ಆಕ್ಷನ್‌ಗೆ ಬೇಕಾದ ಸ್ಟೈಲ್, ಸ್ವ್ಯಾಗ್, ಆಟಿಟ್ಯೂಡ್‌ನೊಂದಿಗೆ ದರ್ಶನ್ ಫೈಟ್ ಮಾಡಿದ್ದಾರೆ. ಫೈಟ್ಸ್‌ಗೆ ಹೊಂದಿಸಿ ಬರೆದಂತೆ ಸಂಭಾಷಣೆಗಳೂ ಇರುವುದು ಅವರ ಅಭಿಮಾನಿಗಳಿಗೆ ಡಬಲ್ ಧಮಾಕಾ! ಸರ್ಕಾರಿ ಶಾಲೆಗಳ ಕುರಿತು ಕಾಳಜಿಯ ಮಾತನಾಡುವ ಕಾರಣಕ್ಕೆ ‘ಕ್ರಾಂತಿ’ಯನ್ನು ಸದಭಿರುಚಿಯ ಸಿನಿಮಾಗಳ ಪಟ್ಟಿಗೆ ಸೇರ್ಪಡೆಗೊಳಿಸಬಹುದು.
ಕಮರ್ಷಿಯಲ್ ಸಿನಿಮಾವೊಂದಕ್ಕೆ ಪವರ್‌ಫುಲ್ ಕ್ಲೈಮ್ಯಾಕ್ಸ್ ಮಾಡೋದು ಯಾವುದೇ ನಿರ್ದೇಶಕರಿಗೆ ದೊಡ್ಡ ಸವಾಲು. ಪ್ರೇಕ್ಷಕರನ್ನು ಕೊನೆಯ ಕ್ಷಣದವರೆಗೂ ಖುರ್ಚಿಯಲ್ಲಿ ಕೂರಿಸೋದು ಅಂದರೆ ಸುಲಭವಲ್ಲ. ಚಿತ್ರದಲ್ಲಿ ತಾವು ಅಂದುಕೊಂಡದ್ದನ್ನು ಪ್ರೇಕ್ಷಕರಿಗೆ ದಾಟಿಸಿದರೇನೇ ಚಿತ್ರತಂಡಕ್ಕೆ ಯಶಸ್ಸು ಸಾಧ್ಯವಾಗೋದು. ಆ ಮಟ್ಟಿಗೆ ‘ಕ್ರಾಂತಿ’ ಸಿನಿಮಾ ಗೆದ್ದಿದೆ ಎಂದು ಹೇಳಬಹುದು. ಎಜ್ಯುಕೇಷನ್ ಮಾಫಿಯಾ ಕುರಿತು ಮಾತನಾಡುವ ಸಿನಿಮಾ ಕೊನೆಯ ಕ್ಷಣದವರೆಗೂ ಪ್ರೇಕ್ಷಕರನ್ನು ಒಳಗೊಳ್ಳುತ್ತದೆ. ಕೆಲವು ಅಂಕಿ – ಅಂಶಗಳೊಂದಿಗೆ ಸರ್ಕಾರಿ ಶಾಲೆಗಳ ಪರಿಸ್ಥಿತಿಯನ್ನು ನಿರ್ದೇಶಕರು ಪ್ರೇಕ್ಷಕರ ಮುಂದಿಡುತ್ತಾರೆ. ಈ ಹಿಂದಿನ ‘ಯಜಮಾನ’ ಚಿತ್ರದಂತೆ ಮೀಡಿಯಾ ಹೌಸ್ ನಿರ್ಮಾಣ ಸಂಸ್ಥೆಯವರು ಈ ಬಾರಿಯೂ ‘ಎಡುಟೇನ್‌ಮೆಂಟ್’ ಕಾನ್ಸೆಪ್ಟ್ ಪ್ರಯತ್ನಿಸಿದ್ದಾರೆ.
ಇಲ್ಲಿ ನಟ ದರ್ಶನ್ ಅವರಿಗೆ ಲಾರ್ಜರ್ ದ್ಯಾನ್ ಲೈಫ್ ಇಮೇಜ್. ಚಿತ್ರದ ಕತೆಗೆ ಪೂರಕವಾಗಿ ಅವರ ಪಾತ್ರವನ್ನು ಕಟ್ಟಲಾಗಿದೆ. ಯೂರೋಪ್‌ನಲ್ಲಿ ದೊಡ್ಡ ಉದ್ಯಮಿಯಾದ ಕ್ರಾಂತಿ ರಾಯಣ್ಣ ತಾಯ್ನಾಡಿಗೆ ಬಂದು ಶಿಕ್ಷಣಕ್ಕೆ ಸಂಬಂಧಿಸಿದಂತೆ ಕ್ರಾಂತಿ ಮಾಡುವುದು ಚಿತ್ರದ ಕಥಾನಕ. ದರ್ಶನ್ ಇಮೇಜಿಗೆ ಹೊಂದುವಂತೆ ಭರಪೂರ ಆಕ್ಷನ್ ಸನ್ನಿವೇಶಗಳು, ಒಂಚೂರು ಪ್ರೀತಿ, ತಿಳಿಹಾಸ್ಯದೊಂದಿಗೆ ಸಿನಿಮಾ ಮಾಡಲಾಗಿದೆ. ಕೆಲವೊಮ್ಮೆ ಹೊಡೆದಾಟ ಜಾಸ್ತಿಯಾಯ್ತು, ಲಾಜಿಕ್ ಮಿಸ್ ಆಯ್ತು ಎಂದೆನಿಸಿದರೂ ದರ್ಶನ್ ಹಾರ್ಡ್‌ಕೋರ್ ಅಭಿಮಾನಿಗಳಿಗಂತೂ ಈ ಸಿನಿಮಾ ಹಬ್ಬದೂಟ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕೆಲವು ಸಿನಿಮಾಗಳು ಬಂದಿದ್ದರೂ ‘ಕ್ರಾಂತಿ’ ಕತೆಗೆ ಬೇರೆಯದ್ದೇ ಆಯಾಮ ಇದೆ.
ಸಿನಿಮಾ ಮೂಲಕ ಸಾಮಾಜಿಕ ಸಂದೇಶವೊಂದನ್ನು ಹೇಳಲು ಹೊರಡುವ ಬಹುತೇಕರು ಎಡವೋದೇ ಹೆಚ್ಚು. ಅದರಲ್ಲೂ ಕಮರ್ಷಿಯಲ್ ಜಾನರ್‌ನಲ್ಲಿ ಕೆಲವೊಮ್ಮೆ ಸಂದೇಶ ಸಾರುವ ಪ್ರಯತ್ನ ನಗೆಪಾಟಲಿಗೆ ಈಡಾಗುವುದೂ ಇದೆ. ಇಲ್ಲವೇ ವಾಚ್ಯ ಎನಿಸುವಂತೆ ಸಂಭಾಷಣೆ ಹೇಳಿಸುತ್ತಾ ಪ್ರೇಕ್ಷಕರಿಗೆ ಕಿರಿಕಿರಿ ಉಂಟುಮಾಡುತ್ತಾರೆ. ಅದರಲ್ಲೂ ಲಾರ್ಜರ್‌ದ್ಯಾನ್ ಲೈಫ್ ಇಮೇಜಿನ ಸ್ಟಾರ್ ಹೀರೋಗಳಿಗೆ ಇಂತಹ ಕತೆ ಮಾಡುವುದು ಕತ್ತಿ ಅಲುಗಿನ ಮೇಲಿನ ನಡಿಗೆಯಂತೆ. ಒಂಚೂರು ಆಚೀಚೆ ಆದರೂ ಅಭಾಸವಾಗುತ್ತದೆ. ‘ಕ್ರಾಂತಿ’ ಸಿನಿಮಾದಲ್ಲಿ ನಿರ್ದೇಶಕ ಹರಿಕೃಷ್ಣ ಹುಷಾರಾಗಿ ಸಿನಿಮಾ ನಿರೂಪಿಸಿದ್ದಾರೆ. ನಿರ್ಮಾಪಕ ಬಿ.ಸುರೇಶ ಅವರ ಸಿನಿಮಾನುಭವ, ಬರವಣಿಗೆ, ಸಲಹೆ – ಸೂಚನೆಯೂ ಅವರಿಗೆ ನೆರವಾಗಿರಬಹುದು. ಚಿತ್ರಕಥೆಯ ಹಳಿ ತಪ್ಪಿಲ್ಲ. ಒಂದೆಡೆ ದರ್ಶನ್ ಅಭಿಮಾನಿಗಳನ್ನೂ ತೃಪ್ತಿಪಡಿಸುತ್ತಾ, ಮತ್ತೊಂದೆಡೆ ದರ್ಶನ್ ಇಮೇಜಿಗೂ ಸಾಣೆ ಹಿಡಿಯುವ ಪ್ರಯತ್ನವಾಗಿದೆ ‘ಕ್ರಾಂತಿ’.
ದರ್ಶನ್ ಇಮೇಜಿಗೆ ತೀರಾ ಅಗತ್ಯವೇನೋ ಎನ್ನುವಂತೆ ಹೊಡೆದಾಟಗಳು ಹೆಚ್ಚೇ ಇವೆ. ವಿಶೇಷ ಸೆಟ್‌ಗಳನ್ನು ಹಾಕಿ.. ಅಲ್ಲಿಗೆ ಖಳರನ್ನು ಮತ್ತು ಹೀರೋನನ್ನು ಕರೆಸಿ ಹೊಡೆದಾಡಿಸಿದ್ದಾರೆ! ಸಾಹಸ ಸಂಯೋಜಕರೂ ತಮ್ಮ ಸೃಜನಶೀಲತೆಯನ್ನು ಯತೇಚ್ಛವಾಗಿ ಖರ್ಚು ಮಾಡಿ ವಿಶಿಷ್ಟ ಆಕ್ಷನ್ ಸನ್ನಿವೇಶಗಳನ್ನು ಕಂಪೋಸ್ ಮಾಡಿದ್ದಾರೆ. ಕಮರ್ಷಿಯಲ್ ಭಾಷೆಯಲ್ಲೇ ಹೇಳುವುದಾದರೆ, ‘ಡಿಸೈನ್ ಡಿಸೈನ್ ಆಗಿ ಹೊಡೀಯೋದು!’ ಎಂದು ಹೇಳಬಹುದೇನೋ..! ಆಕ್ಷನ್‌ಗೆ ಬೇಕಾದ ಸ್ಟೈಲ್, ಸ್ವಾಗ್, ಆಟಿಟ್ಯೂಡ್‌ನೊಂದಿಗೆ ದರ್ಶನ್ ಫೈಟ್ ಮಾಡಿದ್ದಾರೆ. ಫೈಟ್ಸ್‌ಗೆ ಹೊಂದಿಸಿ ಬರೆದಂತೆ ಸಂಭಾಷಣೆಗಳೂ ಇರುವುದು ಅವರ ಅಭಿಮಾನಿಗಳಿಗೆ ಡಬಲ್ ಧಮಾಕಾ!
ನಿರ್ದೇಶಕ ವಿ.ಹರಿಕೃಷ್ಣ ಅವರು ಚಿತ್ರಕಥೆಯ ಲಾಜಿಕ್ ಹಳಿತಪ್ಪದಂತೆ ಸಾಕಷ್ಟು ಹೋಂವರ್ಕ್ ಮಾಡಿದ್ದಾರೆ. ಸಂಗೀತ ಸಂಯೋಜನೆಯೂ ಅವರದೆ. ಹೀರೋ ಇಂಟ್ರಡಕ್ಷನ್ ಸಾಂಗ್, ‘ಪುಷ್ಪವತಿ’ ಹಾಡಿನ ನೃತ್ಯ ಸಂಯೋಜನೆ ಗಮನಸೆಳೆಯುತ್ತದೆ. ‘ಬೊಂಬೆ’ ಹಾಡಿನಲ್ಲಿ ಹೀರೋ ದರ್ಶನ್ ಅವರು ಮೈತೋರಿಸುವ ಸಾಹಸ ಮಾಡಬಾರದಿತ್ತೇನೋ… ಒಂದೆರೆಡು ಕಡೆ VFX ಕೈಕೊಟ್ಟಿರುವುದು ಕಾಣಿಸುತ್ತದೆ. ದರ್ಶನ್ ಮತ್ತು ರಚಿತಾ ರಾಮ್ ಅವರ ರೈಲಿನ ಸೀನ್‌ಗಳು ದೀರ್ಘವೆನಿಸಿದರೂ ಇತರೆ ನಟ – ನಟಿಯರ ಉಪಸ್ಥಿತಿಯಿಂದಾಗಿ ತಾಜಾತನ ಉಳಿದಿದೆ. ನಾಯಕಿ ರಚಿತಾ ರಾಮ್ ತೆರೆ ಮೇಲೆ ಇರುವಷ್ಟೂ ಹೊತ್ತು ಇಷ್ಟವಾಗ್ತಾರೆ. ಚಿತ್ರದ ನಿರ್ಮಾಪಕರೂ ಆದ ಬಿ.ಸುರೇಶ್ ಅವರ ಪಾತ್ರ ಅರ್ಥಪೂರ್ಣವಾಗಿದೆ. ಹೆಚ್ಚು ಮಾತಿಲ್ಲದ ಭಾರ್ಗವ ರಾಯಣ್ಣ ಪಾತ್ರವನ್ನು ರವಿಚಂದ್ರನ್ ಅಂಡರ್‌ಪ್ಲೇ ಮಾಡಿ ಗೆದ್ದಿದ್ದಾರೆ. ಕಾಮಿಡಿ – ವಿಲನ್ ಆಗಿ ನಟ ರವಿಶಂಕರ್‌ರ ಟೈಮಿಂಗ್ ಎಂದಿನಂತೆ ಸೂಪರ್. ಆಕ್ಷನ್ – ಎಂಟರ್‌ಟೇನರ್ ‘ಕ್ರಾಂತಿ’ ಸರ್ಕಾರಿ ಶಾಲೆಗಳ ಕುರಿತು ಕಾಳಜಿಯ ಮಾತನಾಡುವ ಕಾರಣಕ್ಕೆ ಸದಭಿರುಚಿಯ ಸಿನಿಮಾಗಳ ಪಟ್ಟಿಗೆ ಸೇರ್ಪಡೆಯಾಗುತ್ತದೆ.