ನೆಟ್‌ಫ್ಲಿಕ್ಸ್ ಮತ್ತು ಜಿಯೋ ಸಿನಿಮಾದಲ್ಲಿ ನೇರವಾಗಿ ಸ್ಟ್ರೀಂ ಆಗುತ್ತಿರುವ ‘ದಸ್ವೀ’ ಶಿಕ್ಷಣದ ಮಹತ್ವ ತಿಳಿಸುವ ಸಿನಿಮಾ. ಮಹತ್ವ ತಿಳಿಸುವಲ್ಲಿ ಸೋತರೂ ಕಾಮಿಡಿ ವರ್ಕೌಟ್ ಆಗಿದೆ.
ಗಂಭೀರವಾಗಿ ನಿರ್ವಹಿಸಬೇಕಾದ ಪಾತ್ರಗಳಿಗೂ ಅಭಿಷೇಕ್ ಬಚ್ಚನ್ ವಿಡಂಬನೆಯ ಲೇಪ ಹಚ್ಚುತ್ತಾರೆ ಎಂಬುದು ‘ದ ಬಿಗ್ ಬುಲ್’ನಲ್ಲಿ ಸಾಬೀತುಪಡಿಸಿದರೆ ಹಾಸ್ಯಪಾತ್ರಗಳೇ ತನಗೆ ಒಗ್ಗುವುದು ಎಂದು ‘ದಸ್ವೀ’ಯಲ್ಲಿ ತೋರಿಸಿಕೊಟ್ಟಿದ್ದಾರೆ. ಶಿಕ್ಷಣ ಎಲ್ಲಕ್ಕಿಂತಲೂ ಮುಖ್ಯ, ಶಿಕ್ಷಣವೊಂದು ಇದ್ದರೆ ಬೇರೆಲ್ಲವನ್ನೂ ಸಾಬೀತುಪಡಿಸಬಹುದು ಎಂಬ ಸಂದೇಶ ರವಾನಿಸುವ ಕಾಮಿಡಿ ಸಿನಿಮಾ ‘ದಸ್ವೀ.’ ಚಿತ್ರದ ಬಹುತೇಕ ಭಾಗ ಕಾಮಿಡಿ ಮಸಾಲೆಯಿಂದ ತುಂಬಿರುವ ಈ ಸಿನಿಮಾ ಒಂದೊಳ್ಳೆಯ ಟೈಂಪಾಸ್ ಸರಕು ಎಂಬುದನ್ನು ಅಲ್ಲಗಳೆಯಲಾಗದು. ಆದರೆ ಅದುವೇ ಈ ಸಿನಿಮಾದ ಮಿತಿಯೂ ಆಗಿರುವುದು ವಿಪರ್ಯಾಸ.
ಹರಿತ್ ಪ್ರದೇಶ್ ಎಂಬುದೊಂದು ರಾಜ್ಯ. ಗಂಗಾ ರಾಮ್ ಚೌಧರಿ (ಅಭಿಷೇಕ್ ಬಚ್ಚನ್) ಅಲ್ಲಿನ ಮುಖ್ಯಮಂತ್ರಿ. ಆತನೊಬ್ಬ ಪಾಳೇಗಾರ ಮನಸ್ಥಿತಿ ಹೊಂದಿರುವ ಅವಿದ್ಯಾವಂತ, ಭ್ರಷ್ಟ ರಾಜಕಾರಣಿ. ಯಾವುದೋ ಒಂದು ಹಗರಣ – ಅದು ಯಾವುದೆಂಬುದು ನೋಡುಗನಿಗೆ ಮುಖ್ಯವಲ್ಲ ಎಂದು ಚಿತ್ರಕಥೆ ತೀರ್ಮಾನಿಸಿದೆ – ಆ ಹಗರಣದಲ್ಲಿ ಸಿಲುಕಿದ ಗಂಗಾ ರಾಮನಿಗೆ ಜೈಲಾಗುತ್ತದೆ. ಆದರೇನು? ಮುಖ್ಯಮಂತ್ರಿ ಸ್ಥಾನದಲ್ಲಿ ಹೆಂಡತಿಯನ್ನು ಕೂರಿಸಿ ಜೈಲಿಂದಲೇ ಆಡಳಿತ ನಡೆಸುವ ಪರಿಪಾಠ ನಮಗೆ ಗೊತ್ತಿಲ್ಲದಿರುವುದೇನಲ್ಲ. ಆದರೆ ಇಲ್ಲಿ ಟ್ವಿಸ್ಟ್ ಬರುವುದು ಎರಡು ಪ್ರಮುಖ ಘಟನಾವಳಿಗಳಿಂದ.
ಬಲಿಷ್ಠ ಮಾಜಿ ಮುಖ್ಯಮಂತ್ರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಜೈಲು ಅಧಿಕಾರಿಗಳು ಹೊಂದಿಸಿ ಕೊಡುತ್ತಾರೆ. ಆದರೆ ತನ್ನ ಪಕ್ಷದ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡಿದ ಕಾರಣಕ್ಕೆ ಜ್ಯೋತಿ ದೇಸ್ವಾಲ್ (ಯಾಮಿ ಗೌತಮ್) ಎಂಬ ಪೊಲೀಸ್ ಅಧಿಕಾರಿಯನ್ನು ಆತ ಇತ್ತೀಚೆಗಷ್ಟೇ ವರ್ಗ ಮಾಡಿರುತ್ತಾನೆ. ಜೈಲಿನ ಸೂಪರಿಂಟೆಂಡೆಂಟ್ ಆಗಿ ಆಕೆ ಅಧಿಕಾರ ವಹಿಸಿಕೊಳ್ಳುವುದು ಕತೆಗೆ ಮೊದಲ ಟ್ವಿಸ್ಟ್. ಎರಡನೆಯ ಟ್ವಿಸ್ಟು ಬರುವುದು ವಿನೀತ ಪತ್ನಿ ಬಿಮಲಾ ದೇವಿಗೆ (ನಿಮ್ರತ್ ಕೌರ್) ಮುಖ್ಯಮಂತ್ರಿ ಕುರ್ಚಿಯ ಮದವೇರಿದಾಗ. ಒಮ್ಮೆ ಏರಿ ಕೂತರೆ ಮತ್ತೆಂದೂ ಇಳಿಯುವುದು ಬೇಡ ಎಂದು ಅನಿಸುವ ಮುಖ್ಯಮಂತ್ರಿ ಸ್ಥಾನ ಅವಳನ್ನು ಯಾವ ಪರಿ ಆವರಿಸುತ್ತದೆ ಎಂದರೆ ತನ್ನ ಗಂಡ ಸದಾ ಕಾಲ ಜೈಲಲ್ಲೇ ಇರಲಿ ಎಂದು ಆಶಿಸುವಷ್ಟು.
ಇವುಗಳ ಮಧ್ಯೆ ಗಂಗಾರಾಮನ ಅಹಂಗೆ ಹೊಡೆತ ಬೀಳುವುದು ‘ಅನಕ್ಷರಸ್ಥ’ ಎಂದು ಜ್ಯೋತಿ ದೇಸ್ವಾಲ್ ನಿಂದಿಸಿದಾಗ. ಏನಕೇನ ಪ್ರಕಾರೇಣ ಓದಿ ತಾನು ಹತ್ತನೇ ತರಗತಿ ಪಾಸು ಮಾಡುತ್ತೇನೆ ಎಂದು ಗಂಗಾರಾಮ ಆ ಕ್ಷಣವೇ ಪ್ರತಿಜ್ಞೆ ಮಾಡುತ್ತಾನೆ. ಅಷ್ಟೇ ಅಲ್ಲದೆ ತಾನು ಅಕಸ್ಮಾತ್ ಪರೀಕ್ಷೆಯಲ್ಲಿ ಫೇಲಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದೂ ಘೋಷಿಸುತ್ತಾನೆ. ತನ್ನ ಶಪಥ ಈಡೇರಿಸುತ್ತಾನೋ, ಮುಖ್ಯಮಂತ್ರಿ ಕುರ್ಚಿ ಆತನಿಗೆ ಮತ್ತೆ ಒಲಿಯುತ್ತದೋ, ಪತ್ನಿ ಬಿಮಲಾ ದೇವಿ ಮುಖ್ಯಮಂತ್ರಿ ಕುರ್ಚಿಯಿಂದ ಇಳಿಯುತ್ತಾಳೋ ಎಂಬುದೆಲ್ಲ ಕ್ಲೈಮ್ಯಾಕ್ಸು.
ಸಂಭಾಷಣೆ ಕಾಮಿಡಿ ಚಿತ್ರಗಳ ಶಕ್ತಿ ಎಂಬುದನ್ನು ಮನಗಂಡಿರುವ ‘ದಸ್ವೀ’ ತಂಡ ಹರಿಯಾಣ್ವೀ ಛಾಪಿನ ಹಿಂದಿಯನ್ನು ಉತ್ತಮವಾಗಿ ಬಳಸಿಕೊಂಡಿದೆ. ಏರ್‌ಲಿಫ್ಟ್, ಕಹಾನಿಯಂಥ ಸಿನಿಮಾಗಳಿಗೆ ಚಿತ್ರಕಥೆ ಬರೆದ ಸುರೇಶ್ ನಾಯರ್ ‘ದಸ್ವೀ’ಯಲ್ಲಿ ಹಲವು ವಿಚಾರಗಳನ್ನು ಪರಿಣಾಮಕಾರಿಯಾಗಿ ಹೆಣೆಯುವಲ್ಲಿ ಅಷ್ಟಾಗಿ ಯಶ ಕಂಡಿಲ್ಲ. ತಲೆಯ ಸುತ್ತ ಅಕ್ಷರ ತಿರುಗುವ ‘ತಾರೇ ಜಮೀನ್ ಪರ್’, ಸ್ವಾತಂತ್ರ್ಯ ಹೋರಾಟಗಾರರ ‘ರಂಗ್ ದೇ ಬಸಂತಿ’ ಹಾಗೂ ಐತಿಹಾಸಿಕ ಪಾತ್ರಗಳು ಕಣ್ಮುಂದೆ ಬರುವ ‘ಲಗೇ ರಹೋ ಮುನ್ನಾಭಾಯ್’ ಅಂಶಗಳನ್ನು ಇಲ್ಲಿ ಸಂದರ್ಭೋಚಿತವಾಗಿ ಬಳಸಲಾಗಿದೆ. ಆದರೆ ಅದರಲ್ಲಿ ನಿರಂತರತೆ ಇಲ್ಲದಿರುವ ಕಾರಣ ಹಾಗೆ ಕಣ್ಣಿಗೆ ಕಾಣುವ ಪಾತ್ರಗಳು ಒಂದು ಹಂತದ ನಂತರ ಯಾವುದೇ ಪ್ರಭಾವ ಬೀರುವುದಿಲ್ಲ. ಕ್ರಮೇಣ ಆ ಪಾತ್ರಗಳು ತೆಳುವಾಗುತ್ತಾ ಸಾಗುತ್ತವೆ.
ತನ್ನ ಶಕ್ತಿಯಾದ ಕಾಮಿಡಿ ಪಾತ್ರ ಸಿಕ್ಕಿರುವ ಅಭಿಷೇಕ್ ಬಚ್ಚನ್ ಮೊದಲಾರ್ಧದಲ್ಲಿ ಮನ ಗೆಲ್ಲುತ್ತಾರೆ. ಆದರೆ ಪಾಳೇಗಾರ ಮನಸ್ಥಿತಿಯ ಅಂಥಾ ರಾಜಕಾರಣಿಯ ಮನಃಪರಿವರ್ತನೆಗೆ ಚಿತ್ರಕಥೆ ಪರಿಣಾಮಕಾರಿ ಕಾರಣ ನೀಡುವುದಿಲ್ಲ. ಹಾಗಾಗಿ ಅರ್ಧದ ನಂತರ ಅಲ್ಲಲ್ಲಿ ಗಂಗಾರಾಮ್ ಪಾತ್ರ ಸ್ವತಃ ಹಾಸ್ಯಾಸ್ಪದವಾಗಿದೆ. ಅಭಿಷೇಕ್ ಪಾತ್ರಕ್ಕೆ ಹೋಲಿಸಿದರೆ ನಿಮ್ರತ್ ಕೌರ್ ನಿರ್ವಹಿಸಿದ ಪಾತ್ರದ ಪಯಣ ಪರಿಣಾಮಕಾರಿಯಾಗಿದೆ. ಮೊದಲಿಗೆ ವಿಧೇಯ ಪತ್ನಿಯಾಗಿಯೂ ನಂತರ ಅಧಿಕಾರದ ಮದವೇರಿದ ಮುಖ್ಯಮಂತ್ರಿಯಾಗಿಯೂ ನಿಮ್ರತ್ ಕೌರ್ ಇಷ್ಟವಾಗುತ್ತಾರೆ. ಆದರೆ ನಮ್ಮ ನಿಲುಕಿಗೆ ಸಿಗದಿರುವುದು ಅಭಿಷೇಕ್-ನಿಮ್ರತ್ ನಡುವಿನ ಬಾಂಧವ್ಯ. ಆ ಎರಡು ಪಾತ್ರಗಳು ಆರಂಭದಲ್ಲೇ ಜತೆಜತೆಯಾಗಿ ಗಟ್ಟಿಯಾಗಿ ಬೇರೂರಿದ್ದರೆ ಬಿಮಲಾ ದೇವಿ ಬದಲಾಗುವ ಸನ್ನಿವೇಶಗಳು ಇನ್ನಷ್ಟು ಸೊಗಸಾಗಿರುತ್ತಿತ್ತು. ನಮಗೆ ಇಷ್ಟವಾಗುವ ಮತ್ತು ನಗು ತರಿಸುವ ಬದಲಾವಣೆ ಪ್ರಕ್ರಿಯೆಯನ್ನು ಓಡೋಡಿಸುತ್ತಾ ನಿರ್ದೇಶಕ ಕತೆ ಹೇಳುವ ಧಾವಂತಕ್ಕೆ ಬೀಳಬಾರದಿತ್ತು.
ಜಿಯೋ ಸಿನಿಮಾ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ನೇರ ತೆರೆಕಂಡ ಈ ಸಿನಿಮಾದಲ್ಲಿ ಗಮನಾರ್ಹ ಅಂಶವೆಂದರೆ ಹಾಡುಗಳು. ಬೆರಳ ತುದಿಯಲ್ಲೇ ಸ್ಕಿಪ್ ಒತ್ತುವ ಸ್ವಾತಂತ್ರ್ಯವಿರುವ ಪ್ರೇಕ್ಷಕ ಹಾಡುಗಳನ್ನು ಹೆಚ್ಚಾಗಿ ಆಶ್ರಯಿಸುವುದಿಲ್ಲ ಎಂಬುದನ್ನು ನಿರ್ದೇಶಕ ತುಷಾರ್ ಜಲೋಟಾ ಅರಿತಿದ್ದಾರೆ. ಹಾಗಾಗಿ ಎಲ್ಲಾ ಹಾಡುಗಳೂ ಮೂಲ ದೃಶ್ಯದ ಜತೆಜತೆಗೇ ಸಾಗುವುದೂ ಅಲ್ಲದೆ ಸ್ಕಿಪ್ ಮಾಡಬೇಕೆಂದು ಅನಿಸುವ ಮೊದಲೇ ಮುಗಿಯುತ್ತವೆ. ನಿರ್ದೇಶಕ ನಿಜಕ್ಕೂ ಸೋತಿರುವುದು ‘ದಸ್ವೀ’ಯನ್ನು ಸಂದೇಶವಾಹಕ ಸಿನಿಮಾ ಮಾಡಲು ಹೊರಟ ಕಡೆಗಳಲ್ಲಿ. ಶಿಕ್ಷಣ ಎಷ್ಟು ಮುಖ್ಯ ಎಂದು ಸಾಬೀತು ಮಾಡುವುದೇ ಅವರ ಉದ್ದೇಶವಾಗಿದ್ದರೆ ಅದು ಇಲ್ಲಿ ಪರಿಣಾಮಕಾರಿಯಾಗಿ ಬಿಂಬಿತವಾಗಿಲ್ಲ. ಕಾಮಿಡಿ ಸಿನಿಮಾದಲ್ಲಿ ವಾಚ್ಯವಾಗಿ ಹೇಳಹೊರಡುವ ಅಂಶಗಳೆಲ್ಲ ತನ್ನ ಖದರು ಕಳೆದುಕೊಳ್ಳುವುದೇ ಹೆಚ್ಚು. ಅದೇ ಇಲ್ಲಿಯೂ ಆಗಿದೆ. ವಾರಾಂತ್ಯದಲ್ಲಿ ಎರಡು ಗಂಟೆ ನಕ್ಕು ಹಗುರಾಗಬೇಕು ಎಂಬ ಮನಸ್ಥಿತಿ ಇದ್ದರೆ ‘ದಸ್ವೀ’ ನಿಮಗೆ ಈ ವಾರದ ಸಿನಿಮಾ.