ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾಗಳಿಗೆ ತಾರತಮ್ಯ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಪ್ರೇಮ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. UFO, QUBE ಸಂಸ್ಥೆಗಳು ಬೆಂಗಳೂರಿನಲ್ಲೇ ಸಿನಿಮಾಗಳನ್ನು ಅಪ್‌ಲೋಡ್‌ ಮಾಡುವ ವ್ಯವಸ್ಥೆ ಕಲ್ಪಿಸಲಿ ಎಂದು ಇಂದು ವಾಣಿಜ್ಯ ಮಂಡಳಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ ಎನ್ನುವುದು ಬಹಳ ವರ್ಷಗಳಿಂದ ಕೇಳಿ ಬರುತ್ತಿರುವ ದೂರು. ನಿರ್ದೇಶಕ ಪ್ರೇಮ್‌ ಇಂದು ವಾಣಿಜ್ಯ ಮಂಡಳಿಗೆ ಪತ್ರ ಮುಖೇನ ತಮ್ಮ ಅಹವಾಲುಗಳನ್ನು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಆಯೋಜನೆಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದರು. ಕನ್ನಡ ಚಿತ್ರಗಳಿಗೆ ಸೌಂಡ್‌ ಸಿಸ್ಟಂ ವಿಚಾರದಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ತಾರತಮ್ಯ ನಡೆಯುತ್ತಿದೆ ಎನ್ನುವುದು ಅವರ ಪ್ರಮುಖ ಆರೋಪ. “ಹಾಲಿವುಡ್‌ ಚಿತ್ರಗಳಿಗೆ 7 ಸೌಂಡ್‌ ಪಾಯಿಂಟ್‌ ಕೊಡುತ್ತಾರೆ. ತಮಿಳು, ತೆಲುಗು, ಹಿಂದಿ ಚಿತ್ರಗಳಿಗೆ 5 ಪಾಯಿಂಟ್‌ ಕೊಟ್ಟರೆ ಕನ್ನಡಕ್ಕೆ 4 ಪಾಯಿಂಟ್‌ ಇರುತ್ತದೆ. ಇದು ಸಿನಿಮಾದ ಸೌಂಡ್‌ ಕ್ವಾಲಿಟಿ ಮೇಲೆ ಪರಿಣಾಮ ಬೀರುತ್ತದೆ. ಹಿಂದೆ ನನ್ನ ‘ಜೋಗಿ’ ಚಿತ್ರಕ್ಕೂ ಹೀಗಾಗಿತ್ತು” ಎಂದು ಆರೋಪಿಸಿದರು.

ಪ್ರೇಮ್‌ ಪ್ರಸ್ತಾಪಿಸಿದ ಮತ್ತೊಂದು ವಿಷಯ UFO, QUBE ಸ್ಯಾಟಲೈಟ್‌ ಅಪ್‌ಲೋಡಿಂಗ್‌ ಸಂಸ್ಥೆಗಳಿಗೆ ಸಂಬಂಧಿಸಿದ್ದು. ಕನ್ನಡದ ಸಿನಿಮಾ ಮಾರುಕಟ್ಟೆ ದೊಡ್ಡದಿದೆ. ಹಾಗಿದ್ದೂ ಬೆಂಗಳೂರಿನಲ್ಲಿ UFO, QUBE ಅಪ್‌ಲೋಡಿಂಗ್‌ ವ್ಯವಸ್ಥೆ ಇಲ್ಲ. ಸಿನಿಮಾ ಬಿಡುಗಡೆ ಮಾಡುವ ಒತ್ತಡದಲ್ಲಿರುವ ನಿರ್ಮಾಪಕರು ಕೊನೆಯ ಹಂತದಲ್ಲಿ ಅಪ್‌ಲೋಡಿಂಗ್‌ಗಾಗಿ ಚೆನ್ನೈ, ಮುಂಬಯಿಗೆ ಅಲೆದಾಡಬೇಕು. ‌ತಾಂತ್ರಿಕ ಸಮಸ್ಯೆಗಳು ಎದುರಾದರೆ ಅಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಈ ಸಂಸ್ಥೆಗಳು ಬೆಂಗಳೂರಿನಲ್ಲೇ ಸಿನಿಮಾ ಅಪ್‌ಲೋಡಿಂಗ್‌ಗೆ ವ್ಯವಸ್ಥೆ ಕಲ್ಪಿಸಬೇಕು” ಎಂದು ಪತ್ರದ ಮುಖೇನ ಪ್ರೇಮ್‌ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್‌ ಅವರಿಗೆ ಎರಡು ಬೇಡಿಕೆಗಳನ್ನಿಟ್ಟರು.

ನಿರ್ದೇಶಕ ಪ್ರೇಮ್‌ ಅವರಿಗೆ ನಿರ್ಮಾಪಕ ಹಾಗೂ ವಾಣಿಜ್ಯ ಮಂಡಳಿ ಪದಾಧಿಕಾರಿಗಳಲ್ಲೊಬ್ಬರಾದ ಎನ್‌.ಎಂ.ಸುರೇಶ್‌ ದನಿಗೂಡಿಸಿದರು. “ಸೌಂಡ್‌ ಸಿಸ್ಟಂಗೆ ಸಂಬಂಧಿಸಿದಂತೆ ನನ್ನ ನಿರ್ಮಾಣದ ‘ಎಕ್ಸ್‌ಕ್ಯೂಸ್‌ ಮಿ’ ಚಿತ್ರಕ್ಕೂ ತೊಂದರೆಯಾಗಿತ್ತು. ಆಗ ನನಗೆ ಈ ತಾಂತ್ರಿಕ ವಿಷಯಗಳ ಬಗ್ಗೆ ತಿಳಿವಳಿಕೆ ಇರಲಿಲ್ಲ. ಈ ಸಮಸ್ಯೆಗಳು ಅದಷ್ಟು ಶೀಘ್ರ ಸರಿಹೋಗಬೇಕು” ಎಂದರು. ಇನ್ನು UFO, QUBE ಅಪ್‌ಲೋಡಿಂಗ್‌ ಕುರಿತು ಪ್ರಸ್ತಾಪಿಸಿದ ಅವರು, “ಈಗ ಕನ್ನಡದಲ್ಲೂ ಪ್ಯಾನ್‌ ಇಂಡಿಯಾ ಚಿತ್ರಗಳು ತಯಾರಾಗುತ್ತಿವೆ. ಇಲ್ಲಿನ ಮಾರುಕಟ್ಟೆಯನ್ನು ಬಳಕೆ ಮಾಡಿಕೊಳ್ಳುವ ಈ ಸಂಸ್ಥೆಗಳು ನಮಗೆ ಅಗತ್ಯ ಸೌಲಭ್ಯ ಕೊಡಬೇಕಿದೆ” ಎಂದು ಪ್ರೇಮ್‌ರ ನಿಲುವನ್ನು ಬೆಂಬಲಿಸುತ್ತಾ, ಈ ಪ್ರಶ್ನೆಗಳನ್ನೆತ್ತಿದ ಅವರನ್ನು ಅಭಿನಂದಿಸಿದರು.

ನಂತರ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌, “ಇಲ್ಲಿಯವರೆಗೆ ಯಾರೂ ಈ ಬಗ್ಗೆ ದೂರು ತಂದಿರಲಿಲ್ಲ. ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌ ಮತ್ತು UFO, QUBE ಸಂ‍ಸ್ಥೆಯವರನ್ನು ವಾಣಿಜ್ಯ ಮಂಡಳಿಗೇ ಕರೆಸಿ ಮಾತನಾಡುತ್ತೇವೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರಗಳಿಗೆ ಈ ತೊಂದರೆಗಳು ಎದುರಾಗದಂತೆ ನೋಡಿಕೊಳ್ಳಬೇಕಿದೆ” ಎಂದರು. ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಸಿನಿಮಾ ಶೀಘ್ರದಲ್ಲೇ ತೆರೆಕಾಣಲಿದೆ. ಇದಕ್ಕಾಗಿ ಪ್ರೇಮ್‌ ಎಚ್ಚೆತ್ತುಕೊಂಡಿದ್ದಾರೆ ಎನ್ನುವ ಪ್ರಶ್ನೆಗಳೂ ಅಲ್ಲಿ ಕೇಳಿಬಂದವು. “ಹಾಗಂದುಕೊಂಡರೆ ತಪ್ಪೇನಿಲ್ಲ. ನಮಗೆ ತೊಂದರೆಯಾದಾಗಲೇ ನಾವು ಎಚ್ಚರವಾಗೋದು. ಆದರೆ ಚಿತ್ರರಂಗದ ಹಿತದೃಷ್ಟಿಯಿಂದ ಈ ಸಮಸ್ಯೆಗಳು ಇತ್ಯರ್ಥವಾಗುವುದು ಅವಶ್ಯ” ಎಂದರು.

Previous articleMTV Roadies ನಿರೂಪಿಸಲಿರುವ ಸೋನು ಸೂದ್‌; ಸೌತ್‌ ಆಫ್ರಿಕಾದಲ್ಲಿ ಶೂಟಿಂಗ್‌
Next articleಈ ವಾರ ತೆರೆಗೆ ‘ಇದೇ ಅಂತರಂಗ ಶುದ್ಧಿ’; ಕುಮಾರ ದತ್‌ ನಿರ್ದೇಶನದ ಸಿನಿಮಾ

LEAVE A REPLY

Connect with

Please enter your comment!
Please enter your name here