ತಮಿಳು ಸಿನಿಮಾಗಳಲ್ಲಿ ತಮಿಳು ನಟ, ನಟಿಯರಷ್ಟೇ ಅಭಿನಯಿಸಬೇಕು, ತೀರಾ ಅನಿವಾರ್ಯತೆ ಇದ್ದರೆ ಮಾತ್ರ ಹೊರರಾಜ್ಯ, ದೇಶಗಳಲ್ಲಿ ಚಿತ್ರೀಕರಣ ಮಾಡಬೇಕು ಎಂದು FEFSI (The Film Employees Federation of South India) ಹೊಸ ನಿಯಮ ರೂಪಿಸಿದೆ. ಇದು ಕಾಲಿವುಡ್‌ನಲ್ಲೀಗ ಚರ್ಚೆಗೆ ಗ್ರಾಸವಾಗಿದೆ.

Film Employees Federation of South India (FEFSI) – ತಮಿಳು ಸಿನಿಮಾ ಮತ್ತು ಕಿರುತೆರೆಯ 23 ವಿವಿಧ ವಿಭಾಗಗಳ ತಂತ್ರಜ್ಞರು ಹಾಗೂ ಕಾರ್ಮಿಕರ ಸಂಘಟನೆ. ಸುಮಾರು 25,000 ಸದಸ್ಯರಿರುವ ಈ ಸಂಘಟನೆಗೆ ಆರ್‌ ಕೆ ಸೆಲ್ವಮಣಿ ಅಧ್ಯಕ್ಷ. ಸಂಘಟನೆಯ ಸದಸ್ಯರ ಒಳಿತಿಗಾಗಿ FEFSI ಕೆಲವು ಹೊಸ ನಿಯಮಗಳನ್ನು ರೂಪಿಸಲು ಹೊರಟಿದೆ. ಈ ನಿಯಮಗಳಿಗೆ ಪರ – ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಸೋಷಿಯಲ್‌ ಮೀಡಿಯಾದಲ್ಲೂ ಚರ್ಚೆಗಳು ನಡೆಯುತ್ತಿವೆ.

FEFSI ನಿಯಮಗಳ ಪ್ರಕಾರ ತಮಿಳು ಸಿನಿಮಾಗಳಲ್ಲಿ ತಮಿಳು ಕಲಾವಿದರಷ್ಟೇ ಅಭಿನಯಿಸಬೇಕು. ತಮಿಳು ಚಿತ್ರಗಳನ್ನು ರಾಜ್ಯದಲ್ಲೇ ಚಿತ್ರಿಸಬೇಕು. ಕತೆಗೆ ಅನಿವಾರ್ಯವಾಗಿದ್ದರೆ ಮಾತ್ರ ಹೊರರಾಜ್ಯ ಹಾಗೂ ಹೊರ ದೇಶಗಳಿಗೆ ಹೋಗಬಹುದು. ಒಂದೊಮ್ಮೆ ಸಿನಿಮಾದ ಬಜೆಟ್‌ ಅಂದುಕೊಂಡದ್ದಕ್ಕಿಂತ ಮೀರಿದರೆ ಚಿತ್ರದ ನಿರ್ದೇಶಕರು ನಿರ್ಮಾಪಕರಿಗೆ ಪತ್ರದ ಮೂಲಕ ದಾಖಲೆ ಒದಗಿಸಬೇಕು, ನಿರ್ದೇಶಕನೇ ಕತೆ – ಚಿತ್ರಕಥೆ ರಚಿಸಿದ್ದರೆ, ಕತೆ ಕುರಿತಾಗಿ ಎದುರಾಗುವ ಸಮಸ್ಯೆಗಳಿಗೆ ಅವರೇ ಹೊಣೆಯಾಗಬೇಕಾಗುತ್ತದೆ. ನಿರ್ಮಾಪಕರನ್ನು ಅನಗತ್ಯವಾಗಿ ಯಾವುದೇ ವಿವಾದಕ್ಕೆ ಸಿಲುಕಿಸುವಂತಿಲ್ಲ.

ಇತರೆ ರಾಜ್ಯಗಳ ತಂತ್ರಜ್ಞರು ಕೆಲಸ ಮಾಡುವುದರಿಂದ FEFSI ಸದಸ್ಯರಿಗೆ ಕೆಲಸ ಇಲ್ಲದಂತಾಗಿದೆ ಎನ್ನುವ ಕೂಗಿನ ಹಿನ್ನೆಲೆಯಲ್ಲಿ ಈ ಹೊಸ ನಿಯಮಗಳು ರೂಪುಗೊಂಡಿವೆ. ತನ್ನ ಸದಸ್ಯರಿಗೆ ಅನುಕೂಲವಾಗಿಲಿ ಎಂದು FEFSI ಈ ನಿಯಮಗಳನ್ನು ಹೇರಲು ಮುಂದಾಗಿದ್ದರೂ, ಸ್ವತಃ ಸಂಘಟನೆಯ ಹಲವರಿಂದಲೇ ಇದಕ್ಕೆ ವಿರೋಧ ವ್ಯಕ್ತವಾಗಿದೆ. ‘ಕಲೆಗೆ ಭಾಷೆ, ನೆಲದ ಚೌಕಟ್ಟಿರುವುದಿಲ್ಲ, FEFSI ಹೊಸ ನಿಯಮಗಳು ತಮಾಷೆಯಾಗಿವೆ’, ‘ಸಂಘಟನೆಯ ಅನುಕೂಲಕ್ಕೆ ನಿಯಮಗಳನ್ನು ರೂಪಿಸಿದ್ದರೂ ಇದು ಸ್ವಾಗತಾರ್ಹವಲ್ಲ’, ‘ಹಾಗಾದರೆ, ತಮಿಳು ಚಿತ್ರಗಳು ತಮಿಳುನಾಡಿನಲ್ಲಷ್ಟೇ ತೆರೆಕಾಣಬೇಕು ಎನ್ನುವ ನಿಯಮಗೂ ಜಾರಿಗೆ ಬರಲಿ!’ – ಎನ್ನುವಂಥ ಹಲವು ಕಾಮೆಂಟ್‌ಗಳು ಬರುತ್ತಿವೆ. ಪರ – ವಿರೋಧದ ಚರ್ಚೆಗಳ ಮಧ್ಯೆ FEFSI ತನ್ನ ನಿಯಮಗಳನ್ನು ಸಡಿಲಿಸುವ ಸಂಭವವಿದೆ ಎನ್ನಲಾಗಿದೆ.

LEAVE A REPLY

Connect with

Please enter your comment!
Please enter your name here