ಚಿತ್ರರಂಗದಲ್ಲಿ ನಟನೆಯಲ್ಲಿ ತೊಡಗಿದವರು ನಂತರ ಕ್ರಮೇಣವಾಗಿ ಬೆಳೆದು ಚಿತ್ರ ನಿರ್ಮಾಣದತ್ತಲೂ ಆಸಕ್ತಿ ತೋರಿಸುವುದು ಸಾಮಾನ್ಯ ಸಂಗತಿ. ಇಷ್ಟು ದಿನ, ನಟಿಯಾಗಿ ಗುರುತಿಸಿಕೊಂಡಿದ್ದ ಅನಿತಾ ಭಟ್ ಕೂಡ ‘ಇಂದಿರಾ’ ಸಿನಿಮಾ ಮೂಲಕ ನಿರ್ಮಾಪಕಿಯಾಗುತ್ತಿದ್ದಾರೆ.

ಹೌದು, ನಟಿ ಅನಿತಾ ಭಟ್ ನಿರ್ಮಾಪಕಿ ಆಗುತ್ತಿದ್ದಾರೆ. ಯಾವ ಅನಿತಾ ಭಟ್ ಅಂತ ಕೇಳಿದ್ರೆ ಅದಕ್ಕೆ ಉತ್ತರ ‘ಸೈಕೋ’ ಚಿತ್ರದಿಂದ ಶುರುವಾಗುತ್ತದೆ. ಇಲ್ಲಿಯವರೆಗೂ ಸಣ್ಣಪುಟ್ಟ ಪಾತ್ರಗಳನ್ನೇ ಮಾಡಿ ಒಂದಷ್ಟು ಹೆಸರು ಮಾಡಿದ್ದ ಅನಿತಾ ಭಟ್ ಅವರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ದೊಡ್ಡ ಮಟ್ಟದ ಸಿನಿಮಾಗಳು ಸಿಗಲಿಲ್ಲ. ಕೆಲವೊಂದು ಚಿತ್ರಗಳಲ್ಲಿ ಆಕೆ ನಾಯಕಿಯಾದರೂ ಈ ಸಿನಿಮಾಗಳು ಯಶಸ್ಸು ಕಾಣಲಿಲ್ಲ. ಹಾಗಾಗಿ ಆರಕ್ಕೇರದೆ ಮೂರಕ್ಕಿಳಿಯದೆ ಇದ್ದ ಅವರ ಚಿತ್ರರಂಗದ ಗ್ರಾಫ್ ಅನ್ನು ಅನಿತಾ ಈಗ ತಾವೇ ಬದಲಾಯಿಸಿಕೊಂಡಿದ್ದಾರೆ. ಅವರೀಗ ಎರಡು ಚಿತ್ರಗಳ ನಿರ್ಮಾಣದ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ಧರಾಗಿದ್ದಾರೆ.

‘ಇಂದಿರಾ’ ಚಿತ್ರತಂಡ

ಅನಿತಾ ಭಟ್ ಕ್ರಿಯೇಷನ್ಸ್ ಅಡಿಯಲ್ಲಿ ಹೊಸ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಸಂಸ್ಥೆಯ ಮೊದಲ ಸಿನಿಮಾವಾಗಿ ‘ಸಮುದ್ರಂ’ ಚಿತ್ರ ಈಗಾಗಲೇ ಸೆಟ್ಟೇರಿದ್ದು, ಇದೀಗ ಎರಡನೇ ಚಿತ್ರವಾಗಿ ‘ಇಂದಿರಾ’ ಅನೌನ್ಸ್ ಮಾಡಲಾಗಿದೆ. ‘ಇಂದಿರಾ’ ಚಿತ್ರದ ಟೈಟಲ್ ಪೋಸ್ಟರ್‌ ಅನ್ನು ಪುನೀತ್ ರಾಜಕುಮಾರ್ ಅವರು ಬಿಡುಗಡೆ ಮಾಡುವ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಒಂದು ಆಕ್ಸಿಡೆಂಟ್ ಸುತ್ತ ಇಡೀ ಕಥೆ ಸುತ್ತಲಿದೆ.

ರಿಷಿಕೇಶ್ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದು, ಅನಿತಾ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಕುರುಡಿಯಾಗಿ, ಮರೆಗುಳಿ ಕಾಯಿಲೆ ಇರುವ ಪಾತ್ರಕ್ಕೆ ಅನಿತ ಭಟ್ ಜೀವತುಂಬುತ್ತಿದ್ದಾರೆ. ಶಫಿ, ನೀತೂ ಶೆಟ್ಟಿ, ಎಸ್.ಜೆ.ಕಾರ್ತಿಕ್ ಗೌಡ, ರೆಹಮಾನ್ ಹಾಸನ್, ಚಕ್ರವರ್ತಿ ಚಂದ್ರಚೂಡ್ ಮುಖ್ಯ ತಾರಾಬಳಗದಲ್ಲಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಅನಿತಾ ಭಟ್ ಹಾಗೂ ಸಹ ನಿರ್ಮಾಪಕರಾಗಿ ಪ್ರಜ್ಞಾನಂದ ಸೊರಬ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ದೇಶನದ ಜೊತೆಗೆ ರಿಷಿಕೇಶ್ ಚಿತ್ರದ ಛಾಯಾಗ್ರಹಣ, ಸಂಕಲನ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಲೋಹಿತ್ ಎಲ್.ನಾಯಕ್ ಸಂಗೀತ ನಿರ್ದೇಶನ, ಅಭಿಷೇಕ್ ಮಠದ್ ನೃತ್ಯ ನಿರ್ದೇಶನವಿದೆ.

LEAVE A REPLY

Connect with

Please enter your comment!
Please enter your name here