‘SKY LAB’ ತೆಲುಗು ಚಿತ್ರದಲ್ಲಿ ಕತೆಯೇ ಹೀರೋ. ಸಾಂಪ್ರದಾಯಿಕ ಸಿನಿಮಾ ನೇಯ್ಗೆಯ ಹೊರತಾದ ಕತೆ, ಪಾತ್ರಪೋಷಣೆಯೊಂದಿಗಿನ ಈ ಕಾಮಿಡಿ – ಡ್ರಾಮಾ ವಿಶಿಷ್ಟವಾದದ್ದು. ಸಿನಿಮಾ SonyLIV ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಪ್ರೀತಿ ಪ್ರೇಮ, ಪ್ರಣಯ, ಹೀರೋ, ವಿಲ್ಲನ್ ಎನ್ನುವ ಚೌಕಟ್ಟಿನ ಆಚೆ ನಿಲ್ಲುವ ಅಪರೂಪದ ಸಿನಿಮಾ ‘SKY LAB’ . ಒಂದು ಊರು, ಒಂದಷ್ಟು ಪಾತ್ರಗಳು, ಎಲ್ಲರನ್ನೊಳಗೊಂಡಿರುವ ಒಂದು ಕಥೆಯಾದರೆ, ಎಲ್ಲರಲ್ಲೂ ಒಂದೊಂದು ಕಥೆಯಿದೆ ಎನ್ನುವಂತಹ ಸಿನಿಮಾ. ಮೊದಲಾರ್ಧದಲ್ಲಿ ಬರುವ ಕೆಲವು ದೃಶ್ಯಗಳು ಅನವಶ್ಯಕ ಅನಿಸುತ್ತವಾದರೆ, ಕೊನೆಯಲ್ಲಿ ಎಲ್ಲದಕ್ಕೂ ಅರ್ಥಬರುವಂತೆ ಕತೆ ಹೆಣಿದು ಬ್ಯಾಲೆನ್ಸ್‌ ಮಾಡಿದ್ದಾರೆ. ಪಾತ್ರಗಳ ಸಂಭಾಷಣೆಯೊಂದಿಗೆ ಹಳ್ಳಿಜನರ ಬದುಕು – ಬವಣೆ, ಸುಖ – ದುಃಖ, ಭಯ, ಮುಗ್ದತೆ ಇಷ್ಡವಾಗುವುದರ ಜೊತೆಗೆ ಈ ಸಿನಿಮಾದ ಸಿದ್ಧಾಂತ ಬದುಕಿಗೆ ಹಿತ ಎನ್ನುವ ಆಲೋಚನೆ ಮೂಡುತ್ತದೆ.

ಇದೊಂದು ಪೀರಿಯಡ್ ಡ್ರಾಮಾ ಆಗಿದ್ದು, 1979ರಲ್ಲಿ ನೆಡೆಯುವ ಕತೆ ಎಂದು ಬಿಂಬಿಸಿದ್ದಾರೆ. ತಾನೊಬ್ಬಳು ಒಳ್ಳೆಯ ಪತ್ರಕರ್ತೆ, ತನ್ನ ಲೇಖನ ವಾರಪತ್ರಿಕೆಯೊಂದರ ಮುಖಪುಟದ ಲೇಖನವಾಗಬೇಕು ಎನ್ನುವ ಹಂಬಲದ ಗೌರಿ, ಡಾಕ್ಟರ್ ಲೇಸನ್ಸ್ ಪಡೆದುಕೊಳ್ಳಲು ಹಣ ಹೊಂದಿಸಲು ಪರದಾಡುತ್ತಿರುವ ಆನಂದ್, ತಮ್ಮದೇ ಆದ ಕನಸು ಹೊಂದಿರುವ ಸುಬೇದಾರ್ ರಾಮರಾವ್‌, ಚಿನ್ನ, ಲಚ್ಚಿ ಇನ್ನೂ ಮುಂತಾದ ಪಾತ್ರಗಳೆಲ್ಲ ಸದ್ಯ ತೆಲಂಗಾಣದ ಬಂಡಿಲಿಂಗಂ ಪಲ್ಲಿ ಎನ್ನುವ ಹಳ್ಳಿಯಲ್ಲಿದ್ದಾರೆ. ಸ್ಕೈ ಲ್ಯಾಬ್ ಪತನವಾಗಿ ಅದೂ ದಕ್ಷಿಣ ಭಾರತದಲ್ಲೇ ಬೀಳುತ್ತದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಆ ಊರಿನಲ್ಲಿ ಏನೆಲ್ಲ ನಡೆಯುತ್ತದೆ? ಜನರ ಪಾಡೇನಾಗಿರುತ್ತದೆ? ಮುಖ್ಯಪಾತ್ರಗಳು ಅವುಗಳ ಕನಸನ್ನು ಹೇಗೆ ಪೂರೈಸಿಕೊಳ್ಳುತ್ತವೆ.. ಎನ್ನುವುದೇ ಚಿತ್ರದ ವಸ್ತು.

ಆಗಿನ ಕಾಲಘಟ್ಟದ ಹಳ್ಳಿಯ ಚಿತ್ರಣವನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ. ಹಳ್ಳಿಯ ಎಲ್ಲಾ ಪಾತ್ರಗಳು ತಮ್ಮ ಮುಗ್ದತೆಯಿಂದ ಖುಷಿಗೊಳಿಸುತ್ತ ಮನಗೆಲ್ಲುತ್ತವೆ. ಸಿನಿಮಾ 1970 ರ ದಶಕದ ಕಥೆಯಾದರೂ ವಿಷಯ ಇವತ್ತಿಗೂ ಕನೆಕ್ಟ್ ಆಗುವುದು ವಿಶೇಷ. ಅಡಚಣೆಗೆ ಒಳಗಾಗದೆ ಒಂದೇ ಗುಟುಕಿನಲ್ಲಿ ಈ ಸಿನಿಮಾ ವೀಕ್ಷೀಸುವುದೇ ಆದರೆ, ನಾಟಕೀಯವಾಗಿ ನಮ್ಮನ್ನ ಆ ಕಾಲಗಟ್ಟಕ್ಕೆ ಕರೆದೊಯ್ದು ಒಂದು ಹಳ್ಳಿಯ ಚಿತ್ರಣ ಕಟ್ಟಿಕೊಡುತ್ತದೆ. ನಿರ್ದೇಶಕ ವಿಶ್ವಕ್ ಕಂಡೆರಾವ್ ತಮ್ಮ ಕತೆಯೊಳಗೆ ಬರುವ ಎಲ್ಲ ಪಾತ್ರಗಳಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಚಿತ್ರಕಥೆ ರೂಪಿಸಿದ್ದಾರೆ. ಚಿತ್ರವನ್ನು ಒಂದು ಕಟ್ಟು ಕತೆಯಾಗಿಸದೆ ಮನುಷ್ಯ ತನ್ನ ಅಸ್ತಿತ್ವ ಕಂಡುಕೊಳ್ಳಲು ಪರಿತಪಿಸುವ ಪರಿ, ಅಸ್ಪೃಶ್ಯತೆ, ಬಡತನ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಂತಹ ಹಲವು ಸಮಸ್ಯೆಗಳನ್ನು ಅನ್ವೇಷಿಸುವ ಉತ್ತಮ ಕೆಲಸವನ್ನು ಮಾಡಿದ್ದಾರೆ.

ರೆಟ್ರೊ ಸ್ಟೈಲ್ ನಲ್ಲಿ ನಿತ್ಯ ಮೆನನ್ ಚೆಂದ ಕಾಣುತ್ತಾರೆ. ಚಿತ್ರ ಮುಗಿದ ನಂತರ ನಮ್ಮ ಹಳ್ಳಿಗಳನ್ನು ನನಪಿಸುವುದರೊಂದಿಗೆ ಕೆಲವು ಹಳ್ಳಿಗಳಲ್ಲಿ ಇಂದಿಗೂ ಆಚರಣೆಯಲ್ಲಿರುವ ಅಸ್ಪೃಶ್ಯತೆ, ಕೊರೊನಾ ಶುರುವಾದ ದಿನಗಳಲ್ಲಿ ಹುಟ್ಟಿಕೊಂಡಿದ್ದ ಊಹಾಪೋಹ ಎಲ್ಲವನ್ನೂ ಮೆಲಕು ಹಾಕುವಂತೆ ಮಾಡುತ್ತದೆ. ಚಿತ್ರದ ಮೊದಲಾರ್ಧವು ತಿಳಿಹಾಸ್ಯದೊಂದಿಗೆ ನೋಡಿಸಿಕೊಂಡರೂ, ನಿಧಾನ ಎನ್ನುವ ಭಾವನೆ ಪ್ರೇಕ್ಷನಲ್ಲಿ ಮೂಡುತ್ತದೆ. ದ್ವಿತಿಯಾರ್ಧ ಎಲ್ಲ ಕಥೆಗಳಿಗೂ ಹೊಸ ರೂಪ ಕಂಡುಕೊಳ್ಳುವಲ್ಲಿಗೆ ಪ್ರೇಕ್ಷಕನಿಗೆ ಚಿತ್ರದ ಮೇಲೆ ವಿಶೇಷ ಅಭಿಮಾನ ಉಂಟಾಗುವಂತೆ ಮಾಡುತ್ತದೆ. ಪಾತ್ರವರ್ಗ ಹಾಗು ತಾಂತ್ರಿಕ ವರ್ಗ ಅಚ್ಚುಕಟ್ಟಾಗಿ ತಮ್ಮ ಕಾರ್ಯನಿರ್ವಹಿಸಿದ್ದಾರೆ. ಆದಿತ್ಯ ಜವ್ವಾಡಿಯವರ ಛಾಯಗ್ರಹಣ ಸೊಗಾಸಾಗಿ ಮೂಡಿಬಂದಿದೆ, ಪ್ರಶಾಂತ್‌ ವಿಹರಿಯವರ ರೆಟ್ರೋ ಟಚ್ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಒಟ್ಟಾರೆ ಸಾಂಪ್ರದಾಯಿಕ ಸಿನಿಮಾ ನೇಯ್ಗೆಯ ಹೊರತಾದ ಕತೆ, ಪಾತ್ರಪೋಷಣೆಯೊಂದಿಗೆ ಈ ಕಾಮಿಡಿ – ಡ್ರಾಮಾ ವಿಶಿಷ್ಟವೆನಿಸುತ್ತದೆ.

LEAVE A REPLY

Connect with

Please enter your comment!
Please enter your name here