ಪ್ರತಿಯೊಬ್ಬ ಮನುಷ್ಯನಲ್ಲೂ ಎರಡು ಮುಖಗಳಿರುತ್ತವೆ. ಸಂದರ್ಭಕ್ಕೆ ತಕ್ಕಂತೆ ಅವರು ಹೇಗೆ ಬದಲಾಗುತ್ತಾರೆ ಎನ್ನುವ ಎಳೆಯೊಂದಿಗೆ ‘ದ್ವಿಮುಖ’ ಸಿನಿಮಾ ನಿರ್ದೇಶಿಸಿದ್ದಾರೆ ಮಧು ಶ್ರೀಕರ್‌. ಪ್ರವೀಣ್‌ ಅಥರ್ವ, ಕವಿತಾ ಗೌಡ ಮತ್ತು ವಿಜಯ್‌ ಚಂದ್ರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಎರಡು ಮುಖಗಳನ್ನು ಹೊಂದಿರುವ ಮನುಷ್ಯರ ಪಾಪಗಳಿಂದ ಹುಟ್ಟಿದ ಕಥೆ ‘ದ್ವಿಮುಖ’. ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಚಿತ್ರ. ಮನುಷ್ಯನ ಮನಸ್ಸಿನಲ್ಲಿರುವ ದ್ವಿಮುಖವನ್ನು ಅನಾವರಣಗೊಳಿಸಲಿದೆ” ಎನ್ನುತ್ತಾರೆ ಚಿತ್ರದ ನಿರ್ದೇಶಕ ಮಧು ಶ್ರೀಕರ್‌. ಸಹ ನಿರ್ದೇಶಕನಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿರುವ ಅವರಿಗೆ ಸ್ವತಂತ್ರ ನಿರ್ದೇಶಕರಾಗಿ ಇದು ಚೊಚ್ಚಲ ಸಿನಿಮಾ. ನಾಯಕ ನಟ ಪ್ರವೀಣ್‌ ಅಥರ್ವ ಅವರಿಗೆ ಬೆಳ್ಳಿತೆರೆಯಲ್ಲಿದು ಮೊದಲ ಪ್ರಯೋಗ. ರಂಗಭೂಮಿ ಹಿನ್ನೆಲ ಪ್ರವೀಣ್‌ ಅವರೇ ಈ ಚಿತ್ರಕ್ಕೆ ಕತೆ, ಚಿತ್ರಕಥೆ ರಚಿಸಿದ್ದಾರೆ. “ಪ್ರತಿಯೊಬ್ಬ ಮನುಷ್ಯನಲ್ಲೂ ಎರಡು ಮುಖಗಳು ಇರುತ್ತವೆ, ಸಂದರ್ಭಕ್ಕೆ ತಕ್ಕಂತೆ ಅವುಗಳನ್ನು ಹೇಗೆ ಬಳಸುತ್ತಾರೆ ಎಂಬುದು ಕತೆ ಹುಟ್ಟಿಕೊಳ್ಳಲು ಸ್ಪೂರ್ತಿ” ಎನ್ನುತ್ತಾರವರು.

ಮೇ 6ಕ್ಕೆ ಸಿನಿಮಾ ತೆರೆಕಾಣುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಪರ್ಪಲ್ ರಾಕ್ ಸ್ಟುಡಿಯೋ ಮೂಲಕ ಚಿತ್ರ ಬಿಡುಗಡೆ ಮಾಡುತ್ತಿರುವ ಗಣೇಶ್ ಪಾಪಣ್ಣ ಅವರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ನಾಯಕಿ ಕವಿತಾ ಗೌಡ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿ, ಚಿತ್ರ ನಿರ್ಮಾಣದ ಸಮಯದಲ್ಲಿ ಚಿತ್ರತಂಡ ಪಟ್ಟ ಶ್ರಮ ವಿವರಿಸಿದರು. ಚಿತ್ರದ ಮತ್ತೊಬ್ಬ ನಾಯಕ ವಿಜಯ್ ಚಂದ್ರ, ಛಾಯಾಗ್ರಹಕ ಕಿಟ್ಟಿ ಕೌಶಿಕ್, ಸಹ ನಿರ್ದೇಶಕ ಮತ್ತು ಸಂಕಲನಕಾರ ಯುಧಿ ಶಂಕರ್ ಹಾಗೂ ಮಾಸ್ಟರ್ ಚಿರಂತ್ ಚಿತ್ರದ ಕುರಿತಾಗಿ ತಮ್ಮ ಅನುಭವ ಹಂಚಿಕೊಂಡರು. ರಂಗಾಯಣ ರಘು, ವಿಜಯ್ ಚೆಂಡೂರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು, ನಯನ, ಪ್ರವೀಣ್ ಡಿ. ರಾವ್, ಪದ್ಮಜಾರಾವ್ ನಟಿಸಿದ್ದಾರೆ. ಬಕ್ಕೇಶ್ ಮತ್ತು ಕಾರ್ತಿಕ್ ಸಂಗೀತ ನಿರ್ದೇಶನ ಮತ್ತು ದೇವಿಪ್ರಕಾಶ್ ಕಲಾ ನಿರ್ದೇಶನ ಚಿತ್ರಕ್ಕಿದೆ.

Previous articleವಸಿಷ್ಠ ಸಿಂಹರ ‘Love…ಲಿ’ ಪ್ರಮುಖ ಪಾತ್ರದಲ್ಲಿ ಸಮೀಕ್ಷಾ
Next articleಆಕಾಶ್‌ ಜೋಶಿ ‘ಅಂತರ್ ಕಲಹ’; ಸೈಕಾಲಾಜಿಕಲ್‌ ಥ್ರಿಲ್ಲರ್‌ ಶಾರ್ಟ್‌ಫಿಲ್ಮ್‌

LEAVE A REPLY

Connect with

Please enter your comment!
Please enter your name here