‘ದಯಾ’ ತೆಲುಗು ವೆಬ್ ಸರಣಿಯಲ್ಲಿನ ಬರವಣಿಗೆಯು ಸೊಗಸಾಗಿದೆ, ಏಕೆಂದರೆ ಪ್ರತಿಯೊಂದು ಪಾತ್ರವೂ ತನ್ನದೇ ಆದ ಗುರಿಯನ್ನು ಹೊಂದಿದ್ದು ಇದು ಕತೆಯನ್ನು ಆಸಕ್ತಿದಾಯಕವಾಗಿಸುತ್ತದೆ. ಈ ಎಲ್ಲಾ ಪಾತ್ರಗಳನ್ನು ಅದ್ಭುತವಾಗಿ ತೋರಿಸಲಾಗಿದೆ. ಬರಹಗಾರ-ನಿರ್ದೇಶಕ ಪವನ್ ಸಾದಿನೇನಿ ಪ್ರತೀ ಪಾತ್ರವನ್ನು ಇಲ್ಲಿ ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ. ‘ದಯಾ’ DisneyPlus Hotstarನಲ್ಲಿ ಸ್ಟ್ರೀಮ್ ಆಗುತ್ತಿದೆ.
ಬೆಂಗಾಲಿ ವೆಬ್ ಸೀರಿಸ್ ತಕ್ದೀರ್ ಅನ್ನು ಆಧರಿಸಿದ ತೆಲುಗು ವೆಬ್ ಸರಣಿ ‘ದಯಾ’ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಬಹು – ಪದರದ ಕಥಾವಸ್ತುಗಳಿರುವ ದಯಾ ಒಂದೊಂದೇ ಎಪಿಸೋಡ್ ಮುಗಿಯುತ್ತಿದ್ದಂತೆ ಹೊಸ ಪ್ರದೇಶಗಳು ಹೊಸ ಟ್ವಿಸ್ಟ್‌ಗಳು ನಮ್ಮಲ್ಲಿ ಕುತೂಹಲ ಹುಟ್ಟಿಸುತ್ತವೆ. ಈ ಹಿಂದೆ ‘ಸೇನಾಪತಿ’ ಚಿತ್ರವನ್ನು ನಿರ್ದೇಶಿಸಿದ್ದ ಪವನ್ ಸಾದಿನೇನಿ ‘ದಯಾ’ ಮೂಲಕ ನಮ್ಮ ಮುಂದೆ ಮತ್ತೆ ಬಂದಿದ್ದಾರೆ. ಕಾಕಿನಾಡ ಮತ್ತು ರಾಜಮಂಡ್ರಿಯ ಆಸುಪಾಸಿನ ಕರಾವಳಿ ಪ್ರದೇಶದಲ್ಲಿ ನಡೆಯುವ ಕತೆ. ದಯಾ ಪಾತ್ರದಲ್ಲಿ ಜೆ ಡಿ ಚಕ್ರವರ್ತಿ ಇದ್ದಾರೆ. ‘ದಯಾ’ ಚಿತ್ರದ ನಂತರದ ಸಂಚಿಕೆಗಳಲ್ಲಿ ಅಬ್ಬಬ್ಬಾ ಎನ್ನುವಂತೆ ಪವನ್ ಸಾದಿನೇನಿ ವಿವಿಧ ಪಾತ್ರಗಳನ್ನು ತೆರೆ ಮೇಲೆ ತರುತ್ತಾರೆ. ಮೊದಲ ಸಂಚಿಕೆಯಲ್ಲಿ, ವಿವೇಕ್ ಕಲೆಪು ಅವರ ಕ್ಯಾಮೆರಾ ಕಣ್ಣುಗಳು ಬಂದರು ಪಟ್ಟಣದಲ್ಲಿನ ಮಾರುಕಟ್ಟೆಯ ಸಾಕಷ್ಟು ಪಕ್ಷಿನೋಟಗಳನ್ನು ನಮಗೆ ನೀಡುತ್ತದೆ. ಅಲ್ಲಿ ಮೀನುಗಾರರು ಮಾರಾಟ ಮಾಡುವ ಗೌಜಿ ಗದ್ದಲಗಳನ್ನು ಕಾಣಬಹುದು. ದಯಾ (ಜೆ ಡಿ ಚಕ್ರವರ್ತಿ) ಫ್ರೀಜರ್ ವ್ಯಾನ್ ಓಡಿಸುತ್ತಾನೆ. ದಯಾ ಎಂಬ ಮನುಷ್ಯ ಯಾರು, ಆತನ ಕತೆ ಏನು ಎಂಬುದನ್ನು ನಿಧಾನವಾಗಿ ತೋರಿಸಲಾಗುತ್ತದೆ. ದಯಾ ಎಂದರೆ ಕರುಣೆ, ಇಂಥಾ ಹೆಸರಿನ ದಯಾ ಎಂಥವನು?
ಸರಣಿಯು ಪ್ರಾರಂಭವಾಗುವ ವಿಧಾನವನ್ನು ನೋಡಿದರೆ ಇದು ಸರ್ವೇಸಾಮಾನ್ಯ ಮತ್ತೊಂದು ಕ್ರೈಂ ಡ್ರಾಮಾದಂತೆ ಕಾಣುತ್ತದೆ. ಆರಂಭದಲ್ಲಿ ಕೆಲವು ಅನಗತ್ಯ ದೃಶ್ಯಗಳಿವೆ. ಆದರೆ ಸರಣಿಯು ಮುಂದುವರೆದಂತೆ ಆಸಕ್ತಿದಾಯಕವಾಗುತ್ತಾ ಹೋಗುತ್ತದೆ. ಮೊದಲ ನಾಲ್ಕು ಕಂತುಗಳು ಆಸಕ್ತಿಯನ್ನು ಹೆಚ್ಚಿಸುತ್ತವೆ. ಐದನೇ ಸಂಚಿಕೆಯಿಂದ, ಸರಣಿಯಲ್ಲಿನ ನಾಟಕವು ಮುಂದಿನ ಹಂತಕ್ಕೆ ಹೋಗುತ್ತದೆ. ತಿರುವುಗಳು ಕಥೆಯ ಬಗ್ಗೆ ಕುತೂಹಲ ಹೆಚ್ಚಿಸುತ್ತವೆ.
ರಾಕೇಂದು ಮೌಳಿ ಅವರೊಂದಿಗೆ ಸಂಭಾಷಣೆ ಬರೆದಿರುವ ಪವನ್, ‘ದಯಾ’ ಕತೆಯಲ್ಲಿ ಆತ ಬದುಕಿನಲ್ಲಿ ಆರಕ್ಕೇರಲೂ ಆಗದ ಮೂರಕ್ಕೆ ಇಳಿಯಲೂ ಆಗದೆ ಒದ್ದಾಡುತ್ತಿರುವ ವ್ಯಕ್ತಿ ಎಂದು ತೋರಿಸಿದ್ದಾರೆ. ಫ್ರೀಜರ್ ವ್ಯಾನ್ ಚಾಲಕ ಎರಡು ದಿನಗಳಿಂದ ಆಹಾರ ಮತ್ತು ನಿದ್ರೆಯಿಲ್ಲದೆ ಕೆಲಸ ಮಾಡುತ್ತಿದ್ದಾನೆ. ಅವನ ಗರ್ಭಿಣಿ ಪತ್ನಿ ಅಲಿವೇಲು (ಈಶಾ ರೆಬ್ಬಾ) ಆತನಿಗಾಗಿ ಕಾಯುತ್ತಿದ್ದಾಳೆ. ಅಲಿವೇಲು ಆತನನ್ನು ಕಾಯುತ್ತಾ ಇದ್ದರೂ ಆಕೆ ಗಟ್ಟಿಗಿತ್ತಿ. ಇತ್ತ ದಯಾ ಓಡಿಸುತ್ತಿದ್ದ ಫ್ರೀಜರ್ ವ್ಯಾನ್‌ನಲ್ಲಿ ಹೆಣ್ಣಿನ ಶವ ಇದೆ. ಅದು ಹೇಗೆ ಬಂತು? ಆಕೆ ಯಾರು? ಇದು ಅವನನ್ನು ಅಪರಾಧ ಮತ್ತು ರಾಜಕೀಯದ ಜಟಾಪಟಿಗೆ ಎಳೆದು ತರುತ್ತದೆ.
ಇಲ್ಲಿ ಆತನ ಬಗ್ಗೆ ಫ್ಲಾಶ್‌ಬ್ಯಾಕ್ ತೋರಿಸಲಾಗುತ್ತದೆ. ನಿರೂಪಣೆಯು ಮೊದಲ ಸೀಸನ್‌ನಲ್ಲಿ ದಯಾ ಮಾತ್ರವಲ್ಲದೆ ಹಲವಾರು ಇತರ ಪಾತ್ರಗಳು ಒಂದೊಂದೇ ತೆರೆಯುತ್ತಾ ಹೋಗುತ್ತದೆ. ಕವಿತಾ (ರಮ್ಯಾ ನಂಬೀಶನ್) ಟೀವಿ ವಾಹಿನಿ ವರದಿಗಾರ್ತಿ. ಕೌಶಿಕ್ (ಕಮಲ್ ಕಾಮರಾಜು) ಆಕೆಯ ಪತಿ, ಲೇಖಕ. ಕವಿತಾಳ ಟೀವಿ ವಾಹಿನಿಯಲ್ಲಿ ಟಿಆರ್‌ಪಿಗಾಗಿಯೇ ಹಪಾಹಪಿಸುವ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳೊಂದಿಗೆ ಆಫೀಸ್ ಪಾಲಿಟಿಕ್ಸ್. ಇನ್ನೊಬ್ಬ ಯುವ ವರದಿಗಾರ್ತಿ ಶಬಾನಾ (ವಿಷ್ಣುಪ್ರಿಯಾ ಭೀಮನೇನಿ), ದಯಾ ಅವರ ವಿಶ್ವಾಸಾರ್ಹ ಸ್ನೇಹಿತ ಪ್ರಭಾ ( ರವಿ ಜೋಶ್), ಪೋಲೀಸ್ (ಮಯಾಂಕ್ ಪರಾಖ್) ಮತ್ತು ಸ್ಥಳೀಯ ರಾಜಕಾರಣಿ (ಬಬ್ಲೂ ಪೃಥ್ವೀರಾಜ್) ಹೀಗೆ ಒಂದೊಂದೇ ಪಾತ್ರಗಳು ಬರುತ್ತವೆ.
‘ದಯಾ’ ವೆಬ್ ಸರಣಿಯಲ್ಲಿನ ಬರವಣಿಗೆಯು ಸೊಗಸಾಗಿದೆ, ಏಕೆಂದರೆ ಪ್ರತಿಯೊಂದು ಪಾತ್ರವೂ ತನ್ನದೇ ಆದ ಗುರಿಯನ್ನು ಹೊಂದಿದ್ದು ಇದು ಕತೆಯನ್ನು ಆಸಕ್ತಿದಾಯಕವಾಗಿಸುತ್ತದೆ. ಈ ಎಲ್ಲಾ ಪಾತ್ರಗಳನ್ನು ಅದ್ಭುತವಾಗಿ ತೋರಿಸಲಾಗಿದೆ. ಬರಹಗಾರ-ನಿರ್ದೇಶಕ ಪವನ್ ಸಾದಿನೇನಿ ಪ್ರತೀ ಪಾತ್ರವನ್ನು ಇಲ್ಲಿ ಚೆನ್ನಾಗಿ ಕಟ್ಟಿ ಕೊಟ್ಟಿದ್ದಾರೆ. ಸರಣಿಯ ಉತ್ತರಾರ್ಧವು ಹೆಚ್ಚು ಆಕರ್ಷಕವಾಗಿದ್ದು ತ್ವರಿತ ಗತಿಯಲ್ಲಿ ಚಲಿಸುತ್ತದೆ. ಇಲ್ಲಿಯೇ ಹೆಚ್ಚಿನ ಡ್ರಾಮಾ ಮತ್ತು ಆ್ಯಕ್ಷನ್ ನಡೆಯುತ್ತವೆ. ಪ್ರಮುಖ ಪಾತ್ರಗಳ ರೂಪಾಂತರಗಳು ಇಲ್ಲಿ ಚಪ್ಪಾಳೆ ಗಿಟ್ಟಿಸುತ್ತದೆ.
ಏತನ್ಮಧ್ಯೆ, ಹಲವಾರು ಸಮಸ್ಯೆಗಳನ್ನು ಟಚ್ ಮಾಡಿದ ಉಪಕಥೆಗಳು ಇಲ್ಲಿ ಬಂದುಹೋಗುತ್ತವೆ. ಉದಾಹರಣೆಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯ ಗುರುತನ್ನು ಮಾಧ್ಯಮಗಳು ಬ್ಲರ್ ಮಾಡದೆ ತೋರಿಸುವುದು. ಅದೇ ವೇಳೆ ಮಾಧ್ಯಮ, ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿನ ತಪ್ಪುಗಳನ್ನೂ ಬಹಿರಂಗಪಡಿಸುತ್ತದೆ. ಆದರೆ ಕೆಲವೊಂದು ದೃಶ್ಯಗಳು ತುಂಬಾ ಬಾಲಿಶವಾಗಿದೆ. ಉದಾಹರಣೆಗೆ, ದೇಶದ ಅತ್ಯುತ್ತಮ ತನಿಖಾ ವರದಿಗಾರ್ತಿ, ತಾನು ಪತ್ತೆ ಹಚ್ಚಿದ ವಿಷಯಗಳನ್ನು ಶಂಕಿತನ ಮುಂದೆ ಹೇಳುವುದು ಮೂರ್ಖತನವಾಗಿದೆ. ಆಕೆಗೆ ಬೆದರಿಕೆ ಇರುವಾಗ ಅವಳು ಪೆನ್ ಡ್ರೈವ್ ಅನ್ನು ಪ್ರದರ್ಶಿಸುತ್ತಿರುವುದು ಕೂಡಾ ಮೂರ್ಖತನವೇ.
ಅಂತಹ ತಪ್ಪುಗಳಿದ್ದರೂ, ‘ದಯಾ’ ನಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ. ‘ದಯಾ’ದಲ್ಲಿನ ಪಾತ್ರಗಳ ನಟನೆಯ ಬಗ್ಗೆ ಇಲ್ಲಿ ಹೇಳಲೇಬೇಕು. ಪ್ರತಿಯೊಬ್ಬ ಕಲಾವಿದರೂ ಉತ್ತಮವಾಗಿ ನಟಿಸಿದ್ದಲ್ಲದೆ ಪರಸ್ಪರ ಪೈಪೋಟಿ ನೀಡಿದ್ದಾರೆ. ಆದರೆ ಜೆಡಿ ಚಕ್ರವರ್ತಿ ಅವರು ಎದ್ದು ಕಾಣುತ್ತಾರೆ. ಇವರು ಎಲ್ಲ ರೀತಿಯಲ್ಲಿಯೂ ಇಷ್ಟವಾಗುತ್ತಾರೆ. ಬಹುಮುಖ ಪ್ರತಿಭೆಯ ನಟ ತಮ್ಮ ಅತ್ಯುತ್ತಮ ಅಭಿನಯದಿಂದ ಗಮನ ಸೆಳೆಯುತ್ತಾರೆ. ಅವರ ಪಾತ್ರವು ವಿಭಿನ್ನ ಛಾಯೆಗಳನ್ನು ಹೊಂದಿದ್ದು ಅದು ಪರ್ಫೆಕ್ಟ್ ಆಗಿ ಮೂಡಿ ಬಂದಿದೆ.
ರಮ್ಯಾ ನಂಬೀಸನ್ ಪತ್ರಕರ್ತೆಯ ಪಾತ್ರದಲ್ಲಿ ಮಿಂಚಿದ್ದಾರೆ. ಶಬಾನಾ ಪಾತ್ರದಲ್ಲಿ ವಿಷ್ಣುಪ್ರಿಯಾ, ಅಲಿವೇಲು ಆಗಿ ಈಶಾ ರೆಬ್ಬಾ ಅನಾಯಾಸವಾಗಿ ನಟಿಸಿದ್ದಾರೆ. ಸಮಗ್ರ ಪಾತ್ರವರ್ಗ ಮತ್ತು ಬಹು-ಪದರದ, ಕುತೂಹಲಕಾರಿ ನಿರೂಪಣೆಯು ‘ದಯಾ’ವನ್ನು ಬೇರೊಂದು ಹಂತಕ್ಕೆ ಕೊಂಡೊಯ್ಯುತ್ತದೆ. ಇದರಲ್ಲಿ ಹಿಂಸಾಚಾರ ಇದ್ದರೂ ಎಲ್ಲಿಯೂ ಅದನ್ನು ವೈಭವೀಕರಿಸುವುದಿಲ್ಲ. ಸ್ಲೋ – ಮೋಷನ್ ಶಾಟ್‌ಗಳು ನೈಜತೆಯಿಂದ ಕೂಡಿದೆ. ಶ್ರವಣ್ ಭಾರದ್ವಾಜ್ ಅವರ ಹಿನ್ನೆಲೆ ಸಂಗೀತವು ಈ ವೆಬ್ ಸರಣಿಯ ಶಕ್ತಿ. ವಿವೇಕ್ ಕಲೆಪು ಅವರ ಛಾಯಾಗ್ರಹಣಕ್ಕೆ ಹೆಚ್ಚಿನ ಅಂಕಗಳನ್ನು ನೀಡಲೇಬೇಕು. ಕೆಲವು ದೃಶ್ಯಗಳು ಆಕಳಿಕೆ ತರಿಸಿದರೂ ಸರಣಿಯುದ್ದಕ್ಕೂ ಟ್ವಿಸ್ಟ್ – ಟರ್ನ್‌ಗಳೊಂದಿಗೆ ರೋಮಾಂಚನಕಾರಿ ಅನುಭವಗಳನ್ನು ನೀಡುವಲ್ಲಿ ‘ದಯಾ’ ಗೆದ್ದಿದೆ.