ಸಿನಿಮಾ ಮತ್ತು ಕಿರುತೆರೆ ನಟ ಮೋಹನ್‌ ಜುನೇಜಾ ಇಂದು ಬೆಳಗಿನ ಜಾವ ಅಗಲಿದ್ದಾರೆ. ಕನ್ನಡ ಸೇರಿದಂತೆ ದಕ್ಷಿಣದ ಇತರೆ ಭಾಷೆಗಳ ನೂರಕ್ಕೂ ಹೆಚ್ಚು ಚಿತ್ರಗಳು, ಹತ್ತಾರು ಧಾರಾವಾಹಿಗಳ ನೂರಾರು ಸಂಚಿಕೆಗಳಲ್ಲಿ ಅವರು ಅಭಿನಯಿಸಿದ್ದಾರೆ.

“ಗ್ಯಾಂಗ್‌ ಕಟ್ಕೊಂಡು ಬರೋನು ಗ್ಯಾಂಗ್‌ಸ್ಟರ್‌… ಅವನು ಒಬ್ಬನೇ ಬರೋನು… MONSTER” ಎಂದು ‘KGF’ ಚಿತ್ರದಲ್ಲಿ ನಟ ಮೋಹನ್‌ ಜುನೇಜಾ ಪಾತ್ರ ಹೇಳುವ ಸಂಭಾಷಣೆ ಸಾಕಷ್ಟು ಜನಪ್ರಿಯವಾಗಿತ್ತು. ತಮ್ಮದೇ ಆದ ವಿಶಿಷ್ಟ ಮ್ಯಾನರಿಸಂ ಮತ್ತು ದನಿಯಿಂದ ಸಿನಿಮಾ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಮೋಹನ್‌ ಜುನೇಜಾ ಅಗಲಿದ್ದಾರೆ. ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಕಿರುತೆರೆ ಮತ್ತು ಸಿನಿಮಾಗಳ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಅವರಿಗೆ ‘ವಠಾರ’ ಧಾರಾವಾಹಿಯ ಪಾತ್ರ ಜನಪ್ರಿಯತೆ ತಂದುಕೊಟ್ಟಿತ್ತು. ಈ ಧಾರಾವಾಹಿ ನಂತರ ಅವರು ಸಿನಿಮಾಗಳಲ್ಲಿ ಹೆಚ್ಚೆಚ್ಚು ನಟಿಸತೊಡಗಿದರು. ಚೆಲ್ಲಾಟ, ಜೋಗಿ, ಕೆಜಿಎಫ್‌ ಸಿನಿಮಾಗಳಲ್ಲಿನ ಅವರ ಪಾತ್ರಗಳನ್ನು ಜನರು ಗುರುತಿಸುತ್ತಾರೆ. ಸ್ಕ್ರೀನ್‌ಸ್ಪೇಸ್‌ ಕಡಿಮೆ ಇದ್ದರೂ ತಮ್ಮದೇ ಆದ ಶೈಲಿಯಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತಿದ್ದ ಕಲಾವಿದ ಮೋಹನ್‌ ಜುನೇಜಾ ಹಾಸ್ಯ, ಪೋಷಕ, ಖಳ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮೋಹನ್‌ ಜುನೇಜಾ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಿತ್ರರಂಗದ ನಟ – ನಟಿಯರು ಸಂತಾಪ ಸೂಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here