ಕನ್ನಡ ನಟ ಡ್ಯಾನಿ ಕುಟ್ಟಪ್ಪ ಪ್ರಮುಖ ಖಳಪಾತ್ರದಲ್ಲಿ ನಟಿಸಿರುವ ‘ಸ್ಕಂದ’ ತೆಲುಗು ಸಿನಿಮಾ ಈ ವಾರ ತೆರೆಕಾಣಲಿದೆ. ಖ್ಯಾತ ಟಾಲಿವುಡ್‌ ನಿರ್ದೇಶಕ ಬೋಯಾಪಾಟಿ ಶ್ರೀನು ನಿರ್ದೇಶನದ ಈ ಚಿತ್ರ ತಮ್ಮ ವೃತ್ತಿಬದುಕಿಗೆ ಮಹತ್ವದ ತಿರುವಾಗಲಿದೆ ಎನ್ನುವ ವಿಶ್ವಾಸ ಅವರದು.

ಖಳನಟನಾಗಿ ಸ್ಯಾಂಡಲ್‌ವುಡ್‌ನಲ್ಲಿ ಚಿರಪರಿಚಿತರಾಗಿರುವ ಡ್ಯಾನಿ ಕುಟ್ಟಪ್ಪ ಇದೀಗ ಟಾಲಿವುಡ್‌ನಲ್ಲಿಯೂ ಮಿಂಚುತ್ತಿದ್ದಾರೆ. ಈ ವಾರ ತೆರೆಕಾಣುತ್ತಿರುವ ಬೋಯಾಪಾಟಿ ಶ್ರೀನು ನಿರ್ದೇಶನದ ‘ಸ್ಕಂದ’ ತೆಲುಗು ಚಿತ್ರದ ಪ್ರಮುಖ ಖಳಪಾತ್ರದಲ್ಲಿ ಅವರಿದ್ದಾರೆ. ರಾಮ್‌ ಪೋತಿನೇನಿ ನಟನೆಯ ಆಕ್ಷನ್‌ – ಲವ್‌ ಸ್ಟೋರಿ ಇದು. ಈ ಸಿನಿಮಾ ತಮ್ಮ ವೃತ್ತಿಬದುಕಿಗೆ ಮಹತ್ವದ ತಿರುವು ನೀಡಲಿದೆ ಎನ್ನುವ ವಿಶ್ವಾಸ ಅವರದು. ಡ್ಯಾನಿ ಅವರಿಗೆ ಟಾಲಿವುಡ್‍ ಹೊಸದೇನಲ್ಲ. ‘ಬಾಹುಬಲಿ’ ಚಿತ್ರದ ಮೂಲಕ ತೆಲುಗಿಗೆ ಹೊರಟ ಅವರು, ನಂತರ ‘ಗದ್ದಲಕೊಂಡ ಗಣೇಶ್‍’ ಸೇರಿದಂತೆ ಕೆಲವು ತೆಲುಗು ಚಿತ್ರಗಳಲ್ಲಿ ನಟಿಸಿದ್ದರು. ಈಗ ‘ಸ್ಕಂದ’ ಚಿತ್ರದಲ್ಲಿ ಅತೀ ಮುಖ್ಯವಾದ ನೆಗೆಟಿವ್‍ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್‌ನಲ್ಲಿ ಡ್ಯಾನಿ ಕುಟ್ಟಪ್ಪ ಅವರ ಪಾತ್ರದ ಪರಿಚಯವೂ ಇದೆ.

ಟ್ರೈಲರ್‌ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಬೋಯಾಪಾಟಿ ಶ್ರೀನು, ಡ್ಯಾನಿ ಕುಟ್ಟಪ್ಪ ಅವರನ್ನು ಆಂಧ್ರದ ಜನತೆಗೆ ಪರಿಚಯಿಸಿಕೊಡುವ ಜೊತೆಗೆ, ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ‘ಅಖಂಡ’, ‘ಲೆಜೆಂಡ್‍’, ‘ಸಿಂಹ’ ಮುಂತಾದ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಬೋಯಾಪಾಟಿ ಶ್ರೀನು ಅವರ ಸಿನಿಮಾದ ಅವಕಾಶಕ್ಕಾಗಿ ಡ್ಯಾನಿ ಋಣಿಯಾಗಿದ್ದಾರೆ. ‘ಬೋಯಾಪಾಟಿ ಶ್ರೀನು ಅವರು ಪ್ರತಿ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ಕೊಡುತ್ತಾರೆ. ಆ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವುದರಿಂದ ಹಿಡಿದು, ಆ ಪಾತ್ರ ಹೇಗಿರಬೇಕು, ಏನು ಮಾಡಬೇಕು ಎಂಬ ಸಣ್ಣಸಣ್ಣ ವಿವರಗಳಿಗೂ ಮಹತ್ವ ಕೊಡುತ್ತಾರೆ. ಯಾರಾದರೂ ಹಾಗೆ ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ಜವಾಬ್ದಾರಿಯೂ ಇನ್ನಷ್ಟು ಹೆಚ್ಚುತ್ತದೆ. ಪಾತ್ರಕ್ಕೆ ಇನ್ನಷ್ಟು ಸಮರ್ಪಿಸಿಕೊಳ್ಳಬೇಕು ಎಂದು ಸ್ಫೂರ್ತಿ ಬರುತ್ತದೆ’ ಎನ್ನುತ್ತಾರೆ ಡ್ಯಾನಿ.

ಡ್ಯಾನಿ ಅವರು ‘ಸ್ಕಂದ’ ಚಿತ್ರಕ್ಕಾಗಿ 20 ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ರಾಮೋಜಿ ಫಿಲಂ ಸಿಟಿ, ಅನ್ನಪೂರ್ಣ ಸ್ಟುಡಿಯೋಸ್‍ ಮುಂತಾದ ಕಡೆ ಚಿತ್ರೀಕರಣ ನಡೆದಿದ್ದು, ಹಲವು ಸಾಹಸಮಯ ಸನ್ನಿವೇಶಗಳಲ್ಲಿ ಅವರು ಭಾಗವಹಿಸಿದ್ದಾರೆ. ಈ ಚಿತ್ರದಲ್ಲಿನ ತಮ್ಮ ಪಾತ್ರವನ್ನು Rude and Rough ಎಂದು ಬಣ್ಣಿಸುವ ಅವರು, ಈ ಚಿತ್ರವು ತಮ್ಮ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಕನ್ನಡದಲ್ಲೂ ಹೊಸಬರು, ಹಳಬರು ಎನ್ನದೇ ಎಲ್ಲರೊಂದಿಗೂ ಕೆಲಸ ಮಾಡಲು ಎದುರು ನೋಡುತ್ತಿರುವ ಡ್ಯಾನಿ ಕುಟ್ಟಪ್ಪ, ‘ಇಂಥವರು ಇಂಥ ಪಾತ್ರ ಮಾಡಬೇಕು ಎನ್ನುವುದಕ್ಕಿಂತ ಆ ಪಾತ್ರದ ಕುರಿತು ಆರೋಗ್ಯಕರ ಚರ್ಚೆಗಳಾಗಬೇಕು. ಒಬ್ಬ ನಿರ್ದೇಶಕ ಮತ್ತು ನಟನ ನಡುವೆ ಚರ್ಚೆಗಳಾದಾಗ, ಒಂದೊಳ್ಳೆಯ ಪಾತ್ರ ಮತ್ತು ಚಿತ್ರವನ್ನು ಮಾಡಬಹುದು’ ಎನ್ನುತ್ತಾರೆ.

LEAVE A REPLY

Connect with

Please enter your comment!
Please enter your name here