ಬಾಲಕೃಷ್ಣ ಅಭಿನಯದ ನೂತನ ತೆಲುಗು ಸಿನಿಮಾದಲ್ಲಿ ದುನಿಯಾ ವಿಜಯ್ ಖಳ ಪಾತ್ರದಲ್ಲಿ ನಟಿಸುತ್ತಿದ್ದು, ಇಂದು ಸಿನಿಮಾದಲ್ಲಿನ ಅವರ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಗೋಪಿಚಂದ್ ಮಲಿನೇನಿ ನಿರ್ದೇಶನದ ಈ ಚಿತ್ರದ ಮೂಲಕ ವಿಜಯ್ ಟಾಲಿವುಡ್‌ಗೆ ಪರಿಚಯವಾಗುತ್ತಿದ್ದಾರೆ.
ಗೋಪಿಚಂದ್ ಮಲಿನೇನಿ ನಿರ್ದೇಶನದಲ್ಲಿ ಬಾಲಕೃಷ್ಣ ನಟಿಸುತ್ತಿರುವ ಆಕ್ಷನ್ ಎಂಟರ್‌ಟೇನರ್ ಸಿನಿಮಾದಲ್ಲಿ ದುನಿಯಾ ವಿಜಯ್ ಪ್ರಮುಖ ಖಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ನಿರ್ಮಿಸುತ್ತಿರುವ ಮೈತ್ರಿ ಮೂವೀ ಮೇಕರ್ಸ್ ಇಂದು ಚಿತ್ರದಲ್ಲಿನ ವಿಜಯ್‌ರ ಫಸ್ಟ್‌ಲುಕ್ ಬಿಡುಗಡೆಗೊಳಿಸಿದೆ. ಸಿಗರೇಟಿನೊಂದಿಗೆ ಇಂಟೆನ್ಸ್ ಲುಕ್‌ನಲ್ಲಿದ್ದಾರೆ ವಿಜಯ್. ಚಿತ್ರದಲ್ಲಿ ಅವರ ಪಾತ್ರದ ಹೆಸರು ‘ಮುಸಲಿ ಮದುಗು ಪ್ರತಾಪ್ ರೆಡ್ಡಿ’. ಸದ್ಯ ಹೈದರಾಬಾದ್‌ನಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದು, ವರಲಕ್ಷ್ಮೀ ಶರತ್ ಕುಮಾರ್ ಪ್ರಮುಖ ಪಾತ್ರದಲ್ಲಿ ಇರುತ್ತಾರೆ. ನೈಜ ಘಟನೆಗಳನ್ನು ಆಧರಿಸಿ ಚಿತ್ರಕಥೆ ಹೆಣೆಯಲಾಗಿದ್ದು, ಎಸ್.ಥಮನ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ರಿಷಿ ಪಂಜಾಬಿ ಛಾಯಾಗ್ರಹಣ, ಸಾಯಿ ಮಾಧವ ಬುರ್ರಾ ಸಂಭಾಷಣೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಕಲನಕಾರ ನವೀನ್ ನೂಲಿ, ಎ.ಎಸ್.ಪ್ರಕಾಶ್ ಪ್ರೊಡಕ್ಷನ್ ವಿನ್ಯಾಸ, ರಾಮ್ – ಲಕ್ಷ್ಮಣ್ ಸಾಹಸ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.