KRG ಸ್ಟುಡಿಯೋಸ್‌ ಮತ್ತು TVF ಮೋಷನ್‌ ಪಿಕ್ಚರ್ಸ್‌ ಜೊತೆಗೂಡಿ ನಿರ್ಮಿಸುತ್ತಿರುವ ‘ಪೌಡರ್‌’ ಸಿನಿಮಾ ಸೆಟ್ಟೇರಿದೆ. ಜನಾರ್ಧನ್‌ ಚಿಕ್ಕಣ್ಣ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ದಿಗಂತ್‌, ಧನ್ಯಾ ರಾಮಕುಮಾರ್‌ ಮತ್ತು ಶರ್ಮಿಳಾ ಮಾಂಡ್ರೆ ನಟಿಸುತ್ತಿದ್ದಾರೆ.

ದಿಗಂತ್‌, ಧನ್ಯಾ ರಾಮಕುಮಾರ್‌ ಮತ್ತು ಶರ್ಮಿಳಾ ಮಾಂಡ್ರೆ ಅಭಿನಯದ ‘ಪೌಡರ್‌’ ಸಿನಿಮಾ ಸೆಟ್ಟೇರಿದೆ. KRG ಸ್ಟುಡಿಯೋಸ್‌ ಮತ್ತು TVF ಮೋಷನ್‌ ಪಿಕ್ಚರ್ಸ್‌ ಜೊತೆಗೂಡಿ ನಿರ್ಮಿಸುತ್ತಿರುವ ಮೊದಲ ಚಿತ್ರವಿದು. ನಿನ್ನೆ ನಡೆದ ಸಿನಿಮಾದ ಮುಹೂರ್ತದದಲ್ಲಿ ನಟ ಸುದೀಪ್‌ ಮೊದಲ ದೃಶ್ಯಕ್ಕೆ ಕ್ಲ್ಯಾಪ್‌ ಮಾಡಿದರು. ಚಿತ್ರದ ಕಥಾಹಂದರ ಕುರಿತು ಮಾಹಿತಿ ನೀಡುವ ನಿರ್ದೇಶಕ ಜನಾರ್ಧನ್‌ ಚಿಕ್ಕಣ್ಣ, ‘ಇದೊಂದು ಹಾಸ್ಯಮಯ ಚಿತ್ರ. ಒಂದು ಸಣ್ಣ ಊರಿನ ಯುವಕರಿಗೆ ದೊಡ್ಡ ಪ್ರಮಾಣದ ಕೊಕೇನ್ ಸಿಗುತ್ತದೆ. ಒಂದು ಕಡೆ ಆ ಕೊಕೇನ್‌ಗಾಗಿ ಹುಡುಕಾಟದಲ್ಲಿರುವ ದುಷ್ಟರ ಗುಂಪು. ಇನ್ನೊಂದು ಕಡೆ ಆ ಕೊಕೇನ್ ಮಾರಿ ದಿಢೀರ್ ಶ್ರೀಮಂತರಾಗಬೇಕೆಂಬ ಮತ್ತೊಂದು ಯುವಕರ ಗುಂಪು. ಮತ್ತೊಂದು ಕಡೆ ತಮ್ಮ ಅಧಿಪತ್ಯ ಸ್ಥಾಪಿಸುವುದಕ್ಕೆ ಪ್ರಯತ್ನಿಸುತ್ತಿರುವ ಒಬ್ಬ ಮಾಸ್ಟರ್ ಮೈಂಡ್. ಈ ಹಾವು-ಏಣಿ ಆಟದಲ್ಲಿ ಗೆಲ್ಲುವವರು ಯಾರು? ಎಂದು ಮನರಂಜನಾತ್ಮಕವಾಗಿ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ’ ಎನ್ನುತ್ತಾರೆ.

ಅನಿರುದ್ಧ ಆಚಾರ್ಯ, ರಂಗಾಯಣ ರಘು, ಅಚ್ಯುತ್‌ ಕುಮಾರ್‌, ರವಿಶಂಕರ್‌ ಗೌಡ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಮುಂದಿನ ತಿಂಗಳು ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. 2024ರ ಏಪ್ರಿಲ್ 5ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಗೌಡ. ದೀಪಕ್ ವೆಂಕಟೇಶನ್ ಕತೆ-ಚಿತ್ರಕಥೆ, ಸೀನ್ ರೋಲ್ಡನ್ ಸಂಗೀತ, ಶಾಂತಿ ಸಾಗರ್ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ. ನಟರಾದ ಧನಂಜಯ್‌, ಧೀರೇನ್‌ ರಾಮಕುಮಾರ್‌, ನವೀನ್‌ ಶಂಕರ್‌, ನಾಗಭೂಷಣ್‌ ಹಾಗೂ ನಿರ್ದೇಶಕರಾದ ಸಂತೋಷ್‌ ಆನಂದರಾಮ್‌, ರೋಹಿತ್‌ ಪದಕಿ ಮುಹೂರ್ತದಲ್ಲಿ ಪಾಲ್ಗೊಂಡು ಚಿತ್ರಕ್ಕೆ ಶುಭ ಹಾರೈಸಿದರು.

Previous articleಶಿವಕಾರ್ತಿಕೇಯನ್‌ – ಸಾಯಿ ಪಲ್ಲವಿ ಸಿನಿಮಾ | ಕಮಲ್‌ ಹಾಸನ್‌ ನಿರ್ಮಾಣ ಸಹಯೋಗ
Next articleಮಾಧ್ಯಮಗಳಿಗೆ ಕ್ಷಮೆಯಾಚಿಸಿ ಪತ್ರ ಬರೆದ ದರ್ಶನ್

LEAVE A REPLY

Connect with

Please enter your comment!
Please enter your name here