ಸ್ಪೈ ಚಿತ್ರಗಳಿಗೆ ಅತೀ ಮುಖ್ಯವಾಗಿ ಬೇಕಾಗುವುದು ಸ್ಟೈಲ್ ಮತ್ತು ಹೀರೋನ ಸ್ವ್ಯಾಗ್. ಅಲ್ಲಿ ಕಟ್ಟಿಕೊಡಲಾದ ಭ್ರಾಮಕ ಜಗತ್ತನ್ನು ಪ್ರಶ್ನಿಸದೆ, ಅದರಲ್ಲಿ ಮುಳುಗಿ ಹೋಗುವಂತೆ ಮಾಡುವುದು ಕೆಲವು ಸ್ಟಾರ್‌ಗಳಿಗೆ ಮಾತ್ರ ಸಾಧ್ಯ. ರೊಮ್ಯಾಂಟಿಕ್ ಹೀರೋ ಆಗಿಯೇ ಹೆಚ್ಚು ನೆನಪಾಗುವ ಶಾರುಖ್, ಏಜೆಂಟ್ ಪಾತ್ರದೊಳಗೆ ಸಲೀಸಾಗಿ ಪ್ರವೇಶಿಸಿರುವುದು ವಿಶೇಷ.

ಪ್ರೇಕ್ಷಕರು ತಮ್ಮ ಕೆಲಸವನ್ನೆಲ್ಲಾ ಬದಿಗಿಟ್ಟು ಮೊದಲ ದಿನವೇ ಥಿಯೇಟರ್ ಹುಡುಕಿಕೊಂಡು ಬರುವಂತೆ ಮಾಡುವ, ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಬರೆಯುವ ಮತ್ತು ಸಿನಿಮಾ ಬಿಡುಗಡೆಯನ್ನು ಒಂದು ಸಂಭ್ರಮವಾಗಿಸುವ ಶಕ್ತಿಯಿರುವ ಕೆಲವೇ ಕೆಲವು ಸ್ಟಾರ್ ನಟರು ಭಾರತದ ಎಲ್ಲಾ ಚಿತ್ರರಂಗಗಳಲ್ಲೂ ಇದ್ದಾರೆ. ಪ್ರಪಂಚದಲ್ಲೇ ಅತೀ ಹೆಚ್ಚು ಚಿತ್ರಗಳನ್ನು ಉತ್ಪಾದಿಸುವ ಭಾರತೀಯ ಚಿತ್ರೋದ್ಯಮಕ್ಕೆ ಇಂಧನದಂತೆ ಕೆಲಸ ಮಾಡುವುದು ಇಂತಹ ಸ್ಚಾರ್ ಚಿತ್ರಗಳೇ. ಕೋವಿಡ್ ನಂತರದಲ್ಲಿ, ನೆಲಕಚ್ಟಿದ್ದ ಬಾಲಿವುಡ್‌ಗೆ ಮರುಜೀವ ನೀಡುವಂತಹ ಒಂದು ಬ್ಲಾಕ್ ಬಸ್ಟರ್ ಸಿನಿಮಾದ ಅಗತ್ಯವಿತ್ತು. ಅಲ್ಲೊಂದು ಇಲ್ಲೊಂದು ಹಿಟ್ ಚಿತ್ರಗಳು, ದಕ್ಷಿಣದ ಡಬ್ಬಿಂಗ್ ಚಿತ್ರಗಳು ದುಡ್ಡು ಮಾಡಿದರೂ, ಬಾಕ್ಸ್ ಅಫೀಸ್ ಕೊಳ್ಳೆ ಹೊಡೆಯಬಲ್ಲಂತಹ ಒಂದು ಸಿನಿಮಾಕ್ಕಾಗಿ ಇಡೀ ಹಿಂದಿ ಚಿತ್ರರಂಗ ಕಾಯುತ್ತಿತ್ತು. ಕೊನೆಗೂ ಅಂತಹ ಚಿತ್ರವಾಗಿ ‘ಪಠಾಣ್’ ಹೊರಹೊಮ್ಮಿದೆ.

ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ನಾಲ್ಕು ವರ್ಷಗಳ ಬ್ರೇಕ್ ನಂತರ ತೆರೆಯ ಮೇಲೆ ಬಂದಿರುವ ಕಾರಣಕ್ಕಾಗಿ ಅಪಾರ ನಿರೀಕ್ಷೆ ಮೂಡಿಸಿದ್ದ ‘ಪಠಾಣ್’, ತನ್ನ ದೊಡ್ಡ ಬಜೆಟ್, ಅದ್ಧೂರಿತನಗಳ ಜೊತೆ ಜೊತೆಗೆ ಹಲವು ವಿವಾದಗಳ ಮೂಲಕವೂ ಕುತೂಹಲ ಕೆರಳಿಸಿದ್ದ ಚಿತ್ರ. ಈ ಚಿತ್ರದ ಮೂಲಕ ಯಶ್ ರಾಜ್ ಫಿಲಂಸ್‌ನ, YRF ಸ್ಪೈ ಯೂನಿವರ್ಸನ್ನು ಶಾರುಖ್ ಅಧೀಕೃತವಾಗಿ ಪ್ರವೇಶಿಸಿದ್ದಾರೆ. ಚಿತ್ರದ ಕತೆ ಎಲ್ಲಾ ಸ್ಪೈ ಚಿತ್ರಗಳ ಸಿದ್ಧಸೂತ್ರವನ್ನೇ ಅನುಸರಿಸಿದೆ. ಆರ್ಟಿಕಲ್ 370 ರದ್ದು ಮಾಡಿದ ಕಾರಣ ರೊಚ್ಚಿಗೆದ್ದ ಪಾಕಿಸ್ತಾನದ ಸೇನಾ ಮುಖಂಡ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾನೆ. ಅದಕ್ಕಾಗಿ ಆತ ಯಾವುದೇ ಸಿದ್ಧಾಂತಕ್ಕೆ ಅಂಟಿಕೊಳ್ಳದ, ಕೇವಲ ಹಣಕ್ಕಾಗಿ ಕೆಲಸ ಮಾಡುವ ಒಂದು ಖಾಸಗಿ ಭಯೋತ್ಪಾದಕ ಗುಂಪಿನ ಸಹಾಯ ಪಡೆಯುತ್ತಾನೆ. ಈ ಗುಂಪಿನ ಸ್ಥಾಪಕ ಮತ್ತು ಮುಖಂಡ ಮಾಜಿ ರಾ ಏಜೆಂಟ್ ಜಿಮ್ (ಜಾನ್ ಅಬ್ರಾಹಂ). ಜಿಮ್ ಏಕೆ ಇಂತಹ ಕೆಲಸಕ್ಕೆ ಇಳಿದ ಎನ್ನುವುದಕ್ಕೂ ಒಂದು ಹಿನ್ನೆಲೆ ಕತೆ ನೀಡಲಾಗಿದೆ. ಜಿಮ್ ಭಾರತದ ವಿರುದ್ಧ ಕೈಗೊಳ್ಳಲು ಹೊರಟಿರುವ ಜೈವಿಕ ಯುದ್ಧವನ್ನು ತಡೆಯುವ ಜವಾಬ್ದಾರಿ ಪಠಾಣ್ (ಶಾರುಖ್ ಖಾನ್) ಹೆಗಲಿಗೇರುತ್ತದೆ. ಆತನ ಈ ಸಾಹಸಕ್ಕೆ ಜೊತೆಯಾಗುವುದು ಮತ್ತು ತಡೆಯಾಗುವುದು ಐಎಸ್ಐ ಏಜೆಂಟ್ ರುಬಿನಾ (ದೀಪಿಕಾ ಪಡುಕೋಣೆ). ಕೆಲವೊಂದು ನಿರೀಕ್ಷಿತ ತಿರುವುಗಳೊಂದಿಗೆ ಕಥೆ ತುಂಬಾ ವೇಗವಾಗಿ ಮುನ್ನುಗ್ಗುತ್ತದೆ. ಸೀಟ್ ಬೆಲ್ಟ್ ಹಾಕಿಕೊಂಡು ಕೂರಬೇಕಾದ ರೀತಿಯ ವೇಗದಲ್ಲಿ ಕತೆಯನ್ನು ನಿರೂಪಿಸಿದ್ದಾರೆ ನಿರ್ದೇಶಕ ಸಿದ್ದಾರ್ಥ್ ಆನಂದ್.

ಸ್ಪೈ ಥ್ರಿಲ್ಲರ್‌ನಲ್ಲಿ ಇರಬೇಕಾದ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಶ್ರೀಧರ್ ರಾಘವನ್ ಚಿತ್ರಕತೆ ಹೆಣೆದಿದ್ದಾರೆ. ಹೀಗಾಗಿ, ಇದರಲ್ಲೂ ಪಾಕಿಸ್ತಾನದ ಜನರಲ್‌ನದ್ದು ಖಳನ ಪಾತ್ರ. ಆದರೆ, ಮುಖ್ಯ ವಿಲನ್ ಮಾಜಿ ರಾ ಏಜಂಟ್ ಆಗಿರುವುದರರಿಂದ ಇದು ದೇಶಗಳ ನಡುವಣ ದ್ವೇಷಕ್ಕಿಂತ, ವ್ಯಕ್ತಿಯೊಬ್ಬನ ಸೇಡಿನ ಕತೆಯಾಗಿ ಮಾರ್ಪಾಡಾಗುತ್ತದೆ. ಅಫ್ಛಾನಿಸ್ತಾನದ ಜೊತೆ ಪಠಾಣ್‌ಗೊಂದು ಭಾವನಾತ್ಮಾಕ ಸಂಬಂಧ ಕಟ್ಟಿಕೊಡುವ ಮೂಲಕ ಸಿದ್ಧಮಾದರಿಗಳನ್ನು ಒಡೆಯಲು ಯತ್ನಿಸಲಾಗಿದೆ. ಮಹಿಳಾ ಐಎಸ್ಐ ಏಜೆಂಟ್, ಭಾರತೀಯ ಏಜೆಂಟಿನ ಪ್ರೇಮದಲ್ಲಿ ಬೀಳುವುದು ಕೂಡ ಹಳೆಯ ಕತೆಯೇ ಆದರೂ, ದೀಪಿಕಾ ಪಾತ್ರಕ್ಕೆ ಮತ್ತಷ್ಟು ಗ್ರೇ ಶೇಡ್ ನೀಡಲಾಗಿದೆ. ದೇಶಪ್ರೇಮದ ಭಾವವನ್ನು ಮೂಲದಲ್ಲಿಟ್ಚುಕೊಂಡು, ಮಾನವ ಪ್ರೇಮದ ಕತೆ ಹೇಳುವ ಯತ್ನದಂತೆ ಕಾಣಿಸುತ್ತದೆ. ಒಟ್ಟಿನಲ್ಲಿ ಹಳೆ ಕತೆಯೇ ಆದರೂ ಹೊಸ ಒಗ್ಗರಣೆಯಿಂದ ಘಮಘಮಿಸುವಂತೆ ಮಾಡಲಾಗಿದೆ.

ಎಲ್ಲಾ ಮುಖ್ಯ ಪಾತ್ರಗಳಿಗೂ ಒಂದು ಹಿನ್ನೆಲೆ ನೀಡಲಾಗಿದೆ. ಶಾರುಖ್‌ನ ಇತರ ಜನಪ್ರಿಯ ಸಿನಿಮಾ ಪಾತ್ರಗಳ ರೆಫರೆನ್ಸ್‌ಗಳನ್ನು ಅಲ್ಲಲ್ಲಿ ಬಳಸಿಕೊಂಡು ಚಿತ್ರಕಥೆ ಮತ್ತು ಸಂಭಾಷಣೆಯನ್ನು ಮತ್ತಷ್ಚು ಆಸಕ್ತಿಕರವಾಗಿಸಿದ್ದಾರೆ. ಶಾರುಖ್ ಪಾತ್ರಗಳಲ್ಲಿ ಸಹಜವಾಗಿ ಇಣುಕುವ ಹಾಸ್ಯ ಮನೋಭಾವ, ವಾಕ್ಚಾತುರ್ಯ, ಆತ್ಮವಿಶ್ವಾಸ ಎಲ್ಲವನ್ನೂ ಬಳಸಿಕೊಂಡು ಚಿತ್ರಕ್ಕೆ ಶಾರುಖ್ ಸ್ಪರ್ಶ ನೀಡಲಾಗಿದೆ. ಚಿತ್ರ ಮುಖ್ಯವಾಗಿ ಗೆಲ್ಲುವುದೇ ಶಾರುಖ್‌ಗೆ ಇರುವ ಕೆಲವು ವಿಶಿಷ್ಟತೆಗಳನ್ನು ಚಿತ್ರದಲ್ಲಿ ಸಮರ್ಪಕವಾಗಿ ಬಳಸಿಕೊಂಡಿರುವ ಕಾರಣಕ್ಕೆ.

ಇನ್ನು, ಸ್ಪೈ ಚಿತ್ರಗಳ ಜೀವಾಳ ಅದರ ಆ್ಯಕ್ಷನ್ ದೃಶ್ಯಗಳು. ಭಾರತೀಯ ಚಿತ್ರರಂಗ ಇದುವರೆಗೆ ಕಂಡಿರದ ಹಲವು ರೀತಿಯ ಆ್ಯಕ್ಷನ್‌ಗಳು ಈ ಚಿತ್ರದಲ್ಲಿದೆ. ಸಾಧ್ಯವಿರುವ ಎಲ್ಲಾ ವಾಹನಗಳನ್ನು ಬಳಸಿಕೊಂಡು, ಆ್ಯಕ್ಷನ್ ಕೊರಿಯೋಗ್ರಫಿ ಮಾಡಲಾಗಿದೆ. ಜೊತೆಗೆ, ಸಲ್ಮಾನ್ ಖಾನ್‌ ಅತಿಥಿ ಪಾತ್ರ, ಚಿತ್ರದ ದೊಡ್ಡ ಆ್ಯಕ್ಷನ್ ಸೀಕ್ವೆನ್ಸ್‌ನಲ್ಲಿ ಬಳಕೆಯಾಗಿರುವುದು ಚಿತ್ರವನ್ನು ಮತ್ತಷ್ಟು ಮಾಸ್ ಮತ್ತು ಎಂಟರ್‌ಟೇನಿಂಗ್‌ ಆಗಿಸಿದೆ. ಈ ಎಲ್ಲ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ತೆರೆಯ ಮೇಲೆ ಸಮರ್ಥವಾಗಿ ತೋರಿಸುವಲ್ಲಿ ಸತ್‌ಚಿತ್ ಪೌಲೋಸ್ ಅವರ ಸಿನಿಮಟೋಗ್ರಫಿ ಯಶಸ್ವಿಯಾಗಿದೆ. ಪ್ರಪಂಚದ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಆ ವೈವಿದ್ಯತೆ ಮತ್ತು ಅದ್ದೂರಿತನ ತೆರೆಯ ಮೇಲೆ ಎದ್ದು ಕಾಣುತ್ತದೆ. ಪ್ರತ್ಯೇಕವಾಗಿ ನೋಡಿದಾಗ ಅಷ್ಟೇನೂ ವಿಶೇಷವೆನಿಸದೇ ಇದ್ದ ಹಾಡುಗಳು ಚಿತ್ರದಲ್ಲಿ ಚೆನ್ನಾಗಿ ಹೊಂದಿಕೊಂಡು ಹೆಚ್ಚು ಗಮನಸೆಳೆಯುತ್ತವೆ. ಚಿತ್ರದ ವೇಗಕ್ಕೆ ಅಡ್ಡಿಯಾಗದಂತೆ, ಸರಿಯಾದ ಸಮಯದಲ್ಲಿ ಬರುವುದರಿಂದ ಪ್ರೇಕ್ಷಕರನ್ನು ಕುಣಿಸುತ್ತದೆ.

ಸ್ಪೈ ಚಿತ್ರಗಳಿಗೆ ಅತೀ ಮುಖ್ಯವಾಗಿ ಬೇಕಾಗುವುದು ಸ್ಟೈಲ್ ಮತ್ತು ಹೀರೋನ ಸ್ವ್ಯಾಗ್. ಅಲ್ಲಿ ಕಟ್ಟಿಕೊಡಲಾದ ಭ್ರಾಮಕ ಜಗತ್ತನ್ನು ಪ್ರಶ್ನಿಸದೆ, ಅದರಲ್ಲಿ ಮುಳುಗಿ ಹೋಗುವಂತೆ ಮಾಡುವುದು ಕೆಲವು ಸ್ಟಾರ್‌ಗಳಿಗೆ ಮಾತ್ರ ಸಾಧ್ಯ. ರೊಮ್ಯಾಂಟಿಕ್ ಹೀರೋ ಆಗಿಯೇ ಹೆಚ್ಚು ನೆನಪಾಗುವ ಶಾರುಖ್, ಏಜೆಂಟ್ ಪಾತ್ರದೊಳಗೆ ಸಲೀಸಾಗಿ ಪ್ರವೇಶಿಸಿರುವುದು ವಿಶೇಷ. ಇದಕ್ಕಾಗಿ ಮಾಡಿಕೊಂಡಿರುವ ಕಠಿಣ ತಯಾರಿ ಎದ್ದುಕಾಣುತ್ತದೆಯಾದರೂ, ಅಭಿನಯ ಮಾತ್ರ ಲೀಲಾಜಾಲವಾಗಿದೆ. ಚಿತ್ರದ ಅತಿ ರಂಜಿತ, ಅವಾಸ್ತವಿಕ ಆ್ಯಕ್ಷನ್ ಸೀನ್ ಗಳನ್ನು ಶಾರುಖ್ ನಂಬಲರ್ಹ ರೀತಿಯಲ್ಲಿ ನಿಭಾಯಿಸಿದ್ದಾರೆ. ರುಬೀನಾ ಆಗಿ ದೀಪಿಕಾ ಆ್ಯಕ್ಷನ್ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಅವರ ಚುರುಕು ಅಭಿನಯ ದೀಪಿಕಾಗೆ ಮೀಸಲಾದ ಒಂದು ಪೂರ್ಣಪ್ರಮಾಣದ ಆ್ಯಕ್ಷನ್ ಚಿತ್ರ ದೊರಕಲಿ ಎಂದು ಹಾರೈಸುವಂತೆ ಮಾಡುತ್ತದೆ. ಜಿಮ್ ಪಾತ್ರದಲ್ಲಿ ಜಾನ್ ಅಬ್ರಾಹಂ, ಪಠಾಣ್‌ಗೆ ಸರಿಸಮವಾದ ವಿಲನ್ ಆಗಿ ಗೆದ್ದಿದ್ದಾರೆ. ಡಿಂಪಲ್ ಕಪಾಡಿಯಾ, ಲೇಡಿ ಬಾಸ್ ಪಾತ್ರದಲ್ಲಿ ಮಿಂಚಿದ್ದಾರೆ.

ಇಂತಹ ಮಾಸ್, ಮಸಾಲಾ ಎಂಟರ್‌ಟೇನರ್‌ಗಳಲ್ಲಿ ಇರುವಂತೆ ಇದರ ಕತೆಯಲ್ಲೂ ಸಾಕಷ್ಚು ಅತಾರ್ಕಿಕ ಸಂಗತಿಗಳಿವೆ. ಗುಂಡಿನ ಸುರಿಮಳೆಯಾದರೂ ಅದನ್ನು ತಪ್ಪಿಸಿಕೊಳ್ಳುವ ನಾಯಕ, ಗನ್ ಇದ್ದರೂ ಕೈ ಕೈ ಮಿಲಾಯಿಸುತ್ತಾ ದೈಹಿಕ ಕದನಕ್ಕಿಳಿಯುವ ವಿಲನ್, ಅತೀ ಕೊನೆಯ ಕ್ಷಣದಲ್ಲಿ ತನ್ನ ಕಾರ್ಯದಲ್ಲಿ ಯಶಸ್ವಿಯಾಗುವ ಹೀರೋ – ಇಂಥಹ ಚ್ರವಿತಚರ್ವಣ ವಿಷಯಗಳಿಗೂ ಏನೂ ಕೊರತೆ ಇಲ್ಲ. ಆದರೆ, ಇಂತಹ ಚಿತ್ರದಲ್ಲಿ ಪ್ರೇಕ್ಷಕರು ಏನನ್ನು ನೋಡಲು ಬಯಸುತ್ತಾರೋ ಅದೆಲ್ಲವೂ ಭರಪೂರ ಪ್ರಮಾಣದಲ್ಲಿದೆ. ತಾನು ನೀಡಿದ ಪರಿಪೂರ್ಣ ಮನರಂಜನೆಯ ಭರವಸೆಯನ್ನು ಈಡೇರಿಸುವ ಕಾರಣದಿಂದ ಚಿತ್ರ ಗೆಲ್ಲುತ್ತದೆ.

ಇದೆಲ್ಲದರ ಜೊತೆಗೆ, ನೋವು ನಿವಾರಕ ಮಾತ್ರೆ ನುಂಗುವ, ತನ್ನ ವಯಸ್ಸಿನ ಬಗ್ಗೆ ತಾನೇ ಜೋಕ್ ಮಾಡಿಕೊಳ್ಳುವ, ಹೆಣ್ಣೊಬ್ಬಳ ಮೋಡಿಗೆ ಒಳಗಾಗಿ ದಾರುಣವಾಗಿ ಮೋಸ ಹೋಗುವ ದೃಶ್ಯಗಳಲ್ಲಿ ಶಾರುಖ್ ಮಿಂಚುತ್ತಾರೆ. ತನ್ನ ಸಿಕ್ಸ್ ಪ್ಯಾಕ್ ಮತ್ತು ಆ್ಯಕ್ಷನ್‌ಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಆ ಪಾತ್ರಕ್ಕೊಂದು ದುರ್ಬಲತೆಯನ್ನೂ ನೀಡುವ ಮೂಲಕ ಗೆದ್ದಿದ್ದಾರೆ. ಹೀಗಾಗಿ, ಶಾರುಖ್ ಅಭಿಮಾನಿಗಳಿಗಂತೂ ‘ಪಠಾಣ್’ ನಾಲ್ಕು ವರ್ಷಗಳ ನಂತರ ಬಂದಿರುವ ಹಬ್ಬ ಎನಿಸುವುದರಲ್ಲಿ ಸಂಶಯವಿಲ್ಲ. ಹಾ೦, ಸಿನಿಮಾ ಕೊನೆಯಾದಾಗ ಅವಸರದಲ್ಲಿ ಎದ್ದು ಬಂದು, ಕ್ರೆಡಿಟ್ ರೋಲ್ ಮದ್ಯದಲ್ಲಿ ಬರುವ ಟೈಗರ್ ಮತ್ತು ಪಠಾಣ್ ನಡುವಣ ಮಾತುಕತೆ ತಪ್ಪಿಸಿಕೊಳ್ಳಬೇಡಿ!

LEAVE A REPLY

Connect with

Please enter your comment!
Please enter your name here