2019ರ ಯಶಸ್ವೀ ‘F2’ ತೆಲುಗು ಸಿನಿಮಾದ ಫ್ರಾಂಚೈಸ್ ‘F3’ ಟ್ರೈಲರ್ ಬಿಡುಗಡೆಯಾಗಿದೆ. ವಿಚಿತ್ರ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ನಗಿಸುವುದೇ ಪ್ರಮುಖ ಉದ್ದೇಶ ಇದ್ದಂತಿದ್ದು, ಮೇ 27ರಂದು ಸಿನಿಮಾ ಬಿಡುಗಡೆಯಾಗಲಿದೆ.
ಅನಿಲ್ ರವಿಪುಡಿ ನಿರ್ದೇಶನದ ಬಹುತಾರಾಗಣದ ‘F3’ ತೆಲುಗು ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. 2019ರಲ್ಲಿ ತೆರೆಕಂಡಿದ್ದ ಯಶಸ್ವೀ ‘F2’ ಸಿನಿಮಾದ ಸರಣಿಯಿದು. ಮೊದಲ ಸರಣಿಯಲ್ಲಿ ನಟಿಸಿದ್ದ ಕಲಾವಿದರೇ ಇಲ್ಲೂ ಇದ್ದು, ಇಲ್ಲಿ ಮತ್ತಷ್ಟು ಕಾಮಿಡಿ ಸನ್ನಿವೇಶಗಳಿಗೆ ಜಾಗ ಇದ್ದಂತಿದೆ. ಕುಟುಂಬವೊಂದು ತರಕಾರಿಗಳ ಬದಲು ಕೇವಲ ಮನೀ ಪ್ಲಾಂಟ್ ಬಳಕೆ ಮಾಡಿ ಅಡುಗೆ ಮಾಡುವ ಸೀನ್ ಟ್ರೈಲರ್‌ನಲ್ಲಿದೆ. ಇದರಿಂದ ಬಹುಬೇಗ ಶ್ರೀಮಂತರಾಗಬಹುದು ಎನ್ನುವುದು ನಂಬಿಕೆ! ಮತ್ತೊಂದೆಡೆ ನಟರಾದ ವೆಂಕಟೇಶ್ ಮತ್ತು ವರುಣ್ ತೇಜ್ ಇಬ್ಬರೂ ತಮ್ಮ ಫ್ಯಾಮಿಲಿ ಹೆಸರುಗಳನ್ನು ಸಂಭಾಷಣೆ ಮಧ್ಯೆ ಹೇಳುತ್ತಾರೆ. “ನಾನು ದಗ್ಗುಬಾಟಿ ಕುಟುಂಬಕ್ಕೆ ಸೇರಿದವನು” ಎಂದು ವೆಂಕಟೇಶ್ ಹೇಳಿದರೆ, “ನನ್ನದು ಮೆಗಾ ಫ್ಯಾಮಿಲಿ” ಎನ್ನುತ್ತಾರೆ ವರುಣ್ ತೇಜ್. ಒಬ್ಬ ಹೀರೋಗೆ ರಾತ್ರಿ ಕುರುಡು ನ್ಯೂನ್ಯತೆ ಇದ್ದರೆ, ಮತ್ತೊಬ್ಬರಿಗೆ ಉಗ್ಗುವ ಸಮಸ್ಯೆ. ತಮನ್ನಾ ಭಾಟಿಯಾ, ಮೆಹ್ರೀನ್ ಪಿರ್ಝಾದಾ, ರಾಜೇಂದ್ರ ಪ್ರಸಾದ್, ಸುನಿಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಂಗೀತ ದೇವಿಶ್ರೀ ಪ್ರಸಾದ್. ಮೇ 27ರಂದು ಸಿನಿಮಾ ತೆರೆಕಾಣುತ್ತಿದೆ.