ನಟಿ ಕಂಗನಾ ರನಾವತ್‌ ನಿರ್ಮಾಣದ ‘ಟೀಕು ವೆಡ್ಸ್‌ ಶೇರು’ ಸಿನಿಮಾ ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ನಾಳೆಯಿಂದ (ಜೂನ್‌ 23) Amazon Prime Videoದಲ್ಲಿ ಸ್ಟ್ರೀಮ್‌ ಆಗಲಿದೆ. ಸಲ್ಮಾನ್‌ ಖಾನ್‌ ಅಭಿನಯದ ಹಿಂದಿ ಸಿನಿಮಾ ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’, ಮಲಯಾಳಂ ಸರಣಿ ‘ಕೇರಳ ಕ್ರೈಂ ಫೈಲ್ಸ್‌’ ನಾಳೆಯಿಂದ ಸ್ಟ್ರೀಮ್‌ ಆಗಲಿರುವ ಮತ್ತೆರೆಡು ಪ್ರಮುಖ ಕಂಟೆಂಟ್‌ಗಳು.

ನವಾಜುದ್ದೀನ್‌ ಸಿದ್ದಿಕಿ ಮತ್ತು ಅವನೀತ್ ಕೌರ್ ಲವ್‌ – ಡ್ರಾಮಾ ‘ಟೀಕು ವೆಡ್ಸ್ ಶೇರು’ ನೇರವಾಗಿ OTTಯಲ್ಲಿ ರಿಲೀಸ್‌ ಆಗುತ್ತಿದ್ದು, Prime Videoದಲ್ಲಿ ನಾಳೆಯಿಂದ ಸ್ಟ್ರೀಮ್‌ ಆಗಲಿದೆ. ನಟಿ ಕಂಗನಾ ರನಾವತ್‌ ನಿರ್ಮಾಣದ ಚಿತ್ರವನ್ನು ಸಾಯಿ ಕಬೀರ್‌ ನಿರ್ದೇಶಿಸಿದ್ದಾರೆ. ಸಿನಿಮಾ ಜ್ಯೂನಿಯರ್ ಕಲಾವಿದನ ಸುತ್ತ ಸುತ್ತುತ್ತದೆ. ಶೇರು (ನವಾಜುದ್ದೀನ್ ಸಿದ್ದಿಕಿ) ಬಾಲಿವುಡ್ ನಟಿಯಾಗಲು ಬಯಸುವ ಹುಡುಗಿಯನ್ನು ಮದುವೆಯಾಗುತ್ತಾರೆ. ಮತ್ತೊಂದೆಡೆ ಟೀಕು (ಅವನೀತ್ ಕೌರ್) ಉನ್ನತ ವ್ಯಾಸಂಗದ ನೆಪದಲ್ಲಿ ದೆಹಲಿಗೆ ತೆರಳಿ, ಅಲ್ಲಿ ಮುಸ್ಲಿಂ ಯುವಕನನ್ನು ಪ್ರೀತಿಸುತ್ತಾಳೆ. ಆಕೆಯ ಪೋಷಕರು ಅವರಿಬ್ಬರ ಮದುವೆಗೆ ಸಮ್ಮತಿ ನೀಡುತ್ತಾರೆ. ಟೀಕು ಮತ್ತು ಶೇರು ತಮ್ಮ ಕನಸುಗಳನ್ನು ನನಸಾಗಿಸಲು ಒಂದಾಗುವುದು, ಆ ಸಮಯದಲ್ಲಿ ಪರಸ್ಪರ ಹೇಗೆ ಪ್ರೀತಿಯಲ್ಲಿ ಬೀಳುತ್ತಾರೆ ಎನ್ನುವುದು ಚಿತ್ರದ ಕಥಾವಸ್ತು.

ಸಲ್ಲೂ ಸಿನಿಮಾ
‘ಕಿಸೀ ಕಾ ಭಾಯ್ ಕಿಸೀ ಕಿ ಜಾನ್’ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. ಫಹಾದ್‌ ಸಾಮ್ಜಿ ನಿರ್ದೇಶನದ ಹಿಂದಿ ಸಿನಿಮಾ ZEE5ನಲ್ಲಿ ಜೂನ್‌ 23ರಿಂದ ಪ್ರೀಮಿಯರ್ ಆಗಲಿದೆ. ವೆಂಕಟೇಶ್ ದಗ್ಗುಬಾಟಿ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿಜೇಂದರ್ ಸಿಂಗ್, ಅಭಿಮನ್ಯು ಸಿಂಗ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ಶೆಹನಾಜ್ ಗಿಲ್, ಪಾಲಕ್ ತಿವಾರಿ, ವಿನಾಲಿ ಭಟ್ನಾಗರ್ ಚಿತ್ರದ ಪ್ರಮುಖ ಪಾತ್ರಧಾರಿಗಳು. ಅಜಿತ್‌ ನಟಿಸಿದ್ದ 2014ರ ಯಶಸ್ವೀ ತಮಿಳು ಸಿನಿಮಾ ‘ವೀರಂ’ ಹಿಂದಿ ಅವತರಣಿಕೆಯಿದು.

ಧೈರ್ಯಶಾಲಿ ಭಾಯಿಜಾನ್‌ (ಸಲ್ಮಾನ್‌ ಖಾನ್) ತನ್ನ ಮೂವರು ಸಹೋದರರಾದ ಇಷ್ಕ್, ಮೋಹ್ ಮತ್ತು ಲವ್ ಅವರೊಟ್ಟಿಗೆ ದೆಹಲಿಯೊಂದರಲ್ಲಿ ವಾಸಿಸುತ್ತಿರುತ್ತಾನೆ. ಭಾಯಿಜಾನ್‌ಗೆ ಮದುವೆ ಬಗ್ಗೆ ಆಸಕ್ತಿಯಿಲ್ಲ. ಮದುವೆ ವ್ಯವಸ್ಥೆಯನ್ನೇ ದ್ವೇಷಿಸುವ ಪೈಕಿ. ಮದುವೆಯಾದರೆ ಪತ್ನಿಯಿಂದ ತನ್ನ ಸಹೋದರರ ನಡುವೆ ಅಂತರ ಏರ್ಪಡಬಹುದು ಎನ್ನುವುದು ಅವನ ಆಲೋಚನೆ. ಭಾಯಿಜಾನ್ ಕಿರಿಯ ಸಹೋದರರು ತಾವೂ ಕೂಡ ಮದುವೆಯಾಗಲು ಇಷ್ಟಪಡುವುದಿಲ್ಲ ಎಂದು ನಟಿಸುತ್ತಿರುತ್ತಾರೆ. ಆದರೆ ಗುಟ್ಟಾಗಿ ಪ್ರೇಯಸಿಯರನ್ನು ಹೊಂದಿರುತ್ತಾರೆ. ಮುಂದೆ ಭಾಯಿಜಾನ್‌ ಬದುಕು ಏನಾಗುತ್ತದೆ? ಆತನಿಗೆ ಪ್ರೀತಿ ಹೇಗಾಗುತ್ತೆ? ಎನ್ನುವುದು ಚಿತ್ರದ ಕತೆ. ತಿಳಿಹಾಸ್ಯದ ನಿರೂಪಣೆಯ ಆಕ್ಷನ್‌ ಡ್ರಾಮಾ ಸಿನಿಮಾಗೆ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಕೇರಳ ಕ್ರೈಂ ಫೈಲ್ಸ್‌
ಅಜು ವರ್ಗೀಸ್ ಮತ್ತು ಲಾಲ್ ಅಭಿನಯದ ‘ಕೇರಳ ಕ್ರೈಮ್‌ ಫೈಲ್ಸ್‌’ ಸರಣಿ Disney+Hotstarನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಅಹಮ್ಮದ್ ಕಬೀರ್ ನಿರ್ದೇಶನದ ನೈಜ ಘಟನೆಗಳನ್ನು ಆಧರಿಸಿದ ಮಲಯಾಳಂನ ಮೊದಲ ಅಧಿಕೃತ ವೆಬ್‌ ಸರಣಿ ‘ಕೇರಳ ಕ್ರೈಮ್ ಫೈಲ್ಸ್’. ಈ ಸರಣಿಯ ಮುಖ್ಯ ಪಾತ್ರಗಳಲ್ಲಿ ಅಜು ವರ್ಗೀಸ್ ಮತ್ತು ಲಾಲ್ ನಟಿಸಿದ್ದಾರೆ. ಕೊಲೆಗಾರನನ್ನುಕಂಡು ಹಿಡಿಯುವ ಭರದಲ್ಲಿರುವ ಸಬ್ ಇನ್ಸ್‌ಪೆಕ್ಟರ್ ಮನೋಜ್ ಮತ್ತು ಅವನ ತಂಡದ ಕಥೆಯನ್ನು ಹೇಳುತ್ತದೆ ಸರಣಿ. ಕೊಲೆಗಾರನ ರಹಸ್ಯ ಭೇದಿಸಲು ಮನೋಜ್‌ ಬಳಿ ಕೇವಲ ಒಂದು ಸುಳಿವು ಮತ್ತು ನಕಲಿ ವಿಳಾಸ ಮಾತ್ರ ಇರುತ್ತದೆ. ಗೆಸ್ಟ್ ಹೌಸ್‌ವೊಂದರಲ್ಲಿ ಲೈಂಗಿಕ ಕಾರ್ಯಕರ್ತೆಯ ಕೊಲೆ ಪ್ರಕರಣವನ್ನು ಕೇರಳ ಪೊಲೀಸರು ಹೇಗೆ ತನಿಖೆ ಮಾಡುತ್ತಾರೆ ಎನ್ನುವುದು ಸರಣಿಯ ಕಥಾವಸ್ತು.

Previous article‘ಜರ್ನೀ ಆಫ್‌ ಲವ್‌ 18+’ ಟ್ರೈಲರ್‌ | ಅರುಣ್‌ ಜೋಸ್‌ ನಿರ್ದೇಶನದ ಮಲಯಾಳಂ ಸಿನಿಮಾ
Next articleಕರಣ್‌ ಜೋಹರ್‌ ಸಿನಿಮಾಯಾನಕ್ಕೆ 25 ವರ್ಷ | UK ಸಂಸತ್ತು ಗೌರವ

LEAVE A REPLY

Connect with

Please enter your comment!
Please enter your name here