ನಟ ಪುನೀತ್‌ ರಾಜಕುಮಾರ್‌ ವಿಶೇಷ ಪಾತ್ರದಲ್ಲಿ ನಟಿಸಿರುವ ‘ಲಕ್ಕಿಮ್ಯಾನ್‌’ ಸಿನಿಮಾದ ನೂತನ ಪೋಸ್ಟರ್‌ ರಿಲೀಸ್‌ ಆಗಿದೆ. 2022ಕ್ಕೆ ಶುಭಾಶಯ ಕೋರುತ್ತಾ ಚಿತ್ರದ ಹೀರೋ ಡಾರ್ಲಿಂಗ್‌ ಕೃಷ್ಣ ಪೋಸ್ಟರ್‌ ಟ್ವೀಟ್‌ ಮಾಡಿದ್ದಾರೆ.

ಕನ್ನಡ ಚಿತ್ರರಂಗ 2021ರಲ್ಲಿ ಕಂಡ ದೊಡ್ಡ ದುರಂತ ನಟ ಪುನೀತ್‌ ರಾಜಕುಮಾರ್‌ ಅಗಲಿಕೆ. ಈ ವರ್ಷ ಅವರ ನಟನೆಯ ‘ಯುವರತ್ನ’ ಸಿನಿಮಾ ತೆರೆಕಂಡು ಯಶಸ್ವಿಯಾಗಿತ್ತು. ಅವರ ‘ಜೇಮ್ಸ್‌’ ಚಿತ್ರದ ಬಹುಪಾಲು ಚಿತ್ರೀಕರಣ ಪೂರ್ಣಗೊಂಡಿದ್ದರೂ ಹಾಡುಗಳನ್ನು ಚಿತ್ರಿಸಬೇಕಿತ್ತು. ಈ ಚಿತ್ರದ ಜೊತೆ ‘ಲಕ್ಕಿಮ್ಯಾನ್‌’ ಚಿತ್ರದ ವಿಶೇಷ ಪಾತ್ರದೊಂದಿಗೆ ಅವರು ತೆರೆಗೆ ಬರಲಿದ್ದಾರೆ. ಈ ಸಿನಿಮಾದ ನೂತನ ಪೋಸ್ಟರ್‌ ಬಿಡುಗಡೆಯಾಗಿದೆ. ಚಿತ್ರದ ಹೀರೋ ಕೃಷ್ಣ ಇಂದು ಹೊಸವರ್ಷಕ್ಕೆ ಶುಭಕೋರುತ್ತಾ ಸಿನಿಮಾದ ಪೋಸ್ಟರ್‌ ಟ್ವೀಟ್‌ ಮಾಡಿದ್ದಾರೆ. ನಾಗೇಂದ್ರಪ್ರಸಾದ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭುದೇವ ಕೂಡ ನಟಿಸಿದ್ದಾರೆ. ವರನಟ ಡಾ.ರಾಜಕುಮಾರ್ ಅವರ ಕುರಿತು ರಚಿಸಿರುವ ಹಾಡಿಗೆ ಪುನೀತ್ ಮತ್ತು ಪ್ರಭುದೇವ ಒಟ್ಟಿಗೇ ಡ್ಯಾನ್ಸ್ ಮಾಡಿರುವುದು ವಿಶೇಷ. ಇದು ‘ಓ ಮೈ ಕಡವಳೆ’ ತಮಿಳು ಸಿನಿಮಾದ ರೀಮೇಕ್‌. ಅಲ್ಲಿ ವಿಜಯ್‌ ಸೇತುಪತಿ ಮಾಡಿದ್ದ ಪಾತ್ರದಲ್ಲಿ ಕನ್ನಡ ಅವತರಣಿಕೆಯಲ್ಲಿ ಪುನೀತ್‌ ಮಾಡಿದ್ದಾರೆ. ನಾಯಕನಟನಿಗೆ ಮಾರ್ಗದರ್ಶನ ನೀಡುವ ವಿಶೇಷ ಪಾತ್ರವಿದು. ಪರ್ಸಾ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಸಿನಿಮಾದ ಬಿಡುಗಡೆ ದಿನಾಂಕ ಸದ್ಯದಲ್ಲೇ ಘೋಷಣೆಯಾಗಲಿದೆ.

ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ನಾಯಕಿಯಾಗಿ ಸಂಗೀತ ಶೃಂಗೇರಿ ನಟಿಸಿದ್ದು, ರೋಶನಿ ಪ್ರಕಾಶ್ ದ್ವಿತೀಯ ನಾಯಕಿ. ಉಳಿದಂತೆ ಆರ್ಯ, ರಂಗಾಯಣ ರಘು, ಸಾಧುಕೋಕಿಲ ನಾಗಭೂಷಣ್, ಸುಂದರ್ ರಾಜ್, ರೋಶಿನಿ ಪ್ರಕಾಶ್, ಸುದಾ ಬೆಳವಾಡಿ, ಮಾಳವಿಕ ಮತ್ತಿತರರು ಅಭಿನಯಿಸಿದ್ದಾರೆ. ಪಿ.ಆರ್.ಮೀನಾಕ್ಷಿ ಸುಂದರಮ್ ಮತ್ತು ಸುಂದರ ಕಾಮರಾಜ್ ನಿರ್ಮಾಣದ ಚಿತ್ರಕ್ಕೆ ಜೀವಾ ಶಂಕರ್ ಛಾಯಾಗ್ರಹಣ, V2 ವಿಜಯ್ ಮತ್ತು ವಿಕ್ಕಿ ಅವರ ಸಂಗೀತ ಸಂಯೋಜನೆ, ಧನಂಜಯ ರಂಜನ್ ಗೀತಸಾಹಿತ್ಯ, ಬಾಲಾಜಿ ಸಂಕಲನ, ಅಶ್ವಥ್ ಮಾರಿಮುತ್ತು ಅವರ ಕಥೆ, ಮಂಜು ಮಾಂಡವ್ಯ, ಸಂಪತ್ ಸಿರಿಮನೆ ಹಾಗೂ ರಘುನಂದನ್ ಕಾನಡ್ಕ(ಪುನೀತ್ ಪಾತ್ರಕ್ಕೆ) ಅವರ ಸಂಭಾಷಣೆ, ಮೋಹನ್ ಬಿ ಕೆ. ಕಲಾನಿರ್ದೇಶನವಿದೆ.

LEAVE A REPLY

Connect with

Please enter your comment!
Please enter your name here