ಮನೋವಿಶ್ಲೇಷಣಾತ್ಮಕ ಕಥೆಗಳು, ಥ್ರಿಲ್ಲರ್‌ಗಳು, ಇಂಟೊರಾಗೇಶನ್ ಕೊಠಡಿಗಳ ಕಥೆಗಳ ಬಗ್ಗೆ ಆಸಕ್ತಿ ಇರುವವರು ನೋಡಬಹುದಾದ ವೆಬ್ ಸರಣಿ ಇದು. ‘Criminal : United Kingdom’ ಸರಣಿ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಮೊನ್ನೆಮೊನ್ನೆ ಒಂದು ವೀಡಿಯೋ ವೈರಲ್ ಆಗಿತ್ತು. ಚಲಿಸುವ ರೈಲಿನಿಂದ ಪ್ರಯಾಣಿಕರ ಫೋನ್ ಕಸಿಯುತ್ತಿದ್ದ ಕಳ್ಳನೊಬ್ಬನನ್ನು ಪ್ರಯಾಣಿಕರೊಬ್ಬರು ಹಿಡಿದಿದ್ದರು. ಉಹೂ, ಹಿಡಿದದ್ದಷ್ಟೇ ಅಲ್ಲ ಹಿಡಿದುಕೊಂಡಿದ್ದರು. ರೈಲು ಚಲಿಸುತ್ತಲೇ ಇತ್ತು. ಆತ ಅಂಗಲಾಚುತ್ತಲೇ ಇದ್ದ, ಕಿಟಕಿಯ ಹೊರಗೆ ನೇತಾಡುತ್ತಲೇ ಇದ್ದ. ಅವನ ಅಪರಾಧದ ಬಗ್ಗೆ ಎರಡು ಮಾತಿಲ್ಲ, ಅದಕ್ಕೆ ಶಿಕ್ಷೆಯಾಗಬೇಕಾದ್ದರ ಬಗ್ಗೆ ಎರಡು ಮಾತಿಲ್ಲ. ಆದರೆ ಹಾಗೆ ಶಿಕ್ಷೆ ನೀಡುವ ಅಧಿಕಾರವನ್ನು ನಮಗೆ ಕೊಟ್ಟವರು ಯಾರು? ಅಕಸ್ಮಾತ್ ಅವನ ತಲೆ ಯಾವುದೋ ಕಂಬಕ್ಕೋ, ಗೋಡೆಗೋ ಬಡಿದು ಆತ ಸಾವನ್ನಪ್ಪಿದರೆ ಈ ಕಾನೂನು ‘ರಕ್ಷಕರು’ ರಕ್ಷಕರಾಗಿಯೇ ಉಳಿಯುತ್ತಾರೆಯೋ ಅಥವಾ ಅಪರಾಧಿಗಳಾಗುತ್ತಾರೆಯೋ? ಪ್ರತಿಯೊಂದು ನ್ಯಾಯ ತೀರ್ಮಾನಕ್ಕೂ ಒಂದು ಪ್ರಕ್ರಿಯೆ ಇರುತ್ತದೆ. ಆರೋಪಿ ಅಪರಾಧಿಯಾಗುವವರೆಗೆ ಹಲವು ಹಂತಗಳಲ್ಲಿ ಆತನ ಅಪರಾಧದ ಪರಿಶೀಲನೆ, ಪರಾಮರ್ಶೆ ಎಲ್ಲವೂ ನಡೆದು ಕಡೆಗೆ ಶಿಕ್ಷೆ ನೀಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲರೂ ಅವರ ನಿರ್ಧಾರ ಮತ್ತು ವಿವೇಚನೆಗಳ ಉತ್ತರದಾಯಿತ್ವ ಹೊರಬೇಕಾಗುತ್ತದೆ. ಈ ಪ್ರಕ್ರಿಯೆಯ ಹಲವಾರು ಹಂತಗಳ ‘ದಾವ್-ಪೇಚ್’ ನ ಕಥೆಯೇ Criminal. ಇದನ್ನು ನಾಲ್ಕು ದೇಶಗಳ ಕಥಾವರಣ ಇಟ್ಟುಕೊಂಡು ತಯಾರಿಸಲಾಗಿದೆ. ನಾನಿಂದು ಬರೆಯುತ್ತಿರುವುದು, ‘Criminal : United Kingdom’.

ಎರಡು ಸರಣಿಗಳಲ್ಲಿ ಈ ಕಥೆ ಪ್ರಸಾರವಾಗಿದೆ. George Kay ಕಥೆಯ ಬರಹಗಾರರಾಗಿದ್ದರೆ, Jim Field Smith ಇದರ ನಿರ್ದೇಶಕರು. ಸರಣಿಯ ಎಲ್ಲಾ ಕಥೆಗಳೂ ನಡೆಯುವುದು ಒಂದು ವಿಚಾರಣಾ ಕೊಠಡಿಯ ಆಚೆ ಮತ್ತು ಈಚೆ. ಎರಡನ್ನೂ ಪ್ರತ್ಯೇಕಿಸುವುದು ಒಂದು ಕನ್ನಡಿಯ ಗೋಡೆ. ವಿಚಾರಣೆ ಎದುರಿಸುವ ಆರೋಪಿ/ಅಪರಾಧಿಗೆ ಅದು ಕನ್ನಡಿಯಂತೆ ಕಂಡರೆ, ಆಚೆ ಬದಿ ಕುಳಿತ ವಿಚಾರಣಾ ಅಧಿಕಾರಿಗಳಿಗೆ ಅದು ಗಾಜು, ಅವರು ಅದರ ಮೂಲಕ ನೇರವಾಗಿ ನೋಡಬಹುದು ಮತ್ತು ಕೇಳಬಹುದು. ಇಡೀ ಸರಣಿಯಲ್ಲಿ ಒಂದೇ ಒಂದು ಸಲ ಮಾತ್ರ ಆಚೆ ಕೊಠಡಿಯಲ್ಲಿರುವವರಿಗೆ ಈಚೆ ಕೊಠಡಿಯವರು ಕಾಣುತ್ತಾರೆ. ಇದನ್ನು ಬಿಟ್ಟರೆ ಕಥೆ ನಡೆಯುವುದು ಕಾಫಿ/ಟೀ/ತಂಪು ಪಾನಿಯ/ಬಿಸ್ಕತ್/ಚಿಪ್ಸ್ ಇತ್ಯಾದಿಗಳನ್ನು ಮಾರುವ ಯಂತ್ರ ಇರುವ ಒಂದು ಹಜಾರ ಮತ್ತು ಮೆಟ್ಟಿಲುಗಳು ಇಲ್ಲಿ ಮಾತ್ರ. ಮುಖ್ಯ ಕಥೆ ನಡೆಯವುದು ಆ ಎರಡು ಕೊಠಡಿಗಳಲ್ಲೇ. ಕೆಲವು ಸಲ ಆರೋಪಿಗಳ ವಿಚಾರಣೆ ನಡೆದರೆ, ಕೆಲವು ಸಲ ಅಪರಾಧಿ ಅಥವಾ ಅವರ ಸಂಬಂಧಿಕರನ್ನು ಹೆಚ್ಚಿನ ವಿಚಾರಣೆಗೆ ಕರೆತರಲಾಗುತ್ತದೆ. ಇಡೀ ಕಥೆ ಅಲ್ಲೇ ಸಾಗುವುದರಿಂದ ಅಪರಾಧವನ್ನು ಕೇಳುವಿಕೆಯ ಮೂಲಕವೇ ಗ್ರಹಿಸಬೇಕು, ಅಲ್ಲಿ ಯಾವುದೇ ತೋರುವಿಕೆ ಇರುವುದಿಲ್ಲ. ಇದು ಈ ಸರಣಿ ಎದುರಿಸುವ ಸವಾಲು. ನೋಡುಗರ ಆಸಕ್ತಿಯನ್ನು ಹಿಡಿದಿಡುವುದಕ್ಕೆ ಕಥೆ, ಸಂಭಾಷಣೆ, ಸ್ಕ್ರೀನ್ ಪ್ಲೇ ಮತ್ತು ಅಭಿನಯ ಗಟ್ಟಿಯಾಗಿರಬೇಕು. ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಸಣ್ಣ ಜಾಗದ ಒತ್ತಡವನ್ನು ಹೆಚ್ಚಿಸಬೇಕು. ಈ ಸರಣಿಯ ಬಹಳಷ್ಟು ಕಥೆಗಳು ಈ ಸವಾಲನ್ನು ಸಮರ್ಥವಾಗಿಯೇ ಎದುರಿಸಿವೆ.

ಪ್ರತಿ ಸೀಸನ್ನಿನ, ಪ್ರತಿಕಥೆಗೂ ಆ ಕಥೆಯ ಆರೋಪಿಗಳ/ಅಪರಾಧಿಗಳ ಹೆಸರನ್ನು ಕೊಡಲಾಗಿದೆ. ಒಂದು ಕಡೆ ಅವರು ಮತ್ತವರ ವಕೀಲರು ಇದ್ದರೆ, ಇನ್ನೊಂದು ಕಡೆ ತನಿಖೆ ಮಾಡುವ ಅಧಿಕಾರಿಗಳು. ಅವರಲ್ಲಿ ಇಬ್ಬರು ತನಿಖೆ ಮಾಡಲೆಂದು ಬಂದರೆ ತಂಡದ ಮಿಕ್ಕವರು ಕನ್ನಡಿಯ ಆಚೆಗೆ ಕೂತು ತಮ್ಮವರು ಮತ್ತು ತನಿಖೆಗೆ ಒಳಗಾಗುತ್ತಿರುವವರು ಇಬ್ಬರನ್ನೂ ಪರಿಶೀಲಿಸುತ್ತಾ, ವಿಶ್ಲೇಷಣೆ ಮಾಡುತ್ತಾ ಇರುತ್ತಾರೆ. ಅಲ್ಲಿ ಅವರು ಕೊಟ್ಟ ಹೇಳಿಕೆಗಳಿಗೆ ಪೂರಕವಾಗಬಹುದಾದ ಅಥವಾ ಅವುಗಳನ್ನು ಇಲ್ಲವಾಗಿಸುವ ಪುರಾವೆಗಳನ್ನು ತಮ್ಮ ಕೈಯಲ್ಲಿರುವ ಎಲ್ಲಾ ಮಾಧ್ಯಮಗಳಿಂದ ಹುಡುಕುತ್ತಾ ಇರುತ್ತಾರೆ. ತನಿಖೆ ನಡೆಸುವವರು ಕೇವಲ ತಮ್ಮ ಮಾನಸಿಕ ನಡೆಗಳನ್ನು ನಡೆಸುತ್ತಾ, ಎದುರಿಗೆ ಕುಳಿತವರ ಮನೋಸ್ಥೈರ್ಯವನ್ನು ಒಡೆಯುತ್ತಾ ಅವರು ತಮ್ಮ ತಪ್ಪು ಒಪ್ಪಿಕೊಳ್ಳುವಂತೆ ಮಾಡಬೇಕು. ಇಲ್ಲಿ ಅವರು ದೈಹಿಕ ಹಿಂಸೆ ಮಾಡುವಂತಿಲ್ಲ. ಕಾನೂನಿನ ಪರಿಧಿಯನ್ನು ಅತಿಕ್ರಮಿಸುವಂತಿಲ್ಲ, ಏಕೆಂದರೆ ಎದುರುಗಡೆಯೇ ವಕೀಲರು ಕುಳಿತಿರುತ್ತಾರೆ. ಆರೋಪಿಗಳಿಗೆ ಇವರ ತಂತ್ರಗಳು ಹೊಸದಾಗಿರಬಹುದು, ಆದರೆ ವಕೀಲರಿಗಲ್ಲ. ಕೆಲವು ಸಲ ಆ ವಕೀಲರು ಇವರ ಮನೋಸ್ಥೈರ್ಯವನ್ನೇ ಮುರಿದು ಹಾಕಬಲ್ಲರು, ಇವರನ್ನೇ ಪಾಟೀ ಸವಾಲಿಗೆ ಒಳಪಡಿಸಬಲ್ಲರು.

ಮೊದಲ ಸೀಸನ್ನಿನಲ್ಲಿ ಬರುವ ಸಂಚಿಕೆಗಳು 3. ಮೊದಲನೆಯದು, ಎಡ್ಗರ್ – ಇವನ ಮೇಲೆ ಮಲಮಗಳನ್ನು ಕೊಂದ ಆರೋಪ ಇದೆ. ಮೊದಮೊದಲು ಕೇವಲ No Comments, No Comments ಎನ್ನುತ್ತಿದ್ದ ಇವನ ಮನೋನಿಗ್ರಹವನ್ನು ಒಬ್ಬ ಅಧಿಕಾರಿ ಮುರಿದು ಹಾಕುತ್ತಾನೆ. ಅಲ್ಲಿರುವ ಕ್ಯಾಮೆರಾ ತೋರಿಸಿ, ನೀನು ಹೇಳುವುದೆಲ್ಲಾ ಅಲ್ಲಿ ರೆಕಾರ್ಡ್ ಆಗುತ್ತಲಿದೆ. ಮಗಳ ಕೊಲೆಯಾಗಿರುವಾಗ ತಂದೆಯೊಬ್ಬ ಇಷ್ಟು ನಿರಾಳವಾಗಿ No Comments ಎಂದು ಹೇಳಬಲ್ಲ ಎನ್ನುವುದು ಕ್ಯಾಮೆರಾದಲ್ಲಿ ಹೇಗೆ ಕಾಣಿಸಬಹುದು ಎಂದು ಯೋಚಿಸಿದ್ದೀಯಾ ಎಂದು ಕೇಳಿ ಅವನು ಮಾತನಾಡಲೇಬೇಕಾದ ಒತ್ತಡ ತರುತ್ತಾನೆ. ಅವನು ಮಾತನಾಡುತ್ತಾ, ಆಡುತ್ತಾ ಆ ಹುಡುಗಿಗೂ ಇನ್ನೊಬ್ಬ ಉಪಾಧ್ಯಾಯರಿಗೂ ಸಂಬಂಧ ಇತ್ತು ಎಂದು ಶುರು ಮಾಡುತ್ತಾನೆ. ಈ ಕೋಣೆಯ ಆಚೆ ಕುಳಿತ ತನಿಖಾಧಿಕಾರಿ ಆತನ ಒಂದೊಂದು ಉತ್ತರವನ್ನೂ ನಿಕಷಕ್ಕೊಡ್ಡುತ್ತಾ ಉತ್ತರಗಳನ್ನು ಹುಡುಕುತ್ತಾನೆ.

ಇನ್ನೆರಡು ಎಪಿಸೋಡ್‌ಗಳು ಸ್ಟೇಸಿ ಮತ್ತು ಜೇ. ಕೊಲೆಯನ್ನು ತನ್ನ ಮೇಲೆಯೇ ಹಾಕಿಕೊಳ್ಳಬಹುದಾದ ಗಿಲ್ಟ್ ಬಗ್ಗೆ ಒಂದು ಮಾತನಾಡಿದರೆ, ಇನ್ನೊಂದರಲ್ಲಿ ಆರೋಪಿ ಸಹ ಒಂದು ದೊಡ್ಡ ಹುನ್ನಾರದ ಕಾಯಿ ಮಾತ್ರ ಆಗಿರಲು ಸಾಧ್ಯ ಎನ್ನುವುದನ್ನು ಕಟ್ಟಿಕೊಡುತ್ತಾರೆ. ಕೆಲವು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಎರಡನೆಯ ಸೀಸನ್ ಮೊದಲ ಸೀಸನ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿ ಬರುತ್ತದೆ. ಈ ಕಥೆಯ ವಿಷಯಕ್ಕೆ ಹಾಗೆ ಹೇಳಬಹುದು. ಇಲ್ಲಿನ ನಾಲ್ಕು ಕಥೆಗಳ ಆಯ್ಕೆಯಲ್ಲಿ ಕಪ್ಪು, ಬಿಳಿಯ ಕಂಫರ್ಟ್ ಜೋನ್ ಆಚೆಗೂ ಕಥೆ ತೆರೆದುಕೊಳ್ಳುತ್ತದೆ.

ಮೊದಲ ಕಥೆ ಜೂಲಿಯಾ. ತನ್ನ ವಿದ್ಯಾರ್ಥಿಯನ್ನು ಕೊಲೆ ಮಾಡಿದ ಅಪರಾಧಕ್ಕಾಗಿ ಅವಳ ಗಂಡನನ್ನು ಜೈಲಿಗೆ ಹಾಕಲಾಗಿದೆ. ಆತನ ತನ್ನ ವಿದ್ಯಾರ್ಥಿಯೊಂದಿಗೆ ಸಂಬಂಧ ಇಟ್ಟುಕೊಂಡು ನಂತರ ಅವನ ಕೊಲೆಮಾಡಿದ್ದಾನೆ ಎನ್ನುವುದು ಸಾಬೀತೂ ಆಗಿಹೋಗಿದೆ. ಅವನು ಇನ್ನೊಂದು ಕೊಲೆಯನ್ನೂ ಮಾಡಿರಬಹುದು ಎನ್ನುವ ಅನುಮಾನವಿದೆ. ಈಗಾಗಿ ಅವನ ಹೆಂಡತಿಯನ್ನು ಹೆಚ್ಚಿನ ವಿಚಾರಣೆಗಾಗಿ ಕರೆತರಲಾಗಿದೆ. ಅವಳೇ ಜೂಲಿಯಾ. ಅದೊಂದು ಭಾನುವಾರ. ತಂಡದ ಕಿರಿಯ ಸದಸ್ಯೆಯೊಬ್ಬಳು ಆಕೆಯ ಹೇಳಿಕೆ ಪಡೆದುಕೊಳ್ಳುತ್ತಿದ್ದಾಳೆ. ಆಚಿನ ಕೊಠಡಿಯಲ್ಲಿ ತಂಡದ ಇನ್ನೊಬ್ಬ ಕಿರಿಯ ಸದಸ್ಯ ಚಿಪ್ಸ್ ತಿನ್ನುತ್ತಾ, ಕಾಫಿ ಕುಡಿಯುತ್ತಾ ನೋಟ್ಸ್ ಮಾಡಿಕೊಳ್ಳುತ್ತಿರುತ್ತಾನೆ. ಜೂಲಿಯಾಳನ್ನು ನೋಡಿದರೆ ಅನುಕಂಪ ಬರುತ್ತದೆ. ಅವಳ ಪ್ರತಿ ಮಾತಿನಲ್ಲಿ, ಕಣ್ಣೋಟದಲ್ಲಿ, ಮುಖದಲ್ಲಿ ಸುಕ್ಕುಗಳಲ್ಲಿ ದಾಂಪತ್ಯದಲ್ಲಿ ಅವಳು ಅನುಭವಿಸಿರಬಹುದಾದ ನೋವು, ನಿರಾಕರಣೆಯ ಅಪಮಾನ ಅಚ್ಚೊತ್ತಿದಂತೆ ಕಾಣುತ್ತಿದೆ. ಹೇಳಿಕೆ ತೆಗೆದುಕೊಳ್ಳುತ್ತಿದ್ದ ಕಿರಿಯ ಆಫೀಸರ್ ಆಕೆಯೊಂದಿಗೆ ಬೆಳೆಸಿಕೊಳ್ಳುವ ಒಂದು ಸಂವಾದ ಸಂಬಂಧ ಅವಳು ನಿರಾತಂಕವಾಗಿ ಮಾತನಾಡುವಂತೆ ಮಾಡುತ್ತದೆ. ಅದೇ ಮನಸ್ಥಿತಿಯಲ್ಲಿ ಜೂಲಿಯಾ ಒಂದು ಹೇಳಿಕೆ ಕೊಡುತ್ತಾಳೆ. ಆಚೆ ಕೋಣೆಯಲ್ಲಿದ್ದ ಹುಡುಗ ಗಡಬಡಿಸಿ ಏಳುತ್ತಾನೆ. ತನ್ನ ಮೇಲಧಿಕಾರಿಯನ್ನು ಅವಸರದಿಂದ ಕರೆಸುತ್ತಾನೆ. ಅವನು ಕಂಡುಕೊಂಡ ಆ ಹೇಳಿಕೆ ಎಷ್ಟು ಸ್ಪೋಟಕವಾಗಿರುತ್ತದೆ ಎಂದರೆ ಕಡೆಗೆ ಕಛೇರಿಯ ಹಿರಿಯ ಬಾಸ್‌ವರೆಗೂ ಎಲ್ಲರೂ ಅಲ್ಲಿ ಸೇರುತ್ತಾರೆ.

ಅಂತಹುದೇ ಇನ್ನೊಂದು ಸಂಚಿಕೆ ಅಲೆಕ್ಸ್ ಹೆಸರಿನದ್ದು. ಅವನ ಮೇಲೆ ಸಹೋದ್ಯೋಗಿಯೊಬ್ಬಳ ಮೇಲೆ ಲೈಂಗಿಕ ದಾಳಿ ಮಾಡಿದ ಆರೋಪವಿದೆ. ಅವನ ನಡೆನುಡಿಯಲ್ಲಿ ಪುರುಷಾಹಂಕಾರ ಎದ್ದು ಕಾಣಿಸುತ್ತಿದೆ. ಎದುರುಗಡೆಯಲ್ಲಿ ಇಬ್ಬರು ಅಧಿಕಾರಿಗಳು ಕುಳಿತು ತನಿಖೆ ನಡೆಸುತ್ತಿರುತ್ತಾರೆ. ಒಬ್ಬಾತ ಪುರುಷ ಮತ್ತೊಬ್ಬಾಕೆ ಅವನ ಮೇಲಧಿಕಾರಿ. ಅಲೆಕ್ಸ್ ಮಾತನಾಡುವಾಗ ಪುರುಷ ಅಧಿಕಾರಿಯ ಕಡೆಗೆ ನೋಡಿ ಮಾತನಾಡುತ್ತಾ ಅವನನ್ನು ಮತ್ತು ಅವನನ್ನು ಮಾತ್ರ ಕನ್ವಿನ್ಸ್ ಮಾಡುವ ಅಗತ್ಯ ಇದೆ ಎನ್ನುವಂತೆ ಮಾತನಾಡುತ್ತಿರುತಾನೆ. ಯಾವುದೋ ಒಂದು ಪಾಯಿಂಟ್ ನೋಟ್ ಮಾಡಿಕೊಳ್ಳಿ ಎನ್ನುವಾಗ ಮಾತ್ರ ಅವಳ ಕಡೆಗೆ ತಿರುಗಿ ಅವಳೊಬ್ಬ ಸಹಾಯಕಿಯೋ ಎನ್ನುವಂತೆ ‘ನೋಟ್ ಮಾಡಿಕೋ’ ಎನ್ನುತ್ತಾನೆ. ವಿಪರ್ಯಾಸವೆಂದರೆ ಅವನ ಪರವಾಗಿ ಬಂದಿರುವುದು ಒಬ ವಕೀಲೆ. ಇವನು ಹಾಗೆ ಹೆಣ್ಣುಗಳನ್ನೆಲ್ಲಾ ಒಟ್ಟಾರೆಯಾಗಿ ಕಡೆಗಣಿಸುತ್ತಾ, ಅವರ ಬಗ್ಗೆ ಕೇವಲವಾಗಿ ಮಾತನಾಡುತ್ತಿರುವಾಗ ಅವಳಿಗೂ ಸಿಟ್ಟು, ಅಪಮಾನ ಉಕ್ಕುತ್ತಿರುತ್ತದೆ. ಆದರೆ ಅವಳು ಅಲ್ಲಿ ಬಂದಿರುವುದು ಒಬ್ಬ ವಕೀಲೆಯಾಗಿ. ತಣ್ಣನೆಯ ದನಿಯಲ್ಲಿ ಈ ಅಧಿಕಾರಿಗಳು ಮಾಡುವ ಗಿಮಿಕ್‌ಗಳ ಬಗ್ಗೆ ಹೇಳುತ್ತಿರುವಾಗ ಅವಳ ಕಣ್ಣಿನಿಂದ ಹನಿಯೊಂದು ಜಾರುತ್ತಲಿರುತ್ತದೆ. ಆದರೆ ಆಚೆಗಿನ ಕೋಣೆಯಲ್ಲಿ ಕುಳಿತ ಅಧಿಕಾರಿ ಈಗಲೂ ಒಂದು ಸತ್ಯವನ್ನು ಹೆಕ್ಕಿ ತೆಗೆಯುತ್ತಾನೆ. ಅಲೆಕ್ಸ್‌ನನ್ನು ಅವರು ಬಿಟ್ಟು ಕಳಿಸಬೇಕಾಗುತ್ತದೆ. ಆದರೆ ಈಗ ಅವನು ಮಾತು ಶುರು ಮಾಡುತ್ತಾನೆ. ನಾನಿನ್ನು ಸಾಯುವವರೆಗೂ ಈ ಆರೋಪದೊಂದಿಗೇ ಬದುಕಬೇಕು, ಇದನ್ನು ನೀವು ಸರಿ ಮಾಡಿಕೊಡಿ ಎಂದು ಪಟ್ಟು ಹಿಡಿಯುತ್ತಾನೆ. ಇದೂ ಕೂಡ ಪರಿಣಾಮಕಾರಿಯಾಗಿ ಬಂದಿರುವ ಇನ್ನೊಂದು ಕಥೆ.

ಇನ್ನು ಲೇಖನದ ಮೊದಲಿಗೆ ನಾನು ಬರೆದ ಘಟನೆಗೆ ಸಂವಾದಿಯಾಗಿ ಬರುವ ಕಥೆ ವೈಯಕ್ತಿಕವಾಗಿ ನನಗೆ ತುಂಬಾ ಇಷ್ಟವಾದ ಕಥೆ. ಆಕೆ ಡೇನಿಯೆಲ್. ಪೆಸ್ಟಿಸೈಡ್ ಎನ್ನುವ ಒಂದು ಸಂಸ್ಥೆಯನ್ನು ನಡೆಸುತ್ತಿರುತ್ತಾಳೆ. ಶಿಶುಕಾಮಿಗಳನ್ನು ಹುಡುಕಿ, ಜಾಲಬೀಸಿ ಹಿಡಿದು ಅವರಿಗೆ ಶಿಕ್ಷೆ ಕೊಡುವ ಒಂದು ಖಾಸಗಿ ವೆಬ್ಸೈಟ್ ಅದು. ಆಕೆ ತನ್ನನ್ನು ತಾನು vigilante – ನಿಗಾ ಇಡುವವಳು – ಎಂದು ಕರೆದುಕೊಳ್ಳುತ್ತಿರುತ್ತಾಳೆ. ಆಕೆಯ ಕಾರ್ಯವಿಧಾನ ಹೀಗಿರುತ್ತದೆ : ಆಕೆ ತನ್ನನ್ನು ತಾನು 13-14 ರ ಹುಡುಗಿ ಎಂದು ಹೇಳಿಕೊಳ್ಳುತ್ತಾ ಆನ್ಲೈನ್ ಅಕೌಂಟ್ ತೆರೆಯುತ್ತಾಳೆ. ಕೆಲವೊಮ್ಮೆ ಅವರಾಗಿ ಬಂದು ಈ ಬಲೆಯಲ್ಲಿ ಸಿಲುಕಿಕೊಂಡರೆ ಕೆಲವೊಮ್ಮೆ ಅವಳೇ ಗಾಳ ಹಾಕಿ ಅವರನ್ನು ಸೆಳೆಯುತ್ತಾಳೆ. ‘ಇದು ತಪ್ಪಲ್ಲವೆ’ ಎನ್ನುವ ತನಿಖಾಧಿಕಾರಿಯ ಪ್ರಶ್ನೆ ಅವಳಲ್ಲಿ ಒಂದು ಸಣ್ಣ ಗಿಲ್ಟ್ ಸಹ ಹುಟ್ಟಿಸುವುದಿಲ್ಲ. ಸರಿ ಅಂತಹವರನ್ನು ಕಂಡುಹಿಡಿದ ಮೇಲೆ ನೀವು ಏನು ಮಾಡುತ್ತೀರಿ ಎನ್ನುವ ಪ್ರಶ್ನೆಗೆ ಅವಳ ಉತ್ತರ, ಅವರ ಎಲ್ಲಾ ಚಾಟ್ ಮೆಸೇಜ್‌ಗಳ ಮೂರು ಪ್ರತಿ ಮಾಡಿ, ಒಂದು ಪ್ರತಿ ಪೋಲಿಸ್‌ಗೆ, ಒಂದು ಪ್ರತಿ ಆ ವ್ಯಕ್ತಿ ಕೆಲಸ ಮಾಡುವ ಸ್ಥಳಕ್ಕೆ, ಮೂರನೆಯ ಪ್ರತಿ ಆ ವ್ಯಕ್ತಿಯ ಹೆಂಡತಿಯ ತಾಯ್ತಂದೆಗಳಿಗೆ ಕಳಿಸುತ್ತೇವೆ ಎನ್ನುವ ಅವಳಲ್ಲಿ ತಾನು ಎಂತಹ ಘನತೆವೆತ್ತ ಕೆಲಸ ಮಾಡುತ್ತಿರುವೆ ಎನ್ನುವ ಸಣ್ಣ ಅಹಂ. ಆದರೆ ಖಾಸಗಿ ವ್ಯಕ್ತಿಯೊಬ್ಬರು ಏಕೆ ನ್ಯಾಯಾಧೀಶರಾಗಬಾರದು, ನ್ಯಾಯ ನಿರ್ಣಯವೆನ್ನುವುದು ಏಕೆ ಒಂದು ಸಾಬೀತಾಗಿರುವ ನ್ಯಾಯ ವ್ಯವಸ್ಥೆಯ ಮೂಲಕವೇ ಆಗಬೇಕ ಎನ್ನುವುದು ತನಿಖೆಯ ಮುಂದಿನ ನಡೆಗಳಲ್ಲಿ ಸಾಬೀತಾಗುತ್ತಾ ಹೋಗುತ್ತದೆ. ಮಾತೆತ್ತಿದರೆ ತಮ್ಮನ್ನು ತಾವು ನ್ಯಾಯಧೀಶರು ಎಂದುಕೊಂಡು ತೀರ್ಪು ಜಾರಿ ಮಾಡುವ ಹವ್ಯಾಸ ಅದೆಷ್ಟು ಅಪಾಯಕಾರಿ ಸಹ ಆಗಬಲ್ಲದು ಎನ್ನುವುದನ್ನು ಈ ಕಥೆ ಪರಿಣಾಮಕಾರಿಯಾಗಿ ಹೇಳುತ್ತದೆ.

ನಾಲ್ಕನೆಯ ಕಥೆಯ ಹೆಸರು ಸಂದೀಪ್. ಅವನ ಮೇಲೆ ವ್ಯಕ್ತಿಯೊಬ್ಬನನ್ನು ಕೊಂದ ಆರೋಪ ಸಾಬೀತಾಗಿದೆ. ಕಾಣೆಯಾದ ಇನ್ನೊಂದು ಹೆಣ್ಣೂ ಸಹ ಅವನಿಂದ ಹತ್ಯೆಯಾಗಿರಬಹುದು ಎನ್ನುವ ಅನುಮಾನದ ಮೇಲೆ ಅವನನ್ನು ವಿಚಾರಣೆಗೆ ಕರೆತರಲಾಗಿದೆ. ಅವನ ನಡೆ, ನುಡಿ, ಮಾತು ಎಲ್ಲವೂ ಚೂರಿಯ ಮೊನೆಯಷ್ಟು ಶೀತಲ. ಅವನನ್ನು ಒಡೆಯುವ, ಅವನಿಂದ ತಪ್ಪೊಪ್ಪಿಗೆ ಪಡೆಯುವ ಅವರ ಎಲ್ಲಾ ಪ್ರಯತ್ನಗಳೂ ಸೋತು ಹೋಗುತ್ತವೆ. ಸರಿ ವಾಪಸ್ ಹೋಗು ಎಂದಾಗ ಅವನು ಹೋಗುವುದಿಲ್ಲ. ಇವರೊಂದಿಗೆ ಒಂದು ಚೌಕಾಸಿಗೆ ಕೂರುತ್ತಾನೆ ಮತ್ತು ತನ್ನ ಕಾಲುಗಳ ಮೇಲೆ ತಾನೇ ಚಪ್ಪಡಿ ಕಲ್ಲು ಹಾಕಿಕೊಳ್ಳುತ್ತಾನೆ! ಕಥೆ, ಸ್ಕ್ರೀನ್ ಪ್ಲೇ, ಅಭಿನಯ ಎಲ್ಲದರ ದೃಷ್ಟಿಯಿಂದಲೂ ಅಚ್ಚುಕಟ್ಟಾಗಿ ಬಂದಿರುವ ಕಥೆ ಇದು!

ಮನೋವಿಶ್ಲೇಷಣಾತ್ಮಕ ಕಥೆಗಳು, ಥ್ರಿಲ್ಲರ್‌ಗಳು, ಇಂಟೊರಾಗೇಶನ್ ಕೊಠಡಿಗಳ ಕಥೆಗಳ ಬಗ್ಗೆ ಆಸಕ್ತಿ ಇರುವವರು ನೋಡಬಹುದಾದ ವೆಬ್ ಸರಣಿ ಇದು.
ಫ್ರ್ಯಾನ್ಸ್, ಜರ್ಮನಿ ಮತ್ತು ಸ್ಪೇನ್‌ಗಳಲ್ಲಿನ ಇನ್ನೂ ಮೂರು ಸರಣಿಗಳು ಇದೇ ಹೆಸರಿನಿಂದ ಬಂದಿವೆ. ಆದರೆ ಕಥೆಯ ವ್ಯಾಕರಣ ಇದೇ ಆಗಿದೆ.

LEAVE A REPLY

Connect with

Please enter your comment!
Please enter your name here