ಪಿಆರ್‌ಕೆ ಪ್ರೊಡಕ್ಷನ್ಸ್‌ನ ‘ಒನ್‌ ಕಟ್‌ ಟೂ ಕಟ್‌’ ಕನ್ನಡ ಸಿನಿಮಾ ಫೆಬ್ರವರಿ 3ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಡ್ಯಾನಿಷ್‌ ಸೇಠ್‌, ಪ್ರಕಾಶ್‌ ಬೆಳವಾಡಿ, ಸಂಯುಕ್ತ ಹೊರನಾಡು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಅಮೇಜಾನ್‌ ಪ್ರೈಮ್‌ ವೀಡಿಯೋ ಇಂದು ‘ಒನ್‌ ಕಟ್‌ ಟೂ ಕಟ್‌’ ಕನ್ನಡ ಚಿತ್ರದ ಸ್ಟ್ರೀಮಿಂಗ್‌ ಡೇಟ್‌ ಘೋಷಿಸಿದೆ. ಪಿಆರ್‌ಕೆ ಪ್ರೊಡಕ್ಷನ್ಸ್‌ನ ಸಿನಿಮಾ ಫೆಬ್ರವರಿ 3ರಿಂದ ಸ್ಟ್ರೀಮ್‌ ಆಗಲಿದೆ. ವಂಶೀಧರ್‌ ಭೊಗರಾಜ್‌ ನಿರ್ದೇಶನದ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಡ್ಯಾನಿಷ್‌ ಶೇಟ್‌, ಪ್ರಕಾಶ್‌ ಬೆಳವಾಡಿ, ಸಂಯುಕ್ತ ಹೊರನಾಡು, ಸಂಪತ್‌ ಮೈತ್ರೇಯ ಅಭಿನಯಿಸಿದ್ದಾರೆ. “ಇದೊಂದು ಲೈಟ್‌ ಹಾರ್ಟೆಡ್‌ ಕಾಮಿಡಿ. ನಾನು ಆರ್ಟ್‌ ಅಂಡ್‌ ಕ್ರಾಫ್ಟ್‌ ಟೀಚರ್‌ ಪಾತ್ರದಲ್ಲಿ ನಟಿಸಿದ್ದೇನೆ. ಟೆರರಿಸ್ಟ್‌ ಅಟ್ಯಾಕ್‌ನಿಂದ ಮಕ್ಕಳನ್ನು ಪಾರು ಮಾಡುವ ಸಂದರ್ಭದಲ್ಲಿ ನಡೆಯುವ ಘಟನಾವಳಿಗಳು ಚಿತ್ರದ ವಸ್ತು” ಎನ್ನುತ್ತಾರೆ ಚಿತ್ರದ ಹೀರೋ ಡ್ಯಾನಿಷ್‌ ಸೇಠ್‌.

ಇತ್ತೀಚೆಗಷ್ಟೇ Vootನಲ್ಲಿ ಅವರ ‘ಹಂಬಲ್‌ ಪೊಲಿಟೀಷಿಯನ್‌ ನೋಗರಾಜ್‌’ ಸೀರೀಸ್‌ ಸ್ಟ್ರೀಮ್‌ ಆಗಿತ್ತು. ಈಗ ಸಿನಿಮಾ ಮೂಲಕ ಮತ್ತೆ ಓಟಿಟಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವರ ಖುಷಿ ಹೆಚ್ಚಿಸಿದೆ. “ನನ್ನ ವೆಬ್‌ ಸರಣಿ ಸ್ಟ್ರೀಮ್‌ ಆಗುತ್ತಿದ್ದು, ಈಗ ಸಿನಿಮಾ ತೆರೆಕಾಣುತ್ತಿದೆ. ಇಂಥದ್ದೊಂದು ಸಂದರ್ಭ ಸೃಷ್ಟಿಯಾಗುತ್ತದೆ ಎಂದು ಲೈಪ್‌ನಲ್ಲಿ ಎಂದೂ ಎಣಿಸಿರಲಿಲ್ಲ. ಈ ಸಿನಿಮಾ ಒಂದೊಳ್ಳೆಯ ಎಂಟರ್‌ಟೇನರ್‌ ಆಗಿ ವೀಕ್ಷಕರನ್ನು ರಂಜಿಸಲಿದೆ” ಎನ್ನುವ ಅವರು ಪುನೀತ್‌ ರಾಜಕುಮಾರ್‌ ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಾರೆ. ಈ ಹಿಂದೆ ಪಿಆರ್‌ಕೆ ಬ್ಯಾನರ್‌ನ ‘ಫ್ರೆಂಚ್‌ ಬಿರಿಯಾನಿ’ ಚಿತ್ರದಲ್ಲಿ ಅವರು ನಟಿಸಿದ್ದರು.

“ನಾನೊಬ್ಬ ನಟ, ಅವರು ನಿರ್ಮಾಪಕರು ಎನ್ನುವ ಸಂಬಂಧಕ್ಕಷ್ಟೇ ನಮ್ಮ ಒಡನಾಟ ಸೀಮಿತವಾಗಿರಲಿಲ್ಲ. ನನ್ನನ್ನು ಕುಟುಂಬದ ಸದಸ್ಯನಂತೆಯೇ ಅವರು ಕಾಣುತ್ತಿದ್ದರು. ಅವರನ್ನು ದಿನವೂ ಮಿಸ್‌ ಮಾಡಿಕೊಳ್ಳುತ್ತೇನೆ” ಎನ್ನುತ್ತಾರೆ ಡ್ಯಾನಿಷ್‌. ಪುನೀತ್‌ ರಾಜಕುಮಾರ್‌ ಅವರು ಅಗಲುವ ಮುನ್ನವೇ ‘ಒನ್‌ ಕಟ್‌ ಟೂ ಕಟ್‌’ ಚಿತ್ರೀಕರಣ ಪೂರ್ಣಗೊಂಡಿತ್ತು. ನಂತರ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆದು ಈಗ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಬೆಂಗಳೂರಿನಲ್ಲೇ ಚಿತ್ರದ ಸಂಪೂರ್ಣ ಶೂಟಿಂಗ್‌ ನಡೆದಿದೆ. ಎಚ್‌ಎಂಟಿ ಲೇಔಟ್‌ನಲ್ಲಿ ಬಹುಪಾಲು ಚಿತ್ರೀಕರಣ ನಡೆದಿದೆ.

ಅಮೇಜಾನ್‌ ಪ್ರೈಮ್‌ ಮೊನ್ನೆಯಷ್ಟೇ ಪಿಆರ್‌ಕೆ ಪ್ರೊಡಕ್ಷನ್ಸ್‌ನ ಮೂರು ಚಿತ್ರಗಳ ಬಗ್ಗೆ ಮಾಹಿತಿ ನೀಡಿತ್ತು. ಫೆಬ್ರವರಿ 3ರಂದು ‘ಒನ್‌ ಕಟ್‌ ಟೂ ಕಟ್‌’ ಸಿನಿಮಾ ಬರಲಿದ್ದು, ಮುಂದಿನ ದಿನಗಳಲ್ಲಿ ಪಿಆರ್‌ಕೆ ನಿರ್ಮಾಣದ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಮತ್ತು ‘ಫ್ಯಾಮಿಲಿ ಪ್ಯಾಕ್‌’ ಚಿತ್ರಗಳು ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿವೆ. ಪುನೀತ್‌ ರಾಜಕುಮಾರ್‌ ನಟನೆ, ನಿರ್ಮಾಣದ ಐದು ಚಿತ್ರಗಳನ್ನು ಅಭಿಮಾನಿಗಳಿಗೆ ಉಚಿತವಾಗಿ ನೀಡುವ ಮೂಲಕ ಅಗಲಿದೆ ನಟನಿಗೆ ವಿಶೇಷ ನಮನ ಸಲ್ಲಿಸುತ್ತಿದೆ ಅಮೇಜಾನ್‌. ‘Law’, ‘ಫ್ರೆಂಚ್‌ ಬಿರಿಯಾನಿ’, ‘ಕವಲುದಾರಿ’, ‘ಮಾಯಾಬಜಾರ್‌’ ಮತ್ತು ‘ಯುವರತ್ನ’ ಚಿತ್ರಗಳು ಫೆಬ್ರವರಿ 1ರಿಂದ ಒಂದು ತಿಂಗಳ ಕಾಲ ಅಮೇಜಾನ್‌ ಪ್ರೈಮ್‌ ಚಂದಾದಾರಲ್ಲದವರಿಗೂ ಉಚಿತವಾಗಿ ಸಿಗಲಿವೆ.

LEAVE A REPLY

Connect with

Please enter your comment!
Please enter your name here