ಕನ್ನಡ ಚಿತ್ರರಂಗದ ಪ್ರತಿಭಾವಂತ ಚಿತ್ರನಿರ್ದೇಶಕ ಡಿ.ಸತ್ಯಪ್ರಕಾಶ್‌ ಸಮಾನಮನಸ್ಕರ ಜೊತೆಗೂಡಿ ‘ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್‌’ ಆರಂಭಿಸಿದ್ದಾರೆ. ಈ ಮೂಲಕ ಚಿತ್ರವಿತರಣೆ ವ್ಯವಹಾರ ಅರಿಯುವುದು, ಇಂಡಿಪೆಂಡೆಂಟ್‌ ಫಿಲ್ಮ್‌ ಮೇಕರ್ಸ್‌ಗಳಿಗೆ ನೆರವಾಗುವ ಮಹತ್ವಾಕಾಂಕ್ಷೆ ಅವರದು.

‘ರಾಮಾ ರಾಮಾ ರೇ’, ‘ಒಂದಲ್ಲಾ ಎರಡಲ್ಲಾ’ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ ನಿರ್ದೇಶಕ ಡಿ.ಸತ್ಯಪ್ರಕಾಶ್‌. ಅವರ ನಿರ್ದೇಶನದ ಮೂರನೇ ಸಿನಿಮಾ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಇದೇ ತಿಂಗಳ ಮೂರನೇ ವಾರದಲ್ಲಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಈ ಮಧ್ಯೆ ಅವರು ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಸಮಾನಮನಸ್ಕ ಸ್ನೇಹಿತರೊಡಗೂಡಿ ‘ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್‌’ ಆರಂಭಿಸಿದ್ದಾರೆ. ಪ್ರಕಾಶ್‌ ಪಾಂಡೇಶ್ವರ್‌, ಮಂಜುನಾಥ್‌ ಡಿ ಮತ್ತು ದೀಪಕ್‌ ಗಂಗಾಧರ್‌ ಅವರು ಈ ಯೋಜನೆಯಲ್ಲಿ ಸತ್ಯರಿಗೆ ಜೊತೆಯಾಗಿದ್ದಾರೆ. ಬದಲಾದ ಸಿನಿಮಾ ಮೇಕಿಂಗ್‌, ಬಿಸ್ನೆಸ್‌ನ ಇಂದಿನ ದಿನಗಳಲ್ಲಿ ಈ ಸಂಸ್ಥೆಯ ಮೂಲಕ ಹೆಚ್ಚೆಚ್ಚು ಸಿನಿಮಾ ವೀಕ್ಷಕರನ್ನ ತಲುಪುವುದು, ಇಂಡಿಪೆಂಡೆಂಟ್‌ ಫಿಲ್ಮ್‌ ಮೇಕರ್‌ಗಳಿಗೆ ನೆರವಾಗುವುದು ಸಂಸ್ಥೆಯ ಆಶಯ.

ತಮ್ಮ ಯೋಜನೆಯ ಬಗ್ಗೆ ಮಾತನಾಡಿದ ಸತ್ಯಪ್ರಕಾಶ್‌, “ಆರಂಭದ ದಿನಗಳಲ್ಲಿ ಸಿನಿಮಾ ಬಿಸ್ನೆಸ್‌ ಗೊತ್ತಿಲ್ಲದ ನಾವು ಸಾಕಷ್ಟು ತೊಡಕುಗಳನ್ನು ಎದುರಿಸಿದ್ದೆವು. ಇಂಡಿಪೆಂಡೆಂಟ್‌ ಫಿಲ್ಮ್‌ ಮೇಕರ್ಸ್‌ಗಳಿಗೆ ಸಿನಿಮಾ ರಿಲೀಸ್‌ ಮಾಡುವುದೇ ದೊಡ್ಡ ಸಮಸ್ಯೆ. ಥಿಯೇಟರ್‌ಗೆ ಹೇಗೆ ರಿಲೀಸ್‌ ಮಾಡಬೇಕು? ಎಷ್ಟು ಶೋ ಕೇಳಬೇಕು? ಪ್ರೊಮೋಷನ್‌… ಹೀಗೆ ಸಾಕಷ್ಟು ವಿಷಯಗಳಿರುತ್ತವೆ. ಅಂದುಕೊಂಡ ಹಾಗೆ ಸಿನಿಮಾ ಮಾಡುವ ತಂತ್ರಜ್ಞರು ಜನರಿಗೆ ಸಿನಿಮಾ ತಲುಪಿಸುವ ಹಾದಿಯಲ್ಲಿ ಸೋಲುತ್ತಾರೆ. ಇಲ್ಲಿಯವರೆಗೆ ಉದ್ಯಮದಲ್ಲಿ ತೊಡಗಿಸಿಕೊಂಡ ನನಗೆ, ನನ್ನ ಜೊತೆಗಿರುವ ಸ್ನೇಹಿತರಿಗೆ ಈ ಬಗ್ಗೆ ಕೊಂಚ ಅರಿವಿದೆ. ಈ ಹಿನ್ನೆಲೆಯಲ್ಲಿ ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್‌ ಸಂಸ್ಥೆ ಆರಂಭಿಸಿದ್ದೇವೆ. ಗುಣಮಟ್ಟದ ಸಿನಿಮಾಗಳನ್ನು ಹೆಚ್ಚು ಜನರಿಗೆ ರೀಚ್‌ ಮಾಡಿಸುವುದು, ಪ್ರತಿಭಾವಂತ ಯುವ ನಿರ್ದೇಶಕರಿಗೆ ನೆರವಾಗುವ ಆಶಯ ನಮ್ಮದು” ಎನ್ನುತ್ತಾರೆ.

LEAVE A REPLY

Connect with

Please enter your comment!
Please enter your name here