ಹೆಸರಿಗೆ ಕಾಮಿಡಿ‌ ಸಿನಿಮಾವಾದರೂ ಬಹು ಗಂಭೀರ ವಿಚಾರವನ್ನು ಹೇಳುತ್ತಾ ಸಾಗುತ್ತದೆ. ನಾಗರೀಕ ಬದುಕಿಗೆ ಒಗ್ಗಿಕೊಳ್ಳಲು ಹರಸಾಹಸ ಪಡುವ ಮಾಜಿ ಸೈನಿಕ ಮತ್ತು ಮಾಜಿ‌ ಸೇನಾ ಶ್ವಾನದ ಮನಮಿಡಿಯುವ ಕತೆಯ ‘ಡಾಗ್’ Amazon Prime Videoದಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಸೇನೆಗೆ ಸೇರುವಾಗ ಮೆದುಳನ್ನು‌ ತೆಗೆದಿರಿಸಿ ಕೈಗೆ ಬಂದೂಕು ಕೊಟ್ಟು ಯುದ್ಧಭೂಮಿಗೆ ಕಳಿಸುತ್ತಾರೆ. ಕೊನೆಗೆ ಸೇನೆಯಿಂದ ನಿವೃತ್ತಿಯಾಗುವ ದಿನ ಬರುತ್ತದಲ್ಲ ಆಗ ಬಂದೂಕನ್ನು ವಾಪಸ್‌ ತೆಗೆದುಕೊಂಡು ಮನೆಗೆ ಕಳಿಸುತ್ತಾರಂತೆ. ಇದೊಂದು‌ ಭಾರಿ ಹಳೆಯ ಜೋಕು. ಪ್ರತಿಯೊಂದು ಜೋಕಿನ ಹಿಂದೆ ಕಟು ವಾಸ್ತವ ಅಡಗಿ ಕೂತಿರುತ್ತದೆ. ಸೇನೆಯ ಶಿಷ್ಟಾಚಾರ ಮತ್ತು ಕಟ್ಟುನಿಟ್ಟಿನಲ್ಲಿ ಸುದೀರ್ಘ ಕಾಲ ಬಾಳಿದ‌ ಮೇಲೆ ಬದುಕಿ ಹೊರ ಪ್ರಪಂಚಕ್ಕೆ ಹೊಂದಿಕೊಳ್ಳಲು ಭಾರಿ ಕಷ್ಟವಾಗುತ್ತದೆ ಎಂದು ನಿವೃತ್ತ ಸೇನಾಧಿಕಾರಿಯೊಬ್ಬರು ಆತ್ಮೀಯ ಮಾತುಕತೆಯಲ್ಲಿ ಹೇಳಿದ್ದರು. ಒಟ್ಟಾರೆಯಾಗಿ ಈ ಸಮಾಜಕ್ಕೇ ಒಂದು ನೀತಿ-ನಿಯಮ ಇಲ್ಲದಂತೆ ಭಾಸವಾಗುತ್ತದಂತೆ. ಸೈನಿಕರಿಗೆ ಬಿಡಿ, ಸೈನ್ಯದಲ್ಲಿ ಸೇವೆಗೈದ ನಾಯಿಗಳು, ಅವುಗಳಿಗೂ ನಿವೃತ್ತಿ ಎಂಬುದೊಂದಿದೆ. ನಿವೃತ್ತಿಯಾಗಿ ಹೊರಬಂದ ಮೇಲೆ ಅವುಗಳಂತೂ ಹೊರ ಪ್ರಪಂಚಕ್ಕೆ ಒಗ್ಗಿಕೊಳ್ಳುವುದೇ ಅಪರೂಪ ಎಂದಿದ್ದರು ಅವರು. ಹಾಗಾಗಿಯೇ ನಿವೃತ್ತ ಶ್ವಾನಗಳನ್ನು ನೋಡಿಕೊಳ್ಳುವ ಸಲುವಾಗಿಯೇ ಪ್ರತ್ಯೇಕ ಶಿಬಿರದ ವ್ಯವಸ್ಥೆ ಮಾಡಿರುತ್ತಾರೆ.

‘ಡಾಗ್’ ಸಿನಿಮಾ‌ ನೋಡಿದಾಗ ಅವರ ಮಾತುಗಳು ನೆನಪಾಯಿತು. ಹೆಸರಿಗೆ ಇದೊಂದು ಕಾಮಿಡಿ ಸಿನಿಮಾ, ಆದರೆ ಹೇಳುವ ವಿಚಾರ ತೀರಾ ಸೀರಿಯಸ್ಸು. ಜ್ಯಾಕ್ಸನ್ ಬ್ರಿಗ್ಸ್ ಓರ್ವ ಮಾಜಿ ಸೈನಿಕ. ಯುದ್ಧಕಾಲದ ಆಘಾತದಿಂದ ಉಂಟಾದ ಮಾನಸಿಕ ಅಸ್ಥಿರತೆ ಅವನನ್ನು ಬಾಧಿಸುತ್ತಿರುತ್ತದೆ. ಒಬ್ಬ ಮಗಳಿದ್ದಾಳೆ, ಆದರೆ ಸಂಸಾರ ಅಯೋಮಯ. ಹಾಗಾಗಿ ದೂರದ ಊರಿಗೆ ಹೋಗೋಣವೆಂಬುದು ಆತನ ಹಂಬಲ. ಪಾಕಿಸ್ತಾನದಲ್ಲಿ ಅಮೆರಿಕ ಸೇನೆಯ ಜತೆಗೆ ಯುದ್ಧೇತರ ಕಾರ್ಯಕ್ಕೆ ನಿಯೋಜನೆಗೊಂಡರೆ ಒಳ್ಳೆಯ ವೇತನವಿದೆ. ಹಾಗಾಗಿ ಅಲ್ಲಿಗೆ ಕಳಿಸಿ ಎಂದು ದುಂಬಾಲು ಬಿದ್ದರೂ ಅಧಿಕಾರಿಗಳು ಜಗ್ಗುವುದಿಲ್ಲ. ಕಾರಣ, ಸೇನಾ ಬಳುವಳಿಯೇ ಆದ ಈತನ ಮಾನಸಿಕ ಅಸ್ಥಿರತೆ.

ಇನ್ನೊಂದೆಡೆ ನಾಯಿ ತೆರೆಯ ಮೇಲೆ ಬರುವ ಮೊದಲೇ ಸರ್ವೀಸ್ ನಾಯಿಗಳ ಬಗ್ಗೆ ಒಂದು ಮಾತು ಇಲ್ಲಿ ಹೇಳಲೇಬೇಕು. ಸೇನೆಯಲ್ಲಿರುವ ಪ್ರತಿಯೊಂದು ಶ್ವಾನಕ್ಕೂ ಅದರದ್ದೇ ಆದ ನಿರ್ವಾಹಕನನ್ನು‌ ನಿಯೋಜಿಸಲಾಗಿರುತ್ತದೆ. ಅಮೆರಿಕ ಮಾತ್ರವಲ್ಲ, ಜಗತ್ತಿನ ಹೆಚ್ಚಿನೆಲ್ಲಾ ಸೇನೆಗಳಲ್ಲೂ ಅದೇ ಪರಿಪಾಠ. ನಮ್ಮ ಪೊಲೀಸ್ ಇಲಾಖೆಯಲ್ಲೂ ಅದೇ ನಿಯಮ. ಏಕೆಂದರೆ ನಾಯಿಯದ್ದು ಏಕನಿಷ್ಠೆ. ಅದು ಒಬ್ಬನೇ ನಿರ್ವಾಹಕನ ಮಾತನ್ನು ಮಾತ್ರ ಸರಿಯಾಗಿ ಕೇಳುವುದು. ನಿರ್ವಾಹಕನಿಗೂ ನಾಯಿಯ ಶಕ್ತಿ-ದೌರ್ಬಲ್ಯಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ಕರ್ತವ್ಯದಲ್ಲಿರುವಾಗ ನಾಯಿ ಸಾವಿಗೀಡಾದರೆ ಅಧಿಕಾರಿಗೆ ಸಲ್ಲಿಸುವ ಅಂತಿಮ ನಮನದ ವಿಧಿವಿಧಾನಗಳನ್ನೇ ಸತ್ತ ನಾಯಿಗೆ ನೀಡಲಾಗುತ್ತದೆ ಎಂಬುದು ನಿಮಗೆ ತಿಳಿದಿರಬಹುದು. ಹಾಗೆಯೇ ತನ್ನ ನಿರ್ವಾಹಕ ಕರ್ತವ್ಯದಲ್ಲಿ ಮೃತಪಟ್ಟರೆ ಅಂತಿಮ ವಿಧಿವಿಧಾನಕ್ಕೆ ಆತನ ಶ್ವಾನವನ್ನೂ ಕರೆದೊಯ್ಯುವುದು ವಾಡಿಕೆ‌.

ಈ ಸಿನಿಮಾದಲ್ಲಿ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟವ ಜ್ಯಾಕ್ಸನ್ ಬ್ರಿಗ್ಸ್‌ನ ಸಹವರ್ತಿ ರಾಯ್ಲಿ ರೋಡ್ರಿಗಸ್. ಅವನ ಅಧೀನದಲ್ಲಿದ್ದ ನಾಯಿ ಲುಲು ಅದಾಗಲೇ ನಿವೃತ್ತಿಯಾಗಿ ವಾಷಿಂಗ್ಟನ್‌ನಲ್ಲಿನ ನಿವೃತ್ತ ನಾಯಿಗಳ ಶಿಬಿರ ಸೇರಿರುತ್ತದೆ. ರೋಡ್ರಿಗಸ್‌ನ ಅಂತ್ಯ ಸಂಸ್ಕಾರ ನಡೆಯುವುದು 1,500 ಮೈಲಿ ದೂರದ ಅರಿಜೋನಾದಲ್ಲಿ. ವಿಮಾನದಲ್ಲಿ ಕರೆದೊಯ್ಯಲು ಲುಲುವ ಮಾನಸಿಕ ಸ್ಥಿತಿಯೂ ಜ್ಯಾಕ್ಸನ್‌ನಂತೆಯೇ ಅಸ್ಥಿರ. ಹಾಗಾಗಿ ಲುಲುವನ್ನು ಅರಿಜೋನಾಕ್ಕೆ ರಸ್ತೆ ಮುಖೇನ ಕರೆದೊಯ್ಯುವ ಜವಾಬ್ದಾರಿ ಜ್ಯಾಕ್ಸನ್‌ ಹೆಗಲಿಗೆ ಬೀಳುತ್ತದೆ. ಅಲ್ಲಿಂದ ಲುಲು ಜತೆಗೆ ಜ್ಯಾಕ್ಸನ್‌ನ ಸುದೀರ್ಘ ಪಯಣ ‘ಡಾಗ್’ನ ಹೂರಣ. ದಾರಿ ಮಧ್ಯೆ ಬಂದೊದಗುವ ಸವಾಲುಗಳು, ನಡೆಯುವ ಅವಾಂತರಗಳು ಕೆಲವೆಡೆ ಹಾಸ್ಯಾತ್ಮಕವಾಗಿ ಕಂಡರೆ ಮತ್ತೊಂದಷ್ಟು ಕಡೆ ಭಾವನಾತ್ಮಕವಾಗಿದೆ.

ಆರಂಭದಲ್ಲಿ ಜ್ಯಾಕ್ಸನ್ ಒಂಚೂರು ಮುಂಗೋಪಿಯಂತೆ, ಒಂಚೂರು ಸ್ಥಿರವಾಗಿ ಇಲ್ಲದವನಂತೆ ಕಾಣುತ್ತಾನೆ. ಆದರೆ ಲುಲು ಬಂದ ಮೇಲೆ ಅದರ ಅಸ್ಥಿರತೆ-ಮುಂಗೋಪಗಳ ನಡುವೆ ಈತನದ್ದು ಏನೇನೂ ಅಲ್ಲ. ಸದಾ ಸೂಚನೆಗಳನ್ನು ಪಾಲಿಸಿ ಅಭ್ಯಾಸವಾದ ಲುಲುಗೆ ಸೂಚನೆ ಕೊಡಲು ಯಾರೂ ಇಲ್ಲ ಅಂದಾಗ ಅದರ ಪ್ರಪಂಚ ಅಯೋಮಯ. ಸೂಚನೆ ಪಾಲಿಸಲು ಎಷ್ಟರ ಮಟ್ಟಿಗೆ ತರಬೇತಿ ಹೊಂದಿದೆ‌ ಎಂದರೆ ಎಷ್ಟೇ ಪ್ರಿಯವಾದ ಆಹಾರವನ್ನೇ ಆದರೂ ಅದು ನೇರ ಕೈಯಿಂದ ಕಿತ್ತುಕೊಳ್ಳುವುದಿಲ್ಲ. ನೆಲಕ್ಕೆ ಹಾಕಿದ ಮೇಲೆಯೇ ಬಾಯಿ ಹಾಕುವುದು. ಆದರೆ ಈ‌ ನಿವೃತ್ತಿಯ ಕಿರಿಕಿರಿಯ ಕಾರಣ ಮೂಡು ಹಾಳಾದರೆ ಯಾರ ಮಾತೂ ಕೇಳದು. ಜ್ಯಾಕ್ಸನ್ ಕಾರಿನಿಂದ ಇಳಿದು ಹೋದಾಗ ಸೀಟನ್ನೆಲ್ಲ ಪರಚಿ, ಕಚ್ಚಿ ಹರಿದು ಹಾಕುವಷ್ಟು ಅದಕ್ಕೆ ಮಾನಸಿಕ ಕಿರಿಕಿರಿ. ಆ ದೃಶ್ಯದಲ್ಲಿ ಜ್ಯಾಕ್ಸನ್‌ನ ಸ್ಥಿತಿ ನೋಡಿ ಒಂದು ಕ್ಷಣಕ್ಕೆ ನಗು ಬಂದರೂ ಲುಲು ಪರಿಸ್ಥಿತಿ ನಮ್ಮ ಮನಸ್ಸಿಗೆ ಹೊಕ್ಕಾಗ ನಮಗೆ ನಗಬೇಕು ಅನಿಸುವುದಿಲ್ಲ.

ಪ್ರತಿ ಬಾರಿಯೂ ತೆರೆಯ ಮೇಲೆ ಆ ನಾಯಿಯ ಕ್ಲೋಸಪ್ ಕಂಡ ಕೂಡಲೇ ಇದು ಸದ್ಯದಲ್ಲೇ ಏನೋ ಮಾಡಲಿದೆ‌ ಎಂದು ನಮಗೆ ಅನಿಸುವಂತೆ ಮಾಡುವಲ್ಲಿ ಚಿತ್ರಕಥೆ ಸಫಲವಾಗಿದೆ. ಕಾಡಿನ ದಾರಿಯಲ್ಲಿ ಕಾರು ಹೋಗುತ್ತಿದ್ದಂತೆಯೇ ಈಗೇನೋ ಇದೆ ಎಂದು ನಮ್ಮ ಮನಸು ಹೇಳುತ್ತದೆ‌, ಅಷ್ಟರಲ್ಲೇ ಲುಲು ಚಲಿಸುವ ಕಾರಿಂದಲೇ ಹಾರಿ‌ ಕಾಡಿನೊಳಗೆ ಪರಾರಿ. ಅಲ್ಲಿಂದ ಮುಂದಕ್ಕೆ ಜ್ಯಾಕ್ಸನ್ನದ್ದು ನಾಯಿ ಪಾಡು ಎಂಬುದು ನಮ್ಮ ಲೆಕ್ಕಾಚಾರ. ಆದರೆ ವಾಸ್ತವದಲ್ಲಿ ಲುಲು ಪರಾರಿಯಾಗುವುದಿಲ್ಲ. ಕಾಡಿನ ಮಧ್ಯೆ ಮನೆಮಾಡಿ ಅಲ್ಲೊಬ್ಬ ಗಾಂಜಾ‌ ಬೆಳೆಯುತ್ತಿರುತ್ತಾನೆ. ಹೋಗಿ ಅವನನ್ನು ಹಿಡಿ ಎನ್ನುತ್ತದೆ ಈ ನಾಯಿಯ ಮಿಲಿಟ್ರಿ ಅನುಭವ.

ಅಲ್ಲಿ ಜ್ಯಾಕ್ಸನ್ ಮೇಲೆ ಬೆಳೆಗಾರನ ಧಾಳಿ ಮತ್ತು ಇಬ್ಬರ ನಡುವಿನ ತಿಕ್ಕಾಟ ಹೆಚ್ಚು ಕಾಲವಿಲ್ಲ, ಅದು ಸಿನಿಮಾದ ಪಾಲಿಗೆ ಪ್ರಮುಖ ತಿರುವಿನ ಕ್ಷಣ. ಏಕೆಂದರೆ ಆ ಕಾಡಲ್ಲಿ ಗಾಂಜಾ ಬೆಳೆಯುವವ ನಾಗರಿಕ ಬದುಕಿನಲ್ಲಿ ಒಗ್ಗಿಕೊಳ್ಳಲು ಆಗದ ಮತ್ತೊಬ್ಬ ಮಾಜಿ ಸೈನಿಕ. ಇತ್ತ ಓಡಿ ಬಂದ ಲುಲು ಕಾಲಿಗೆ ಗಾಯ ಮಾಡಿಕೊಂಡಿರುತ್ತದೆ. ಅಲ್ಲೊಬ್ಬ ಹೆಂಗಸು ಅದರ ಶುಶ್ರೂಷೆ ಮಾಡಿ ಔಷಧ ಹಚ್ಚುತ್ತಾಳೆ. ಅದನ್ನು ಕಂಡ ಜ್ಯಾಕ್ಸನ್‌ಗೆ ಅಚ್ಚರಿ. ಈತ ಎಷ್ಟು ಹೇಳಿದರೂ ಮಾತು ಕೇಳುವುದಿಲ್ಲ ಎಂದು ಹಠ ಹಿಡಿಯುತ್ತಿದ್ದ ಲುಲು ಆ ಹೆಂಗಸಿನ ಮಾತನ್ನು ಚಾಚೂ ತಪ್ಪದೇ ಕೇಳುತ್ತದೆ. ‘ಹೇಗೆ ಸಾಧ್ಯವಾಯಿತು?’ ಈತ ಕೇಳುತ್ತಾನೆ. ‘ಏನಿಲ್ಲ, ಪ್ರೀತಿಯಿಂದ ಮಾತಾಡಿಸಿದೆ, ಹೇಳಿದ್ದು ಕೇಳುತ್ತಿದೆ’ ಎಂದು ಸುಲಭದಲ್ಲಿ ಹೇಳುವ ಅವಳಿಗೆ ನಾಯಿಯ ಇತಿಹಾಸವೂ ಗೊತ್ತಿಲ್ಲ, ಮಿಲಿಟರಿಯ ಅನುಭವ ಮೊದಲೇ ಇಲ್ಲ.

ಬಂದು ಹೋಗುವ ಆ ಮೇಲಿನ ದೃಶ್ಯ ಕೊನೆಯವರೆಗೂ ನೆನಪುಳಿಯುವಂಥದ್ದು. ಆ ನಾಯಿಗೆ ಪಾಪ ಅಷ್ಟೂ ವರ್ಷ ಆಜ್ಞೆ ಕೇಳಿಯೇ ಗೊತ್ತು ವಿನಃ ಪ್ರೀತಿಯಿಂದ ಮಾತನಾಡಿಸಿದವರೇ ಇಲ್ಲ. ಈಗ ನಿವೃತ್ತಿಯಾಗಿ ತಲೆ ಕೆಟ್ಟು ಕೂತಾಗಲೂ ಸುಮ್ಮನಿರಲು ಆದೇಶ ನೀಡುತ್ತಾರೆಯೇ ವಿನಃ ಅಲ್ಲೂ ಆತ್ಮೀಯ ಮಾತುಗಳಿಲ್ಲ. ಏಕೆಂದರೆ ಶಿಬಿರದಲ್ಲೂ‌ ದೇಖರೇಖೆ ಮಾಡುವವರು ಸೈನಿಕರೇ. ಅವರಿಗೂ ಆಜ್ಞೆ ಪಾಲಿಸಿಯೇ‌ ಅಭ್ಯಾಸ. ಇದು ಮನವರಿಕೆಯಾದ ಮೇಲೆ ಜ್ಯಾಕ್ಸನ್ ಮತ್ತು ಲುಲುವ ಸಂಬಂಧ ಬೇರೆಯೇ ತೆರನಾಗಿ ಬದಲಾಗುತ್ತದೆ. ದಿಢೀರನೆ ಅಲ್ಲ, ಹಂತ ಹಂತವಾಗಿ ಆಗುವ ಬದಲಾವಣೆಯನ್ನು ತೆರೆಯ ಮೇಲೆಯೇ ನೋಡಬೇಕು.

ಲುಲುವಿನೆಡೆಗೆ ಜ್ಯಾಕ್ಸನ್‌ನ ಧೋರಣೆ‌ ಬದಲಾಗುತ್ತಾ ಹೋದ ಹಾಗೆ ನಿಧಾನವಾಗಿ ಲುಲು ಬದಲಾಗುತ್ತದೆ. ಸೇನೆಯ ಹೊರಗಿನ ಪ್ರಪಂಚಕ್ಕೆ ಹೊಂದಿಕೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಜ್ಯಾಕ್ಸನ್‌‌ನಲ್ಲೂ ಬದಲಾವಣೆ, ಹೊರ ಜಗತ್ತಿನ ಜತೆಗಿನ ಸಂಧಾನ ಅವನಲ್ಲೂ ಆಗಲು ಶುರುವಾಗುತ್ತದೆ. ಇಲ್ಲಿ ಯಾರಿಂದ ಯಾರಿಗೆ ಸಹಾಯವಾಯಿತು ಎಂಬುದು ಪ್ರಶ್ನೆ. ಆದರೆ ಅಷ್ಟೆಲ್ಲ ಸೂಕ್ಷ್ಮಗಳನ್ನು ಅವಲೋಕಿಸಿ ಸಿನಿಮಾ ನೋಡುವುದು ಅಪಾಯಕಾರಿ. ನೋಡಿದರೆ ಕೊನೆಗೆ ನಿಮಗೂ ಒಂದು ನಾಯಿ ಸಾಕುವ ಆಸೆಯಾದೀತು ಎಂಬುದು ಶಾಸನ ವಿಧಿಸಿದ ಎಚ್ಚರಿಕೆ.

LEAVE A REPLY

Connect with

Please enter your comment!
Please enter your name here