ಎಂದಿನ ಮಲೆಯಾಳಂ ಸಿನಿಮಾಗಳಲ್ಲಿ ಕಾಣುವ ನೈಜತೆ, ಸ್ಥಳೀಯತೆ, ತುಸು ಕಡಿಮೆ ಅನಿಸಿದರೂ, ಬೇಡದ ಮಾಸ್ ಮಸಾಲೆಯಂತೂ ಇಲ್ಲ. ಪ್ರೇಕ್ಷಕನನ್ನು ಹಿಡಿದು ಕೂರಿಸಬಹುದಾದ ಒಂದು ಕಮರ್ಷಿಯಲ್ ಸಿನಿಮಾ.
ಮೂವತ್ತೈದು ವರ್ಷಗಳಿಗೂ ಹಿಂದೆ ಕೊಲೆ ಹಾಗು ವಂಚನೆ ಆರೋಪದಡಿಯಲ್ಲಿ ಕೇರಳ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆತಪ್ಪಿಸಿಕೊಂಡು ಇಂದಿಗೂ ನಿಗೂಢವಾಗಿರುವ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಎನ್ನಲಾಗುವ ಸುಕುಮಾರ ಕುರುಪ್’ ಕೇಸ್ ಆಧರಿಸಿದ ಕಥೆ ‘ಕುರುಪ್’. ಕುಖ್ಯಾತ ಕುರುಪ್‌ನ ಯೌವನಾವಸ್ಥೆಯಿಂದ ಶುರುವಾಗುವ ಕಥೆ ಅವನ ಭಂಡ ಧೈರ್ಯ, ಪುಂಡಾಟ, ಚಾಲಾಕಿತನ ಹಾಗೂ ಪ್ರೇಮಕತೆಯನ್ನೊಳಗೊಂಡು ಅನೇಕ ತಿರುವುಗಳಿಂದ ಕೂಡಿರುವಂತಹ ಕ್ರೈಮ್ ಸಸ್ಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದೆ. ಒಂದು ಸಾಧಾರಣ ಆಕ್ಸಿಡೆಂಟ್ ಅನ್ನಿಸಬಹುದಾದಂತ ಕೇಸ್ ಒಂದನ್ನು ತನ್ನ ಜಾಣ್ಮೆಯಿಂದ ವಿಚಾರಣೆ ನಡೆಸುವ ಪೋಲಿಸ್ ಅಧಿಕಾರಿ ಕೃಷ್ಣದಾಸ್‌ಗೆ ಸಿಗುವ ಜಾಡು, ಪ್ಲ್ಯಾನ್ ಪ್ರಕಾರ ತನ್ನ ಕಾರ್ಯ ಮುಗಿಸಿ ನಾಡು ಬಿಡಲು ರೆಡಿಯಾಗಿದ್ದ ಕುರುಪ್ ಕೈವಾಡದ ಕುರುಹು ಕಾಣಿಸುತ್ತದೆ. ಅಪರಾಧಿ ಎಷ್ಟೇ ಚಾಲಕಿಯಾದರೂ ಒಂದಲ್ಲ ಒಂದು ಸುಳಿವು ಬಿಟ್ಟಿರುತ್ತಾನೆ ಎನ್ನುವಂತೆ ಕುರುಪ್ ಹಾಗೂ ಸಂಗಡಿಗರು ಕೊಲೆಯೊಂದನ್ನು ಮಾಡಿ ಅದು ಕುರುಪ್ ದೇಹ ಎಂಬಂತೆ ಬಿಂಬಿಸಲು ಗುರುತುಗಳನ್ನೂ ಬದಲಾಯಿಸುತ್ತಾರೆ. ಬದಲಾಯಿಸದೇ ಇದ್ದಂತಹ ಅಂಡರ್‌ವೇರ್‌ನ ಅರ್ಧ ಬೆಂದ ತುಣುಕೊಂದು ಗೋಪಿ ಕೃಷ್ಣನ್ ಪಿಳ್ಳೈ ಅಲಿಯಾಸ್ ಕುರುಪ್ ಕಥೆಯ ಅಸಲಿಯತ್ತಿಗೆ ಮುನ್ನುಡಿಯಾಗುತ್ತದೆ ಅನ್ನೋದು ರೋಚಕ. ಕೇರಳದಲ್ಲಿ ಶುರುವಾಗುವ ಕಥೆ ಮದ್ರಾಸ್, ಬಾಂಬೆ, ಪರ್ಷೀಯಾ ದೇಶಗಳನ್ನು ಹಾದು ಸಾಗುತ್ತದೆ. ಚಿತ್ರ ನೋಡುವ ಪ್ರೇಕ್ಷಕರಲ್ಲಿ ಇಂತಹ ಒಬ್ಬ ಅತಿ ಚತುರ ಕ್ರಿಮಿನಲ್ ಇದ್ದ ಅನ್ನೋದು ಊಹಿಸಲು ಅಸಾಧ್ಯ ಎನ್ನಿಸುವಂತ ಕಥೆ.
ಮೊದಲ ದೃಶ್ಯದಲ್ಲಿ ಅಲೆಗ್ಸಾಂಡರ್ʼ ಕೊಸ್ಟಲ್ ಮುಖಾಂತರ ಇಲ್ಲಿಗೆ ಬರೋ ಸಾಧ್ಯತೆಯಿದೆ, ಐ.ಬಿ.ಎಲ್‌ನಿಂದ ಇನ್‌ಫಾರ್ಮೇಷನ್ ಇದೆ ಎಂದು ಡಿ.ವೈ.ಎಸ್.ಪಿ ಕೃಷ್ಣದಾಸ್‌ಗೆ ಪೋಲಿಸ್ ಅಧಿಕಾರಿಯೊಬ್ಬರು ತಿಳಿಸುತ್ತಾನೆ. ಕುರುಫ್ ಫೈಲ್ ಅನಿರೀಕ್ಷಿತವಾಗಿ ಕಣ್ಣಿಗೆ ಬೀಳುವಂತಹ ನಾಟಕೀಯ ದೃಶ್ಯದಿಂದ ಶುರುವಾಗುವ ಸಿನಿಮಾ, ಮಾಹಿತಿ ನೀಡಲು ಬಂದಿದ್ದ ಆ ಅಧಿಕಾರಿಗೆ ಇವತ್ತಿಗೆ ನಿವೃತ್ತಿಯಾಗುತ್ತಿರುವ ಕೃಷ್ಣದಾಸ್ ಬರೆದಿದ್ದ ಡೈರಿಯನ್ನು ತೆರೆದು ನೋಡುತ್ತಿರುವಂತೆ ವಿವಿಧ ಭಾಗವಾಗಿ ಚಿತ್ರಕಥೆ ಸಾಗುತ್ತದೆ. ಪಾತ್ರಗಳಲ್ಲಿ ದುಲ್ಕರ್ ಸಲ್ಮಾನ್, ಇಂದ್ರಜಿತ್ ಸುಕುಮಾರನ್, ಶೋಭಿತಾ ಧುಲಿಪಾಲಾ, ಶೈನ್ ಟಾಮ್ ಚಾಕೊ, ಸನ್ನಿ ವೇನ್ ಮುಂತಾದವರಿದ್ದು ವಿಶೇಷ ಪಾತ್ರದಲ್ಲಿ ಟೊವಿನೊ ಥಾಮಸ್ ಮತ್ತು ಅನುಪಮ ಪರಮೇಶ್ವರನ್ ಕೂಡ ಇದ್ದಾರೆ. ಎಲ್ಲರ ಅಭಿನಯ ಅಚ್ಚುಕಟ್ಟಾಗಿದೆ. ಎಂದಿನ ಮಲೆಯಾಳಂ ಸಿನಿಮಾಗಳಲ್ಲಿ ಕಾಣುವ ನೈಜತೆ, ಸ್ಥಳೀಯತೆ, ತುಸು ಕಡಿಮೆ ಅನಿಸಿದರೂ, ಬೇಡದ ಮಾಸ್ ಮಸಾಲೆಯಂತೂ ಇಲ್ಲ. ವಿಭಾಗವಾಗಿ ಹೇಳಿರುವ ಕಥೆಗಳು ತಾಳೆ ಹಾಕಿಕೊಳ್ಳುತ್ತ ಎದುರಾಗುವ ತಿರುವು ಮತ್ತು ಆಶ್ಚರ್ಯಕರ ಸನ್ನಿವೇಶಗಳು ಕೊನೆವರೆಗೂ ಪ್ರೇಕ್ಷಕನನ್ನು ಹಿಡಿದು ಕೂರಿಸಬಹುದಾದ ಒಂದು ಕಮರ್ಷಿಯಲ್ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಸಿನಿಮಾ.
ಸಿನಿಮಾಗೆ ಪೂರಕವಾದ ಸಂಗೀತ, ಛಾಯಾಗ್ರಹಣವಿರುವ ಈ ಮಲಯಾಳಂ ಸಿನಿಮಾ ಕನ್ನಡ ಅವತರಣಿಕೆಯಲ್ಲೂ ಲಭ್ಯವಿದೆ. ಈ ಹಿಂದಿನ ದುಲ್ಕರ್ ಅಭಿನಯದ ಬಹುತೇಕ ಎಲ್ಲ ಸಿನಿಮಾಗಳನ್ನು ನಾನು ವೀಕ್ಷಿಸಿದ್ದೇನೆ. ಭಾಷೆ ನನ್ನದಾದರೂ, ಅಪರಿಚಿತ ದ್ವನಿಯೊಂದಿಗೆ ದುಲ್ಕರ್ ಅಭಿನಯವನ್ನು ಹೊಂದಿಸಿಕೊಂಡು ನೋಡುವಾಗ ಕಷ್ಟವಾಯ್ತು. ಹಾಗಾಗಿ ಚಿತ್ರವನ್ನು ಮೂಲ ಮಲಯಾಳಂನಲ್ಲೇ ನೋಡಿದೆ. ಎಲ್ಲರ ಅಭಿನಯವೂ ಇಷ್ಟವಾಯ್ತು. ನಂತರದಲ್ಲಿ ಅರ್ಥವಾಗದಿದ್ದ ಕೆಲವು ದೃಶ್ಯದ ಸಂಭಾಷಣೆ ನೋಡಲು ಫಾರ್ವರ್ಡ್ ಮಾಡುತ್ತ ಕನ್ನಡ ಅವತರಣಿಕೆಯಲ್ಲೂ ನೋಡಿದೆ. ಕನ್ನಡ ಅವತರಣಿಕೆಯಲ್ಲಿ ಸಂಭಾಷಣೆ ಕೆಲವು ಕಡೆ ತಪ್ಪಾದ ಉಚ್ಛಾರಣೆಯಲ್ಲಿದೆ. ಅದ್ಯಾವುದೋ ಸ್ಟ್ಯಾಟಜಿಗಾಗಿಯೋ, ಮತ್ತೊಂದಕ್ಕೋ ಹಾಕಿಕೊಂಡಿರುವಂತಹ ಕೆಲ ನಿಮಿಷಗಳಲ್ಲಿ ಬರುವ ವಿಶೇಷ ಪಾತ್ರಗಳಲ್ಲಿ ಟೊವಿನೊ ಥಾಮಸ್, ಅನುಪಮ ಪರಮೇಶ್ವರನ್ ಚಿತ್ರದಲ್ಲಿ ಇಲ್ಲದಿರುತ್ತಿದ್ದರೂ ಅಂತಹ ವ್ಯತ್ಯಾಸವೇನೂ ಕಾಣಿಸುತ್ತಿರಲಿಲ್ಲ. ಅರಸು ಅಂತಾರೆ ಸಾಹಿತ್ಯ ಬರೆದಿರುವ ‘ಅರೆರೆರೆ ರಗಳೆ ಒಳಗಡೆ ಕಹಳೆ’ ಹಾಡಿನ ಸಾಹಿತ್ಯ ಇಷ್ಟವಾಗುತ್ತದೆ. ಚಿತ್ರಕಥೆಯಲ್ಲಿ ಕೆಲವು ಡ್ರಾಮ್ಯಾಟಿಕ್ ಅನಿಸಿದರೂ, ಆ ರೀತಿಯ ನಿರೂಪಣೆ ಈ ಮಾದರಿ ಚಿತ್ರಕ್ಕೆ ಅವಶ್ಯ ಎನಿಸುತ್ತದೆ. ಇಲ್ಲದಿದ್ದರೆ ಕುಖ್ಯಾತ ಕುರುಪ್‌ನನ್ನು ‘ಮಾಸ್ಟರ್ ಮೈಂಡ್ ಹೀರೋ’ ಅನ್ನುವಂತಹ ಸಂದೇಶ ಸಾರುವ ಅಪಾಯ ಇರುತ್ತಿತ್ತು. ಹಾಗೆ, ದುಲ್ಕರ್ ಸಲ್ಮಾನ್ ಅಭಿಮಾನಿಗಳಾಗಿದ್ದರೆ ಇಲ್ಲವೇ ಕುರುಪ್ ಕುರಿತು ಕುತೂಹಲಗಳಿದ್ದರೆ ಸಿನಿಮಾ ನೋಡಿ ಎನ್ನಬಹುದು. ಅದರ ಹೊರತಾಗಿ ತಪ್ಪದೇ ನೋಡಿ ಎಂದು ರೆಫರ್ ಮಾಡುವ ಯಾವ ಅಂಶಗಳೂ ಚಿತ್ರದಲ್ಲಿಲ್ಲ.
ಸಿನಿಮಾ : ಕುರುಪ್ | ನಿರ್ದೇಶನ : ಶ್ರೀನಾಥ್ ರಾಜೇಂದ್ರನ್ | ಸಂಗೀತ : ಸುಶೀನ್ ಶ್ಯಾಂ | ತಾರಾಬಳಗ : ದುಲ್ಕರ್ ಸಲ್ಮಾನ್, ಇಂದ್ರಜಿತ್ ಸುಕುಮಾರನ್, ಶೋಭಿತಾ ಧುಲಿಪಾಲಾ, ಶೈನ್ ಟಾಮ್ ಚಾಕೊ, ಸನ್ನಿ ವೇನ್