”ಸಿನಿಮಾರಂಗದಲ್ಲಿರುವ ಹಳೆಯ ಭ್ರಮೆಯ ಚೌಕಟ್ಟನ್ನು ಮುರಿದು ಹೊಸ ಮಾದರಿಯಲ್ಲಿ ಸಿನಿಮಾ ಮಾಡಲು ಸ್ಫೂರ್ತಿ ಪಡೆಯಬೇಕು. ಬರೀ ‘ಮುರಿ’ಯುವುದರಿಂದ ಏನೂ ಲಾಭವಿರುವುದಿಲ್ಲ, ಮುರಿದು ಕಟ್ಟುವುದೇ ಇಂದಿಗೆ ತುಂಬಾ ಮುಖ್ಯವಾಗಿ ಬೇಕಾಗಿರುವುದು. ಈ ಹಾದಿಯಲ್ಲಿ ಚಿತ್ರೋತ್ಸವಗಳು ನೆರವಾಗುತ್ತವೆ” ಎನ್ನುತ್ತಾರೆ ಚಿತ್ರನಿರ್ದೇಶಕ ಮಂಸೋರೆ. Biffesಗೆ ಇಂದು ಚಾಲನೆ ಸಿಗುತ್ತಿದ್ದು, ನಿರ್ದೇಶಕ ಮಂಸೋರೆ ಚಿತ್ರೋತ್ಸವದಿಂದ ತಾವು ಸಾಕಷ್ಟು ಕಲಿತಿದ್ದಾಗಿ ಹೇಳುತ್ತಾರೆ.
ಇವತ್ತಿಗೆ ಚಿತ್ರರಂಗದಲ್ಲಿ ನಾನು ಅಷ್ಟೋ ಇಷ್ಟೋ ಹೆಸರು ಮಾಡಿದ್ದೇನೆ ಎಂದರೆ ಅದರಲ್ಲಿ ಫಿಲಂ ಫೆಸ್ಟಿವಲ್ ಪಾತ್ರ ತುಂಬಾ ಇದೆ. ಚಿತ್ರರಂಗ ಎಂಬುದು ಸದಾ ಕಾಲ ಎಲ್ಲರಿಗೂ ದಕ್ಕುವ ರಂಗವಲ್ಲಾ ಎಂಬ ಭ್ರಮೆಯನ್ನು ಒಡೆದು ಹಾಕಿದ್ದು ಇದೇ ಫಿಲಂ ಫೆಸ್ಟಿವಲ್. ಸಿನಿಮಾ ನಿರ್ಮಾಣ ಎಂದರೆ ಬಹುದೊಡ್ಡ ರಾಕೆಟ್ ಸೈನ್ಸ್ ಎಂಬ ಭ್ರಮೆಯನ್ನು ಕಳಚಿದ್ದು ಇದೇ ಫಿಲಂ ಪೆಸ್ಟಿವಲ್. ನನಗೆ ದಕ್ಕಿದ ಶಿಕ್ಷಣ ಕ್ರಮದಲ್ಲಿ ಸಾಹಿತ್ಯದ ಗಂಧಗಾಳಿ ಇಲ್ಲದ ನನಗೆ ಜಗತ್ತನ್ನು ಪರಿಚಯಿಸಿದ್ದು ಇದೇ ಫಿಲಂ ಫೆಸ್ಟಿವಲ್, ನನ್ನ ಸುತ್ತಮುತ್ತಲಿನ ತಲ್ಲಣಗಳಿಗೆ ಸ್ಪಂದಿಸಲು ಕಲಿತದ್ದು, ಮನುಷ್ಯತ್ವವನ್ನು ಕಲಿಸಿದ್ದು, ರಾಜಕಾರಣಗಳನ್ನು ಅರ್ಥ ಮಾಡಿಸಿದ್ದರಲ್ಲಿ ಬಹು ಮುಖ್ಯ ಪಾಲು ಇದೇ ಫಿಲಂ ಫೆಸ್ಟಿವಲ್, ಜನಪ್ರಿಯ ಮಾದರಿ, ಯಾರೋ ಹೀರೋ ಬರ್ತಾನೆ ಎಲ್ಲರನ್ನೂ ಕಾಪಾಡಿಬಿಡ್ತಾನೆ ಎಂಬ ಭ್ರಮೆಯ ಸಿನಿಮಾಗಳ ಆಚೆಗೂ ಸಿನಿಮಾ ಜಗತ್ತು ಇದೆ ಅಂತ ಕಲಿತಿದ್ದು ಇದೇ ಫಿಲಂ ಫೆಸ್ಟಿವಲ್ನಲ್ಲಿ, ನಾಲ್ಕಕ್ಷರ ಕಲಿತ ಜನರು ತಮ್ಮದೇ ವರ್ಗದ, ಧರ್ಮದ ಜಾತಿಯ ಜನಗಳನ್ನು ಹೇಗೆ ಮರಳು ಮಾಡಿ ಉಳಿದವರು ಬೆಳೆಯದಂತೆ ಅಕ್ಷರ, ಭೀಕರ ಭಾಷಣಗಳ ಮೂಲಕ ಹೇಗೆ ಮರಳು ಮಾಡುತ್ತಾರೆ ಎಂದು ಅರಿವಾದದ್ದು ಇದೇ ಫಿಲಂ ಫೆಸ್ಟಿವಲ್ನಲ್ಲಿ, ಅಂಬೇಡ್ಕರ್ ಇಂದಿಗೆ ಎಷ್ಟು ಪ್ರಸ್ತುತ ಎಂದು ನನ್ನ ಅರಿವಿಗೆ ಬರಲು ನನ್ನ ಬುದ್ಧಿಯನ್ನು ತಿದ್ದಿದ್ದು ಇದೇ ಫಿಲಂ ಫೆಸ್ಟಿವಲ್.
ನಾನು ಈ ಫಿಲಂ ಫೆಸ್ಟಿವಲ್ಗಳ ಮೂಲಕ ಕಲಿತದ್ದು ಇನ್ನೂ ಬಹಳಷ್ಟಿದೆ. ಫಿಲಂ ಫೆಸ್ಟಿವಲ್ ಎಂದರೆ ಬರೀ ಅಲ್ಲಿ ಬಂದು ಸಿನಿಮಾ ನೋಡಿ ಹೊರಗೆ ಹೋಗಿ ಕಾಫಿ ಕುಡಿದು ಹರಟುವುದಷ್ಟೇ ಅಲ್ಲಾ. ಕಾಫಿ ಇನ್ನಿತರ ಚಟಗಳು ನಿಮ್ಮ ಅನಿವಾರ್ಯತೆಗಳೇ ಹೊರತು ಫಿಲಂ ಫೆಸ್ಟಿವಲ್ನ ಕಡ್ಡಾಯವಲ್ಲ. ಓಟಿಟಿಗಳ Subscription ಇಲ್ಲದ, ಟೊರೆಂಟ್ ಅಲ್ಲಿ illegal ಕಾಪಿ ಸಿನಿಮಾಗಳನ್ನು ಡೌನ್ಲೋಡ್ ಮಾಡಿ ನೋಡುವ ಅವಕಾಶ ವಂಚಿತರ ಸಾಕಷ್ಟು ಮಂದಿಯಲ್ಲಿ ನೀವೂ ಒಬ್ಬರಾಗಿದ್ದರೆ ದಯವಿಟ್ಟು ಯಾರಯಾರೋ ಮಾತು ಕೇಳಿ ಈ ಫಿಲಂ ಫೆಸ್ಟಿವಲ್ನಿಂದ ಸಿಗುವ ಅವಕಾಶವನ್ನು ಕಳೆದುಕೊಳ್ಳಬೇಡಿ.
ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ನಿಮಗೆ ತಾಂತ್ರಿಕ ಸಮಸ್ಯೆಗಳು ಅಡ್ಡಿಯಾಗುತ್ತಿದ್ದರೆ ಅದನ್ನು ಸಂಬಂಧಪಟ್ಟವರಲ್ಲಿ ‘ಪ್ರಶ್ನಿಸಿ’ ದಕ್ಕಿಸಿಕೊಳ್ಳಿ. ಅಷ್ಟೇ ಹೊರತು, ಹೊಟ್ಟೆ ತುಂಬಿದವರ, ತಿಂಗಳ ಸಂಬಳದಲ್ಲಿ ನೆಮ್ಮದಿಯಾಗಿ ಬದುಕು ಕಟ್ಟಿಕೊಳ್ಳುತ್ತಾ, ವ್ಯಾಪಾರ ವಹಿವಾಟಿನಲ್ಲಿ ಬೇರೆಬೇರೆ ಉದ್ಯಮಗಳಲ್ಲಿ ಬದುಕು ಹಸುನಾಗಿಸಿಕೊಳ್ಳುತ್ತಾ ಇಲ್ಲಿ ಬಂದು ಫಿಲಂ ಫೆಸ್ಟಿವಲ್ ಬಗ್ಗೆ ನಕಾರಾತ್ಮಕವಾಗಿ ಕುಟ್ಟುವವರ ಬಗ್ಗೆ ಉದಾಸೀನ ಮಾಡಿ ಸ್ನೇಹಿತರೇ. ಯಾಕೆಂದರೆ ನೀವು ಸಿನಿಮಾ ಮಾಡಬೇಕೆಂದು ನಿಂತಾಗ ಅವರಾರೂ ನಿಮ್ಮ ಸಿನಿಮಾ ಕನಸಿಗೆ ಬಂಡವಾಳ ಹಾಕುವುದಿಲ್ಲ. ನಿಮ್ಮ ಕನಸುಗಳಿಗೆ ನೀವೇ ಜವಾಬ್ದಾರರು.
ಪುಕ್ಕಟೆ ಸಲಹೆ ಕೊಡುವವರಿಗೆ ಈ ದೇಶದಲ್ಲಿ ಕೊರತೆ ಇಲ್ಲ. ಸಿನಿಮಾ ಮಾಡಲು ಸಿನಿಮಾ ನೋಡುವುದೂ ಕೂಡ ತುಂಬಾ ಮುಖ್ಯ. ಒರಾಯನ್ ಮಾಲ್ನಲ್ಲಿ ದುಬಾರಿ ಊಟ ಮಾಡಲೇಬೇಕು ಎಂದಿಲ್ಲ ಅಥವಾ ನಮ್ಮ ಕಾಲದಲ್ಲಿ ನಾನು ಒಂದೊತ್ತಿನ ಊಟ ಮಾಡಿ ಸಿನಿಮಾ ನೋಡಿದಂತೆ ಇಂದು ಹೊಟ್ಟೆ ಹಸಿದುಕೊಂಡಿರುವ ಅವಶ್ಯಕತೆಯೂ ಇಲ್ಲಾ. ನಿಮ್ಮ ಊಟದ ಡಬ್ಬಿ ತಂದು, ಪಿವಿಆರ್ ಪ್ರವೇಶದ ಬಳಿ ಇರುವ ಕೌಂಟರ್ನಲ್ಲಿ ‘ಉಚಿತವಾಗಿ’ ಇಟ್ಟು, ಆನಂತರ ಫುಡ್ ಕೋರ್ಟ್ನಲ್ಲಿ ನಿಮ್ಮ ಡಬ್ಬಿ ತಿನ್ನಲು ಯಾರೂ ಅಡ್ಡಿ ಮಾಡುವುದಿಲ್ಲ. ಮೆಜೆಸ್ಟಿಕ್ನಿಂದ ನೇರವಾಗಿ ಮೆಟ್ರೋ ಇದೆ. ನಮ್ಮ ಕಾಲದಲ್ಲಿದ್ದ ಕೊನೆ ಶೋ ಮುಗಿದ ಮೇಲೆ ಹೇಗಪ್ಪಾ ಮನೆ ತಲುಪುವುದು ಎಂಬ ಆತಂಕ ಇಂದಿಗಿಲ್ಲ.
ಸಿನಿಮಾ ನೋಡಿ, ಇಷ್ಟವಾದರೆ ‘ಸಮಯ ಇದ್ದರೆ’ ಅಲ್ಲೇ ಯಾರಾದರೂ ಪರಿಣಿತರು ಸಿಕ್ಕರೆ ಅವರ ಬಳಿ ಆ ಸಿನಿಮಾ ‘ತಾಂತ್ರಿಕವಾಗಿ’ ಅಷ್ಟು ‘ಪಕ್ವ’ವಾಗಿ ಮೂಡಿ ಬರಲು ಹೇಗೆ ಸಾಧ್ಯವಾಯಿತು ಎಂಬುದನ್ನು ಚರ್ಚಿಸಿ. ಸಿನಿಮಾರಂಗದಲ್ಲಿರುವ ಹಳೆಯ ಭ್ರಮೆಯ ಚೌಕಟ್ಟನ್ನು ಮುರಿದು ಹೊಸ ಮಾದರಿಯಲ್ಲಿ ಸಿನಿಮಾ ಮಾಡಲು ಸ್ಫೂರ್ತಿ ಪಡೆದುಕೊಳ್ಳಿ. ಬರೀ ‘ಮುರಿ’ಯುವುದರಿಂದ ಏನೂ ಲಾಭವಿರುವುದಿಲ್ಲ, ಮುರಿದು ಕಟ್ಟುವುದೇ ಇಂದಿಗೆ ತುಂಬಾ ಮುಖ್ಯವಾಗಿ ಬೇಕಾಗಿರುವುದು.
ರಾಜ್ಯದ ಇನ್ನಿತರ ಪ್ರದೇಶಗಳಿಗೆ ಫಿಲಂ ಫೆಸ್ಟಿವಲ್ ತಲುಪುವ ಅವಶ್ಯಕತೆ ಖಂಡಿತ ಇದೆ. ಆದರೆ ಅದನ್ನು ಒತ್ತಾಯಿಸ ಬೇಕಾಗಿರುವುದು ಸರ್ಕಾರವನ್ನು. ಬೆಚ್ಚನೆಯ ಗೂಡಿಂದ ಹೊರಬಂದು ನೇರ ಹೋಗಿ ಸರ್ಕಾರ ನಡೆಸುವವರ ಕತ್ತುಪಟ್ಟಿ ಹಿಡಿದು ಉಳಿದ ಕಡೆಗೂ ತಲುಪಿಸಿ ಎಂದು ಕೇಳಬೇಕೆ ಹೊರತು, ಚಿತ್ರರಂಗದಲ್ಲಿ ಭವಿಷ್ಯ ಹುಡುಕುತ್ತಿರುವ ಅವರು ‘ನೂರೇ ಸಂಖ್ಯೆಯ’ ಯುವಕರು ಇರಬಹುದು, ಅವರಿಗೆ ಒಂದು ವಾರದಲ್ಲಿ ಇಡೀ ಜಗತ್ತನ್ನು ಅರಿಯುವ ಅವಕಾಶ ಇರುವ ಚಿತ್ರೋತ್ಸವದಲ್ಲಿ ಪಾಲ್ಗೊಂಡು, ಅವರ ಭವಿಷ್ಯ ಕಟ್ಟಿಕೊಳ್ಳುವ ಅವಕಾಶದಿಂದ ವಂಚಿತರನ್ನಾಗಿ ಮಾಡುವ ಬ್ರೈನ್ ವಾಷ್ ಕೆಲಸ ಮಾಡಬಾರದು.
ಇದೇ ಚಿತ್ರೋತ್ಸವದಲ್ಲಿ ನಿರ್ದೇಶಕನಾದ ನಂತರ ನನಗೂ ಸಾಕಷ್ಟು ಅನ್ಯಾಯಗಳಾಗಿವೆ. ಅದು ಆಯಾ ವ್ಯಕ್ತಿಗಳಿಂದ ಆಗಿರುವುದೇ ಹೊರತು ಚಿತ್ರೋತ್ಸವದಿಂದ ಅಲ್ಲ. ಹಾಗಾಗಿ ನಾನು ಚಿತ್ರೋತ್ಸವಕ್ಕೆ ಹೋಗುವುದು ನಿಶ್ಚಿತ. ನನ್ನ ಸಿನಿಮಾ ಇಲ್ಲದಿದ್ದರೂ ನಾನು ಹೋಗುತ್ತೇನೆ. ಇಲ್ಲಿಯವರೆಗೂ ಕಲಿತಿರುವುದು ಸಾಸಿವೆಯಷ್ಟು, ಕಲಿಯಬೇಕಿರುವುದು ಬ್ರಹ್ಮಾಂಡದಷ್ಟು. ಅಷ್ಟೇ ಸ್ನೇಹಿತರೇ, ಇದು ನನ್ನ ಪ್ರಾಕ್ಟಿಕಲ್ ಅನುಭವ, ಇದು ಯಾವುದೇ ಥಿಯರಿ ಅಲ್ಲ. ಅಂಗೈಯಲ್ಲಿರುವ ಅವಕಾಶ ಬಳಸಿಕೊಂಡು ಬುದ್ಧಿವಂತಾರಾಗುತ್ತೀರೋ, ಇಲ್ಲಾ ಯಾರದೋ ಮಾತುಗಳನ್ನು ಕೇಳಿ ಅವಕಾಶ ಕೈಚೆಲ್ಲಿ ಆಮೇಲೆ ಪರಿತಪಿಸುತ್ತೀರೋ ನೀವೇ ನಿರ್ಧರಿಸಿ.










