುಕಟ್ಟೆಗಳ ಸಾಲಿನಲ್ಲಿ ನಡೆಯುತ್ತಿದ್ದರು. ಅವರು ಸದಾ ಬಾಯಲ್ಲಿ ಒಂದು ಲವಂಗ, ಏಲಕ್ಕಿ ಅಥವ ಅಡಿಕೆಯನ್ನು ಜಗಿಯುತ್ತಾ, ಎದುರಿಗೆ ಸಿಕ್ಕವರೊಡನೆ ನಿಂತು ಮಾತನಾಡುತ್ತಾ ಮುಂದೆ ಸಾಗುತ್ತಿದ್ದರು. ಬರೆಯುವಾಗಲೂ ಅಡಿಕೆ ಜಗಿಯುತ್ತಿದ್ದ ಅವರು ಅದಿಲ್ಲದೆ ತಮ್ಮ ಪೆನ್ನು ಓಡುವುದಿಲ್ಲ ಅನ್ನುತ್ತಿದ್ದರು.

ಮೊಸರು ಅನ್ನ ಮತ್ತು ನಿಂಬೆ ಉಪ್ಪಿನ ಕಾಯಿ ಅವರ ಮೆಚ್ಚಿನ ಆಹಾರವಾಗಿತ್ತು. ಸಿಕ್ಕಾಪಟ್ಟೆ ಕಾಫಿ ಪ್ರಿಯರಾಗಿದ್ದ ಆರ್.ಕೆ.ನಾರಾಯಣ್ ಅವರಿಗೆ ಪ್ರತಿಬಾರಿಯೂ ಕಾಫಿಯ ಸ್ವಾದದಲ್ಲಿ ಯಾವುದೇ ಹೆಚ್ಚೂಕಡಿಮೆ ಆಗುವಂತಿರಲಿಲ್ಲ. ಅವರು ಯಾವುದೇ ಕಾರಣಕ್ಕೂ ಕೆಟ್ಟ ಕಾಫಿಯನ್ನು ಕುಡಿಯುತ್ತಿರಲಿಲ್ಲ. ಸಂಗೀತ ಪ್ರೇಮಿಯಾಗಿದ್ದ ಆರ್.ಕೆ.ನಾರಾಯಣ್, ತಾವೇ ಸ್ವತಃ ವೀಣೆ ಕಲಿತು ನುಡಿಸುತ್ತಿದ್ದರು. ಅದಕ್ಕೆ ಮೈಸೂರು ಅರಮನೆಯ ಆಸ್ಥಾನ ಕಲಾವಿದರಾಗಿದ್ದ ಸ್ನೇಹಿತ ವೀಣಾ ದೊರೆಸ್ವಾಮಿ ಅಯ್ಯಂಗಾರ್ ಅವರಿಂದ ಶಭಾಸ್ ಗಿರಿಯನ್ನೂ ಪಡೆದಿದ್ದರು. ಆರ್.ಕೆ.ನಾರಾಯಣ್ ಅವರ ಬಹುತೇಕ ಎಲ್ಲ ಹೊಸ ಕತೆ-ಕಾದಂಬರಿಗಳಿಗೆ ಸೋದರ ಆರ್.ಕೆ.ಲಕ್ಷ್ಮಣ್ ಅವರೇ ಮೊದಲ ಕೇಳುಗರಾಗಿದ್ದರು. ನಾರಾಯಣ್ ಅವರ ಹಲವು ಪುಸ್ತಕಗಳಿಗೆ ಲಕ್ಷ್ಮಣ್ ಅವರು ಅತ್ಯುತ್ತಮ ಚಿತ್ರಗಳನ್ನು ಬರೆದುಕೊಟ್ಟಿದ್ದಾರೆ.

2019ರ ನವೆಂಬರ್ 8 ರಂದು ಆರ್.ಕೆ.ನಾರಾಯಣ್ ಅವರ Swami and Friends ಪುಸ್ತಕವನ್ನು BBCಯವರು Novels That Shaped Our World ಪುಸ್ತಕಗಳ ಪಟ್ಟಿಯಲ್ಲಿ ಗುರುತಿಸಿದ್ದರು.

ಆರ್.ಕೆ.ನಾರಾಯಣ್ ಅವರಿಗೆ 1964ರಲ್ಲಿ ಪದ್ಮಭೂಷಣ ಮತ್ತು 2000ದಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ತಮ್ಮ ಸರಳ ಮತ್ತು ನಿರಾಡಂಬರ ಶೈಲಿಯ ಬರವಣಿಗೆಯಿಂದ ಹೆಸರಾಗಿದ್ದ  ಆರ್.ಕೆ.ನಾರಾಯಣ್, ತಮ್ಮ ಮತ್ತು ಕತೆ- ಕಾದಂಬರಿಗಳ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಸಂವೇದನೆಗಳನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಆರ್.ಕೆ.ನಾರಾಯಣ್ ಅವರ ಜನ್ಮದಿನದಂದು ಎಲ್ಲ ಸಾಹಿತ್ಯ ಪ್ರೇಮಿಗಳಿಗೆ ಮಾಧ್ಯಮ ಅನೇಕ ಸಂಸ್ಥೆಯ ಶುಭ ಹಾರೈಕೆಗಳು.

LEAVE A REPLY

Connect with

Please enter your comment!
Please enter your name here