ಟೆಸ್ಟ್ ಕ್ರಿಕೆಟ್‌ನ ಸೊಗಸು ಮತ್ತು ಏನಾದರೂ ಸೋಲಲಾರೆ ಎನ್ನುವ ಕೆಚ್ಚಿನ ಕಥೆಯೇ ‘Down Underdogs – India’s Greatest Comeback’. ನಾಲ್ಕು ಸಂಚಿಕೆಗಳ ಈ ಸರಣಿಯ ದೃಶ್ಯ, ಎಡಿಟಿಂಗ್ ಎರಡೂ ಆಟದ ರೋಮಾಂಚನಕ್ಕೆ ತಮ್ಮ ಕಾಣಿಕೆ ನೀಡುತ್ತವೆ. ಕ್ರಿಕೆಟ್ ಪ್ರೇಮಿಗಳಂತೂ ತಪ್ಪದೆ ನೋಡಬೇಕಾದ ಸರಣಿ Sonyliv ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ನಿಜವಾದ ಕ್ರಿಕೆಟ್ ಎಂದರೆ ಟೆಸ್ಟ್ ಕ್ರಿಕೆಟ್, ಮಿಕ್ಕದ್ದೆಲ್ಲಾ ಬರೀ ಆರ್ಭಟ ಎನ್ನುವ ಮಾತನ್ನು ನಾವು ಪದೇಪದೇ ಕೇಳುತ್ತಿರುತ್ತೇವೆ. ಆದರೆ 5 ದಿನಗಳ ಕಾಲ ಒಂದು ಆಟದ ಹಿಂದೆ ಹೆಜ್ಜೆ ಹಾಕುತ್ತಾ, ಎದೆಬಡಿತವನ್ನು ಆಟದ ಲಯಕ್ಕೆ ಹೊಂದಿಸಿಕೊಳ್ಳುವ ಬಿಡುವು ಈಗ ಯಾರಿಗಿದೆ? ಮೊದಲು ಏಕದಿನ ಕ್ರಿಕೆಟ್ ಬಂತು, ನಂತರ ಐಪಿಎಲ್ ಬಂದ ಮೇಲಂತೂ 20:20ಯದೇ ಸಾಮ್ರಾಜ್ಯ. ಆದರೂ ಯಾಕೆ ಕೆಲವರು, ಅದರಲ್ಲೂ ಆಟ ಬಲ್ಲವರು ಕ್ಲಾಸ್ ಎಂದರೆ ಟೆಸ್ಟ್ ಕ್ರಿಕೆಟ್ ಎನ್ನುತ್ತಾರೆ? ಇದು ಮಿಲೆನಿಯಲ್‌ಗಳನ್ನು ಕಂಡರೆ ನಮಗೆಲ್ಲಾ ಇರುವ ಸಣ್ಣ ಸಿಟ್ಟೆ?! 5 ದಿನಗಳ ಕಾಲ ಕಾದು, ನದಿ ದಡ ಆಡಿ ನಾವು ತಲುಪುತ್ತಿದ್ದ ದಡವನ್ನು ಇವರು ದಿನಕ್ಕೆರಡು ಸಲ ತಲುಪಿ ಬಿಡುತ್ತಾರೆ ಎನ್ನುವ ಅಸಹನೆಯೇ? ಗೊತ್ತಿಲ್ಲ.

ಮಾತನಾಡುವುದಕ್ಕೂ ಮೊದಲು ಮೆಸೇಜ್ ಟೈಪಿಸುವ, ಬೆರಳುಗಳನ್ನು ಮಿಂಚಿನ ವೇಗದಲ್ಲಿ ಓಡಿಸಿ, ಇಲ್ಲೇ ಟಿಕೆಟ್, ಈಗಲೆ ಡ್ರಾ, ತಗೋ ಬಹುಮಾನ ಎನ್ನುವವರೆದುರಿಗೆ ಪ್ರೇಮಪತ್ರಗಳನ್ನು ಪಡೆಯುವ, ಓದುವ, ಉತ್ತರಿಸುವ ಸೊಗಸನ್ನು ವಿವರಿಸಿದರೆ ಅದು ಟೆಸ್ಟ್ ಕ್ರಿಕೆಟ್! ಏಕದಿನ ಪಂದ್ಯ ಮತ್ತು ಅದಕ್ಕಿಂತ ಹೆಚ್ಚಾಗಿ 20:20 ಆಟದಲ್ಲಿ ಧಾಂಡಿಗರದ್ದೇ ರಾಜ್ಯ. ಎಷ್ಟು ಬಾಲಿಗೆ ಎಷ್ಟು ರನ್ನು ಅದೊಂದೇ ಲೆಕ್ಕಾಚಾರ. ಆದರೆ ಟೆಸ್ಟ್ ಕ್ರಿಕೆಟ್ ಹಾಗಲ್ಲ. ಆಕ್ರಮಣ ಎಷ್ಟು ಮುಖ್ಯವೋ ತಾಳಿಕೆಯೂ ಅಷ್ಟೇ ಮುಖ್ಯ. ಎದುರಿನವರಿಗಿಂತ ಹೆಚ್ಚು ರನ್ ಮಾಡುವುದು ಎಷ್ಟು ಮುಖ್ಯವೋ, ಅವರ ಎಲ್ಲಾ ವಿಕೆಟ್‌ಗಳನ್ನೂ ಕಬಳಿಸುವುದೂ ಅಷ್ಟೇ ಮುಖ್ಯ. ಒಮ್ಮೊಮ್ಮೆ ಓಡಿ ರನ್ ಮಾಡಿದವರು ಸಿಂಹವಾದರೆ, ಕೆಲವೊಮ್ಮೆ ನಿಂತು ವಿಕೆಟ್ ಕಾದವರು ಸಿಂಹ. ಬೌಲರ್‌ಗಳೂ ಇಲ್ಲಿ ಧಾಂಡಿಗರಷ್ಟೇ ಮುಖ್ಯ. ಟೆಸ್ಟ್ ಕ್ರಿಕೆಟ್‌ನ ಸೊಗಸು ಮತ್ತು ಏನಾದರೂ ಸೋಲಲಾರೆ ಎನ್ನುವ ಕೆಚ್ಚಿನ ಕಥೆಯೇ Down UnderDogs.

ಭೂಗೋಳದ ಕೆಳಭಾಗದಲ್ಲಿರುವ ಆಸ್ಟ್ರೇಲಿಯಾವನ್ನು Down under ದೇಶ ಎಂದು ಸಹ ಕರೆಯಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಆಟಗಳಿಗೆ ಸಿಗುವ ಪ್ರೋತ್ಸಾಹ ಮತ್ತು ತರಬೇತಿ ಅಪರೂಪವಾದದ್ದು. ಅದರಲ್ಲೂ ಕ್ರಿಕೆಟ್ ಎಂದರೆ ಅಲ್ಲಿ ಇನ್ನೂ ಹೆಚ್ಚು ಹುಮ್ಮಸ್ಸು. ಕ್ರಿಕೆಟ್‌ನಲ್ಲಿ ಅವರ ಪಾರಮ್ಯಕ್ಕೆ ದಶಕಗಳ ಇತಿಹಾಸ. ಈ ಎಲ್ಲಾ ಒಳಿತುಗಳ ನಡುವೆ ಅವರಲ್ಲಿರುವ ಒಂದು ಕೆಡುಕಿನ ಗುಣ ಅವರ sledging ಅಥವಾ ನಿಂದನೆ. ಮೈದಾನದಲ್ಲಿ ಎದುರಾಳಿ ಆಟಗಾರರ ಮನಸ್ಥೈರ್ಯಕ್ಕೆ ಪೆಟ್ಟುಕೊಡುವುದು ಸಹ ಆಟದ ಒಂದು ನಡೆಯೇ ಆದರೂ ಆಸ್ಟ್ರೇಲಿಯಾದಲ್ಲಿ ಅದು ವಿಪರೀತಕ್ಕೇರುತ್ತದೆ. ಕ್ರಿಕೆಟ್‌ನಲ್ಲಿ ತಾವು ಇಂದಿಗೂ ಅನಭಿಷಿಕ್ತ ಸಾರ್ವಭೌಮರು ಎನ್ನುವುದು ಅವರ ನಂಬಿಕೆಯಲ್ಲ, ನಿಲುವು.

ಕಳೆದ ವರ್ಷ ಆಸ್ಟ್ರೇಲಿಯಾಕ್ಕೆ ಹೋದ ಭಾರತದ ಕ್ರಿಕೆಟ್ ತಂಡ ತಮ್ಮೆಲ್ಲಾ ತೊಂದರೆ ತಾಪತ್ರಯಗಳ ನಡುವೆಯೇ ಸುಮಾರು 31 ವರ್ಷಗಳ ಕಾಲ ಬ್ರಿಸ್ಬೇನ್‌ನ ಗಾಬಾದಲ್ಲಿ ಸೋಲನ್ನು ಕಾಣದ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ರುಚಿ ತೋರಿಸಿ, ಸರಣಿಯನ್ನು ಕೈವಶ ಮಾಡಿಕೊಂಡ ರೋಮಾಂಚಕ ಕಥೆಯನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ ನಾಲ್ಕು ಸಂಚಿಕೆಗಳ ಒಂದು ಸರಣಿಯನ್ನು ರೂಪಿಸಿದೆ. ಅದೇ ‘Down Underdogs – India’s Greatest Comeback’. ಈ ನಾಲ್ಕೂ ಸಂಚಿಕೆಗಳಿಗೆ ಕೊಟ್ಟಿರುವ ಹೆಸರುಗಳೂ ಸಹ ಅಷ್ಟೇ ಸೊಗಸಾಗಿವೆ.

  • THE ADELAIDE ABERRATION,
  • MELBOURNE MAGIC,
  • THE SYDNEY SIEGE &
  • BRISBANE BREACHED

ಪ್ರತಿ ಸಂಚಿಕೆಯೂ ಸುಮಾರು 50 – 60 ನಿಮಿಷಗಳದ್ದು. ಈ ಡಾಕ್ಯುಮೆಂಟರಿಯನ್ನು ಮಾಹಿತಿಪೂರ್ಣ ಮತ್ತು ಆಸಕ್ತಿದಾಯಕವಾಗಿರಿಸುವುದು ಆಟದ ನಡುನಡುವೆಯೇ ಅದನ್ನು ಕುರಿತು ಮಾತನಾಡುವ ಹರ್ಷ ಭೋಗ್ಲೆ, ಸುನಿಲ್ ಗವಾಸ್ಕರ್, ರಾಜದೀಪ್ ಸರ್‌ದೇಸಾಯಿ, ಹನುಮ ವಿಹಾರಿ, ಸಂಜಯ್ ಮಂಜ್ರೇಕರ್, ನಿಕ್ ನೈಟ್, ಇಸಾ ಗುಹಾ, ಅಯಾಜ್ ಮೆಮೋನ್, ಜಾಯ್ ಭಟ್ಟಾಚಾರ್ಯ, ಮೈಕೇಲ್ ಕ್ಲಾರ್ಕ್, ಗೌರವ್ ಕಪೂರ್, ಸಿರಾಜ್ ಮುಂತಾದವರ ವಿವರಣೆಗಳು.

ಒಂದು ತಂಡಕ್ಕೆ ಅಬ್ಬಬ್ಬಾ ಎಂದರೆ ಎಷ್ಟು ಸವಾಲುಗಳು ಎದುರಾಗಬಹುದು? ವಿದೇಶದ ಪಿಚ್‌ನಲ್ಲಿ ಆಡುವುದು ಭಾರತದ ಮಟ್ಟಿಗೆ ಸದಾ ಒಂದು ಸವಾಲು. ಅದಕ್ಕೆ ನಾಯಕ ವಿರಾಟ್ ಕೊಹ್ಲಿಯ ಅನುಪಸ್ಥಿತಿ ಸೇರಿಸಿ, ಆಸ್ಟ್ರೇಲಿಯನ್ ಬೌಲರ್‌ಗಳ ನಿಷ್ಕಾರುಣ್ಯ ಮತ್ತು ನಿಷ್ಕಾರಣ ಬೌನ್ಸರ್‌ಗಳನ್ನು ಕೂಡಿಸಿ, ಆ ಆಟಗಾರರ ಸ್ಲೆಡ್ಜಿಂಗ್ ಬೆರೆಸಿ, ಅಲ್ಲಿನ ವೀಕ್ಷಕರೂ ಮಾಡುವ ಜನಾಂಗ ನಿಂದನೆ ಕಲೆಸಿ, ಅಲ್ಲಿನ ಮಾಧ್ಯಮ ಕೂಡ ಅದಕ್ಕೆ ಸೇರಿಕೊಂಡು ಆಡುವ ಆಟವನ್ನು ಸಿಂಪಡಿಸಿ, ಇದೆಲ್ಲದರ ಜೊತೆಗೆ ದುರದೃಷ್ಟವೇ ಪ್ಯಾಡ್ ಕಟ್ಟಿ, ಹೆಲ್ಮೆಟ್ ಧರಿಸಿ ನಿಂತಂತಹ ಗಾಯಾಳು ಆಟಗಾರರ ಅನುಪಸ್ಥಿತಿಯನ್ನು ಸೇರಿಸಿದರೆ ಇದು ಆಗಿನ ಭಾರತ ಕ್ರಿಕೆಟ್ ತಂಡ.

920408404 – ಇದು ಯಾರ ಟೆಲಿಫೋನ್ ಸಂಖ್ಯೆಯೂ ಅಲ್ಲ. ಅಡಿಲೇಡ್‌ನಲ್ಲಿ ನಡೆದ ಮೊದಲ ಪಂದ್ಯದ ಎರಡನೆಯ ಇನ್ನಿಂಗ್ಸ್‌ನಲ್ಲಿ ಒಬ್ಬೊಬ್ಬ ಭಾರತದ ಆಟಗಾರ ಗಳಿಸಿದ ರನ್‌ಗಳ ಸಂಖ್ಯೆ! ಯಾರ ರನ್ ಮೊತ್ತವೂ ಎರಡಂಕೆಯನ್ನು ತಲುಪಿಯೇ ಇರುವುದಿಲ್ಲ. ಅದೊಂದು ದಾಖಲೆಯ ಸೋಲು. ಆಟ ಇಲ್ಲಿಂದ ಶುರು. ಇದು ಗವಾಸ್ಕರ್ ಟ್ರೋಫಿಗಾಗಿ ನಡೆದ ಹಣಾಹಣಿ. ನಾಲ್ಕು ಟೆಸ್ಟ್ ಮ್ಯಾಚ್‌ಗಳ ಸರಣಿ. ಮೊದಲ ಇನ್ನಿಂಗ್ಸ್ ಪರವಾಗಿಲ್ಲ. ಆದರೆ ಅಲ್ಲಿ ಒಂದು ಪೊರಪಾಟಾಗುತ್ತದೆ. ಕ್ರೀಸ್ ನಲ್ಲಿ ವಿರಾಟ್ ಮತ್ತು ಅಜಿಂಕ್ಯ ಇರುತ್ತಾರೆ. ಅಜಿಂಕ್ಯ ಒಳ್ಳೆಯ ಆಟಗಾರನಾಗಿದ್ದರೂ ಅದೃಷ್ಟ ಅವನೊಂದಿಗೆ ಆಟವಾಡುತ್ತಲೇ ಇರುತ್ತದೆ. ಬಹುಶಃ ಅದಕ್ಕಾಗಿಯೇ ಏನೋ ಸಾಧಾರಣವಾಗಿ ಅವನ ಮುಖದಲ್ಲಿ ನಗು ಬೇಗ ಕಾಣಿಸುವುದಿಲ್ಲ.

ಅಂದೂ ಸಹ ಅವನಿಗೆ ಅದೃಷ್ಟ ಕೈಕೊಟ್ಟಿರುತ್ತದೆ. ಅವನ ಕಾರಣಕ್ಕೆ ವಿರಾಟ್ ರನೌಟ್ ಆಗುತ್ತಾನೆ. ಕ್ಯಾಪ್ಟನ್‌ನನ್ನು ರನೌಟ್ ಮಾಡಿಸಿ ಮತ್ತೆ ಡ್ರೆಸಿಂಗ್ ರೂಂಗೆ ಹೋಗುವುದು ಸುಲಭದ ಮಾತಲ್ಲ. ಮೊದಲ ಇನ್ನಿಂಗ್ಸ್ ಹೇಗೋ ಮುಗಿಯುತ್ತದೆ. ಆದರೆ ಎರಡನೆಯ ಇನ್ನಿಂಗ್ಸ್‌ನಲ್ಲಿ ಭಾರತದ ಆಟ ತೀರಾ ಅಧ್ವಾನ. ಹೆಚ್ಚುವರಿ ರನ್‌ಗಳನ್ನು ಸೇರಿ, ಇಡೀ ತಂಡದ ಮೊತ್ತ 36! ಇದು ಯಾವ ತಂಡವೂ ಬಯಸದ ದಾಖಲೆ. ಆಟ ಬೆಳಗ್ಗೆ ಶುರುವಾಗುತ್ತದೆ, ಸುಮಾರು 60 – 70 ನಿಮಿಷಗಳಲ್ಲಿ ಇಡೀ ತಂಡ ಆಲೌಟ್. ಮೊಹಮದ್ ಶಮಿ ಗಾಯಾಳು. ವಿರಾಟ್ ಭಾರತಕ್ಕೆ ಹಿಂದಿರುಗುತ್ತಿರುತ್ತಾನೆ. ಇಂತಹ ಸಮಯದಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಅಜಿಂಕ್ಯ ರಹಾನೆಯ ಹೆಗಲಿಗೆ ಬೀಳುತ್ತದೆ.

ಎರಡನೆಯ ಟೆಸ್ಟ್, ಸ್ಥಳ : ಮೆಲ್ಬೋರ್ನ್. ಅಜಿಂಕ್ಯ ಕ್ಯಾಪ್ಟನ್. ನ್ಯೂಜಿಲ್ಯಾಂಡ್ ಪ್ರವಾಸದ ಆನಂತರ ಇದ್ದಕ್ಕಿದ್ದಂತೆ ಭಾರತ ತಂಡದಿಂದ ಡ್ರಾಪ್ ಮಾಡಲ್ಪಟ್ಟಿದ್ದ ಅವನಿಗೇ ತನ್ನದೇ ಆದ ಅನುಮಾನಗಳಿವೆ. ರಾಜದೀಪ್ ಸರ್‌ದೇಸಾಯಿ ಅಜಿಂಕ್ಯ ರಹಾನೆಯನ್ನು ಕ್ರಿಕೆಟ್‌ನ ಅಮೋಲ್ ಪಾಲೇಕರ್ ಎಂದು ಕರೆಯುತ್ತಾರೆ. ನೋಡಲು ಮೃದವಾಗಿ ಕಂಡರೂ ವಜ್ರದಂತೆ ನಿಲ್ಲಬಲ್ಲವನು ಎನ್ನುವುದು ಅವರ ಮಾತಿನ ಅರ್ಥ. ಅವಮಾನಕರ ಮೊತ್ತ ಪೇರಿಸಿದ ಆಟಗಾರರಿಗೆ ಏನು ಹೇಳಿದಿರಿ ಎಂದು ಕೋಚ್ ರವಿಶಾಸ್ತ್ರಿಯನ್ನು ಕೇಳಿದರೆ, ತಣ್ಣನೆಯ ದನಿಯಲ್ಲಿ ಆತ ಹೇಳುವುದು, ‘ಏನೂ ಇಲ್ಲ’.

ಆ ಪರಿಸ್ಥಿತಿಯಲ್ಲಿ ಒತ್ತಡ ಹಾಕಿದರೆ ಕುಸಿದೇ ಹೋಗುತ್ತಾರೆ ಎನ್ನುವುದು ಆತನಿಗೆ ಗೊತ್ತಿರುತ್ತದೆ. ಆಸ್ಟ್ರೇಲಿಯನ್ ಮಾಧ್ಯಮ ಭಾರತ ತಂಡದ ಶ್ರದ್ಧಾಂಜಲಿ ಬರೆಯುತ್ತಿರುತ್ತದೆ. ಆಸ್ಟ್ರೇಲಿಯಾದ ಹಿರಿಯ ಆಟಗಾರರು ಇದೊಂದು 4 – 0ಯ ಸ್ವೀಪ್ ಆಗಲಿದೆ ಎಂದು ಟ್ವೀಟ್ ಮಾಡುತ್ತಿರುತ್ತಾರೆ. ಓಪನಿಂಗ್‌ಗೆ ಬರುವ ಶುಭಮಾನ್ ಗಿಲ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದು ಮೊದಲ ಪಂದ್ಯ. 116 ರನ್‌ಗಳಾಗಿರುವಾಗ ಅಂಜಿಕ್ಯ ರಹಾನೆ ಮೈದಾನಕ್ಕೆ ಬರುತ್ತಾನೆ, ಥೇಟ್ ನಮ್ಮ ರಾಹುಲ್ ಡ್ರಾವಿಡ್‌ರಂತೆ ಗೋಡೆಯಾಗಿ ನಿಂತುಬಿಡುತ್ತಾನೆ. ಬೌಲರ್‌ಗಳ ಬೌನ್ಸರ್ ದಾಳಿಯ ನಡುವೆಯೇ 50 ರನ್‌ಗಳಾಗುತ್ತವೆ.

ಮೊದಲ ಸಲ ಮುಖದ ಮೇಲೆ ಒಂದಿಷ್ಟು ನಗು ಕಾಣುತ್ತದೆ. ‘ಆತ ಫಾರಂನಲ್ಲಿರಲಿಲ್ಲ, ಅಂದು ಆಡುತ್ತಾಡುತ್ತಲೇ ಫಾರಂ ಕಂಡುಕೊಂಡ’ ಎಂದು ಸರ್‌ದೇಸಾಯಿ ಹೇಳುತ್ತಾರೆ. ಶತಕ ಆಗಿಯೇ ಬಿಡುತ್ತದೆ. ತನ್ನೊಡನಿದ್ದ ಬ್ಯಾಟ್ಸ್ ಮನ್‌ನನ್ನು ಅಪ್ಪಿಕೊಂಡ ಅಜಿಂಕ್ಯ ಅಬ್ಬರಿಸುವುದಿಲ, ಕೂಗಾಡುವುದಿಲ್ಲ, ಆದರೆ ಅವನ ಕಣ್ಣುಗಳಲ್ಲಿದ್ದ ನೂರು ಭಾವಗಳು ಮಾತಾಗುವ ಹಾಗಿದ್ದಿದ್ದರೆ… ಕ್ಯಾಮೆರಾ ಆ ಕಣ್ಣುಗಳ ಮೇಲೆಯೇ ಫೋಕಸ್ ಆಗುತ್ತದೆ. ತಮಾಷೆ ಎಂದರೆ 50 ರನ್ ಪಡೆದುಬಿಡಬೇಕು ಎನ್ನುವ ಜಡೇಜ ಅವಸರದ ಓಟಕ್ಕೆ ಈ ಸಲ ಅಜಿಂಕ್ಯ ರನೌಟ್ ಆಗುತ್ತಾರೆ! ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಮೊತ್ತ 326, 131 ರನ್‌ಗಳ ಮುನ್ನಡೆ. ಉಮೇಶ್ ಯಾದವ್ ಗಾಯಾಳು.

ಇಲ್ಲಿ ಕ್ಯಾಪ್ಟನ್ ಅಜಿಂಕ್ಯ ತಂಡದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾನೆ. ಒಂದು ರೀತಿಯಲ್ಲಿ ಆಟ 10 ಮಂದಿ ಕ್ಯಾಪ್ಟನ್‌ಗಳು ಆ ಆಟವನ್ನು ಮುನ್ನಡೆಸಿದಂತೆ ಇರುತ್ತದೆ. ಅಶ್ವಿನ್, ಬುಮ್ರಾ ಬೌಲಿಂಗ್ ಹೊಣೆಯನ್ನು ಹೊತ್ತುಕೊಳ್ಳುತ್ತಾರೆ. ಆಸ್ಟ್ರೇಲಿಯಾ ಪರವಾಗಿ ಬ್ಯಾಟ್ ಮಾಡಲು ಬರುವುದು ಅದ್ಭುತ ಆಟಗಾರ ಸ್ಟೀವ್ ಸ್ಮಿತ್. ಅತನೊಂದು ದಂತಕಥೆಯೇ ಸೈ. ಆದರೆ ಜಸ್ಪೀತ್ ಬುಮ್ರಾ ಧಾಳಿಗೆ ಅವನ ಎಡಗಡೆಯ ಸ್ಟಂಪ್ ಎಗರಿರುತ್ತದೆ! ಬುಮ್ರಾಗೆ ನಂಬಲೂ ಸಾಧ್ಯವಾಗುವುದಿಲ್ಲ, ಪದೇಪದೇ ನೋಡುತ್ತಾನೆ. ಆನಂತರ ಬುಮ್ರಾ ಮುಖದ ಮೇಲೆ ಅದೇ 1000 ವಾಟ್ ಗಳ ನಗು! ಎರಡನೆಯ ಇನ್ನಿಂಗ್ಸ್ ನಲ್ಲಿಆಸ್ಟ್ರೇಲಿಯಾ 200ಕ್ಕೆ ಆಲೌಟ್. ಈಗ ಗೆಲ್ಲಲು ಭಾರತಕ್ಕೆ ಬೇಕಾಗಿರುವುದು 70 ರನ್ ಮಾತ್ರ! ಯಾರೂ ಊಹಿಸದ ರೀತಿಯಲ್ಲಿ ಭಾರತ 8 ವಿಕೆಟ್‌ಗಳಿಂದ ಆಟ ಗೆದ್ದುಬಿಡುತ್ತದೆ.

ಮೂರನೆಯ ಮ್ಯಾಚ್ ಸಿಡ್ನಿಯಲ್ಲಿ. ಅವರಿದ್ದ ಬಯೋ ಬಬಲ್ ದಾಟಿ ತಂಡದ ರೋಹಿತ್ ಮತ್ತಿತರರು ಊಟಕ್ಕೆ ಹೋಗಿದ್ದರು ಎಂದು ಗಲಾಟೆ ಆಗುತ್ತದೆ. ಅವರನ್ನು ಆಟಕ್ಕೆ ಸೇರಿಸಿಕೊಳ್ಳಬೇಕೋ, ಬೇಡವೋ ಎನ್ನುವ ಚರ್ಚೆಗಳು ನಡೆಯುತ್ತವೆ. ಸಿರಾಜ್‌ನ ತಂದೆ ಕಾಲವಾಗಿರುತ್ತಾರೆ. ಅದೇ ಕೋವಿಡ್ ನಿರ್ಭಂದನೆಗಳ ಕಾರಣದಿಂದ ಆತ ತಂದೆಯ ಅಂತಿಮ ದರ್ಶನಕ್ಕೂ ಬರಲಾಗುವುದಿಲ್ಲ. ಇವುಗಳ ನಡುವೆ ಮ್ಯಾಚ್ ಶುರುವಾಗುತ್ತದೆ. ಭಾರತದ ಆಟಗಾರರೆಲ್ಲಾ ಸಾಲಾಗಿ ನಿಂತಿರುತ್ತಾರೆ. ಭಾರತದ ರಾಷ್ಟ್ರಗೀತೆ ಹಾಡಲಾಗುತ್ತಿರುತ್ತದೆ. ಕ್ರಿಕೆಟ್ ಆಡುವ ಯಾವುದೇ ಆಟಗಾರನ ಜೀವನದಲ್ಲಿ ಮರೆಯಲಾಗದ ಘಟನೆ ಆತನಿಗೆ ಭಾರತ ತಂಡದ ಜರ್ಸಿ, ಕ್ಯಾಪ್ ಸಿಗುವುದು. ಅವರ ಮಟ್ಟಿಗೆ ಅದು ದೇಶವನ್ನು ಧರಿಸುವ ಸಂಭ್ರಮ.

ಆದರೆ ಇಲ್ಲಿ ರಾಷ್ಟ್ರಗೀತೆ ಮುಗಿಯುವಷ್ಟರಲ್ಲಿ ಅವನ ನಿಯಂತ್ರಣಕ್ಕೂ ಮೀರಿ ಸಿರಾಜ್ ಕಣ್ಣುಗಳಿಂದ ಕಂಬನಿ ಹರಿಯುತ್ತದೆ. ಪಕ್ಕದಲ್ಲಿದ್ದ ಬುಮ್ರಾ ಏನಾಯಿತು ಎಂದು ಅಚ್ಚರಿಯಲ್ಲಿ ಕೇಳುತ್ತಾನೆ. ಈ ಡಾಕ್ಯುಮೆಂಟರಿಯಲ್ಲಿ ಸಂದರ್ಶಕರು ಸಹ ಸಿರಾಜ್‌ಗೆ ಅದೇ ಪ್ರಶ್ನೆ ಕೇಳುತ್ತಾರೆ. ‘ಅಪ್ಪನ ನೆನಪಾಯಿತು’ ಎಂದು ಸಿರಾಜ್ ಹೇಳುತ್ತಾನೆ. ಆತನ ತಂದೆ ಆಟೋ ರಿಕ್ಷಾ ಓಡಿಸುತ್ತಿರುತ್ತಾರೆ. ಮೊದಲ ದಿನಗಳಲ್ಲಿ ಅಷ್ಟೇನೂ ಯಶಸ್ಸು ಕಾಣದ ಸಿರಾಜ್‌ನನ್ನು ಅತಿ ಕೆಟ್ಟದಾಗಿ ಟ್ರೋಲ್ ಮಾಡಲಾಗಿರುತ್ತದೆ. ಹೋಗು ಅಪ್ಪನ ಜೊತೆ ಹೋಗಿ ರಿಕ್ಷಾ ತಳ್ಳು ಎಂದು ಛೇಡಿಸಲಾಗಿರುತ್ತದೆ. ಆ ಕ್ಷಣಕ್ಕೆ ಅವನ ಮನದಲ್ಲೇನಿತ್ತೋ ಬಲ್ಲವರು ಯಾರು?

ಆಸ್ಟ್ರೇಲಿಯಾ ಬ್ಯಾಟಿಂಗ್. ಮೊದಲ ಇನ್ನಿಂಗ್ಸ್ 338! ಭಾರತ 244ಕ್ಕೆ ಆಲೌಟ್. ಎರಡನೆಯ ಅನ್ನಿಂಗ್ಸ್. ಆಟದ ನಡುವೆ ಸಿರಾಜ್ ಓಡಿ ಬರುತ್ತಾನೆ. ಮೊದಲ ಇನ್ನಿಂಗ್ಸ್‌ನಲ್ಲಿ ಪ್ರೇಕ್ಷಕರು ಅವನನ್ನು ಹೀಯಾಳಿಸಿರುತ್ತಾರೆ. ‘ಕೋತಿ ತರಹ ಕಾಣುತ್ತೀಯಾ, ನಿನ್ನ ಮುಖ ನೋಡಬೇಕೆ’ ಎಂದು ಹಂಗಿಸಿರುತ್ತಾರೆ. ಹೊಸ ಹುಡುಗ, ಏನೂ ತೋಚದೆ, ಆಟದ ನಂತರ ಅಜಿಂಕ್ಯಾ ಬಳಿ ಹೇಳಿಕೊಂಡಿರುತ್ತಾರೆ. ಸುಮ್ಮನಿರಬೇಡ, ಅಂಪೈರ್‌ಗೆ ಹೇಳು ಎಂದ ಆತನ ಮಾತಿನಂತೆ ಈಗ ಬಂದು ಹೇಳುತ್ತಾನೆ. ಅಂಪೈರ್ ತಣ್ಣನೆಯ ಧ್ವನಿಯಲ್ಲಿ, ‘ಬೇಕಾದರೆ ನೀವು ಆಟ ಬಿಟ್ಟು ಹೋಗಬಹುದು’ ಎನ್ನುತ್ತಾನೆ.

ಆಗ ಗಟ್ಟಿಯಾಗಿ ನಿಲ್ಲುವ ಅಜಿಂಕ್ಯಾ, ‘ನಾವೇಕೆ ಹೋಗಬೇಕು, ತಪ್ಪು ಮಾಡಿರುವವರು ಅವರು, ಅವರನ್ನು ಕಳಿಸಿ’ ಎಂದು ಪಟ್ಟು ಹಿಡಿಯುತ್ತಾನೆ. ಇದು ಬದಲಾದ ಭಾರತ ಕ್ರಿಕೆಟ್ ತಂಡದ ಆತ್ಮವಿಶ್ವಾಸ. ಎರಡನೆಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಆಟ ಮುಗಿಯುವಾಗ ಭಾರತ ಗಳಿಸಬೇಕಾದ ಮೊತ್ತ 407! ರೋಹಿತ್ ಶರ್ಮ 50 ಗಳಿಸಿ ಔಟ್ ಆಗುತ್ತಾನೆ. 102 ರನ್‌ಗಳಿಗೆ ಮೂರು ವಿಕೆಟ್ ಆಗಿರುತ್ತದೆ. ಆಗ ರಿಶಬ್ ಪಂತ್ ಮತ್ತು ಚೇತೇಶ್ವರ ಪೂಜಾರ ಜೊತೆಯಾಟಕ್ಕೆ ನಿಲ್ಲುತ್ತಾರೆ. ಪಂತ್ ಒಂದಿಷ್ಟೂ ಹೆದರದೆ ಬ್ಯಾಟ್ ಬೀಸುತ್ತಾ ಹೋಗುತ್ತಾನೆ. ಪೂಜಾರ ಕೂಡ ಜೊತೆಯಾಗುತ್ತಾನೆ.

ಪೂಜಾರ ಲೆಕ್ಕ ಇಟ್ಟು ಹೆಜ್ಜೆಯಿಡುವ ಶಿಸ್ತಿನ ಸಿಪಾಯಿಯಾದರೆ, ಪಂತ್ ಚಂಡಮಾರುತ! ಆದರೆ 97 ರನ್‌ಗಳಾಗಿದ್ದಾಗ ಪಂತ್ ಔಟ್ ಆಗಿ ಶತಕ ವಂಚಿತನಾಗುತ್ತಾನೆ. 77 ರನ್ ಮಾಡಿ ಪೂಜಾರ ನಿರ್ಗಮಿಸುತ್ತಾನೆ. ಕ್ರೀಸ್‌ನಲ್ಲಿರುವುದು ಹನುಮ ವಿಹಾರಿ ಮತ್ತು ಅಶ್ವಿನ್. ಅವರನ್ನು ಕಂಗೆಡಿಸಬೇಕು ಎಂದೇ ಬಂದು ಬೀಳುವ ಬೌನ್ಸರ್‌ಗಳು. ಜೊತೆಗೆ Paine ನಿರಂತರವಾಗಿ ಮಾಡುವ ನಿಂದನೆ. ಅಶ್ವಿನ್ ಕದಲುವುದಿಲ್ಲ. ಪೇನ್ ಮಾಡುವ ಕುಚೇಷ್ಟೆಗೆ, ‘ಗಾಬಾಗೆ ಬಾ ನೋಡಿಕೊಳ್ಳುತ್ತೇವೆ’ ಎಂದು ಉತ್ತರಿಸುತ್ತಾನೆ! ಗಟ್ಟಿಯಾಗಿ ನಿಂತ ಆಟಗಾರರ ಕಾರಣಕ್ಕೆ ಪಂದ್ಯ ಡ್ರಾ ಆಗುತ್ತದೆ. ಇದು ಯಾರೂ ಊಹಿಸದ ಫಲಿತಾಂಶ.

ನಾಲ್ಕನೆಯ ಟೆಸ್ಟ್, ಬ್ರಿಸ್ಬೇನ್‌ನ ಗಾಬಾದಲ್ಲಿ. ಎರಡೂ ತಂಡಗಳೂ ಒಂದೊಂದು ಪಂದ್ಯ ಗೆದ್ದಿವೆ, ಒಂದು ಪಂದ್ಯ ಡ್ರಾ ಆಗಿದೆ. ಈ ಪಂದ್ಯ ಯಾವುದಾದರೂ ತಂಡ ಗೆದ್ದರೆ, ಟ್ರೋಫಿ ಅವರಿಗೆ, ಡ್ರಾ ಆದರೆ, ಇಡೀ ಸರಣಿ ಡ್ರಾ. ಭಾರತಕ್ಕೆ ಇದು ಏರಿನ ದಾರಿಯ ಓಟ. 31 ವರ್ಷಗಳಿಂದ ಆಸ್ಟ್ರೇಲಿಯಾ ಇಲ್ಲಿ ಒಂದೂ ಮ್ಯಾಚ್ ಸೋತಿಲ್ಲ. ಭಾರತ ತಂಡದಲ್ಲಿ ಈಗ ಅಶ್ವಿನ್, ಜಡೇಜಾ ಮತ್ತು ಬುಮ್ರಾ ಸಹಾ ಗಾಯಾಳುಗಳಾಗಿದ್ದಾರೆ. ‘ಹೆಚ್ಚು ಕಮ್ಮಿ ಆಗಿ ಜನ ಕಮ್ಮಿ ಬಿದ್ದರೆ, ರವಿಶಾಸ್ತ್ರಿಯೇ ಪ್ಯಾಡ್ ಕಟ್ಟಿಕೊಂಡು ಆಟಕ್ಕಿಳಿಯಬೇಕಾದೀತು’ ಎಂದು ತಮಾಷೆ ಸಹ ಮಾಡಲಾಗುತ್ತದೆ.

ಆದರೆ ಭಾರತ ತಂಡದ ಹುಮ್ಮಸ್ಸು ಹೇಗಿರುತ್ತದೆ ಎಂದರೆ ಗಾಬಾದಲ್ಲಿ ಆಸ್ಟ್ರೇಲಿಯಾದ ದಾಖಲೆ ಮುರಿಯುವುದಷ್ಟೇ ಅಲ್ಲ, ತಮ್ಮ ದಾಖಲೆ ಬರೆಯುವ ಹುಮಸ್ಸು ಅವರಿಗೆ. ಹೊಸದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲ್ ಮಾಡುತ್ತಿದ್ದ ಸಿರಾಜ್ ಈಗ ತಂಡದ ಸೀನಿಯರ್ ಬೌಲರ್! ನೆಟ್ ಪ್ರಾಕ್ಟೀಸ್‌ಗಾಗಿ ಕರೆತಂದಿದ್ದ ನಟರಾಜ್‌ಗೆ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊಟ್ಟಮೊದಲ ಬಾರಿಗೆ ಬೌಲಿಂಗ್ ಅವಕಾಶ ಸಿಕ್ಕಿಬಿಡುತ್ತದೆ. ಆತ, ವಾಶಿಂಗ್ಟನ್ ಸುಂದರ್, ಶಾರ್ದುಲ್ ಠಾಕುರ್, ಶುಭಮನ್ ಗಿಲ್ ಎಲ್ಲರೂ ಹೊಸ ಹುಡುಗರು. ಇದು ಅವರಿಗೆ ಸಿಕ್ಕ ಸುವರ್ಣ ಅವಕಾಶ. ಇಡೀ ವಿಶ್ವ ಅವರನ್ನು ನೋಡುತ್ತಿದೆ. ಇದು ನಿರಾಕರಿಸಲಾಗದ ಸವಾಲೂ ಹೌದು, ಭುಜವೇರಿಸಿಕೊಳ್ಳಲಾಗದ ಒತ್ತಡವೂ ಹೌದು.

ಆದರೆ ಈ ಹುಡುಗರು ಅದನ್ನು ನಿಭಾಯಿಸಿದ ರೀತಿಗೆ ಶರಣೆನ್ನಬೇಕು. ಇವರಲ್ಲಿನ ಪ್ರತಿಯೊಬ್ಬರೂ ಅಭಿಮನ್ಯುವಿನಂತೆ ಹೋರಾಡಿದ್ದಷ್ಟೇ ಅಲ್ಲ, ಪದ್ಮವ್ಯೂಹವನ್ನು ಧೂಳಿಪಟ ಮಾಡಿಬಿಡುತ್ತಾರೆ. ವಾಶಿಂಗ್ಟನ್ ಸುಂದರ್ ತನ್ನ ಟೆಸ್ಟ್ ಜೀವನದ ಮೊತ್ತಮೊದಲ ವಿಕೆಟ್ ಆಗಿ ಗೆಲ್ಲುವುದು ಸ್ಟೀವ್ ಸ್ಮಿತ್‌ನ ವಿಕೆಟ್! ಆ ಹುಡುಗನ ಮುಖದ ಸಂತಸ ನೋಡಬೇಕು. ಆಸ್ಟ್ರೇಲಿಯ 369 ರನ್ ಮಾಡಿ ಮೊದಲ ಇನ್ನಿಂಗ್ಸ್ ಮುಗಿಸುತ್ತದೆ. ಭಾರತದ ಧಾಂಡಿಗರಿಗೆ, ಅದರಲ್ಲೂ ಹೊಸಬರಾದ ಸುಂದರ್ ಮತ್ತು ಶಾರ್ದುಲ್‌ಗೆ ಬಾಲ್ ತಿರುಗಿಸಿ ಹಿಗ್ಗಾಮುಗ್ಗಾ ಭಾರಿಸಲಾಗುತ್ತದೆ. ಆದರೆ ಅಲ್ಲಾಡದೆ ನಿಂತ ಈ ಇಬ್ಬರು ಹುಡುಗರೂ 50, 50 ರನ್ ಹೊಡೆಯುತ್ತಾರೆ. ಇನ್ನಿಂಗ್ಸ್ ಮುಗಿದಾಗ ಆಸ್ಟ್ರೇಲಿಯಾದ ಮುನ್ನಡೆ ಕೇವಲ 33 ರನ್ನುಗಳು. ಭಾರತದ ಬ್ಯಾಟ್ಸ್ ಮನ್ ಗಳು ಅಸಾಧ್ಯವನ್ನು ಸಾಧ್ಯ ಮಾಡಿರುತ್ತಾರೆ.

ನಾಲ್ಕನೆಯ ದಿನ, ಎರಡನೆಯ ಇನ್ನಿಂಗ್ಸ್. ಆಡದಿದ್ದರೂ ಅಶ್ವಿನ್ ಮತ್ತು ಬುಮ್ರಾ ಬೌಂಡರಿ ಲೈನ್ ಬಳಿಯೇ ನಿಂತು ಬಿಟ್ಟಿರುತ್ತಾರೆ. ಭಾರತದ ಆಟಗಾರರಿಗೆ ಅದೊಂದು ರೀತಿಯಲ್ಲಿ ‘ಅವರೆಲ್ಲರ ಎದುರಿಗೆ ನಾವು’ ಎಂದಾಗಿ ಬಿಟ್ಟಿರುತ್ತದೆ. ಅಂದಿನ ಆಟ ಅಪರೂಪದ್ದು. ಆ ಆಟದಲ್ಲಿ ಸಿರಾಜ್ 5 ವಿಕೆಟ್ ಪಡೆದಿರುತ್ತಾನೆ. ಚೆಂಡು ಹಿಡಿದ ಕೈ ಮೇಲೆತ್ತಿದ ಅವನಲ್ಲಿ ಆ ಎಲ್ಲಾ ಟ್ರೋಲ್‌ಗಳಿಗೂ ಉತ್ತರ ಕೊಟ್ಟ ಹೆಮ್ಮೆ. ಐದನೆಯ ದಿನ, ಭಾರತದ ಬ್ಯಾಟಿಂಗ್. 18 ರನ್‌ಗಳಾಗುವಾಗ ರೋಹಿತ್ ಔಟ್. ಆಗ ಶುಭಮಾನ್ ಗಿಲ್ ಬರುತ್ತಾನೆ. ಅವನ ಬ್ಯಾಟ್ ಮೇಲೆ ಒಂದೂ ಸ್ಟಿಕರ್ ಇರುವುದಿಲ್ಲ! ಅಂದರೆ ಅವನ ಹಿಂದೆ, ಅವನನ್ನು ನಂಬಿ ಯಾರೂ ಇರುವುದಿಲ್ಲ, ಯಾವುದೇ ಕಂಪನಿ ಅವನ ಮೇಲೆ ಹಣ ಹೂಡಿಲ್ಲ.

ಆದರೆ ಅಂದು ಅವನ ಬ್ಯಾಟ್ ಚೆಂಡಾಡಿ ಮಾಡಿದ ಸದ್ದು ಎಲ್ಲೆಡೆ ಅನುರಣಿಸುತ್ತದೆ. ಹುಡುಗ 50 ರನ್ ಮಾಡುತ್ತಾನೆ. ಪೂಜಾರಾಗೆ ಕೆಟ್ಟದಾಗಿ ಪೆಟ್ಟು ತಗಲುತ್ತದೆ, ಆದರೆ ಆತ ಅಲ್ಲಾಡುವುದಿಲ್ಲ. ಭಾರತದ ನೋಡುಗರು ಸದ್ಯ ಹೇಗಾದರೂ ಅವರು ವಿಕೆಟ್ ಕಾಪಾಡಿಕೊಂಡು ಡ್ರಾ ಮಾಡಿಕೊಳ್ಳಲಿ ಎಂದು ಹಾರೈಸುತ್ತಿದ್ದರೆ, ಬ್ಯಾಟಿಂಗ್‌ಗೆ ಬಂದ ಅಜಿಂಕ್ಯಾ ಗೆಲುವಿಗೆ ಪಣ ಕಟ್ಟುತ್ತಾನೆ! ಡಗೌಟ್‌ನಲ್ಲಿ ಕೂತಿದ್ದ ಆಟಗಾರರಿಗೆ ಹೃದಯ ಬಾಯಿಗೆ ಬಂದಿರುತ್ತದೆ. ಪೂಜಾರ ಔಟ್. ಆಗ ರಿಷಭ್ ಪಂತ್ ಮತ್ತು ವಾಶಿಂಗ್ಟನ್ ಸುಂದರ್ ಬರುತ್ತಾರೆ. ಅವರ ಜೊತೆಯಾಟ ಅನುಪಮ. ಗೆಲುವಿಗೆ 74 ರನ್ ಬೇಕು, ಪಂತ್ 50 ಭಾರಿಸುತ್ತಾನೆ, ವಾಷಿಂಗ್ಟನ್ ಸುಂದರ್ ಬೌಲರ್‌ನಷ್ಟೇ ಒಳ್ಳೆಯ ಬ್ಯಾಟ್ಸ್ ಮನ್ ಎಂದು ಎಲ್ಲರೂ ಕಣ್ಣರಳಿಸಿ ನೋಡುತ್ತಿರುತ್ತಾರೆ. ಗೆಲ್ಲಲು 6 ರನ್! ಭಾರತ ಆಟ ಗೆದ್ದೇಬಿಡುತ್ತದೆ!! ಸರಣಿ ಗೆದ್ದು ಬಿಡುತ್ತದೆ. ಗವಾಸ್ಕರ್ ಟ್ರೋಫಿ ಗೆದ್ದು ಬಿಡುತ್ತದೆ.

ನಾಲ್ಕು ಸಂಚಿಕೆಗಳ ಈ ಸರಣಿಯ ದೃಶ್ಯ, ಎಡಿಟಿಂಗ್ ಎರಡೂ ಆಟದ ರೋಮಾಂಚನಕ್ಕೆ ತಮ್ಮ ಕಾಣಿಕೆ ನೀಡುತ್ತವೆ. ಐಪಿಎಲ್ ಮೋಸದಾಟ ಎನ್ನುವ ಎಲ್ಲಾ ಆರೋಪಗಳ ನಡುವೆಯೂ ಇಂತಹ ಒಂದು ಸರಣಿ ನಾವು ಈ ಆಟದೆದುರು ಮೊಣಕಾಲೂರುವಂತೆ ಮಾಡುತ್ತದೆ. ತಾಂತ್ರಿಕ ತಿಳುವಳಿಕೆ ಇಲ್ಲದವರಿಗೂ ಅರ್ಥವಾಗುವಷ್ಟು ಸೊಗಸಾಗಿ ವಿವರಣೆ ಇದೆ. ಕ್ರಿಕೆಟ್ ಪ್ರೇಮಿಗಳಂತೂ ತಪ್ಪದೆ ನೋಡಬೇಕಾದ ಸರಣಿ ಇದು. ಇನ್ನು ಮೇಲೇಳಲೂ ಸಾಧ್ಯವಾಗದವರು ಮುಂದೆ ಹೆಜ್ಜೆಯಿಟ್ಟು, ಗೆಲ್ಲುವುದನ್ನು ನೋಡಲು ಯಾರಿಗೆ ಇಷ್ಟವಾಗುವುದಿಲ್ಲ?

LEAVE A REPLY

Connect with

Please enter your comment!
Please enter your name here