ಡಾ.ಪಿ.ಬಿ.ಶ್ರೀನಿವಾಸ್ ಅವರು ಭಾರತದ ಚಿತ್ರರಂಗದ ಹಿನ್ನೆಲೆ ಗಾಯನ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರು. ಕನ್ನಡ ಚಿತ್ರರಂಗದ ಜೊತೆಗೆ ಅತ್ಯಂತ ಆಪ್ತ ಸಂಬಂಧ ಹೊಂದಿದ್ದ ಶ್ರೀನಿವಾಸ್ ಅವರು ಎಲ್ಲ ಕನ್ನಡಿಗರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ನಿಂತವರು. ಅದು ಭಕ್ತಿ ಗೀತೆಯಿರಲಿ, ಪ್ರೇಮ ಗೀತೆಯಾಗಲಿ ಅಥವ ಶೋಕರಸದಿಂದ ಕೂಡಿದ ಹಾಡಾಗಿರಲಿ, ಎಲ್ಲ ಭಾವಗಳನ್ನೂ ಅತ್ಯದ್ಭುತವಾಗಿ ಹೊಮ್ಮಿಸುತ್ತಿದ್ದ ಇವರು ಹಾಡಿರುವ ಗೀತೆಗಳು, ಇಂದಿಗೂ ಎಂದೆಂದಿಗೂ ಅಮರ. ಇಂಥ ಮಹಾನ್ ಹಿನ್ನೆಲೆ ಗಾಯಕ ಪಿ.ಬಿ.ಶ್ರೀನಿವಾಸ್ ಜನ್ಮ ದಿನದ ಶುಭ ಸಂದರ್ಭದಲ್ಲಿ ಅವರ ಜೀವನ ಮತ್ತು ಗಾಯನದ ಬಗ್ಗೆ ‘ಮಾಧ್ಯಮ ಅನೇಕ’ ಪ್ರಸ್ತುತ ಪಡಿಸುತ್ತಿರುವ ಒಂದು ವಿಸ್ತೃತ ಚಿತ್ರಣ ಇಲ್ಲಿದೆ.

ಪಿ.ಬಿ.ಎಸ್ ಅಂದರೆ, ಪ್ರತಿವಾದಿ ಭಯಂಕರ ಶ್ರೀನಿವಾಸ್ ಅವರು ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಕಾಕಿನಾಡ ಬಳಿಯ ಗೊಲ್ಲಪ್ರೋಲು ಗ್ರಾಮದಲ್ಲಿ  1930 ನೇ ಇಸವಿ ಸೆಪ್ಟಂಬರ್ ತಿಂಗಳ 22 ರಂದು ಜನಿಸಿದರು. ‘ಪ್ರತಿವಾದಿ ಭಯಂಕರ’ ಅನ್ನುವುದು ಅವರ ಮನೆತನದ ಹೆಸರಾಗಿತ್ತು. ಶ್ರೀನಿವಾಸ್ ಅವರ ತಂದೆ ಫಣೀಂದ್ರ ಸ್ವಾಮಿ, ತಾಯಿ ಶೇಷಗಿರಿಯಮ್ಮ. ಫಣೀಂದ್ರ ಸ್ವಾಮಿ ಬ್ರಿಟಿಷ್ ಸರ್ಕಾರದಲ್ಲಿ ಅಧಿಕಾರಿಯಾಗಿದ್ದರು, ತಾಯಿ ಸಂಗೀತ ಬಲ್ಲವರಾಗಿದ್ದರು. ಶ್ರೀನಿವಾಸ್ ಕೂಡ ತನ್ನಂತೆ ಅಧಿಕಾರಿಯಾಗಬೇಕು ಅನ್ನುವುದು ಅವರ ತಂದೆಯವರ ಬಯಕೆ ಆಗಿತ್ತು. ಆದರೆ, ಶ್ರೀನಿವಾಸನ್ ಅವರನ್ನು ಸೆಳೆದಿದ್ದು ಸಂಗೀತ ಕ್ಷೇತ್ರವೇ ಹೊರತು ಸರ್ಕಾರಿ ನೌಕರಿಯಲ್ಲ.

ಬಾಲಕನಾಗಿದ್ದಾಗಿನಿಂದಲೂ ರೇಡಿಯೋ ಕೇಳುವ ಅಭ್ಯಾಸವಿದ್ದ ಶ್ರೀನಿವಾಸ್ ಅವರು ಅಮರ ಗಾಯಕ ಮೊಹಮದ್ ರಫಿ ಅವರ ಹಾಡುಗಳನ್ನು ಕೇಳಿ ಆನಂದಿಸುತ್ತಿದ್ದರು ಮತ್ತು ತಾವೂ ಕೂಡ ಹಾಡುವ ಅಭ್ಯಾಸ ಮಾಡುತ್ತಿದ್ದರು. ಶ್ರೀನಿವಾಸ್ ಅವರ ಹತ್ತಿರದ ಸಂಬಂಧಿಯಾಗಿದ್ದ ರಂಗಕರ್ಮಿ ಮತ್ತು ಗಾಯಕ ಕಿಡಂಬಿ ಕೃಷ್ಣಸ್ವಾಮಿ ಅವರು, ಕೆಲವು ನಾಟಕಗಳಲ್ಲಿ ಹಾಡಲು ಬಾಲಕ ಶ್ರೀನಿವಾಸ್ ಅವರಿಗೆ ಅವಕಾಶ ಮಾಡಿಕೊಟ್ಟಿದ್ದರು. ಹೀಗಾಗಿ ಹಾಡುವ ಆಸೆಯೊಂದಿಗೆ ವಿದ್ಯಾಭ್ಯಾಸ ಮುಂದುವರಿಸಿದ ಶ್ರೀನಿವಾಸ್ ಬಿ.ಕಾಂ ಮುಗಿಸಿದ್ದರು, ಜೊತೆಗೆ ಹಿಂದಿ ಭಾಷೆಯಲ್ಲಿ ವಿಶಾರದ ಪರೀಕ್ಷೆಯನ್ನೂ ಪಾಸು ಮಾಡಿದ್ದರು.

ಆ ನಂತರದ ದಿನಗಳಲ್ಲಿ ಹಾಡಲು ತನಗೂ ಒಂದು ಅವಕಾಶ ಸಿಗಬಹುದೇ ಎಂದು ಕೇಳಲು 1952ರಲ್ಲಿ ಮದ್ರಾಸ್ ನಗರದ ಜೆಮಿನಿ ಸ್ಟುಡಿಯೋಗೆ ಹೋದರು. ಅಲ್ಲಿ ತಮ್ಮ ಕುಟುಂಬಕ್ಕೆ ಚೆನ್ನಾಗಿ ಪರಿಚಿತರಾಗಿದ್ದ ಪ್ರಸಿದ್ಧ ವೀಣಾವಾದಕ ಈಮನಿ ಶಂಕರ ಶಾಸ್ತ್ರಿ ಅವರನ್ನು ಭೇಟಿಯಾದರು. ಶಾಸ್ತ್ರಿಗಳು, ಶ್ರೀನಿವಾಸ್ ಅವರನ್ನು ಜೆಮಿನಿ ಸ್ಟುಡಿಯೋ ಮಾಲೀಕರಾದ ಎಸ್.ಎಸ್.ವಾಸನ್ ಬಳಿಗೆ ಕರೆದೊಯ್ದರು. ಅಲ್ಲಿ ದೀದಾರ್(1951) ಸಿನೆಮಾದಲ್ಲಿ ಮೊಹಮದ್ ರಫಿ ಅವರು ಹಾಡಿದ್ದ ಸೂಪರ್ ಹಿಟ್ ಹಾಡು ‘Huye Hum Jinke Liye Barbad’, ಹಾಡಿದ ಶ್ರೀನಿವಾಸ್ ತಮ್ಮ ಅದ್ಭುತ ಕಂಠದ ಪರಿಚಯ ಮಾಡಿಕೊಟ್ಟರು.

ಇದಾದ ಕೆಲವೇ ದಿನಗಳ ನಂತರ ಶ್ರೀನಿವಾಸ್ ಅವರಿಗೆ ಜೆಮಿನಿ ಸ್ಟುಡಿಯೋದಿಂದ ಕರೆ ಬಂತು. ಆರ್.ಕೆ.ನಾರಾಯಣ್ ಅವರ ಕಾದಂಬರಿ ಆಧರಿತ ‘ಮಿ.ಸಂಪತ್’ (1952)ಎಂಬ ಹಿಂದಿ ಸಿನೆಮಾದಲ್ಲಿ ಗೀತಾ ದತ್ ಮತ್ತು ಶಂಷದ್ ಬೇಗಮ್ ಅವರ ಜೊತೆ ಹಾಡುವ ಅವಕಾಶ ದೊರಕಿತು. ಗೀತಾ ದತ್ ಜೊತೆಗೆ ಹಾಡಿದ ಯುಗಳ ಗೀತೆ ‘Aji hum Bharat ki naari’,  ಶ್ರೀನಿವಾಸ್ ಅವರು ಮೊದಲ ಗೀತೆಯಾಗಿತ್ತು ಮತ್ತು ಸಾಕಷ್ಟು ಜನಪ್ರಿಯವಾಯಿತು.

ಆ ಬಳಿಕ, ‘ಮಿ.ಸಂಪತ್’ ಸಿನೆಮಾಗೆ ಸೌಂಡ್ ರೆಕಾರ್ಡಿಸ್ಟ್ ಆಗಿದ್ದ ಜೀವಾ ಅವರ ಮೂಲಕ ಪಿ.ಬಿ.ಶ್ರೀನಿವಾಸ್ ಅವರು, ದಕ್ಷಿಣ ಭಾರತದ ಚಿತ್ರರಂಗಕ್ಕೆ ಕಾಲಿಟ್ಟರು. ಹಿರಿಯ ನಿರ್ದೇಶಕ, ನಟ, ನಿರ್ಮಾಪಕ ಆರ್.ನಾಗೇಂದ್ರ ರಾಯರು ನಿರ್ಮಿಸುತ್ತಿದ್ದ ‘ಜಾತಕಫಲ’ ಸಿನೆಮಾದಲ್ಲಿ ಹಾಡುವ ಅವಕಾಶ ದೊರಕಿತು. ಕನ್ನಡ, ತಮಿಳು ಮತ್ತು ತೆಲುಗು ಮೂರೂ ಭಾಷೆಗಳಲ್ಲಿ ನಿರ್ಮಿಸಲಾದ ಈ ಸಿನೆಮಾದಲ್ಲಿ ಪ್ರತಿಭಾಷೆಯಲ್ಲೂ ತಲಾ ಎರಡು ಹಾಡುಗಳನ್ನು ಶ್ರೀನಿವಾಸ್ ಅವರು ಹಾಡಿದರು. ಭಾರೀ ಯಶಸ್ಸು ಕಂಡ ಈ ಚಿತ್ರ, ಪಿ.ಬಿ.ಶ್ರೀನಿವಾಸ್ ಅವರ ವೃತ್ತಿ ಜೀವನಕ್ಕೆ ದೊಡ್ಡ ರೀತಿಯ ಆರಂಭ ನೀಡಿತು.

ಇದಾದ ಬಳಿಕ ಶ್ರೀನಿವಾಸ್ ಅವರು 1956ರಲ್ಲಿ ‘ಓಹಿಲೇಶ್ವರ’ ಸಿನೆಮಾದಲ್ಲಿ ಮೊದಲ ಬಾರಿಗೆ ಡಾ.ರಾಜ್ ಕುಮಾರ್ ಅವರಿಗಾಗಿ ಹಾಡಿದರು. ಆ ನಂತರ ಅವರದ್ದೇ ನಟನೆಯ ‘ಭಕ್ತ ಕನಕದಾಸ’ ಸಿನೆಮಾದಲ್ಲಿ ಹಾಡಿದ ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ’ ಎಂಬ ಹಾಡು ಅಪಾರ ಜನಪ್ರಿಯತೆ ಪಡೆಯಿತು. ಅಲ್ಲಿಂದಾಚೆಗೆ ಡಾ.ರಾಜ್ ಕುಮಾರ್ ಅವರ ಬಹುತೇಕ ಸಿನೆಮಾಗಳಲ್ಲಿ ಹಾಡಿದ ಶ್ರೀನಿವಾಸ್ ಅವರೂ ಕೂಡ ಡಾ.ರಾಜ್ ಅವರಂತೆಯೇ ಕನ್ನಡದಲ್ಲಿ ಪ್ರಸಿದ್ಧರಾದರು.

ಆ ಮುಂದಿನ ದಿನಗಳಲ್ಲಿ  ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಆರ್.ಎನ್.ಸುದರ್ಶನ್ ರಾಜೇಶ್, ಗಂಗಾಧರ್, ಶ್ರೀನಾಥ್, ಅಶೋಕ್, ವಿಷ್ಣುವರ್ದನ್ ಸೇರಿದಂತೆ ಎಲ್ಲ ಪ್ರಮುಖ ನಟರ ಸಿನೆಮಾಗಳಲ್ಲೂ ಹಾಡಿ ಹೆಸರಾದರು. ಇದೇ ರೀತಿ ತಮಿಳು ಚಿತ್ರರಂಗದಲ್ಲೂ ಹೆಸರಾದ ಪಿ.ಬಿ.ಶ್ರೀನಿವಾಸ್ ಅವರು, ಜೆಮಿನಿ ಗಣೇಶನ್ ಅವರಿಗಾಗಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಲತಾ ಮಂಗೇಶ್ಕರ್ ಅವರ ಜೊತೆ ‘ಮೈ ಭಿ ಲಡ್ಕಿ ಹೂಂ’(1964) ಚಿತ್ರಕ್ಕಾಗಿ ಹಾಡಿರುವ ‘ಚಂದಾ ಸೆ ಹೋಗಾ ವೊ ಪ್ಯಾರಾ’ ಹಾಡು ಇವತ್ತಿಗೂ ರಸಿಕರ ಮನಕ್ಕೆ ತಂಪೆರೆಯುತ್ತದೆ.

ದಕ್ಷಿಣದ ಎಲ್ಲ ಭಾಷೆಗಳಲ್ಲೂ ಹಾಡಿದ್ದರೂ ಕೂಡ ಪಿ.ಬಿ.ಶ್ರೀನಿವಾಸ್ ಅವರಿಗೆ ಭದ್ರ ನೆಲೆ ಒದಗಿಸಿದ್ದು ಕನ್ನಡ ಚಿತ್ರರಂಗ. ಕನ್ನಡ ಭಾಷೆಯಲ್ಲಿ ಅವರು ಹಾಡಿದ ಬಹುತೇಕ  ಹಾಡುಗಳು  ಸೂಪರ್ ಹಿಟ್ ಸಾಂಗ್ಸ್ ಅನ್ನಿಸಿಕೊಂಡಿವೆ. ಸುಮಾರು 30 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಶ್ರೀನಿವಾಸ್ ಅವರ ಧ್ವನಿಯೇ ಪ್ರಧಾನವಾಗಿ ಕೇಳಿಸುತ್ತಿತ್ತು. ಶ್ರೀನಿವಾಸ್ ಅವರು, ಡಾ.ರಾಜ್ ಕುಮಾರ್ ಅವರಿಗಾಗಿ ಹಾಡಿದ ಬಹುತೇಕ ಹಾಡುಗಳು, ಇವತ್ತಿಗೂ ಕನ್ನಡಿಗರಿಗೆ ಅತ್ಯಂತ ಪ್ರಿಯವಾದ ಹಾಡುಗಳಾಗಿವೆ. ಈ ಕಾರಣಕ್ಕಾಗಿಯೇ ಡಾ.ರಾಜ್ ಕುಮಾರ್ ಅವರು, ‘ನಾನು ಕೇವಲ ಶರೀರ’, ಪಿ.ಬಿ.ಶ್ರೀನಿವಾಸ್ ಅವರು ‘ನನ್ನ ಶಾರೀರ’ ಎಂದೇ ಗೌರವಿಸಿ ಮಾತನಾಡುತ್ತಿದ್ದರು.

1950ರ ದಶಕದಿಂದ 1970ರ ದಶಕದ ವರೆಗೆ ರಾಜ್ ಕುಮಾರ್ ಸಿನೆಮಾ ಅಂದ್ರೆ ಪಿ.ಬಿ.ಶ್ರೀನಿವಾಸ್ ಅವರು ಹಾಡುತ್ತಾರೆ ಅನ್ನುವುದೇ ಖಾಯಂ ಆಗಿತ್ತು. ಆದರೆ, 1974ರಲ್ಲಿ ‘ಸಂಪತ್ತಿಗೆ ಸವಾಲ್’ ಸಿನೆಮಾ ತಯಾರಿಕೆ ವೇಳೆ ಶ್ರೀನಿವಾಸ್ ಅವರು ಲಭ್ಯವಿಲ್ಲದ ಕಾರಣ, ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರು, ರಾಜ್ ಅವರನ್ನು ಹಾಡುವಂತೆ ಉತ್ತೇಜಿಸಿದರು. ‘ಓಹಿಲೇಶ್ವರ’ ಸಿನೆಮಾ ನಂತರ ಹಾಡುವುದನ್ನು ನಿಲ್ಲಿಸಿದ್ದ ರಾಜ್ ಕುಮಾರ್, ಸಂಪತ್ತಿಗೆ ಸವಾಲ್ ಚಿತ್ರದ ‘ಯಾರೇ ಕೂಗಾಡಲಿ, ಊರೇ ಹೋರಾಡಲಿ’ ಹಾಡಿನ ಮೂಲಕ ಮತ್ತೊಮ್ಮೆ ಹಾಡಲು ಆರಂಭಿಸಿದರು. ಭಾರತ ಸಿನೆಮಾ ರಂಗದ ಅತ್ಯಂತ ಜನಪ್ರಿಯ ನಟ ಮತ್ತು ಗಾಯಕ ಎಂದು ಹೆಸರಾದರು. ಆದರೆ, ಪಿ.ಬಿ.ಶ್ರೀನಿವಾಸ್ ಮತ್ತು ಡಾ.ರಾಜ್ ಅವರ ನಡುವಿನ ಪರಸ್ಪರ ಗೌರವ ಮತ್ತು ವಿಶ್ವಾಸ ಅಬಾಧಿತವಾಗಿತ್ತು. 1995ರಲ್ಲಿ ಡಾ.ರಾಜ್ ಅವರಿಗೆ ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ’ ಪುರಸ್ಕಾರ ದೊರೆತಾಗ, ಪಿ.ಬಿ.ಶ್ರೀನಿವಾಸ್ ಅವರು ತಮಗೇ ಪ್ರಶಸ್ತಿ ಸಿಕ್ಕಂತೆ ಸಂಭ್ರಮಿಸಿದ್ದರು.

ಪಿ.ಬಿ.ಶ್ರೀನಿವಾಸ್ ಅವರು ಅದ್ಭುತವಾದ ನೂರಾರು ಹಾಡುಗಳನ್ನು ಹಾಡಿದ್ದಾರೆ. ಅವೆಲ್ಲವನ್ನೂ ಇಲ್ಲಿ ಹೆಸರಿಸುವುದು ಕಷ್ಟವಾದರೂ ಈ ಕೆಳಗಿನ ಹಾಡುಗಳನ್ನಾದರೂ ನೆನಪು ಮಾಡಿಕೊಂಡರೆ ಅವರ ಗಾನ ಸುಧೆ ಕಿವಿಯಲ್ಲಿ ಕೇಳಿಸಿದಂತಾಗುತ್ತದೆ, ಅವರ ಬಿಂಬ ಕಣ್ಣೆದುರು ಮೂಡಿದಂತಾಗುತ್ತದೆ. ಗಂಧದ ಗುಡಿ ಸಿನೆಮಾದ ‘ನಾವಾಡುವ ನುಡಿಯೇ ಕನ್ನಡ ನುಡಿ’, ಬಂಗಾರದ ಮನುಷ್ಯದ ‘ನಗುನಗುತಾ ನಲಿ ನಲಿ’, ‘ಆಗದು ಎಂದು, ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ’, ‘ಆಹಾ ಮೈಸೂರು ಮಲ್ಲಿಗೆ’, ಅರಿಶಿನ ಕುಂಕುಮ ಚಿತ್ರದ ‘ಇಳಿದು ಬಾ ತಾಯೆ ಇಳಿದು ಬಾ’, ಕಸ್ತೂರಿ ನಿವಾಸದ ‘ಆಡಿಸಿ ನೋಡು ಬೀಳಿಸಿ ನೋಡು’, ಕುಲವಧು ಚಿತ್ರದ ‘ಒಲವಿನ ಪ್ರಿಯಲತೆ ಅವಳದೇ ಚಿಂತೆ’, ನಾಂದಿ ಚಿತ್ರದ ‘ಹಾಡೊಂದ ಹಾಡುವೆ ನೀ ಕೇಳು ಮಗುವೆ’, ನಾಗರ ಹಾವು ಸಿನೆಮಾದ ‘ಬಾರೆ ಬಾರೆ ಚಂದದ ಚೆಲುವಿನ ತಾರೆ’, ‘ಕನ್ನಡ ನಾಡಿನ ವೀರ ರಮಣಿಯ ಗಂಡು ಭೂಮಿಯ ವೀರ ನಾರಿಯ’ ಮತ್ತು  ‘ಸಂಗಮ ಸಂಗಮ ಅನುರಾಗ ತಂದ ಸಂಗಮ’,  ಶರಪಂಜರದ ‘ಉತ್ತರ ಧೃವದಿಂ ದಕ್ಷಿಣ ಧೃವಕೂ’, ಎರಡು ಕನಸು ಚಿತ್ರದ ‘ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೆ’, ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ’ ಮತ್ತು ‘ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲುದೇ’, ಸಾಕ್ಷಾತ್ಕಾರ ಸಿನೆಮಾದ ‘ಒಲವೆ ಜೀವನ ಸಾಕ್ಷಾತ್ಕಾರ’ ಮತ್ತು ‘ಜನ್ಮ ಜನ್ಮದ ಅನುಬಂಧ’, ನಾ ನಿನ್ನ ಮರೆಯಲಾರೆ ಸಿನೆಮಾದ, ‘ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು’, ಮಾನಸ ಸರೋವರ ಚಿತ್ರದ ‘ವೇದಾಂತಿ ಹೇಳಿದನು, ಹೊನ್ನೆಲ್ಲ ಮಣ್ಣು ಮಣ್ಣು, ಕವಿಯೊಬ್ಬ ಹಾಡಿದನು ಮಣ್ಣೆಲ್ಲ ಹೊನ್ನು ಹೊನ್ನು’ ಹಾಡುಗಳು ಸೇರಿದಂತೆ ಇನ್ನೂ ಹತ್ತಾರು ಗೀತೆಗಳು ಶ್ರೀನಿವಾಸ್ ಅವರ ಕಂಠದಿಂದ ಮೂಡಿ ಬಂದು ಜಗತ್ತಿನಲ್ಲಿ ಶಾಶ್ವತವಾಗಿ ನೆಲೆಯಾಗಿವೆ.  

‘ವಿಜಯನಗರದ ವೀರಪುತ್ರ’ ಸಿನೆಮಾಗಾಗಿ ಆರ್.ಎನ್.ಜಯಗೋಪಾಲ್ ಅವರು ಬರೆದು ಆರ್.ಎನ್.ಸುದರ್ಶನ್ ಅವರು ನಟಿಸಿದ್ದ ‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು’ ಹಾಡು ಪಿ.ಬಿ. ಶ್ರೀನಿವಾಸ್ ಅವರ ಅತ್ಯಂತ ಅಚ್ಚು ಮೆಚ್ಚಿನ ಹಾಡುಗಳಲ್ಲಿ ಒಂದಾಗಿತ್ತು.

ಶ್ರೀನಿವಾಸ್ ಅವರ ಮಾತೃ ಭಾಷೆ ತೆಲುಗು ಆಗಿದ್ದರೂ ಕೂಡ ಅವರು ಬಹುಭಾಷಿಕರಾಗಿದ್ದರು. ಸಂಸ್ಕೃತ ಮತ್ತು ಉರ್ದು ಭಾಷೆಯೂ ಸೇರಿದಂತೆ 8 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯ ಹೊಂದಿದ್ದರು. ಉತ್ತಮ ಕವಿಯೂ ಆಗಿದ್ದ ಪಿ.ಬಿ.ಶ್ರೀನಿವಾಸ್ ಅವರು ಕನ್ನಡ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಕವಿತೆಗಳನ್ನು ರಚಿಸುತ್ತಿದ್ದರು ಮತ್ತು ಹಲವಾರು ಕಾರ್ಯಕ್ರಮಗಳಲ್ಲಿ ಅವುಗಳನ್ನು ಹಾಡಿ ರಂಜಿಸಿಸುತ್ತಿದ್ದರು.

ಸಿನೆಮಾಗಳಿಗಾಗಿಯೂ ಗೀತ ರಚನೆ ಮಾಡುತ್ತಿದ್ದ ಶ್ರೀನಿವಾಸ್ ಅವರು, 1981ರಲ್ಲಿ ಬಿಡುಗಡೆಯಾದ ನಂದೂ ತಮಿಳು ಸಿನೆಮಾಗಾಗಿ ‘Kaise Kahoon Kuch Kehna Sakoon’ (ಭೂಪೇಂದ್ರ-ಎಸ್.ಜಾನಕಿ ಹಾಡಿದ್ದರು) ಮತ್ತು ‘Hum Hain Akele’ (ಗಾಯನ-ಎಸ್.ಜಾನಕಿ) ಎಂಬ ಎರಡು ಉರ್ದು ಘಝಲ್ ಗಳನ್ನು ಬರೆದಿದ್ದರು. ‘ಭಾಗ್ಯ ಜ್ಯೋತಿ’ ಎಂಬ ಸಿನೆಮಾಗಾಗಿ ಅವರು ‘ದಿವ್ಯ ಗಗನ ವಾಸಿನಿ’ ಎಂಬ ಸಂಸ್ಕೃತ ಗೀತೆಯನ್ನು ಬರೆದು ವಾಣಿ ಜಯರಾಮ್ ಅವರೊಂದಿಗೆ ಹಾಡಿದ್ದರು. ‘ನವನೀತ ಸುಮ ಸುಧಾ’ ಅನ್ನುವ ಹೊಸ ರಾಗವನ್ನೂ ಸೃಷ್ಟಿಸಿದ್ದ ಶ್ರೀನಿವಾಸ್ ಅವರು ಶ್ರೀನಿವಾಸ ‘ಗಾಯತ್ರಿ ವ್ರತ’, ‘ಗಾಯಕುಡಿ ಗೇಯಲು’ ಮತ್ತು ‘ಪ್ರಣವಂ’ ಅನ್ನುವ ಶೀರ್ಷಿಕೆಯ ಪುಸ್ತಕಗಳನ್ನೂ ರಚಿಸಿದ್ದರು.  

ಇಷ್ಟು ಮಾತ್ರವಲ್ಲದೆ 1969ರಲ್ಲಿ ಮಾನವ ಚಂದ್ರನ ಮೇಲೆ ಕಾಲಿಟ್ಟ ಅಮೋಘ ಸಂದರ್ಭದಿಂದ ಸ್ಫೂರ್ತಿ ಪಡೆದು ಇಂಗ್ಲಿಷ್ ಭಾಷೆಯಲ್ಲಿ ಎರಡು ಹಾಡುಗಳನ್ನು ಬರೆದಿದ್ದರು. ಅವುಗಳ ಪೈಕಿ ‘Man To Moon’ ಎಂಬ ಮೊದಲ ಹಾಡನ್ನು ತಾವೇ ಹಾಡಿ ಮತ್ತು ಮತ್ತೊಂದು ‘Moon To God’ ಎಂಬ ಹಾಡನ್ನು ಎಸ್.ಜಾನಕಿ ಅವರೊಂದಿಗೆ ಹಾಡಿ, ಅಮೆರಿಕದ ಅಂದಿನ ಅಧ್ಯಕ್ಷ Richard Nixon ಮತ್ತು ಚಂದ್ರಮನ ಮೇಲೆ ಹೆಜ್ಜೆಯೂರಿದ ಮೊದಲ ಮನುಷ್ಯ Neil Armstrong ಅವರಿಗೆ ಕಳಿಸಿದ್ದರು. ಅವರಿಬ್ಬರೂ ಶ್ರೀನಿವಾಸ್ ಅವರಿಗೆ ಅಭಿನಂದನಾ ಸಂದೇಶ ಕಳಿಸಿದ್ದರು.

ಪಿ.ಬಿ.ಶ್ರೀನಿವಾಸ್ ಅವರು ಚಿತ್ರಗೀತೆ ಮಾತ್ರವಲ್ಲದೆ ಭಕ್ತಿ ಸಂಗೀತ ಹಾಡುವುದರಲ್ಲೂ ಪ್ರಾವಿಣ್ಯತೆ ಪಡೆದಿದ್ದರು. ಅವರು ಹಾಡಿರುವ ಮುಕುಂದ ಮಾಲ, ಲಕ್ಷ್ಮಿ ಸ್ತ್ರೋತ್ರ, ಶಾರದಾ ಭುಜಂಗ ಸ್ತೋತ್ರ, ಶನೀಶ್ವರ ಸ್ತೋತ್ರ, ಶಿವ ಪರಿವಾರ ಸ್ತ್ರೋತ್ರ, ಹನುಮಾನ್ ಚಾಲೀಸ ಮತ್ತು ಮಲ್ಲಿಕಾರ್ಜುನ ಸ್ತೋತ್ರಗಳು ಇವತ್ತಿಗೂ ಮನೆಮನಗಳಲ್ಲಿ ಮೊಳಗುತ್ತಿವೆ. ಕನ್ನಡದಲ್ಲಿ ಅವರು ಹಾಡಿರುವ ‘ಶರಣು ಶರಣಯ್ಯ ಶರಣು ಬೆನಕ’ ಮತ್ತು ‘ಭಾದ್ರಪದ ಶುಕ್ಲದ ಚೌತಿಯಂದು’ ಎಂಬ ಹಾಡುಗಳಿಲ್ಲದೆ ಗಣೇಶನ ಹಬ್ಬ ಮಾತ್ರವಲ್ಲ ಯಾವುದೇ ಶುಭ ಕಾರ್ಯವೂ ಆರಂಭವಾಗುವುದಿಲ್ಲ. ಪಿ.ಬಿ.ಶ್ರೀನಿವಾಸ್ ಅವರು ಹಾಡಿರುವ ಎದ್ದೇಳು ‘ಎದ್ದೇಳು ಮಂಜುನಾಥ…ಏಳು ಬೆಳಗಾಯಿತು’ ಎಂಬ ಭಕ್ತಿಗೀತೆ, ಕೆ.ಜೆ. ಯೇಸುದಾಸ್ ಅವರು ಸ್ವಾಮಿ ಅಯ್ಯಪ್ಪನಿಗಾಗಿ ಹಾಡಿರುವ ‘ಹರಿವರಾಸನಮ್ ವಿಶ್ವಮೋಹನಮ್’ ಮತ್ತು ಡಾ.ಎಂ.ಎಸ್.ಸುಬ್ಬಲಕ್ಷ್ಮಿ ಅವರು ಹಾಡಿರುವ ‘ಕೌಸಲ್ಯಾ ಸುಪ್ರಜಾ ರಾಮಾ ಪೂರ್ವಾ ಸಂಧ್ಯಾ ಪ್ರವರ್ತತೇ’ ಎಂದು ಆರಂಭವಾಗುವ ಶ್ರೀ ವೆಂಕಟೇಶ್ವರ ಸುಪ್ರಭಾತದಷ್ಟೇ ಭಕ್ತಿಮಯ ಮತ್ತು ಪ್ರಸಿದ್ಧವಾಗಿದೆ.

ದಾಸ ಶ್ರೇಷ್ಠ ಕನಕದಾಸರ ರಚನೆಗಳಾದ ‘ಬದುಕಿದೆನು ಬದುಕಿದೆನು ಭವ ಎನಗೆ ಇಂಗಿತು’, ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ’, ‘ಕುಲ ಕುಲ ಕುಲವೆಂದು ಹೊಡೆದಾಡದಿರಿ’, ಇತ್ಯಾದಿ ಗೀತೆಗಳು ಹಾಗೂ  ಹುಣಸೂರು ಕೃಷ್ಣಮೂರ್ತಿಯವರು ರಚಿಸಿ, ಜಿ.ಕೆ.ವೆಂಕಟೇಶ್ ಅವರು ಸಂಗೀತ ನೀಡಿರುವ ಭಕ್ತ ಕುಂಬಾರ ಚಿತ್ರದ(1974) ‘ಹರಿನಾಮವೇ ಚಂದ’, ‘ಎಲ್ಲಿ ಮರೆಯಾದೆ ವಿಠ್ಠಲ ಏಕೆ ದೂರಾದೆ’, ‘ಕಂಡೇ ಹರಿಯ ಕಂಡೇ’, ‘ವಿಠಲಾ ವಿಠಲಾ ಪಾಂಡುರಂಗ ವಿಠಲಾ, ನಾನು ನೀನು ನೆಂಟರಯ್ಯ’, ‘ಮಾನವ ದೇಹವೂ, ಮೂಳೆ ಮಾಂಸದ ತಡಿಕೆ’ ಇತ್ಯಾದಿ ಹಾಡುಗಳು, ಪಿ.ಬಿ. ಶ್ರೀನಿವಾಸ್ ಅವರು ಕನ್ನಡದ ಸಿನೆಮಾಗಳಲ್ಲಿ ಹಾಡಿರುವ ಭಕ್ತಿ-ವೇದಾಂತ ಮತ್ತು ಸಮಾನತೆ ಸಾರುವ ಹಾಡುಗಳು.

ಸಾಮಾನ್ಯವಾಗಿ ಪಿ.ಬಿ.ಶ್ರೀನಿವಾಸ್ ಅವರು ಸದಾ ತಲೆಯ ಮೇಲೆ ಟೋಪಿ ಧರಿಸಿಯೇ ಕಾಣಿಸಿಕೊಳ್ಳುತ್ತಿದ್ದರು. ತಮ್ಮ ಹೆಸರನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ PBS ಅಂದರೆ ‘Play Back Singer’ಎನ್ನುತ್ತಿದ್ದ ಶ್ರೀನಿವಾಸ್ ಅವರ ಜೇಬು ತುಂಬಾ ವಿವಿಧ ಬಣ್ಣದ ಪೆನ್ನುಗಳೇ ತುಂಬಿರುತ್ತಿದ್ದವು. ಅದು ಏಕೆ ಅಂದಿದ್ದಕ್ಕೂ ತಮ್ಮದೇ ಆದ ರೀತಿಯಲ್ಲಿ ಉತ್ತರಿಸಿದ್ದ ಶ್ರೀನಿವಾಸ್ ಅವರು PBS ಅಂದರೆ ‘Pens, Books and Songs’ ಅಂತಾನೂ ಅಂದ್ಕೋಬಹುದು ಅಂದಿದ್ದರು.

 ಚೆನ್ನೈನ The Woodlands Drive-In restaurant ಶ್ರೀನಿವಾಸ್ ಅವರಿಗೆ ಅತ್ಯಂತ ಆಪ್ತವಾದ ಜಾಗವಾಗಿತ್ತು. ಸದಾ ಏನಾದರೊಂದನ್ನು ಬರೆಯುತ್ತಾ ಅಲ್ಲಿ ಕುಳಿತಿರುತ್ತಿದ್ದ ಶ್ರೀನಿವಾಸ್ ಅವರನ್ನು ಕಾಣುವುದು ಅಲ್ಲಿಗೆ ಹೋದವರಿಗೆ ಸರ್ವೇ ಸಾಮಾನ್ಯವಾಗಿತ್ತು.

1952ರಲ್ಲಿ ಹಾಡಲು ಆರಂಭಿಸಿದ ಪಿ.ಬಿ.ಶ್ರೀನಿವಾಸ್ ಅವರು ಕಡೆಯಬಾರಿಗೆ 2010ರಲ್ಲಿ ತಮ್ಮ 80ನೇ ವಯಸ್ಸಿನಲ್ಲಿ ‘Ayirathil Oruvan’ ತಮಿಳು ಸಿನೆಮಾಗಾಗಿ ಹಾಡಿದ್ದರು. ಒಂದಿಷ್ಟು ದಿನಗಳ ಕಾಲದ ಅನಾರೋಗ್ಯದ ನಂತರ ಚೇತರಿಸಿಕೊಳ್ಳುತ್ತಿದ್ದ ಡಾ.ಪಿ.ಬಿ.ಶ್ರೀನಿವಾಸ್ ಅವರು, 2013ರ ಏಪ್ರಿಲ್ ತಿಂಗಳ 13ರ ಮಧ್ಯಾಹ್ನ, ತಮ್ಮ ನಿವಾಸದಲ್ಲಿ ಊಟ ಮಾಡುವ ವೇಳೆ ಸಂಭವಿಸಿದ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು.

ಅತ್ಯಂತ ವಿಶಿಷ್ಟ ಧ್ವನಿಯ ಗಾಯಕರಾಗಿದ್ದ ಪಿ.ಬಿ.ಶ್ರೀನಿವಾಸ್ ಅವರು ಹಲವಾರು ಪ್ರಶಸ್ತಿ ಮತ್ತು ಗೌರವಗಳಿಗೆ ಪಾತ್ರರಾಗಿದ್ದರು. ಅವುಗಳಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಜ್ ಕುಟುಂಬದಿಂದ ಕೊಡಮಾಡುವ ‘ಡಾ.ರಾಜ್ ಕುಮಾರ್ ಸೌಹಾರ್ದ ಪ್ರಶಸ್ತಿ’ ಹಾಗೂ ಹಂಪಿ ಕನ್ನಡ ವಿ.ವಿಯ ‘ನಾಡೋಜ’ ಗೌರವ ಸೇರಿದೆ. ತಮಿಳುನಾಡು ಸರ್ಕಾರ ‘ಕಲೈಮಾಮಣಿ’ ಪ್ರಶಸ್ತಿ ನೀಡಿ ಗೌರವಿಸಿದೆ. ಅಮೆರಿಕದ Arizona University ಪಿ.ಬಿ.ಶ್ರೀನಿವಾಸ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.

‘ಮಾಧುರ್ಯ ಸಾರ್ವಭೌಮ… ಡಾ.ಪಿ.ಬಿ. ಶ್ರೀನಿವಾಸ್, ನಾದ ಯೋಗಿಯ ಸುನಾದಯಾನ’ ಅನ್ನುವ ಶೀರ್ಷಿಕೆಯಲ್ಲಿ ಆರ್.ಶ್ರೀನಾಥ್ ಅವರು ಡಾ.ಪಿ.ಬಿ. ಶ್ರೀನಿವಾಸ್ ಜೀವನ ಚರಿತ್ರೆ ಬರೆದಿದ್ದಾರೆ. ಈ ಪುಸ್ತಕ 2013ನೇ ಸಾಲಿನಲ್ಲಿ ಸಿನೆಮಾ ಸಾಹಿತ್ಯಕ್ಕೆ ಸಂಬಂಧಿಸಿದ ಅತ್ಯುತ್ತಮ ಪುಸ್ತಕ ಎಂದು ಕರ್ನಾಟಕ ಸರ್ಕಾರದಿಂದ ಗುರುತಿಸಲ್ಪಟ್ಟು ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಉದ್ಯಾನವನಕ್ಕೆ ಡಾ. ಪಿ.ಬಿ.ಶ್ರೀನಿವಾಸ್ ಅವರ ಹೆಸರಿಡುವ ಮೂಲಕ ಅವರ ಸ್ಮರಣೆ ಮಾಡಲಾಗಿದೆ.

ಸೌಮ್ಯ ಸ್ವಭಾವದವರಾಗಿದ್ದ ಡಾ.ಪಿ.ಬಿ.ಶ್ರೀನಿವಾಸ್ ಅವರು ತತ್ವಜ್ಞಾನಿಯ ದೃಷ್ಟಿಕೋನ ಹೊಂದಿದ್ದರು. ‘ನಾವಾಡುವ ನುಡಿಯೇ ಕನ್ನಡ ನುಡಿ, ಚಿನ್ನದ ನುಡಿ, ಸಿರಿಗನ್ನಡ ನುಡಿ’ ಎಂದು ಹಾಡುತ್ತಲೇ ಕನ್ನಡದ ಅಸ್ಮಿತೆಗೆ ತಮ್ಮದೇ ಆದ ರೀತಿಯಲ್ಲಿ ಕಾಣಿಕೆ ನೀಡಿರುವ ಡಾ. ಪಿ.ಬಿ.ಶ್ರೀನಿವಾಸ್ ಅವರ ಜನ್ಮದಿನದಂದು ಎಲ್ಲ ಚಿತ್ರ ರಸಿಕರಿಗೆ ಮತ್ತು ಸಂಗೀತ ಪ್ರೇಮಿಗಳಿಗೆ ‘ಮಾಧ್ಯಮ ಅನೇಕ’ ಸಂಸ್ಥೆಯಿಂದ ಶುಭ ಹಾರೈಕೆಗಳು.

LEAVE A REPLY

Connect with

Please enter your comment!
Please enter your name here