(ಬರಹ: ಕೇಸರಿ ಹರವೂ, ಚಿತ್ರನಿರ್ದೇಶಕ)

ಅತಿ ಹೆಚ್ಚು ಚರ್ಚೆಗೆ ಒಳಪಡುತ್ತಿರುವ ಇತ್ತೀಚಿನ ಸಿನಿಮಾಗಳ ಪೈಕಿ ‘ಜೈ ಭೀಮ್‌’ ಮುಂಚೂಣಿಯಲ್ಲಿದೆ.  ಸೂರ್ಯ ನಿರ್ಮಿಸಿ, ನಟಿಸಿರುವ ಈ ಸಿನಿಮಾ ಕುರಿತಾಗಿ ಚಿತ್ರನಿರ್ದೇಶಕ ಕೇಸರಿ ಹರವೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಜೈ ಭೀಮ್’ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸೇವಿಯರ್ ಸಿಂಡ್ರೋಮ್ ಕುರಿತಂತೆಯೂ ಪರ, ವಿರೋಧ ಚರ್ಚೆಗಳು ಬಿಸಿಬಿಸಿಯಾಗಿಯೇ ಆಗಿವೆ. ಕನ್ನಡದಲ್ಲಿ ಈ ಚರ್ಚೆ ಆಗುತ್ತಿವೆಯೆಂಬುದು ನೆಚ್ಚಿನ ವಿಚಾರ. ನಾನು ಈಗಾಗಲೇ ಚರ್ಚೆಯಾಗಿರುವ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಲು ಹೋಗದೇ, ಒಬ್ಬ ಚಲನಚಿತ್ರ ವಿದ್ಯಾರ್ಥಿಯಾಗಿ ನನಗೇನನಿಸಿತು ಎನ್ನುವುದನ್ನು ಹಿಡಿದಿಡುವ ಪ್ರಯತ್ನ ಇಲ್ಲಿ ಮಾಡುತ್ತೇನೆ.

ನೈಜ ಘಟನೆಗಳು ಮತ್ತು ಅವಕ್ಕೆ ಸಂಬಂಧಿತ ಕೇಸೊಂದನ್ನು ಈ ಚಿತ್ರದ ವಸ್ತು ಆಧರಿಸಿದೆ ಎನ್ನುವುದನ್ನು ಈ ಚಿತ್ರದ ನಿರ್ಮಾತೃಗಳೇ ಘೋಷಿಸಿಕೊಂಡಿದ್ದಾರೆ. ಹಾಗಾಗಿ, ಜಸ್ಟೀಸ್ ಕೆ. ಚಂದ್ರನ್ ಅವರು ವಕೀಲರಾಗಿದ್ದಾಗ ಈ ಕೇಸನ್ನು ಹೇಬಿಯಸ್ ಕಾರ್ಪಸ್ ಆಧಾರದ ಮೇಲೆಯೇ ನಡೆಸಿದ್ದರು ಎನ್ನುವುದನ್ನು ನಾವು ಕಾಣುತ್ತೇವೆ. ತಮಿಳುನಾಡಿನ ಇರುಳರ್ ಸಮುದಾಯದ ಸಮವಾಗಿ ಕರ್ನಾಟಕದಲ್ಲಿ ಇರುಳಿಗ ಸಮುದಾಯ ಬದುಕುತ್ತಿದೆ. ಈ ಸಮುದಾಯಗಳು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಕ್ರಿಮಿನಲ್ ಟ್ರೈಬ್ಸ್ ಎಂದು ವಿಂಗಡನೆಗೆ ಒಳಗಾಗಿದ್ದವು. ಸ್ವಾತಂತ್ರ್ಯಾನಂತರದಲ್ಲಿ ಈ ಸಮುದಾಯಗಳನ್ನು ಡಿನೋಟಿಫೈ ಮಾಡಿ Denotified Tribes (DNT) ಎಂದು ಕರೆದರೂ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅವರ ಸ್ಥಿತಿಗತಿಗಳು ಒಂದಷ್ಟೂ ಬದಲಾಗಲಿಲ್ಲ ಎನ್ನುವುದು ಕಣ್ಣಿಗೆ ಕಾಣುವ ವಾಸ್ತವ. ಈ ಸಮುದಾಯಗಳು ಬಹುಶಃ ಯಾವ ಕಾಲದಲ್ಲೂ ನೆಲೆಯೂರಿದ ಬುಡಕಟ್ಟು ಆಗಿರಲಿಲ್ಲ ಮತ್ತು ಬಹುತೇಕ ಅಲೆಮಾರಿ ಸಮುದಾಯಗಳಾಗಿದ್ದವು. ಈ ಚಿತ್ರ ಮೂಲ ತಮಿಳಿನಲ್ಲಿ ತಯಾರಾಗಿ, ಆ ಆವೃತ್ತಿಯಲ್ಲಿ ಆ ಸಮುದಾಯವು ಇರುಳರ್ ಎಂತಲೂ, ತೆಲುಗು ಆವೃತ್ತಿಯಲ್ಲಿ ಪಾಮುಲ ಎಂತಲೂ ಕರೆಸಿಕೊಂಡಿದೆ. ಈಗ ಇದೇ ಚಿತ್ರ ಕನ್ನಡದಲ್ಲೂ ಡಬ್ ಆಗಿದೆ ಎಂದಾಗ ಆ ಆವೃತ್ತಿಯಲ್ಲಿ ಅದೇ ಸಮುದಾಯ ಇರುಳಿಗರು ಎಂದು ಕರೆಸಿಕೊಂಡಿರುವುದಕ್ಕೂ ಸಾಕು. ಅವಿಭಜಿತ ಆಂಧ್ರಪ್ರದೇಶದಲ್ಲಿ ಬದುಕುತ್ತಿರುವ ಪಾಮುಲ ಎಂಬ ಸಮುದಾಯವು ಇರುಳರ್ ಮತ್ತು ಇರುಳಿಗ ಸಮುದಾಯಗಳಿಗೆ ಸಮಾನವಾದ ಸಮುದಾಯವೇ ಎನ್ನುವುದು ನನಗೆ ಅಷ್ಟಾಗಿ ತಿಳಿದಿಲ್ಲ. ಈ ಮೂರೂ ಸಮುದಾಯಗಳಲ್ಲಿ ಕೆಲವು ಕಸುಬು ಹಾಗೂ ಸಾಂಸ್ಕೃತಿಕ ಸಾಮ್ಯಗಳಿದ್ದರೂ, ಅನೇಕ ಪ್ರಾದೇಶಿಕ ಭಿನ್ನತೆಗಳೂ ಇರಲಿಕ್ಕೆ ಸಾಕು. ಇಷ್ಟು ಏಕೆ ಹೇಳಬೇಕಾಗಿ ಬಂತೆಂದರೆ, ಭಾರತದ ಒಂದು ಪ್ರದೇಶದ ಚಿತ್ರ ಹಲವು ಅವತರಣಿಕೆಗಳಲ್ಲಿ, ಹಲವು ಪ್ರದೇಶಗಳ ಪ್ರೇಕ್ಷಕರಿಗೆ ಅವರದೇ ಪ್ರಾದೇಶಿಕ ಚಿತ್ರ ಎನ್ನುವಂತೆ ಬಿತ್ತರವಾದಾಗ ಆಗುವ ಗೊಂದಲ ಇದು. ಡಿಜಿಟಲೀಕೃತ, ಕೇಂದ್ರೀಕೃತ ಚಿತ್ರ ವಿತರಣಾ ಮತ್ತು ಪ್ರದರ್ಶನ ವ್ಯವಸ್ಥೆಯಲ್ಲಿ ವಾಣಿಜ್ಯ ಆಸಕ್ತಿಯೇ ಮೊದಲ ಆಶಯವಾದಾಗ ಸಾಂಸ್ಕೃತಿಕ ಮತ್ತು ಮಾನವಶಾಸ್ತ್ರೀಯ ಆಸಕ್ತಿಗಳು ಚಿತ್ರನಿರ್ಮಾಣದಲ್ಲಿ ತಂತಾನೇ ಹಿಂದಕ್ಕೆ ಸರಿಯುತ್ತವೆ. ಹಾಗಾಗಿ, ನಾವು ಅಂಥಾ ಪ್ರಯೋಗಗಳನ್ನು ಇಂದು ಮುಖ್ಯವಾಹಿನಿ ಚಿತ್ರಗಳಿಂದ ನಿರೀಕ್ಷಿಸಬಾರದು.

ಆದರೆ, ಜೈ ಭೀಮ್ ನಂಥಾ ಚಿತ್ರಗಳು ತೆಳುವಾದರೂ ಒಂದು ನಿರ್ಧಿಷ್ಟವಾದ ಉದ್ದೇಶವನ್ನು ಯಶಸ್ವಿಯಾಗಿ ದಾಟಿಸಿದರೆ ಆ ಚಿತ್ರವು ಮಾಧ್ಯಮದ ದೃಷ್ಟಿಯಿಂದಲೂ ಗೆದ್ದಿದೆ ಎಂದು ಸಾಮಾನ್ಯ ಪ್ರೇಕ್ಷಕರಿಂದ ಹಿಡಿದು, ಗಂಭೀರ ಪ್ರೇಕ್ಷಕರೂ ಸೇರಿದಂತೆ ಎಲ್ಲ ರೀತಿಯ ಚಿತ್ರಾಸಕ್ತರೂ ಒಪ್ಪಿಕೊಂಡುಬಿಡುವುದು ಚಲನಚಿತ್ರ ಆಸ್ವಾದನೆಯನ್ನು ನಮಗೆ ನಾವೇ ಕುಗ್ಗಿಸಿಕೊಂಡಂತೆ. ನಮ್ಮ ಟೇಸ್ಟ್ ಬಡ್ ಗಳನ್ನು ನಾವೇ ಕುದಿಯುವ ನೀರಿನಿಂದ ನಿಸ್ತೇಜಗೊಳಿಸಿಕೊಂಡಂತೆ. ಹೀಗೆ ಮಾಡುವಾಗ ನಾವು ಚಿತ್ರ ಮಾಧ್ಯಮದ ಸಾಧ್ಯತೆಗಳನ್ನೂ ಕುಗ್ಗಿಸಿ, ಭಾರತೀಯ ಚಿತ್ರರಂಗವು ಯಥಾಸ್ಥಿತಿ ನಡೆದುಕೊಳ್ಳುತ್ತಾ ಅತಿವಾಣಿಜ್ಯೀಕರಣ ಮತ್ತು ಅದನ್ನು ಕೇಂದ್ರೀಕರಿಸುವ ಕಾರ್ಪೊರೇಟ್ ಹುನ್ನಾರಗಳಿಗೆ ಬಲಿಯಾಗಿ ಅಥವಾ ಅಲ್ಲೇ ಸಂತೃಪ್ತಿ ಕಂಡುಕೊಂಡು ನಮಗೆ ಅಂಥವೇ ಚಿತ್ರಗಳನ್ನೇ ನೀಡುತ್ತವೆ ಎನ್ನುವ ಅಪಾಯವೂ ಇದೆ. ಹಸಿದು, ಹಸಿದು ಬಳಲಿದ ದೇಹಕ್ಕೆ ಹೊಟ್ಟೆಗೊಂದಿಷ್ಟು ಏನೋ ಬಿದ್ದರೆ ಸಾಕು ಎನ್ನುವ ಹತಾಷೆ ಇದು. ಅದನ್ನು ಸಮರ್ಥವಾಗಿ ಬಳಸಿಕೊಂಡು, ತಂಗಳನ್ನು ತಟ್ಟೆಯಲ್ಲಿ ಹಾಕಿಕೊಟ್ಟ ಇತ್ತೀಚಿನ ಪ್ರಖರ ಉದಾಹರಣೆ ಜೈ ಭೀಮ್. ಈ ಬಗ್ಗೆ ಒಂದಿಷ್ಟು ಮಾತನಾಡುವ ಅಗತ್ಯವಿದೆ.

ಚಿತ್ರದ ವಸ್ತುವಿನ ಒಳಕ್ಕೆ ಎಳೆದುಕೊಂಡಿರುವ ಅಂಶಗಳನ್ನೇ ನೋಡಿ. ಅವನ್ನು ಕಟ್ಟಿರುವ ವಿನ್ಯಾಸವನ್ನೇ ನೋಡಿ. ಕಟ್ಟುವಿಕೆಯಲ್ಲಿ ಬಿಟ್ಟಿರುವ ಅಂಶಗಳನ್ನು ನಾವು ಮಾತಾಡದಿದ್ದರೂ ಪರವಾಗಿಲ್ಲ. ಈ ತೆರನ ಕಟ್ಟೋಣ ನಮಗೆ ಹೊಸದಲ್ಲ. ಇಲ್ಲಿ ಇರುಳರ್ ಸಮುದಾಯವನ್ನು ಕೂರಿಸಿರುವ ಪೆಟ್ಟಿಗೆಯಿಂದ ಇರುಳರನ್ನು ಹೊರತೆಗೆದು, ಇನ್ಯಾವುದೇ ದಮನಿತ, ದಲಿತ, ಅಲ್ಪಸಂಖ್ಯಾತ ಅಥವಾ ಲಿಂಗಭೇದಕೊಳ್ಳಗಾದ ಸಮುದಾಯವನ್ನಾದರೂ ಅಚ್ಚುಕಟ್ಟಾಗಿ ಕೂರಿಸಿಬಿಡಬಹುದು. ಚಿತ್ರದ ಓಘ ಮತ್ತು ಆಶಯಕ್ಕೆ ಏನೂ ಧಕ್ಕೆಯಾಗುವುದಿಲ್ಲ. ಪೋಲೀಸರ ವರ್ತನೆ, ದೌರ್ಜನ್ಯದ ದೃಶ್ಯಗಳು ಅಷ್ಟೇ ಘೋರವಾಗಿಯೂ, ಕೋರ್ಟಿನ ದೃಶ್ಯಗಳು, ಅಲ್ಲಿನ ಚುರುಕು ಸಂಭಾಷಣೆ ಅಷ್ಟೇ ಪರಿಣಾಮಕಾರಿಯಾಗಿಯೂ ಇರುತ್ತಿದ್ದವು. ತನ್ನ ಪ್ರೀತಿಪಾತ್ರ ಗಂಡಿಗಾಗಿ ಪರಿತಪಿಸುವ ಹೆಣ್ಣಿನ ದುಃಖ, ಆಕ್ರೋಶಗಳೂ, ‘ಗಾಂಧಿ, ನೆಹರೂ ಸರಿ, ಆದರೆ ಅಂಬೇಡ್ಕರ್ ಯಾಕಿಲ್ಲ?’ ಎನ್ನುವ ಪ್ರಶ್ನೆಯೂ, ಆ ಆಸೆಕಂಗಳ ಹೆಣ್ಣುಮಗು ಕೊನೆಯಲ್ಲಿ ಕಾಲಮೇಲೆ ಕಾಲು ಹಾಕಿಕೊಂಡು ಪೇಪರ್ ಓದುವ ದೃಶ್ಯವೂ ಕೆಲವರಲ್ಲಿ ಈಗೆಷ್ಟು ಸಂಚಲನ ಮೂಡಿಸಿವೆಯೋ ಅಷ್ಟೇ ಮೂಡಿಸುತ್ತಿದ್ದವು. ಇರುಳರ ಸಮುದಾಯದ ಸಾಮಾಜಿಕ, ಸಾಂಸ್ಕೃತಿಕ ಇಕ್ಕಟ್ಟನ್ನು ಕೇಂದ್ರವಾಗಿಟ್ಟುಕೊಂಡು ಕಟ್ಟಲು ಹೊರಟ ಚಿತ್ರದಲ್ಲಿ ಇರುಳರದ್ದೇ ಆದ, ಅವರಿಗಷ್ಟೇ ಸಲ್ಲುವ ಇಕ್ಕಟ್ಟು ಎಷ್ಟಿದೆ?

ಜಾತಿ ಪ್ರಮಾಣಪತ್ರ ಒಂದು ಬುಡಕಟ್ಟು ಅಥವಾ ಅಲೆಮಾರಿ ಸಮುದಾಯಕ್ಕೆ ಬೇಕಿಲ್ಲ, ಯಾಕೆಂದರೆ ಅವು ಎಂದೂ ಹಿಂದೂ ಜಾತಿ ಶ್ರೇಣಿಯಲ್ಲಿ ಗುರುತಿಸಿಕೊಂಡಿಲ್ಲ. ಪರಿಶಿಷ್ಟ ವರ್ಗ ಎನ್ನುವ ಗುರುತಿಸುವಿಕೆ ಸಾಕು. ಆದರೆ ಈ ವಾಸ್ತವವನ್ನು ನಮ್ಮ ದೇಶದ ರಾಜಕಾರಣ ಇಂದಿಗೂ ಒಪ್ಪಿಕೊಳ್ಳಲು ತಯಾರಿಲ್ಲ. ಪರಿಶಿಷ್ಟ ಜಾತಿಗಳೊಂದಿಗೆ ಅವರನ್ನು ಸಮೀಕರಿಸಿ, ಅವರ ಸ್ಥಾನಮಾನಗಳನ್ನು ಇವರಿಗೂ ನೀಡಿ ತನ್ನ ಕಂಫರ್ಟ್ ಜೋನಿನಲ್ಲಿ ತಾನಿರಬಯಸುವ ನಾಗರಿಕ ಸಮಾಜದ ರಾಜಕೀಯ ಇತ್ತೀಚೆಗೆ ಕಾಣಬರುತ್ತಿದೆ, ಇರಲಿ. ಅಂಥಾ ಪ್ರಮಾಣಪತ್ರವಿಲ್ಲದ ಹೊರತು, ಒಂದು ಪರ್ಮನೆಂಟ್ ವಿಳಾಸ ಇಲ್ಲದ ಹೊರತು ಅವರಿಗೆ ಓಟಿನ ಹಕ್ಕು ಕೂಡಾ ಇಲ್ಲ. ಇನ್ಯಾವ ಸೌಲಭ್ಯಗಳೂ ಇಲ್ಲ. ಇಂಥಾ ಒಂದು ಮೂಲಭಾರತೀಯ ಸಮುದಾಯವನ್ನು ಭಾರತವೇ ಸಬ್-ಹ್ಯೂಮನ್ ಎನ್ನುವಂತೆ ನಡೆಸಿಕೊಳ್ಳುವುದು, ಅವರನ್ನು ಅಪರಾಧೀ ಸಮುದಾಯಗಳ ಪಟ್ಟಿಯಿಂದ ಡಿನೋಟಿಫೈ ಮಾಡಿಯೂ ಅವರ ಮೇಲೆ ಅಪರಾಧಗಳನ್ನು ಯಥೇಚ್ಛವಾಗಿ ಮತ್ತು ನಿರಂತರವಾಗಿ ಹೊರಿಸುವುದು ನಮ್ಮ ದೇಶದ ರಾಜಕೀಯ ಪೋಷಿತ ಜಮೀನುದಾರೀ ಮತ್ತು ಪೋಲೀಸು ವ್ಯವಸ್ಥೆ ಎನ್ನುವಷ್ಟಕ್ಕೆ ನಿಲ್ಲಿಸಿಕೊಂಡು ಚಿತ್ರ ತನ್ನನ್ನು ಕಟ್ಟಿಕೊಳ್ಳಲು ಆರಂಭಿಸುತ್ತದೆ. ಸಾರ್ವತ್ರಿಕ ಶಿಕ್ಷಣ, ಸಮಾಜ ಕಲ್ಯಾಣ, ಭೂಹಂಚಿಕೆ, ಆರೋಗ್ಯ, ಮಾನವ ಹಕ್ಕು ಮುಂತಾದ ಸಾಂವಿಧಾನಿಕ ಆಶಯಗಳ ಉಲ್ಲಂಘನೆಗಳು ಆರೋಪ ಹೊರಿಸುವುದರ ಹಿಂದೆ ಎಷ್ಟು ಕೆಲಸ ಮಾಡುತ್ತಿವೆ, ಅದಕ್ಕೆ ನಾವು, ನೀವು ಮತ್ತು ಇಡೀ ನಾಗರಿಕ ದೇಶ ಹೇಗೆ ಹೊಣೆ ಎನ್ನುವ ಸೂಕ್ಷ್ಮ ಮತ್ತು ಗಂಭೀರ ಆಯಾಮಗಳು ಅಲ್ಲಲ್ಲಿ ಮಿಂಚುಹುಳುಗಳಂತೆ ಕಂಡರೂ ಚಿತ್ರದ ಕಟ್ಟೋಣ – ನಾವಾಗೇ ಪ್ರಜ್ಞಾಪೂರ್ವಕವಾಗಿ ನಮ್ಮ ಗ್ರಹಿಕೆಯ ತೆಕ್ಕೆಯಲ್ಲಿಟ್ಟುಕೊಳ್ಳದೇ ಹೋದರೆ – ಅವನ್ನು ಮರೆಸಿಬಿಡುತ್ತದೆ. ಒಬ್ಬ ದಮನಿತನ ಮೇಲೆ ನಡೆಸುವ ಪೋಲೀಸು ದೌರ್ಜನ್ಯದ ಕಥನವೇ ಚಿತ್ರದ ಮುಖ್ಯ ವಸ್ತುವಾಗಿಬಿಡುತ್ತದೆ. ನಿರ್ಧಿಷ್ಟ ಸಮುದಾಯವೊಂದರ ಮೇಲೆ ಆ ವೈವಿಧ್ಯವನ್ನೇ ನಿರ್ನಾಮ ಮಾಡುವಂಥಾ ನಿರಂತರ ನಾಗರೀಕ ಧಾಳಿಯ ವಿವಿಧ ಮುಖಗಳ ಕಟ್ಟೋಣವು ಚಿತ್ರವಾಗಿದ್ದರೆ ನನ್ನನ್ನು ಇನ್ನೂ ಹೆಚ್ಚು ಕಲಕುತ್ತಿತ್ತು, ನನ್ನಲ್ಲಿ ಇನ್ನಷ್ಟು ಅಳುಕು, ಪಾಪಪ್ರಜ್ಞೆ ತುಂಬಿಸುತ್ತಿತ್ತು. ಹಾಗೆಂದು ಒಂದೇ ಮುಖದ ಕಟ್ಟೋಣ ಒಂದು ಮನೋಜ್ಞ ಚಿತ್ರವಾಗಬಾರದೇ ಎನ್ನುವ ಪ್ರಶ್ನೆ ಏಳಬಹುದು. ಸರಿ, ಅದಾದರೂ ಆಗಿದೆಯೇ ಎಂದು ನೋಡಲು ಹೊರಟಾಗ ಭಾರತೀಯ ಸೂತ್ರಬದ್ಧ ಸಿನೆಮಾದ ಜೊತೆಗೆ ನೈಚ್ಯಾನುಸಂಧಾನ ಮಾಡಿಕೊಂಡಿರುವ ಅತಿವಾಣಿಜ್ಯೀಕರಣದ ಕಾರ್ಪೊರೇಟ್ ಹುನ್ನಾರಗಳೇ ಢಾಳಾಗಿ ಕಾಣುತ್ತವೆ.

ದುಷ್ಟ ಶಿಕ್ಷಣ-ಶಿಷ್ಟ ರಕ್ಷಣ, ಕೋರ್ಟ್ ರೂಂ ಡ್ರಾಮಾ, ‘ಅಲ್ಲಿ ನೋಡೀ ಎದ್ದುಬರುತ್ತಾನೆ ಸೂಪರ್ ಹೀರೋ’ ಎನ್ನುವಂಥಾ ಕಥನಗಳನ್ನು ಈ ಚಿತ್ರ ಎಲ್ಲಿಯಾದರೂ ಮೀರಿದೆಯೇ? ಆ ಮಿತಿಯಲ್ಲೇ ಅದು ಸೂತ್ರಬದ್ಧವಾಗಿ ನೋಡುಗರ ದಿಗ್ಭ್ರಮೆ ಮತ್ತು ಕುತೂಹಲವನ್ನು ಉಳಿಸಿಕೊಳ್ಳುವುದು ಸುಳ್ಳಲ್ಲ. ದಿಗ್ಭ್ರಮೆಗೆ ಸಹಾಯಕವಾಗಿ ಒದಗಿರುವುದು ಪೋಲೀಸ್ ಠಾಣೆಯ ಅತಿರೇಕದ ದೌರ್ಜನ್ಯದ ದೃಶ್ಯಗಳು ಮತ್ತು ಕುತೂಹಲ ಉಳಿಸುವುದಕ್ಕೆ ಕೋರ್ಟ್ ರೂಮಿನ ದೃಶ್ಯಗಳು ಎಂದು ಬಿಡಿಸಿ ಹೇಳಬೇಕಿಲ್ಲ. ಹಿಂಸೆ ಮತ್ತು ದೌರ್ಜನ್ಯಗಳಿಗೆ ಚಿತ್ರಿಕೆಗಳನ್ನು ಕಟ್ಟುವ ದೃಶ್ಯಸಾಧ್ಯತೆಗಳು ಇವೇ, ಇವಿಷ್ಟೇ ಎನ್ನುವುದಾದರೆ, ಆವೇಕೆ ಬೇಕು, ಅವನ್ನು ತೋರಿಸದೆಯೂ ಅವುಗಳ ಭೀಭತ್ಸವನ್ನು ಪ್ರೇಕ್ಷಕರಲ್ಲಿ ಮೂಡಿಸಲು ಸಾಧ್ಯವಿಲ್ಲವೇ ಎನ್ನುವ ಪ್ರಶ್ನೆಯನ್ನು ಗಟ್ಟಿಯಾಗಿ ಕೇಳಬೇಕಾಗುತ್ತದೆ. ಸುಮಾರು ಐವತ್ತು ವರ್ಷಗಳಿಂದಲೂ ಈ ರೀತಿಯ ದೃಶ್ಯಿಕೆಗಳನ್ನು ಪ್ರೇಕ್ಷಕ ಅನೇಕಾನೇಕ ಬಾರಿ ನೋಡಿದ್ದಾನೆ. ಇಂದಿನ ಕಾಲದೇಶದಲ್ಲಿ ಪ್ರತಿಕ್ಷಣವೂ ಘಟಿಸುತ್ತಿರುವ ದೌರ್ಜನ್ಯದ ಚಿತ್ರಿಕೆಗಳು ವೈರಲ್ ಆಗುತ್ತಾ ನಮ್ಮ ಸ್ಮೃತಿಗಳು ಅವುಗಳಿಂದಲೇ ತುಂಬಿಹೋಗಿವೆ. ಈಗ ನೀವು ನೀಡುವ ಮತ್ತಷ್ಟು ದೃಷ್ಯಿಕೆಗಳ ಬದಲಿಗೆ, ದೌರ್ಜನ್ಯದ ಅತಿರೇಕವು ಪ್ರೇಕ್ಷಕರ ಮನವನ್ನು ನಾಟುವಂಥಾ ಅಭಿವ್ಯಕ್ತಿ ನಿಮ್ಮಿಂದ ಸಾಧ್ಯವಿಲ್ಲವೇ? ಸಾಧ್ಯವಿದೆ, ಆದರೆ ಹಿಂಸೆಯನ್ನು ಮಾನೆಟೈಸ್ ಮಾಡುವ ನವೀಕರಿಸಿದ ತಂತ್ರದಿಂದ ನೀವು ಹೊರಬರಲು ನಿಮ್ಮ ವಾಣಿಜ್ಯಕ್ಷೇತ್ರ ನಿಮ್ಮನ್ನು ಬಿಡುತ್ತಿಲ್ಲ.

ಇಷ್ಟು ಸಮಕಾಲೀನ ಹಾಗೂ ತುರ್ತಿನ ವಸ್ತುವನ್ನು ಕೈಗೆತ್ತಿಕೊಳ್ಳುವ ನಿರ್ದೇಶಕನಿಗೆ ಅತಿವಾಣಿಜ್ಯೀಕರಣದ ಮತ್ತು ಸಮ್ಮೋಹನ ಕುಟಿಲದ ಹಳೆಯ ಸೂತ್ರಕ್ಕೇ ಜೋತುಬೀಳುವ ವೃತ್ತಿ ಅನಿವಾರ್ಯತೆಯನ್ನು ಮೀರುವ ಅವಕಾಶ ದೊರೆತಿದ್ದರೆ, ಬಹುಶಃ ಆತ ವಾಣಿಜ್ಯದಲ್ಲೂ ಗೆಲ್ಲುವ ಒಂದು ಸಾರ್ವಕಾಲಿಕ ಚಿತ್ರವನ್ನು ಕೊಡುತ್ತಿದ್ದರೇ? ಭೂಮಿಯ ಮೇಲಿನ ಅಳಿದುಳಿದ ವೈವಿಧ್ಯಗಳನ್ನೂ ಸರ್ವನಾಶಮಾಡುವ ಹವಣಿಕೆಯಲ್ಲಿ, ಹತ್ತಾರು ಕಾರ್ಪೋರೇಟುಗಳೇ ಇಡೀ ಭೂಮಿಯ ಒಡೆತನ ಮತ್ತು ಆಳ್ವಿಕೆಯನ್ನು ಹಿಡಿಯಲು ದಾರಿಮಾಡಿಕೊಡಲು ದಾಪುಗಾಲಿಕ್ಕುತ್ತಾ ಬರುತ್ತಿರುವ ನಾಲ್ಕನೇ ಕೈಗಾರಿಕಾ ಕ್ರಾಂತಿಗೆ ತನ್ನದೇ ರೀತಿಯಲ್ಲಿ ಪ್ರತಿರೋಧ ದಾಖಲಿಸಬಹುದಾಗಿದ್ದ ಒಂದು ಚಿತ್ರ ಮುರುಟಿತು ಎನ್ನಬೇಕೇ?

ಅಂಬೇಡ್ಕರ್ ಮತ್ತು ಮಾರ್ಕ್ಸ್ ವಾದದ ಆಶಯದಲ್ಲಿ ಈ ವಸ್ತುವನ್ನು ತೆಗೆದುಕೊಂಡಿದ್ದಾರೆಯೇ ಎಂದುಕೊಳ್ಳುವುದಕ್ಕೂ ಸಹ, ಆ ನಿಟ್ಟಿನಲ್ಲಿನ ಅಧ್ಯಯನ, ಪ್ರತಿಪಾದನೆ ಅಥವಾ ಅಂತಃಸತ್ವ ಯಾವುದೂ ನನಗೆ ಗಟ್ಟಿಯಾಗಿ ಕಾಣಲಿಲ್ಲ. ಹಾಗಾಗಿಯೇ, ಜೈ ಭೀಮ್ ಎನ್ನುವ ಶೀರ್ಷಿಕೆಯ ಔಚಿತ್ಯದ ಬಗ್ಗೆ ಕೆಲವರಲ್ಲಿ ಸಹಜವಾಗಿ ಪ್ರಶ್ನೆಗಳು ಎದ್ದಿರುವಂತೆ ನನ್ನಲ್ಲೂ ಏಳುತ್ತವೆ. “ಇಷ್ಟೆಲ್ಲಾ ಹೇಳಿದ್ದೀರಿ, ನೀವೇ ಒಂದು ಸಿನೆಮಾ ಮಾಡಿ ತೋರಿಸ್ರೀ” ಎನ್ನುವವರಿಗೆ, “ಸರಿ ಸ್ವಾಮೀ, ಪ್ರಯತ್ನಿಸುತ್ತೇನೆ, ದುಡ್ಡು ಕೊಡಿ” ಎನ್ನುವುದಷ್ಟೇ ನನ್ನ ಉತ್ತರ.

LEAVE A REPLY

Connect with

Please enter your comment!
Please enter your name here