ಕನ್ನಡ ಸಿನಿಮಾ | ಸಲಗ

‘ನಡೆದಿದ್ದೇ ಹಾದಿ’ ಎಂಬ ಅಡಿಬರಹ ಹೊಂದಿರುವ ‘ಸಲಗ’ ಚಿತ್ರ ನಡೆಯುವ ಹಾದಿ ಮಾತ್ರ ಎಷ್ಟೋ ಸಿನಿಮಾಗಳಲ್ಲಿ ಬಂದು ಹೋಗಿರುವಂಥದ್ದು. ಮೊದಲಾರ್ಧದಲ್ಲಿ ರೌಡಿಗಳ ಪಾತ್ರಗಳಿಗೆ ಇಡಲಾಗಿರುವ ‘ಸಾವಿತ್ರಿ’, ‘ಕೆಂಡ’ ಎಂಬೆಲ್ಲಾ ಹೆಸರುಗಳನ್ನು ಕೇಳಿದಾಗ ಇದು ದುನಿಯಾ ವಿಜಿ ಸಿನಿಮಾನೋ, ಇಲ್ಲ ದುನಿಯಾ ಸೂರಿ ಸಿನಿಮಾನೋ ಎಂಬ ಅನುಮಾನ. ಆದರೆ ಆದಿಯಲ್ಲಿ ಸೂರಿ ಹಾದಿ ಹಿಡಿದಿರುವ ವಿಜಿ, ಅಂತ್ಯ ಹತ್ತಿರ ಬಂದಂತೆ 80ರ ದಶಕದ ಆಕ್ಷನ್ ಚಿತ್ರಗಳನ್ನು ನೆನಪಿಸುತ್ತಾರೆ. ‘ನನಗೆ ಅನ್ಯಾಯ ಆಯ್ತು, ಅದಕ್ಕೇ ಅವರ ಮೇಲೆ ಸೇಡು ತೀರಿಸಿಕೊಂಡೆ’ ಎನ್ನುವ ನಾಯಕನನ್ನು ನೋಡಿ, ಅರೇ, ರೌಡಿಸಂ ಚಿತ್ರ ಅದ್ಯಾವಾಗ ಸೇಡಿನ ಕಥೆಯಾಗಿ ಬದಲಾಯಿತು?, ನಾಲ್ಕು ಜನ ನೋಡಿ ಕಲಿಯುವಂತೆ ಬದುಕಬೇಕಾಗಿದ್ದ ಮೇಷ್ಟರ ಮಗ, ಮೂರು ಜನದ ಮೇಲೆ ವೈಯಕ್ತಿಕ ಸೇಡು ತೀರಿಸಿಕೊಳ್ಳಲು ರೌಡಿ ಆಗಬೇಕಿತ್ತೇ? ಎಂಬೆಲ್ಲ ಗೊಂದಲ ಕಾಡುತ್ತದೆ.

ಭೂಗತ ಲೋಕದ ನೈಜ ಚಿತ್ರಣದಿಂದ ಶುರುವಾಗುತ್ತದೆ ‘ಸಲಗ’. ಆದರೆ, ರೌಡಿಗಳ ಅಡ್ಡದಿಂದ ಸೆಕೆಂಡ್ ಹಾಫ್‌ಗೆ ಶಿಫ್ಟ್ ಆಗುವಾಗ ನಾಯಕ ಯಾಕೆ ಅಡ್ಡದಾರಿ ಹಿಡಿದ ಅನ್ನೋದಕ್ಕೆ ಕಾರಣ ಕೊಡಲು ಹೋಗಿ ಅದೇ ಹಳೆಯ ಹಾದಿ ಹಿಡಿಯಲಾಗಿದೆ. ಹಾಗಾಗಿ, ಮಧ್ಯಂತರದ ನಂತರ ‘ಸಲಗ’ ನಡೆಯುವುದು ಅದೇ ಹಳೆಯ ಕಬ್ಬಿನ ಗದ್ದೆಯಲ್ಲಿ. ದುನಿಯಾ ವಿಜಯ್ ಅವರ ಸಿನಿಮಾದಲ್ಲಿ ಇನ್ನೂ ತಾಯಿ ಸೆಂಟಿಮೆಂಟ್ ಬರಲಿಲ್ಲವಲ್ಲ ಎಂದು ಕಾಯುತ್ತಾ ಕೂರುವ ಪ್ರೇಕ್ಷಕನಿಗೆ ಮಧ್ಯಂತರದ ನಂತರ ವಿಜಯ್ ನಿರಾಸೆ ಮಾಡುವುದಿಲ್ಲವಾದರೂ, ಆ ಕಥೆಯ ನಡುವೆ, ಇದು ಹಿಂಡು ತಪ್ಪಿದ ಸಲಗ ಎನಿಸಿದರೆ ಅಚ್ಚರಿ ಇಲ್ಲ. ಆದರೆ ಹಾಗಂತ ಈ ‘ಸಲಗ’, ತೀರಾ ಸಿನಿಮಾ ಮಧ್ಯೆ ಕ್ಯಾಂಡಿ ಕ್ರಷ್ ‘ಸಾಗಾ’ ಆಡುವಷ್ಟೇನೂ ಬೋರು ಹೊಡೆಸುವುದಿಲ್ಲ. ಇಲ್ಲಿ ನಾಯಕ ನಟ ನಿರ್ದೇಶಕನೂ ಆಗಿರುವುದರಿಂದಲೋ ಏನೋ, ಚಿತ್ರದ ಪಾತ್ರಗಳು ನಾಯಕನ ಪಾತ್ರಕ್ಕೆ ಅನಗತ್ಯ ಗೌರವ ಕೊಡುತ್ತವೆ. ವರ್ಕ್ ಮಾಡಲು ಏರೋಪ್ಲೇನ್ ಹತ್ತಿಸಿದ್ದ ಪೊಲೀಸ್ ಕೂಡ ನಾಯಕನನ್ನು ಸಕಲ ಸರ್ಕಾರಿ ಮರ್ಯಾದೆಯೊಂದಿಗೇ ಮಾತನಾಡಿಸುತ್ತಾನೆ.

ಇನ್ನು, ಚಿತ್ರದ ಕಥೆಯನ್ನು ಚಿತ್ರೀಕರಣದ ಒಂದೊಂದು ಹಂತ ಮುಗಿದ ಮೇಲೂ ಬೇಗ ಮುಗಿಸಲು ಸಾಧ್ಯವಾಗುವಂತೆ ಬದಲಾಯಿಸಿಕೊಳ್ಳಲಾಗಿದೆಯೇ ಎಂಬ ಅನುಮಾನ ಅಲ್ಲಲ್ಲಿ ಮೂಡುತ್ತದೆ. ಮೇಷ್ಟ್ರ ಮಗ ಪರಿಸ್ಥಿತಿಯ ನೆಪ ಹೇಳಿ ರೌಡಿ ಆಗಿರುತ್ತಾನೆ. ಆದರೆ ಸಿನಿಮಾದ ‘ಕಥೆಯನ್ನು ಮುಗಿಸುವ’ ಹಂತದಲ್ಲಿ, ‘ಸಲಗ’ ಎಂಬ ಹೆವಿ ವೆಯ್ಟ್ ಹೆಸರಿರುವ ನಾಯಕನ ‘ಕಥೆ ಮುಗಿಸುವುದು’ ಪ್ರೇಕ್ಷಕನಿಗೆ ಇಷ್ಟ ಆಗಲಿಕ್ಕಿಲ್ಲ ಎಂಬ ಅನಿಸಿಕೆಯಲ್ಲಿ, ಪೊಲೀಸ್ ಪಾತ್ರ, ನಾನು ನಾಯಕನ ಅಪ್ಪನ ಸ್ಟೂಡೆಂಟ್ ಆಗಿದ್ದೆ. ನನಗೆ ಅವನು ಚೆನ್ನಾಗಿ ಗೊತ್ತು, ಅವನನ್ನು ನಾನು ಬದಲಾಯಿಸುತ್ತೇನೆ ಎಂಬ ಡೈಲಾಗ್ ಹೊಡೆದು ಬಚಾವ್ ಮಾಡುತ್ತದೆ. ಹಾಗಾದರೆ, ನಾಯಕನ ವಿಚಾರಣೆ ನಡೆಯುವಾಗ, ಅವನು ತನ್ನ ಕರುಣಾಜನಕ ಫ್ಲ್ಯಾಷ್‌ಬ್ಯಾಕ್ ಹೇಳುವಾಗ ಇದೇ ಪೊಲೀಸ್ ಪಾತ್ರ, ಅಮಾಯಕನಂತೆ ಕುಂತು ಕೇಳಿದ್ಯಾಕೆ ಎನ್ನುವ ಕುತೂಹಲಕ್ಕೆ ಉತ್ತರ ದೊರೆಯುವುದಿಲ್ಲ.

ಚಿತ್ರಕ್ಕೆ ‘A’ ಸರ್ಟಿಫಿಕೇಟ್ ನೀಡಲಾಗಿದೆ ನಿಜ. ಆದರೆ ಸಿನಿಮಾ ಶುರುವಾಗುತ್ತಿದ್ದಂತೆ ಮಾಸ್ತಿ ಅವರ ಸಂಭಾಷಣೆಯ ಕೆಲವೊಂದು ಪದಗಳನ್ನು ಕೇಳಿದ ಪ್ರೇಕ್ಷಕ ‘A’ನ್ ನಡೀತಾ ಇದೆ ಇಲ್ಲಿ’ ಎಂದು ಕಂಗಾಲಾಗುತ್ತಾನೆ. ಆ ಮಟ್ಟಕ್ಕೆ ಸೂ..ಮಗ, ಬೋ..ಮಗ, ಗಾಂಡುಗಳ ಜೊತೆಗೆ, ಇಲ್ಲಿ ಹೇಳಲು ಸಾಧ್ಯವಾಗದ ಮತ್ತು ಸೆನ್ಸಾರ್‌ನಲ್ಲಿ ಬ್ಯಾನ್ ಆಗಿವೆ ಎಂದೇ ನಂಬಲಾಗಿದ್ದ ಅನೇಕ ಬೈಗುಳಗಳನ್ನು ಕೇಳಿ, ‘ಏನ್ ಸಾರ್, ಈ ಸಿನಿಮಾಕ್ಕೆ ನಿಜಕ್ಕೂ ಸೆನ್ಸಾರ್ ಮಾಡಿದ್ದಾರಾ?’ ಎಂಬ ಅನುಮಾನ ಮೂಡುತ್ತದೆ.

ಅದರ ಹೊರತಾಗಿ ಇಂಥ ಚಿತ್ರಗಳಿಗೆ ಲೀಲಾಜಾಲವಾಗಿ ಡೈಲಾಗ್ ಬರೆಯುವ ಮಾಸ್ತಿ ಅವರ ಸಂಭಾಷಣೆ ಎಂದಿನಂತೆ ಖಡಕ್ ಆಗಿದೆ ಮತ್ತು ಹಲವು ಕಡೆ ಮನಸ್ಸಿಗೆ ಖುಷಿ ಕೊಡುವಷ್ಟು ಮೀನಿಂಗ್‌ಫುಲ್ ಆಗಿದೆ. ಆದರೆ, ಒಂದು ದೃಶ್ಯದಲ್ಲಿ ಪೊಲೀಸ್ ಆಫೀಸರ್ ಹತಾಶೆಯಿಂದ ಗಾಳಿಯಲ್ಲಿ ನಾಲ್ಕು ಸುತ್ತು ಗುಂಡು ಹಾರಿಸುತ್ತಾನೆ. ಅದಾದ ನಂತರದ ದೃಶ್ಯದಲ್ಲಿ, ‘ನಿಮ್ಮ ಪೊಲೀಸರಿಗೆ ರಿವಾಲ್ವರ್ ಗುಂಡು ಸಿಗುತ್ತದೆ, ಆದರೆ ಪ್ರತಿಯೊಂದು ಗುಂಡಿಗೂ ಲೆಕ್ಕ ಕೊಡಬೇಕು’ ಎನ್ನುತ್ತಾನೆ ನಾಯಕ. ಹಾಗಾಗಿ ಮಾಸ್ತಿ ಅವರ ಈ ಡೈಲಾಗ್ ಕೂಡ ಗಾಳಿಯಲ್ಲಿ ಗುಂಡು ಹಾರಿಸಿದಂತೆಯೇ ಕೇಳಿಸುತ್ತದೆ. ಚಿತ್ರದಲ್ಲಿ ವಿಜಯ್ ಅವರದ್ದು ಏಕತಾನತೆಯ ಅಭಿನಯ. ಇದ್ದುದರಲ್ಲಿ ಧನಂಜಯ ತಮ್ಮ ಪಾತ್ರದ ತೂಕ ಹೆಚ್ಚಿಸಿದ್ದಾರೆ. ನಾಯಕಿ ಸಂಜನಾ ಆನಂದ್ ಕೂಡ ರೌಡಿಯಿಸಂ ಭಾಷೆಯನ್ನೇ ಮಾತಾಡಿದ್ದಾರೆ. ಆದರೆ ಅವರ ಪ್ರತಿಭೆ ಒಂದೆರಡು ದೃಶ್ಯಗಳು ಮತ್ತು ಹಾಡಿಗಷ್ಟೇ ಸೀಮಿತವಾಗಿದೆ. ಎಲ್ಲರಿಗಿಂತ ಹೆಚ್ಚು ಇಷ್ಟವಾಗುವುದು ಕಾಕ್ರೋಚ್ ಸುಧಿ ಅವರ ಸಾವಿತ್ರಿ ಪಾತ್ರ ಮತ್ತು ಅವರ ಜೊತೆಗಿರುವ ಗಾಂಜಾ ಗಿರಾಕಿಯ ಪಾತ್ರ.

ರಕ್ತ ತುಂಬಿದ ಸಲಗನ ಕ್ಯಾನ್ವಾಸ್ ಅನ್ನು ಹ್ಯಾಂಡಲ್ ಮಾಡಿರುವ ಶಿವಸೇನಾ ಅವರ ಛಾಯಾಗ್ರಹಣ ಸಲಗನ ದಾರಿಗೆ ಅಡ್ಡಬರೋದಿಲ್ಲ. ಚರಣ್ ರಾಜ್ ಅವರ ಸಂಗೀತದ ಹಾಡುಗಳಲ್ಲಿ ಎನರ್ಜಿ ಇದೆ. ಕ್ಯಾಪ್ಟನ್ ಆಫ್ ದಿ ಶಿಪ್ ಆಗಿರುವ ವಿಜಯ್ ಒಳ್ಳೆಯ ಪ್ಲೇಯಿಂಗ್ ತಂಡವನ್ನೇ ಸೆಲೆಕ್ಟ್ ಮಾಡಿದ್ದಾರೆ. ಚಿತ್ರದ ಸಂಭಾಷಣೆಯ ಪ್ರಕಾರವೇ ಹೇಳುವುದಾದರೆ ಅವರ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲವೂ ಚೆನ್ನ. ಆದರೆ ಪ್ಲೇಯರ್‌ಗಳ ಕಥೆ ಹೇಳುವ ಸ್ಕ್ರೀನ್ ಪ್ಲೇ ಬಗ್ಗೆ ಇನ್ನಷ್ಟು ಹೋಮ್ ವರ್ಕ್ ಬೇಕಿತ್ತು ಎನಿಸುತ್ತದೆ. ಒಟ್ಟಿನಲ್ಲಿ, ಫ್ಯಾಮಿಲಿ ಜೊತೆ ಕೂತು ನೋಡೋದು ಕಷ್ಟ ಎನಿಸಿದರೂ ರೌಡಿಸಂ ಹಿನ್ನೆಲೆಯ ಚಿತ್ರಗಳನ್ನು ಇಷ್ಟಪಡುವವರಿಗೆ ಮೊದಲರ್ಧ ಖುಷಿ ಕೊಡುತ್ತದೆ. ಆದರೆ, ಎಲ್ಲವೂ ಸೇರಿ, ಈ ಸಲಗ, ಏನೋ ಒಂದ್ ಸಲ ನೋಡಬಹುದು ಎನ್ನುವಂಥ ಸಿನಿಮಾ ಆಷ್ಟೇ ಆಗಿದೆ ಅನ್ನೋದು ನಿರಾಸೆ.

ನಿರ್ದೇಶನ : ದುನಿಯಾ ವಿಜಯ್‌ | ನಿರ್ಮಾಪಕ : ಕೆ.ಪಿ.ಶ್ರೀಕಾಂತ್‌ | ಸಂಗೀತ : ಚರಣ್ ರಾಜ್‌ | ಸಂಭಾಷಣೆ : ಮಾಸ್ತಿ | ತಾರಾಗಣ : ದುನಿಯಾ ವಿಜಯ್‌, ಸಂಜನಾ ಆನಂದ್‌, ಧನಂಜಯ, ಅಚ್ಯುತ್ ಕುಮಾರ್, ರಂಗಾಯಣ ರಘು ಮತ್ತಿತರರು.

LEAVE A REPLY

Connect with

Please enter your comment!
Please enter your name here