ಗಾಡ್‌ಫಾದರ್ ಇಲ್ಲದೆ ಸಿನಿಮಾರಂಗ ಪ್ರವೇಶಿಸಿದ ನಟ ಧನಂಜಯ ಈಗ ಚಿತ್ರನಿರ್ಮಾಣ ಮಾಡುವ ಹಂತಕ್ಕೆ ಬೆಳೆದಿದ್ದಾರೆ. ಈ ವಾರ ಅವರ ‘ಬಡವ ರಾಸ್ಕಲ್’ ಸಿನಿಮಾ ಬಿಡುಗಡೆಯಾಗುತ್ತಿದ್ದು, ಸ್ಯಾಂಡಲ್‌ವುಡ್‌ನ ಹಲವರು ಅವರಿಗೆ ಶುಭ ಹಾರೈಸಿದರು.
ಪ್ರಸ್ತುತ ಕನ್ನಡ ಚಿತ್ರರಂಗದ ಭರವಸೆಯ ನಟರ ಪಟ್ಟಿಯಲ್ಲಿ ಧನಂಜಯ ಅವರ ಹೆಸರು ಮುಂಚೂಣಿಯಲ್ಲಿದೆ. ಗಾಡ್‌ಫಾದರ್‌ಗಳಿಲ್ಲದೆ ಸಿನಿಮಾರಂಗ ಪ್ರವೇಶಿಸಿದ ನಟ ಅವರು. ‘ಡೈರೆಕ್ಟರ್ಸ್ ಸ್ಪೆಷಲ್’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದವರು. ಚೊಚ್ಚಲ ಸಿನಿಮಾ ಹೆಸರು ಮಾಡಿದರೂ ಮುಂದೆ ಹೀರೋ ಆಗಿ ನಟಿಸಿದ ಸಿನಿಮಾಗಳು ನಿರೀಕ್ಷಿಸಿದ ಯಶಸ್ಸು ತಂದುಕೊಡಲಿಲ್ಲ. ರಂಗಭೂಮಿ ಹಿನ್ನೆಲೆ ಇತ್ತಾದ್ದರಿಂದ ನಟನೆಯಿಂದ ಹೆಸರು ಮಾಡಿದರು. ಕೆಲವು ವರ್ಷಗಳ ಬೆವರಿನ ದುಡಿಮೆ ನಿಧಾನವಾಗಿ ಫಲ ಕೊಟ್ಟಿತು. ‘ಟಗರು’ ಸಿನಿಮಾ ಅವರ ವೃತ್ತಿ ಬದುಕಿಗೆ ತಿರುವು. ಚಿತ್ರದಲ್ಲಿನ ‘ಡಾಲಿ’ ಪಾತ್ರದಲ್ಲಿ ಖಳನಾಗಿ ಗೆಲುವು ಕಂಡರು. ಮುಂದೆ ಐದಾರು ಸಿನಿಮಾಗಳಲ್ಲಿ ನೆಗೆಟೀವ್ ಶೇಡ್‌ನಲ್ಲಿ ನಟಿಸಿದ ಅವರೀಗ ‘ಬಡವ ರಾಸ್ಕಲ್’ ಚಿತ್ರದ ಮೂಲಕ ಹೀರೋಗಿರಿಗೆ ಮರಳಿದ್ದಾರೆ. “ಇದು ಮಧ್ಯಮವರ್ಗದ ಕುಟುಂಬದ ಕತೆ. ಎಲ್ಲರಿಗೂ ಕನೆಕ್ಟ್ ಆಗುತ್ತೆ” ಎನ್ನುವುದು ಚಿತ್ರತಂಡ ಹೇಳುವ ಒನ್‌ಲೈನ್ ಸ್ಟೋರಿ. ಇದೇ 24ರಂದು ತೆರೆಕಾಣುತ್ತಿರುವ ಇದು ಅವರ ನಿರ್ಮಾಣದ ಚಿತ್ರವೂ ಹೌದು ಎನ್ನುವುದು ವಿಶೇಷ. ನಿನ್ನೆ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಆಯೋಜನೆಗೊಂಡಿತ್ತು.
ನಟನಾಗಿ ಮಾತ್ರವಲ್ಲದೆ ಸರಳತೆ, ಸಜ್ಜನಿಕೆಯಿಂದಲೂ ಮೆಚ್ಚುಗೆ ಗಳಿಸಿರುವ ಧನಂಜಯ ಅವರ ಸಿನಿಮಾಗೆ ಶುಭ ಹಾರೈಸಲು ಸಿನಿಮಾರಂಗದಲ್ಲಿನ ಅವರ ಸ್ನೇಹಿತರು ಇವೆಂಟ್‌ಗೆ ಆಗಮಿಸಿದ್ದರು. ವಸಿಷ್ಠ ಸಿಂಹ, ಸತೀಶ್ ನೀನಾಸಂ, ಲೂಸ್ ಮಾದ ಯೋಗಿ, ರಚಿತಾ ರಾಮ್, ನಿಧಿ ಸುಬ್ಬಯ್ಯ, ಮಾಸ್ತಿ, ಕರಿಸುಬ್ಬು, ವಿಜಯ್ ಪ್ರಸಾದ್, ಕೆ.ಪಿ.ಶ್ರೀಕಾಂತ್.. ಹೀಗೆ ಈ ಹಿಂದೆ ಧನಂಜಯ ಅವರೊಂದಿಗೆ ಕೆಲಸ ಮಾಡಿದವರು, ಸದ್ಯ ಚಿತ್ರೀಕರಣದಲ್ಲಿರುವ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುವ ಹಲವರು ಹಾಜರಿದ್ದರು. ವಿಶೇಷ ಅತಿಥಿಗಳಾಗಿ ಹಿರಿಯ ಸಂಗೀತ ಸಂಯೋಜಕ ಹಂಸಲೇಖ, ನಾಯಕನಟರಾದ ಶಿವರಾಜಕುಮಾರ್, ದುನಿಯಾ ವಿಜಯ್ ಇದ್ದರು. ಇನ್ನು ‘ಬಡವ ರಾಸ್ಕಲ್’ ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರ ದೊಡ್ಡ ಬಳಗವೇ ಅಲ್ಲಿತ್ತು. ನಟ ಧನಂಜಯ ತಮ್ಮ ಸ್ನೇಹಿತರೆಲ್ಲರನ್ನೂ ಸೇರಿಸಿ ಮಾಡಿರುವ ಸಿನಿಮಾ ಇದು. “ಪ್ರಾಮಾಣಿಕ ಕೆಲಸಕ್ಕೆ ಅರ್ಹ ಗೆಲುವು ಸಿಕ್ಕೇ ಸಿಗುತ್ತದೆ” ಎಂದು ಎಲ್ಲರೂ ಧನಂಜಯ್‌ರಿಗೆ ಶುಭ ಹಾರೈಸಿದರು. ಸಿನಿಮಾದ ಹಾಡುಗಳಿಗೆ ಸ್ವತಃ ಧನಂಜಯ್ ಮತ್ತು ಹಿರೋಯಿನ್ ಅಮೃತಾ ಅಯ್ಯಂಗಾರ್ ಡ್ಯಾನ್ಸ್ ಮಾಡಿದರೆ, ಅನುಶ್ರೀ ನಿರೂಪಣೆಯಲ್ಲಿ ಸಮಾರಂಭ ಕಳೆಗಟ್ಟಿತು.