ಕಾವೇರಿ ನೀರು ಹೋರಾಟಕ್ಕೆ ಬೆಂಬಲ ಸೂಚಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇಂದು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಚಿತ್ರರಂಗದ ಹಲವರು ಭಾಗಿಯಾಗಿದ್ದಾರೆ. ಕರ್ನಾಟಕ – ತಮಿಳುನಾಡು ಮುಖ್ಯಮಂತ್ರಿಗಳು ಕುಳಿತು ಮಾತನಾಡಿ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂದು ನಟ ಶಿವರಾಜಕುಮಾರ್‌ ಮನವಿ ಮಾಡಿದ್ದಾರೆ.

ಕಾವೇರಿ ನೀರಿನ ಹೋರಾಟಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಕನ್ನಡ ಚಿತ್ರರಂಗದ ಹಲವು ಪ್ರಮುಖರು ಪಾಲ್ಗೊಂಡಿದ್ದರು. ಕಲಾವಿದರು, ತಂತ್ರಜ್ಞರು, ಚಿತ್ರನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕ ವಿಭಾಗಗಳ ಹಲವು ಪ್ರಮುಖರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಕಾವೇರಿ ಹೋರಾಟಕ್ಕೆ ಚಿತ್ರರಂಗದ ಬೆಂಬಲ ಸೂಚಿಸಿದರು.

ಹಿರಿಯ ನಟ ಶಿವರಾಜಕುಮಾರ್‌ ಮಾತನಾಡಿ, ‘ಕಾವೇರಿ ನಮ್ಮ ನಾಡಿನಲ್ಲಿ ಹರಿಯುವ ನದಿ. ಖಂಡಿತವಾಗಿ ಚಿತ್ರರಂಗದ ಎಲ್ಲರೂ ಕಾವೇರಿ ನೀರಿಗೆ ಸಂಬಂಧಿಸಿದ ಹೋರಾಟದಲ್ಲಿ ಭಾಗಿಯಾಗಿದ್ದೇವೆ. ಆದರೆ ನಾವೆಲ್ಲರೂ ಸೇರಿ ಮಾತನಾಡಿದಾಕ್ಷಣ ಸಮಸ್ಯೆ ತಿಳಿಯಾಗುವುದಿಲ್ಲ. ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕುಳಿತು ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚಿಸಬೇಕು. ಒಂದು ಸೂಕ್ತ ಒಪ್ಪಂದಕ್ಕೆ ಬಂದು ಪರಿಹಾರ ಕಂಡುಕೊಳ್ಳಬೇಕಿದೆ’ ಎಂದರು. ಸಂಗೀತ ಸಂಯೋಜಕ ಹಂಸಲೇಖ, ನಟರಾದ ದರ್ಶನ್‌, ಧ್ರುವ ಸರ್ಜಾ, ವಸಿಷ್ಠ ಸಿಂಹ, ರಘು ಮುಖರ್ಜಿ, ಶ್ರೀನಗರ ಕಿಟ್ಟಿ, ಅನಿರುದ್ಧ, ಗಿರಿಜಾ ಲೋಕೇಶ್‌, ಸೃಜನ್‌ ಲೋಕೇಶ್‌, ಸುಂದರ್‌ರಾಜ್‌, ಉಮಾಶ್ರೀ, ಶ್ರೀನಿವಾಸಮೂರ್ತಿ, ಅನು ಪ್ರಭಾಕರ್‌ ಸೇರಿದಂತೆ ಹಲವು ಕಲಾವಿದರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಚಿತ್ರರಂಗದ ಬೆಂಬಲ | ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸುವ ಸಲುವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೊನ್ನೆ ಸಭೆ ಕರೆದಿತ್ತು. ಈ ಸಭೆಯಲ್ಲಿ ಕಲಾವಿದರು, ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕ ವಲಯಗಳ ಪ್ರಮುಖರು ಪಾಲ್ಗೊಂಡಿದ್ದರು. ಬಂದ್‌ಗೆ ಬೆಂಬಲ ಸೂಚಿಸುವ ಸಲುವಾಗಿ ಪ್ರದರ್ಶಕರು ಇಂದು (ಸೆಪ್ಟೆಂಬರ್‌ 29) ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ನಡೆಸದಿರಲು ತೀರ್ಮಾನ ಕೈಗೊಂಡರು. ನಿರ್ಮಾಪಕರು ಇಂದು ಚಿತ್ರೀಕರಣಕ್ಕೆ ರಜೆ ಘೋಷಿಸಿದ್ದಾರೆ. ಕರ್ನಾಕಟ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷ ಎಂ ಎನ್‌ ಸುರೇಶ್‌ ಈ ಬಗ್ಗೆ ಮಾತನಾಡಿ, ‘ನೆಲ, ಜಲ, ಭಾಷೆ ವಿಚಾರವಾಗಿ ಚಿತ್ರರಂಗದವರಿಂದ ಯಾವಾಗಲೂ ಬೆಂಬಲ ಇದ್ದೇ ಇರುತ್ತದೆ. ಬಂದ್​ಗೆ ನಮ್ಮ ಬೆಂಬಲ ಇದೆ’ ಎಂದಿದ್ದರು.

ಶುಕ್ರವಾರ ಹಲವು ಸಿನಿಮಾಗಳು ಬಿಡುಗಡೆ ಆಗಿವೆ. ಕನ್ನಡದಲ್ಲಿ ಗಣೇಶ್ ನಟನೆಯ ‘ಬಾನದಾರಿಯಲ್ಲಿ’, ಜಗ್ಗೇಶ್‌ ಅವರ ‘ತೋತಾಪುರಿ 2’, ತಮಿಳಿನ ‘ಚಂದ್ರಮುಖಿ 2’, ಹಿಂದಿಯ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾಗಳು ಇಂದು ತೆರೆಕಂಡಿವೆ. ಬಂದ್‌ನಿಂದಾಗಿ ಈ ಚಿತ್ರಗಳಿಗೆ ಮೊದಲ ದಿನ ಪ್ರೇಕ್ಷಕರ ಕೊರತೆ ಕಾಡಲಿದೆ. ಇದು ಚಿತ್ರಗಳ ಕಲೆಕ್ಷನ್‌ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ನೋಡಬೇಕು.

LEAVE A REPLY

Connect with

Please enter your comment!
Please enter your name here