ರಾಧಾಕೃಷ್ಣ ಕುಮಾರ್ ನಿರ್ದೇಶನದ ‘ರಾಧೆ ಶ್ಯಾಮ್‌’ ತೆಲುಗು ಸಿನಿಮಾದ ಮೊದಲ ಲಿರಿಕಲ್ ಸಾಂಗ್‌ ಬಿಡುಗಡೆಯಾಗಿದೆ. ಕೃಷ್ಣಕಾಂತ್ ರಚನೆಯ ಗೀತೆಗೆ ಜಸ್ಟಿನ್ ಪ್ರಭಾಕರನ್‌ ಸಂಗೀತ ಸಂಯೋಜಿಸಿದ್ದಾರೆ. ಪ್ರಭಾಸ್‌ ಮತ್ತು ಪೂಜಾ ಜೋಡಿಯ ಈ ಬಹುನಿರೀಕ್ಷಿತ ಸಿನಿಮಾ 2022ರ ಸಕ್ರಾಂತಿಗೆ ತೆರೆಗೆ ಬರಲಿದೆ.

ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್‌’ ತೆಲುಗು ಮತ್ತು ಹಿಂದಿ ದ್ವಿಭಾಷಾ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಸಾಮಾನ್ಯವಾಗಿ ಲಿರಿಕಲ್‌ ಹಾಡಿನಲ್ಲಿ ಫಿಲ್ಮ್ ಫೂಟೇಜ್‌ಗಳನ್ನು ಬಳಕೆ ಮಾಡುತ್ತಾರೆ. ಆದರೆ ಈ ಹಾಡಿನಲ್ಲಿ 3ಡಿ ಅನಿಮೇಷನ್‌ನಲ್ಲಿ ಪ್ರಭಾಸ್ ಮತ್ತು ಪೂಜಾ ಪಾತ್ರಗಳಿವೆ. ಈ ಪಾತ್ರಗಳ ಮೂಲಕ ಹಾಡಿನಲ್ಲೇ ಒಂದು ಲವ್‌ಸ್ಟೋರಿ ಹೆಣೆದಿದ್ದು, ಹಿನ್ನೆಲೆಯಲ್ಲಿ ಮಧುರ ಹಾಡು ಹಿತವಾಗಿ ಕೇಳಿಸುತ್ತವೆ. ಕೃಷ್ಣಕಾಂತ್‌ ರಚನೆಯ ಗೀತೆಗೆ ಜಸ್ಟಿನ್ ಪ್ರಭಾಕರನ್‌ ಸಂಗೀತ ಸಂಯೋಜಿಸಿದ್ದು, ಯುವನ್ ಶಂಕರ್ ರಾಜಾ ಮತ್ತು ಹರಿಣಿ ಇವತ್ತೂರಿ ದನಿಯಾಗಿದ್ದಾರೆ.

‘ಜಿಲ್‌’ ಸಿನಿಮಾ ಖ್ಯಾತಿಯ ರಾಧಾಕೃಷ್ಣ ಕುಮಾರ್ ‘ರಾಧೆ ಶ್ಯಾಮ್‌’ ಸಿನಿಮಾದ ನಿರ್ದೇಶಕ. ಈ ಸಿನಿಮಾದೊಂದಿಗೆ ನಟ ಪ್ರಭಾಸ್‌ ರೊಮ್ಯಾಂಟಿಕ್ ಹೀರೋ ಆಗಿ ತೆರೆಗೆ ಮರಳುತ್ತಿದ್ದು, ಪೂಜಾ ಹೆಗ್ಡೆ ಮೊದಲ ಬಾರಿ ಪ್ರಭಾಸ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಸಚಿನ್‌ ಖೇಡೇಕರ್‌, ಪ್ರಿಯದರ್ಶಿ ಪುಲಿಕೊಂಡ, ಭಾಗ್ಯಶ್ರೀ, ಮುರಳಿ ಶರ್ಮ, ಕುನಾಲ್ ರಾಯ್ ಕಪೂರ್ ಚಿತ್ರದ ಪ್ರಮುಖ ಕಲಾವಿದರು. ತೆಲುಗು ಮತ್ತು ಹಿಂದಿ ಭಾ‍ಷೆಗಳಲ್ಲಿ ಸಿನಿಮಾ ತಯಾರಾಗುತ್ತಿದೆ. ಪೂಜಾ ಹೆಗ್ಡೆ  ಸದ್ಯ ವಿಜಯ್ ಹೀರೋ ಆಗಿ ನಟಿಸುತ್ತಿರುವ ‘ಬೀಸ್ಟ್‌’ ತಮಿಳು ಚಿತ್ರದಲ್ಲಿ ಪೂಜಾ ಬ್ಯುಸಿಯಾಗಿದ್ದಾರೆ. 2012ರಲ್ಲಿ ಮಿಸ್ಕಿನ್ ನಿರ್ದೇಶನದ ‘ಮೂಗಮೂಡಿ’ ತಮಿಳು ಚಿತ್ರದೊಂದಿಗೆ ಅವರ ಬೆಳ್ಳಿತೆರೆ ಅಭಿಯಾನ ಆರಂಭವಾಗಿತ್ತು. ಇದೀಗ ಒಂಬತ್ತು ವರ್ಷಗಳ ನಂತರ ‘ಬೀಸ್ಟ್‌’ ಚಿತ್ರದೊಂದಿಗೆ ಕಾಲಿವುಡ್‌ಗೆ ಮರಳುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here