ಅಮೆರಿಕದ ಇತಿಹಾಸದಲ್ಲಿ ಮಾತ್ರವಲ್ಲ, ವಿಶ್ವ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಸಿಡ್ನಿಯಂತಹ ಅಪ್ರತಿಮ ಕಲಾವಿದರು, ಹೋರಾಟಗಾರರು ಜಗತ್ತಿನೆಲ್ಲೆಡೆ ಹುಟ್ಟಲಿ – ಅಗಲಿದ ಮೇರು ನಟ ಸಿಡ್ನಿ ಪೊಯ್ಟಿಯರ್‌ ಅವರಿಗೆ ಅಕ್ಷರ ನಮನ.

ಭಾರತೀಯ ಚಿತ್ರರಂಗದಲ್ಲಿ ಕಳೆದ ಒಂದು ದಶಕದಲ್ಲಿ ಅಸಾಧಾರಣವಾದ ಒಂದು ಬದಲಾವಣೆಯಾಗಿದೆ. ಅದೆಂದರೆ, ದಲಿತ ಬದುಕನ್ನು ಆಧರಿಸಿದ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರೆ ಕಂಡಿರುವುದು. ಅವುಗಳಲ್ಲಿ ಹೆಚ್ಚಿನವು ದಕ್ಷಿಣ ಭಾರತದ ಭಾಷೆಗಳಲ್ಲಿ ತಯಾರಾಗಿವೆ. ಕನ್ನಡದ ಪಾಲು ಎಷ್ಟು ಎಂಬುದು ಪ್ರಶ್ನಾರ್ಹ. ಒಟ್ಟಾರೆಯಾಗಿ, ದಲಿತ ಕಲಾವಿದರು, ತಂತ್ರಜ್ಞರು ಮಾತ್ರ ವಿರಳಾತಿವಿರಳವೆನ್ನುವುದು ಪರಿಸ್ಥಿತಿ ನಾವು ಅಂದುಕೊಂಡಷ್ಟು ಸುಧಾರಿಸಿಲ್ಲವೆನ್ನುವುದಕ್ಕೆ ಸಾಕ್ಷಿ.

ಈ ಮಾತುಗಳನ್ನಾಡುವುದಕ್ಕೆ ಕಾರಣ ಸಿಡ್ನಿ ಪೊಯ್ಟಿಯರ್ (1927-2022). ಮೊನ್ನೆ ಅಗಲಿದೆ ಸಿಡ್ನಿ, ಹಾಲಿವುಡ್‌ನ ಮೊದಲ ಆಫ್ರಿನ್ ಅಮೆರಿಕನ್ ಸ್ಟಾರ್ ಕಲಾವಿದ. ಮಾತ್ರವಲ್ಲ, ಅತ್ಯುತ್ತಮ ನಟ ಆಸ್ಕರ್ ಪ್ರಶಸ್ತಿ ವಿಜೇತ ಕೂಡ. ಆಪ್ರಿಕನ್ ನೀಗ್ರೊ ಥಿಯೇಟರ್‌ನ ಕಲಾವಿದರಾಗಿದ್ದ ಸಿಡ್ನಿ, ಕಿರಿಯ ವಯಸ್ಸಿನಲ್ಲೇ ಹಾಲಿವುಡ್‌ನಲ್ಲಿ ಅವಕಾಶ ಪಡೆದು, ನಂತರ ಒಂಬತ್ತು ಆಸ್ಕರ್ ನಾಮಿನೇಶನ್ ಪಡೆದ The Defiant Ones(1958) ನಲ್ಲಿ ಪ್ರಮುಖ ನಟರಾಗಿ ಆಸ್ಕರ್ ನಾಮಿನೇಶನ್ ಪಡೆದ ಮೊದಲ ಕಪ್ಪು ನಟರಾಗಿದ್ದರು. ಅದೇ ಚಿತ್ರಕ್ಕೆ BAFTA ಪ್ರಶಸ್ತಿ ಪಡೆದರು. ಇದಾದ ಕೆಲವೇ ವರ್ಷಗಳಲ್ಲಿ Lilies of the Field (1963) ಚಿತ್ರಕ್ಕೆ ಆಸ್ಕರ್ ಹಾಗೂ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಪಡೆದರು. ಇದು ಅಮೆರಿಕನ್ ಚಿತ್ರ ಇತಿಹಾಸದಲ್ಲೇ ಮೈಲಿಗಲ್ಲು. ಇದಾದ ನಲವತ್ತು ವರ್ಷಗಳ ನಂತರ ಡೆನ್ಜೆಲ್ ವಾಷಿಂಗ್ಟನ್ ತಮ್ಮ Training Day (2001) ಚಿತ್ರಕ್ಕಾಗಿ ಅತ್ಯುತ್ಯಮ ನಟ ಪ್ರಶಸ್ತಿ ಪಡೆದಿದ್ದನ್ನು ಕಂಡಾಗ, ಸ್ಪರ್ಧೆ ಎಷ್ಟು ಕಠಿಣ ಎಂಬುದು ಮನವರಿಕೆಯಾಗುತ್ತದೆ.

ಹಾಲಿವುಡ್, ಅಂದಿನ ಕಾಲದಿಂದಲೂ ಸ್ಟುಡಿಯೊ ಅಧಿಪತ್ಯದಲ್ಲಿದ್ದುದರಿಂದ ಕಪ್ಪು ನಟರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರಿಗೆ ಅವಕಾಶವಿರಲಿಲ್ಲ. ಹಾಗಾಗಿ, ಸಿಡ್ನಿ ಹಾಗೂ ಡೊರೊತಿ ಡ್ಯಾನ್ ಬ್ರಿಜ್‌ರಂತಹ ಆಫ್ರಿಕನ್ ಅಮೆರಿಕನ್ ಕಲಾವಿದರು ಅವೆಲ್ಲ ನಿರ್ಬಂಧಗಳು, ಸವಾಲುಗಳನ್ನು ಮೀರಿ, ಸ್ವತಂತ್ರ ಚಿತ್ರಗಳ ಮೂಲಕ, ಅವುಗಳಲ್ಲಿನ ತಮ್ಮ ಭಾಷೆ, ಸಂಭಾಷಣೆ, ಉಡುಪು, ಹಾವಭಾವ ಹಾಗೂ ಪಾತ್ರಪೋಷಣೆಯ ಮೂಲಕ ಅಮೆರಿಕನ್ ಚಿತ್ರ ಸಂಸ್ಕೃತಿಯನ್ನು ಬದಲಿಸಿದ್ದು ಮಹತ್ಸಾಧನೆ. ಇದರಿಂದಾಗಿ ಅಂತಹ ಚಿತ್ರಗಳು ‘ಅವಾಸ್ತವಿಕ’ ಎಂಬ ಟೀಕೆಯನ್ನು ಕೂಡ ಎದುರಿಸಬೇಕಾಯಿತು. ಈ ರೇಸಿಸಮ್ ಬರೀ ಅಮೆರಿಕಕಕ್ಕೆ ಸೀಮಿತವಾಗಿಲ್ಲ. ಬ್ರಿಟನ್‌ನಲ್ಲಿ ಜೇಮ್ಸ್ ಬಾಂಡ್‌ನಂತಹ ಪ್ರಖ್ಯಾತ ಚಿತ್ರ ಸರಣಿಗೆ ಡೇನಿಯಲ್ ಕ್ರೇಗ್ ನಂತರ ಬ್ರಿಟಿಶ್-ಆಫ್ರಿಕನ್ ನಟನಾದ ಇದ್ರಿಸ್ ಎಲ್ಬರನ್ನು ಆಯ್ಕೆ ಮಾಡಬಹುದಾ ಎಂಬ ಪ್ರಶ್ನೆಯೆದ್ದಾಗ ಆತ ‘ಬೀದಿಯವ’ನ ಹಾಗೆ ಕಾಣ್ತಾನೆ ಎಂಬ ಟೀಕೆ ಎದುರಾಗಿದ್ದು, ಇಂದಿಗೂ ಪರಿಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿಲ್ಲ ಎಂಬುದನ್ನೇ ತೋರಿಸುತ್ತದೆ.

ಇದಿಷ್ಟೇ ಆಗಿದ್ದರೂ ಸಿಡ್ನಿ ಅವರು ಹಾಲಿವುಡ್‌ನಲ್ಲಿ ಆಫ್ರಿಕನ್ ಅಮೆರಿಕನ್ ಐಡೆಂಟಿಟಿಗೆ ಬಹುದೊಡ್ಡ ಕಾರಣವಾಗಿರುತ್ತಿದ್ದರು. ಆದರೆ, ಅವರು ತಮ್ಮ ಕಲಾಬದುಕಿನಾಚೆಗಿನ ಹೋರಾಟದಿಂದಾಗಿಯೂ ಇಂದು ಅಮೆರಿಕ ಇತಿಹಾಸದಲ್ಲಿ ಪ್ರಮುಖರು. ಅಮೆರಿಕದ ಇತಿಹಾಸಕಾರರಾದ ಎಮಿಲಿ ರೇಮಂಡ್ ಅವರು ತಮ್ಮ Stars for Freedom: Hollywood, Black Celebrities, and the Civil Rights Movement(2015) ಪುಸ್ತಕದಲ್ಲಿ ಬರೆಯುವಂತೆ, ಅಮೆರಿಕದಲ್ಲಿ 1960ರ ದಶಕದಲ್ಲಿ ನಡೆದ ಆಫ್ರಿನ್ ಅಮೆರಿಕನ್ನರ ನಾಗರಿಕ ಹಕ್ಕುಗಳ ಚಳವಳಿಯಲ್ಲಿ(Civil Rights Movement) ಹಾಲಿವುಡ್‌ನ ತಾರಾಬಳಗವೇ ಪಾಲ್ಗೊಂಡಿತ್ತು. ಸಿಡ್ನಿಯವರೊಂದಿಗೆ ಹ್ಯಾರಿ ಬೆಲಫೊಂಟೆ, ಓಸ್ಸಿ ಡೇವಿಸ್ ಹಾಗೂ ರೂಬಿ ಡೀ, ಸ್ಯಾಮಿ ಡೇವಿಸ್ ಜ್ಯೂ., ಡಿಕ್ ಗ್ರೆಗರಿಯವರೊಂದಿಗೆ ಕೂಡ ಸೇರಿದ್ದರು. ಇವರೊಟ್ಟಿಗೆ ಮಾರ್ಲನ್ ಬ್ರಾಂಡೊ, ಪೌಲ್ ನ್ಯೂಮನ್, ಎಲಿಜಬೆತ್ ಟೇಲರ್ ರಂತಹ interracial ಸ್ಟಾರ್ ಕಲಾವಿದರು ಕೂಡ ಹೋರಾಟದಲ್ಲಿ ಪಾಲ್ಗೊಂಡಿದ್ದು ವಿಶೇಷ. ಈ ಕಲಾವಿದರಿಂದಾಗಿ ಚಳವಳಿಯು ಮಾಧ್ಯಮದ ಗಮನಸೆಳೆಯುವುದಕ್ಕೆ ಸಾಧ್ಯವಾದದ್ದು ಮಾತ್ರವಲ್ಲ, ಇವರು ಆರ್ಥಿಕವಾಗಿ ಹಾಗೂ ಭಾವನಾತ್ಮಕವಾಗಿಯೂ ಈ ಚಳವಳಿಗೆ ಸ್ಪಂದಿಸಿ ಹೋರಾಟವನ್ನು ಕಟ್ಟುವಲ್ಲಿ ನೆರವಾಗಿದ್ದರು.

ಕರ್ನಾಟಕದ ಗೋಕಾಕ್ ಚಳವಳಿಯಂತಹ ಹೋರಾಟಗಳಲ್ಲಿ ಕನ್ನಡ ಕಲಾವಿದರು ದೊಡ್ಡ ಮಟ್ಟದಲ್ಲಿ ಪಾಲ್ಗೊಂಡಿದ್ದನ್ನು ನನ್ನ ಹಾಗೂ ನನ್ನ ಕಿರಿಯ ತಲೆಮಾರಿನವರು ಓದಿ, ಕೇಳಿ ತಿಳಿದಿದ್ದೇವಾದರೂ, ಆ ಬಗ್ಗೆ ಪುಸ್ತಕಗಳು ಬಂದಿವೆಯೇ ಎಂಬುದು ತಿಳಿದಿಲ್ಲ. ಹಾಗೆಯೇ, ಕರ್ನಾಟಕ ದಲಿತ ಚಳವಳಿಯಲ್ಲಿ ಯಾವ ಸಿನಿ ಕಲಾವಿದರು ಪಾಲ್ಗೊಂಡಿದ್ದರೆಂಬ ಬಗ್ಗೆಯೂ ನನಗೆ ತಿಳಿದಿಲ್ಲ. ಕನ್ನಡದ ಸಾಂಸ್ಕೃತಿಕ ಚರಿತ್ರೆಗಳು ಇಂತಹ ಸಂಗತಿಗಳನ್ನು ಕೇಂದ್ರವಾಗಿರಿಸಿಕೊಂಡು ರಚನೆಯಾಗಿರುವುದನ್ನು ನಾನು ಓದಿಲ್ಲ. ಭಾಷೆಯೆಂದರೆ, ಬರೀ ಲಿಪಿಯಲ್ಲ, ಸಾಹಿತ್ಯವಲ್ಲ. ಅದೊಂದು ಸಂಸ್ಕೃತಿ. ಸಂಸ್ಕೃತಿಯ ಅವಿಭಾಜ್ಯ ಅಂಗ ಸಿನಿಮಾ. ಕನ್ನಡ ಸಂಸ್ಕೃತಿ ಯಾವ ರೀತಿಯಲ್ಲಿ ಸೆಕ್ಯುಲರ್ ಎಂಬ ಪ್ರಶ್ನೆಯನ್ನು ಇಂದು ನಾವೆಲ್ಲ ಕೇಳಿಕೊಳ್ಳಬೇಕು. ಇನ್ನು ಮುಂದಾದರೂ ಯಾರಾದರೂ ಆ ಕೆಲಸ ಮಾಡುವರೇನೋ ಎಂದು ಆಶಿಸುವೆ.

ಅಮೆರಿಕದ ಇತಿಹಾಸದಲ್ಲಿ ಮಾತ್ರವಲ್ಲ, ವಿಶ್ವ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಸಿಡ್ನಿಯಂತಹ ಅಪ್ರತಿಮ ಕಲಾವಿದರು, ಹೋರಾಟಗಾರರು ಜಗತ್ತಿನೆಲ್ಲೆಡೆ ಹುಟ್ಟಲಿ. Good bye, comrade!

LEAVE A REPLY

Connect with

Please enter your comment!
Please enter your name here