ಅಮೇರಿಕವೋ ಪ್ಯಾರಿಸ್ಸೋ ಎಂಬ ಆಯ್ಕೆ ಎಮಿಲಿಗೆ ಧುತ್ತನೆ ಎದುರಾಗುತ್ತದೆ. ಎಮಿಲಿಯ ಆಯ್ಕೆ ಯಾವುದು? ಆಲ್ಫಿಯ ಪ್ರೀತಿಯನ್ನು ಎಮಿಲಿ ಪುರಸ್ಕಾರಿಸುತ್ತಾಳಾ? ಲವಲವಿಕೆಯ ಗೊಂಬೆ ಎಮಿಲಿಯ ಗೊಂದಲಗಳಿಗೆ ಪರಿಹಾರ ಮತ್ತು ಜೀವನದ ಹಾದಿಗೆ ಸ್ಪಷ್ಟತೆ ನಾಲ್ಕನೇ ಸೀಸನ್‌ನಲ್ಲಿ ಸಿಗುತ್ತದಾ? ‘Emily in Paris’ ಸರಣಿ Netflixನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಪ್ಯಾರಿಸ್ ನಗರ ಫ್ಯಾಷನ್ ಕ್ಯಾಪಿಟಲ್ ಎಂದೇ ಪ್ರಸಿದ್ಧ. ಫ್ಯಾಷನ್ ಪ್ರಿಯರ ಕಾಶಿ ಎಂದೇ ಕರೆಕೊಳ್ಳುವ ಪ್ಯಾರಿಸ್ ಬಹುತೇಕರ ಕನಸು. ತನ್ನ ಕನಸುಗಳಿಗೆ ಗರಿ ಕೊಡಲು ಪ್ಯಾರಿಸ್ ನಗರಕ್ಕೆ ಆಚಾನಕ್ಕಾಗಿ ಭೇಟಿ ಕೊಟ್ಟು ಅದೇ ಊರಿನ ಸಮ್ಮೋಹನಕ್ಕೆ ಒಳಗಾಗಿ ಅಲ್ಲೇ ಬದುಕು ಕಟ್ಟಿಕೊಳ್ಳಲು ನಿರ್ಧರಿಸುವ ಕನಸು ಕಂಗಳ ಅಮೇರಿಕನ್ ಬೆಡಗಿ ಎಮಿಲಿಯ ಕಥೆ ಈ ವೆಬ್ ಸರಣಿ ‘ಎಮಿಲಿ ಇನ್ ಪ್ಯಾರಿಸ್’. ಮೊದಲನೇ ಸೀಸನ್‌ನಲ್ಲಿ ಎಮಿಲಿ ಆಚಾನಕ್ಕಾಗಿ ಕೆಲಸದ ಮೇಲೆ ಫ್ರಾನ್ಸ್ ದೇಶಕ್ಕೆ ಕಾಲಿಡುತ್ತಾಳೆ. ಹುಟ್ಟಾ ಅಮೇರಿಕನ್ ಆಗಿರುವ ಎಮಿಲಿಗೆ ಶುರುವಿನಲ್ಲಿ ಫ್ರಾನ್ಸ್ ದೇಶದ ಆಚಾರ, ವಿಚಾರ, ಭಾಷೆ ಎಲ್ಲವೂ ತಬ್ಬಿಬ್ಬು ಉಂಟು ಮಾಡುತ್ತದೆ.

ಲಘು ಹಾಸ್ಯದ ಜಾಡಲ್ಲೇ ಸಾಗುವ ಕಥೆ ಪ್ಯಾರಿಸ್ಸಿನ ಮನೋಹರ ದೃಶ್ಯಗಳನ್ನು ವೀಕ್ಷಕರಿಗೆ ಕಟ್ಟಿಕೊಡುತ್ತಲೇ ಆ ಊರಿನ work culture ಮತ್ತು ಸಾಂಸ್ಕೃತಿಕ ಆಯಾಮದ ಪರಿಚಯಗಳನ್ನು ಮಾಡಿಕೊಡುತ್ತಾ ಹೋಗುತ್ತದೆ. ಫ್ಯಾಷನ್ ಮತ್ತು ಜಾಹೀರಾತಿನ ಪ್ರಪಂಚದ ಆಗುಹೋಗುಗಳನ್ನು ತೆರೆದಿಡುತ್ತಾ ಹೋಗುತ್ತದೆ. ಆಕಸ್ಮಿಕವಾಗಿ ಭೇಟಿ ಆಗುವ ಗೆಳತಿ ಮಿಂಡಿ ಪಾತ್ರ ಕ್ರಮೇಣ ಎಮಿಲಿಗೆ ಆಪ್ತವಾಗುತ್ತಾ ಫ್ರಾನ್ಸ್ ದೇಶದ ಅಪರಿಚಿತತೆಯನ್ನು ದೂರ ಮಾಡುವಲ್ಲಿ ಸಹಾಯ ಮಾಡುತ್ತದೆ. ಮಿಂಡಿಗೆ ಹಾಡುಗಾರ್ತಿಯಾಗಬೇಕೆಂದು ಬಹು ದೊಡ್ಡ ಕನಸು. ತನ್ನೂರಾದ ಚೀನಾದಲ್ಲಿ ಆದ ಒಂದು ಕಹಿ ಘಟನೆ ಮಿಂಡಿಯನ್ನು ತನ್ನ ಹುಟ್ಟೂರಿನಿಂದ ದೂರ ಮಾಡಿ ಪ್ಯಾರಿಸ್‌ವರೆಗೂ ಕರೆತಂದಿರುತ್ತದೆ.

ಶ್ರೀಮಂತ ಕುಟುಂಬದ ಹಿನ್ನೆಲೆ ಇದ್ದರೂ ಮಿಂಡಿ ಎಲ್ಲವನ್ನೂ ತೊರೆದು ತನ್ನಿಷ್ಟದ ಬದುಕಿನ ಹಾದಿಯನ್ನು ಪ್ಯಾರಿಸ್ ನಗರದಲ್ಲಿ ಅರಸಲು ಬಂದಿರುತ್ತಾಳೆ. ಸಂದರ್ಭಗಳು ಎಮಿಲಿ ಮತ್ತು ಮಿಂಡಿಯನ್ನು ಆಪ್ತರಾಗಿಸುತ್ತಾ ಹೋಗುತ್ತದೆ. ಇದೇ ಸಂದರ್ಭದಲ್ಲಿ ಎಮಿಲಿಗೆ ಚೆಫ್ ಗೇಬ್ರಿಯಲ್‌ ಪರಿಚಯವಾಗುತ್ತದೆ. ಗೇಬ್ರಿಯಲ್‌ಗೆ ತನ್ನ ಸ್ವಂತ ಊರಿನಲ್ಲಿ ತನ್ನದೇ ಸ್ವಂತ ರೆಸ್ಟೋರೆಂಟ್‌ ತೆರೆಯಬೇಕೆನ್ನುವ ಕನಸು. ಎಮಿಲಿ ಮತ್ತು ಗೇಬ್ರಿಯಲ್ ನಡುವೆ ಆಕಸ್ಮಿಕವಾಗಿ ಏಕಾಂತ ಸೃಷ್ಟಿಯಾಗಿ ಇಬ್ಬರೂ ಒಂದಾಗುತ್ತಾರೆ. ಅವರಿಬ್ಬರ ನಡುವೆ ಇರೋದು ಬರೀ ಸ್ನೇಹವಾ ಅಥವ ಪ್ರೇಮವಾ ಎಂಬ ಪ್ರಶ್ನೆಯೊಂದಿಗೆ ಸೀಸನ್ ಒಂದು ಮುಕ್ತಾಯವಾಗುತ್ತದೆ.

ಸೀಸನ್ ಎರಡರಲ್ಲಿ ಪ್ರೇಕ್ಷಕರಿಗೆ ಎಮಿಲಿಯ ವೃತ್ತಿಪರತೆ ಮತ್ತು ಆಕೆಯ ಸೃಜನಶೀಲತೆಯ ಅನಾವರಣ ಆಗುತ್ತದೆ. ಎಮಿಲಿ ನೋಡಲಿಕ್ಕೆ ಗೊಂಬೆಯ ಹಾಗೆ ಎಷ್ಟು ನಾಜೂಕಾಗಿ ಕಂಡರೂ ವೃತ್ತಿಯ ವಿಷಯದಲ್ಲಿ ದೈತ್ಯ ಪ್ರತಿಭೆ. ಸಂಸ್ಥೆಯಲ್ಲಿ ತನ್ನದೇ ಛಾಪು ಮೂಡಿಸುತ್ತಾ ಸವಾಲುಗಳು ಎದುರಾದಾಗ ತನ್ನ ಬುದ್ಧಿವಂತಿಕೆಯಿಂದ ನಿಭಾಯಿಸುತ್ತಾ ಶಹಾಭಾಷ್‌ಗಿರಿ ಪಡೆಯುತ್ತಾಳೆ. ಗೇಬ್ರಿಯಲ್‌ನ ಕನಸು ಕೂಡ ಸಾಕಾರವಾಗಿ ಪ್ಯಾರಿಸ್ ನಗರದಲ್ಲೇ ಅವನ ರೆಸ್ಟೋರೆಂಟ್‌ ಶುರುವಾಗುತ್ತದೆ. ಎಮಿಲಿ ಮತ್ತು ಗೇಬ್ರಿಯಲ್ ನಡುವಿನ ಪ್ರೀತಿ ಚಿಗುರೊಡೆಯುತ್ತಾ ಹೋಗುತ್ತದೆ ಎನ್ನುವಷ್ಟರಲ್ಲೇ ಗೇಬ್ರಿಯಲ್ಲಿನ ಮಾಜಿ ಪ್ರೇಯಸಿ ಕೆಮೀಲ್ ನಡುವೆ ಬರುತ್ತಾಳೆ. ಕೆಮಿಲಾ ಎಮಿಲಿಗೂ ಗೆಳತಿ.

ಈ ಮೂವರ ನಡುವಿನ ತ್ರಿಕೋನ ಪ್ರೇಮಕಥೆಯ ಜಾಡಿನಲ್ಲಿ ಕಥೆ ಮುಂದುವರೆದು ಇನ್ನೇನು ಎಮಿಲಿ, ಗೇಬ್ರಿಯಲ್ ಬಳಿ ತನ್ನ ಪ್ರೇಮ ನಿವೇದಿಸಿಕೊಳ್ಳುತ್ತಾಳೆ ಅನ್ನುವಷ್ಟರಲ್ಲಿ ಒಂದಷ್ಟು ಗೊಂದಲಗಳು. ಕೆಮಿಲಾ ಮೋಸದಿಂದ ಎಮಿಲಿಯನ್ನು ಗೇಬ್ರಿಯಲ್‌ನಿಂದ ದೂರ ಮಾಡಿ ತಾನು ಹತ್ತಿರವಾಗೋದಕ್ಕೆ ನೋಡುತ್ತಾಳೆ. ಇದಕ್ಕೆ ಅವಳ ಪೋಷಕರ ಕುಮ್ಮಕ್ಕೂ ಇರುತ್ತದೆ. ಸೀಸನ್‌ನ ಕೊನೆಗೆ ಗೇಬ್ರಿಯಲ್ ಮತ್ತು ಕೆಮಿಲಾ ಮತ್ತೆ ಒಂದಾಗುತ್ತಾರೆ. ವೃತ್ತಿಯಲ್ಲಿ ಒಳ್ಳೆಯ ಹೆಸರು ಪಡೆದಿರುವ ಎಮಿಲಿಯ ಮುಂದೆ ಒಂದಷ್ಟು ಹೊಸ ಆಯ್ಕೆಗಳು ಎದುರಾಗುತ್ತವೆ. ಎಮಿಲಿ ಮುಂದೇನು ಮಾಡುತ್ತಾಳೆ, ಆಕೆಯ ಮುಂದಿನ ನಡೆ ಏನು ಎನ್ನುವುದು ಮೂರನೇ ಸೀಸನ್‌ನಲ್ಲಿ ತೆರೆದುಕೊಳ್ಳುತ್ತದೆ.

ಎಮಿಲಿ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಬಹಳ ದೊಡ್ಡ ಬದಲಾವಣೆಯಾಗಿದೆ. ಹಳೆಯ ಸಂಸ್ಥೆಯ ಬಾಸ್ ಸಂಸ್ಥೆಯಿಂದ ಹೊರನಡೆದು ತನ್ನದೇ ಸಂಸ್ಥೆ ಶುರು ಮಾಡಿ ಎಮಿಲಿಗೆ ಕೆಲಸದ ಆಫರ್ ನೀಡುತ್ತಾಳೆ. ಎಮಿಲಿ ತನ್ನ ಹಳೆಯ ಕಂಪನಿಯ ಅಮೇರಿಕನ್ ಬಾಸಿಗೂ ಅಚ್ಚುಮೆಚ್ಚು. ಇಲ್ಲಿರಲಾರೆ ಅಲ್ಲಿ ಹೋಗಲಾರೆ ಎಂಬಂತೆ ಎಮಿಲಿ ಗುಪ್ತವಾಗಿ ಅಲ್ಲೂ ಇಲ್ಲೂ ಎರಡೂ ಕಡೆ ಕೆಲಸ ಮಾಡುತ್ತಾ ತಿಣುಕಾಡುವ ಸನ್ನಿವೇಶಗಳು ಬಹಳಷ್ಟು ಇವೆ. ಇದರ ಜೊತೆಗೆ ಹೊಸ ಗೆಳೆಯನಾದ ಆಲ್ಫಿ ಜೊತೆಗೆ ಎಮಿಲಿಯ ಒಡನಾಟ ಮುಂದುವರೆಯುತ್ತದೆ. ಮನಸ್ಸಿನಲ್ಲಿ ಗೇಬ್ರಿಯಲ್ ಮೇಲೆ ಆಸೆ ಇದ್ದರೂ ಅದನ್ನು ಮುಚ್ಚಿಟ್ಟುಕೊಂಡು ಆಲ್ಫಿ ಜೊತೆಗೆ ಸಂತೋಷವಾಗಿರುವ ಪ್ರಯತ್ನ ಮಾಡುತ್ತಾ ಎಮಿಲಿ ಕೆಲಸ ಮತ್ತು ಸಂಬಂಧಗಳು ಎರಡನ್ನೂ ನಿಭಾಯಿಸುವ ಪ್ರಯತ್ನದಲ್ಲಿ ಆಲ್ಫಿಯಿಂದ ತಾತ್ಕಾಲಿಕವಾಗಿ ದೂರವಾಗೋ ಸಂದರ್ಭವೂ ಎದುರಾಗುತ್ತದೆ.

ಇತ್ತ ಕಡೆ ಕೆಮಿಲಾ ಮತ್ತೊಬ್ಬ ಗೆಳತಿಯೊಂದಿಗೆ ಸ್ನೇಹವನ್ನು ಮೀರಿದ ಸಂಬಂಧವನ್ನು ಹುಡುಕಿಕೊಂಡು ಗೇಬ್ರಿಯಲ್‌ಗೆ ಸುಳ್ಳು ಹೇಳುತ್ತಾ, ಮೋಸ ಮಾಡುತ್ತಿರುವುದು ಎಮಿಲಿಗೆ ತಿಳಿಯುತ್ತದೆ. ಏತನ್ಮಧ್ಯೆ ಗೆಳತಿ ಮಿಂಡಿ ಹಾಡುಗಾರ್ತಿಯಾಗಿ ನಿಧಾನಕ್ಕೆ ಪ್ರಗತಿ ಹೊಂದುತ್ತಾ ಇರುತ್ತಾಳೆ. ಮಿಂಡಿ ಎಮಿಲಿಯ ಆಪ್ತಸಲಹೆಗಾರ್ತಿ ಕೂಡ ಹೌದು. ಎಮಿಲಿಯ ಗೊಂದಲಗಳಿಗೆ ಪರಿಹಾರ ಹೇಳುವ ಅಂತರಂಗದ ಗೆಳತಿ ಕೂಡ ಹೌದು. ಆಲ್ಫಿ ಎಮಿಲಿಯ ಸಂಬಂಧ ತೂಗುಯ್ಯಾಲೆ ಆಡುತ್ತಿರುವಾಗಲೇ ಗೇಬ್ರಿಯಲ್ ಮತ್ತು ಕೆಮೀಲಾ ಮದುವೆಯಾಗಲು ನಿರ್ಧಾರ ಮಾಡುತ್ತಾರೆ. ಕೆಮಿಲಾಳ ಮೋಸದ ಅರಿವಿದ್ದೂ ಏನೂ ಹೇಳಲಾಗದೆ ಒಳಗೊಳಗೇ ಸಂಕಟ ಪಡುತ್ತಾ ಎಮಿಲಿ ಮತ್ತೆ ಆಲ್ಫಿಗೆ ಹತ್ತಿರವಾಗುತ್ತಾಳೆ. ವೃತ್ತಿಯಲ್ಲೂ ಹೊಸ ಬೆಳವಣಿಗೆಗಳು ಆಗುತ್ತಿವೆ.

ಅಮೇರಿಕನ್ ಕಂಪನಿಯೊಂದಿಗೆ ತವರೂರ ನಂಟು ಹೊಂದಿದ್ದರೂ ಪ್ಯಾರಿಸ್ ಕಂಪನಿಯೊಂದಿಗೆ ಎಮಿಲಿಯದ್ದು ಕನಸಿನ ನಂಟು. ಅವಳ ಕನಸಿನ ಗರಿಗಳಿಗೆ ಬಣ್ಣ ತುಂಬಿದ್ದು ಇದೇ ಪ್ಯಾರಿಸ್. ಹೀಗಿರುವಾಗ ಅಮೇರಿಕವೋ ಪ್ಯಾರಿಸ್ಸೋ ಎಂಬ ಆಯ್ಕೆ ಎಮಿಲಿಗೆ ಧುತ್ತನೆ ಎದುರಾಗುತ್ತದೆ. ಎಮಿಲಿಯ ಆಯ್ಕೆ ಯಾವುದು? ಆಲ್ಫಿಯ ಪ್ರೀತಿಯನ್ನು ಎಮಿಲಿ ಪುರಸ್ಕಾರಿಸುತ್ತಾಳಾ? ಗೇಬ್ರಿಯಲ್ ಮತ್ತು ಎಮಿಲಿಯ ನಡುವಿನ ಪ್ರೀತಿಯ ಎಳೆಯ ಅರಿವಿದ್ದೂ ಅವರನ್ನು ಬೇರೆ ಮಾಡಲು ನೋಡಿ ಮೋಸದಿಂದ ಗೇಬ್ರಿಯಲ್‌ಗೆ ಹತ್ತಿರವಾದ ಕೆಮಿಲಾ ತನ್ನ ಜೀವನದ ಅತಿ ಮುಖ್ಯ ನಿರ್ಧಾರವನ್ನು ತೆಗೆದುಕೊಳ್ಳುವ ಹಂತದಲ್ಲಿ ಇದ್ದಾಳೆ. ಅವಳ ಮನಸ್ಸು ಎಮಿಲಿಯ ಗೆಳೆತನದ ಕಡೆಗೆ ವಾಲುತ್ತದೋ ಅಥವ ಗೇಬ್ರಿಯಲ್ಲಿನ ಪ್ರೀತಿಗೆ ಕಡೆಗೆ ವಾಲುತ್ತದೋ? ಎಮಿಲಿ ಮತ್ತು ಗೇಬ್ರಿಯಲ್ ಒಂದಾಗುತ್ತಾರಾ ಅಥವ ಗೆಳೆಯರಾಗಿ ಇರುತ್ತಾರಾ? ಸೀಸನ್ ಮೂರು ಈ ಮೇಲಿನ ಒಂದಷ್ಟು ಪ್ರಶ್ನೆಗಳಿಗೆ ಉತ್ತರ ಕೊಡುತ್ತಲೇ ಮತ್ತೊಂದಷ್ಟು ಹೊಸ ಪ್ರಶ್ನೆ ಮತ್ತು ಸಂದಿಗ್ಧಗಳನ್ನು ಸೃಷ್ಟಿಸಿ ಮುಗಿಯುತ್ತದೆ.

ಸೀಸನ್ ನಾಲ್ಕು ಸದ್ಯದಲ್ಲೇ ತೆರೆ ಕಾಣಲಿದೆ ಮತ್ತು ಅದೇ ಬಹುಶಃ ಕೊನೆಯ ಸೀಸನ್ ಎಂಬ ಮಾತು ಕೇಳಿಬರುತ್ತಿದೆ. ಸದಾ ಲವಲವಿಕೆಯ ಗೊಂಬೆಯಂತಿರುವ ಎಮಿಲಿಯ ಗೊಂದಲಗಳಿಗೆ ಪರಿಹಾರ ಮತ್ತು ಜೀವನದ ಹಾದಿಗೆ ಸ್ಪಷ್ಟತೆ ನಾಲ್ಕನೇ ಸೀಸನ್‌ನಲ್ಲಿ ಸಿಗುತ್ತದಾ ಎಂದು ನೋಡಬೇಕಿದೆ.

LEAVE A REPLY

Connect with

Please enter your comment!
Please enter your name here