ಒಂದು ಸರಳ ಪ್ರೇಮಕಥೆ, ಪಯಣಂ, ಜೂನಿ ಸೇರಿದಂತೆ ಕನ್ನಡದ ಎಂಟು ಸಿನಿಮಾಗಳು ಈ ವಾರ ಬಿಡುಗಡೆಯಾಗಿವೆ. ರಜನೀಕಾಂತ್ ಅಭಿನಯದ ‘ಲಾಲ್ ಸಲಾಂ’, ರವಿತೇಜಾ ಅವರ ‘ಈಗಲ್’, ಮಮ್ಮೂಟಿ ಅಭಿನಯದ ‘ಯಾತ್ರಾ 2’ ತೆಲುಗು ಸಿನಿಮಾಗಳು ಥಿಯೇಟರ್‌ಗೆ ಬಂದಿವೆ.
ಒಂದು ಸರಳ ಪ್ರೇಮಕಥೆ | ಕನ್ನಡ | ಚಿತ್ರದಲ್ಲಿ ವಿನಯ್ ರಾಜಕುಮಾರ್, ‘ರಾಧಾ ಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ಮತ್ತು ಸ್ವಾತಿಷ್ಠ ಕೃಷ್ಣನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಸಿಂಪಲ್ ಸುನಿ ಸಿನಿಮಾ ನಿರ್ದೇಶಿಸಿದ್ದಾರೆ. ಸಂಗೀತ ನಿರ್ದೇಶಕನಾಗುವ ಕನಸು ಕನಸು ಕಾಣುವ ನಾಯಕನಟ ಬಾಳಸಂಗತಿಯ ಹುಡುಕಾಟದಲ್ಲಿರುತ್ತಾನೆ. ಆಗ ಸ್ವಾತಿಷ್ಠ ಕೃಷ್ಣನ್ ಪರಿಚಯವಾಗುತ್ತಾಳೆ. ಸ್ವಾತಿಷ್ಠ, ಚಿತ್ರದಲ್ಲಿ ಪತ್ರಕರ್ತೆಯ ಪಾತ್ರ ನಿರ್ವಹಿಸಿದ್ದಾರೆ. ನಂತರ ವಿನಯ್‌ಗೆ ಮಲ್ಲಿಕಾ ಸಿಂಗ್ ಮೇಲೆ ಪ್ರೀತಿಯಾಗುತ್ತದೆ. ಮುಂದೇನಾಗಲಿದೆ ಎಂದು ಸಿನಿಮಾ ತೋರಿಸಲಿದೆ. ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಇತರೆ ಪಾತ್ರಗಳಲ್ಲಿದ್ದಾರೆ. ಆದಿ ಅವರ ಸಂಕಲನವಿದ್ದು, ಸಮರ್ಥ್ ಸಂಗೀತ ಸಂಯೋಜನೆ ಹಾಗೂ ಕಾರ್ತಿಕ್ ಛಾಯಾಗ್ರಣ ನಿರ್ವಹಿಸಿದ್ದಾರೆ. Ram Movies ಬ್ಯಾನರ್ ಅಡಿ ಮೈಸೂರು ರಮೇಶ್ ಚಿತ್ರ ನಿರ್ಮಿಸಿದ್ದಾರೆ.
ಇಮೇಲ್ | ಕನ್ನಡ | ರಾಗಿಣಿ ದ್ವಿವೇದಿ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಆನ್‌ಲೈನ್ ಗೇಮ್‌ನಿಂದಾಗುವ ಪರಿಣಾಮಗಳನ್ನು ನಿರ್ದೇಶಕರು ಚಿತ್ರದಲ್ಲಿ ತೋರಿಸಿದ್ದಾರೆ. ಸಿನಿಮಾವನ್ನು ಎಸ್ ಆರ್ ರಾಜನ್ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ‘ಜೈಲರ್’ ಸಿನಿಮಾ ಖ್ಯಾತಿಯ ಬಿಲ್ಲಿ, ‘ಲೊಳ್ಳುಸಭಾ’ ಖ್ಯಾತಿಯ ಮನೋಹರ್, ಅಕ್ಷಯ್ ರಾಜ್, ಅರತಿ ಶ್ರೀ, ಆದವ ಬಾಲಾಜಿ, ಮಂಜು ನಂಜನಗೂಡು, ಸುನಿಲ್ ಸಫಿ, ರಾಮ್ ಸನ್ನಿ, ಅಜಿತ್ ಕುಮಾರ್, ಕುಮಾರಿ ಸೃಷ್ಟಿ, ಕುಮಾರಿ ಸಿಂಚನ, ಕುಮಾರಿ ಅನನ್ಯ ಚಿತ್ರದ ತಾರಾಬಳಗದಲ್ಲಿದ್ದಾರೆ.
ಜೂನಿ | ಕನ್ನಡ | ಪೃಥ್ವಿ ಅಂಬಾರ್ ಮತ್ತು ರಿಷಿಕಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾವನ್ನು ವೈಭವ್ ಮಹಾದೇವ್ ನಿರ್ದೇಶಿಸಿದ್ದಾರೆ. ಚಿತ್ರಕಥೆ, ಕೆಫೆಯ ಮಾಲಿಕ ಪಾರ್ಥ ಸುತ್ತ ಸುತ್ತುತ್ತದೆ. ಪಾರ್ಥ, ಜೂನಿ ಎಂಬ ಯುವತಿಯನ್ನು ಪ್ರೀತಿಸುತ್ತಾನೆ. ಪರಸ್ಪರ ಪ್ರೀತಿಗೆ ಸಮ್ಮತಿ ಸೂಚಿಸಿ ಸಾಮಾನ್ಯವಾಗಿ ಬದುಕು ನಡೆಸುವಾಗ ಜೂನಿ ಮಾನಸಿಕ ರೋಗಿ ಎಂಬ ಸತ್ಯ ತಿಳಿಯುತ್ತದೆ. ಅವಳು ಸಾಮಾನ್ಯರಂತೆ ವರ್ತಿಸಿದರೂ ಅವಳ ನಡವಳಿಕೆಯು ಕೆಲವೊಮ್ಮೆ ಅತಿರೇಕಕ್ಕೆ ತಲುಪುತ್ತಿರುತ್ತದೆ. ಈ ವಿಷಯ ತಿಳಿದ ಪಾರ್ಥನ ತಾಯಿ, ಇವರ ಮದುವೆಗೆ ಸಮ್ಮತಿ ಕೊಡುವುದಿಲ್ಲ. ಮುಂದೇನಾಗಲಿದೆ ಎಂದು ಸಿನಿಮಾ ತೋರಿಸಲಿದೆ. ಈ ಸಿನಿಮಾವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ‘ಲವ್ ಮಾಕ್ಟೇಲ್’ ಚಿತ್ರದ ನಕುಲ್ ಅಭ್ಯಂಕರ್ ಸಂಗೀತ ಸಂಯೋಜಿಸಿದ್ದು, ಶಶಾಂಕ್ ನಾರಾಯಣ ಸಂಕಲನ, ಅಜಿನ್ ಬಿ ಜಿತಿನ್ ದಾಸ್ ಛಾಯಾಗ್ರಹಣ ಚಿತ್ರಕ್ಕಿದೆ.
5D | ಕನ್ನಡ | ಆದಿತ್ಯ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾವನ್ನು ಎಸ್ ನಾರಾಯಣ್ ನಿರ್ದೇಶಿಸಿದ್ದಾರೆ. ಮೆಡಿಕಲ್ ಮಾಫಿಯಾ ಕಥಾವಸ್ತು. ಚಿತ್ರದಲ್ಲಿ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಕುರಿತು ಎಸ್ ನಾರಾಯಣ್, ‘ಇದುವರೆಗೂ ನಾನು ಕೌಟುಂಬಿಕ ಚಿತ್ರಗಳನ್ನು ನಿರ್ದೇಶಿಸುವುದರಲ್ಲಿ ಸೈ ಎನಿಸಿಕೊಂಡಿದ್ದೇನೆ. ಈಗ ಪ್ರೇಕ್ಷಕರು ಸಸ್ಪೆನ್ಸ್ ಥ್ರಿಲ್ಲರ್ ಕತೆಯನ್ನು ಹೇಗೆ ರಚಿಸುತ್ತೇನೆ ಎಂಬುದನ್ನು ನೋಡಬಹುದು’ ಎಂದಿದ್ದಾರೆ. ಚಲನಚಿತ್ರಕ್ಕೆ ಎಸ್ ನಾರಾಯಣ್ ಅವರೇ ಸಾಹಿತ್ಯ ರಚಿಸಿ, ಸಂಗೀತ ನೀಡಿದ್ದಾರೆ.
ಜಸ್ಟ್ ಪಾಸ್ | ಕನ್ನಡ | ಕೆ ಎಂ ರಘು ನಿರ್ದೇಶಿಸಿರುವ ಈ ಚಿತ್ರದಲ್ಲಿ ಶ್ರೀ ಹಾಗೂ ಪ್ರಣತಿ ನಾಯಕ- ನಾಯಕಿಯಾಗಿ ನಟಿಸಿದ್ದಾರೆ. ಹೆಚ್ಚು ಅಂಕ ತೆಗೆದವರಿಗೆ ಕಾಲೇಜು ಇರುವಂತೆ, ಜಸ್ಟ್‌ಪಾಸ್ ಆದ ವಿದ್ಯಾರ್ಥಿಗಳಿಗಾಗಿಯೇ ಸ್ಥಾಪಿತವಾದ ಕಾಲೇಜಿನಲ್ಲಿ ವ್ಯಾಸಂಗ ನಡೆಸುವ ವಿದ್ಯಾರ್ಥಿಗಳ ಕುರಿತು ಚಲನಚಿತ್ರ ಹೇಳಲಿದೆ. ಸಿನಿಮಾದಲ್ಲಿ ‘ಅರ್ಜುನ’ ಪಾತ್ರದಲ್ಲಿ ನಟಿಸಿರುವ ಶ್ರೀ, ಜಸ್ಟ್‌ಪಾಸ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು ಪ್ರಾಂಶುಪಾಲರಾಗಿ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಗೋವಿಂದೇ ಗೌಡ ಮುಂತಾದ ಕಲಾವಿದರು ನಟಿಸಿದ್ದಾರೆ. ನಿರ್ಮಾಪಕರ ಸಹೋದರ ಕೆ ವಿ ಶ್ರೀಧರ್ ಅವರ ಸಂಗೀತ, ಸುಜಯ್ ಕುಮಾರ್ ಛಾಯಾಗ್ರಾಹಣ ಚಿತ್ರಕ್ಕಿದೆ.
ಪ್ರಣಯಂ | ಕನ್ನಡ | ‘ಪಲ್ಲಕ್ಕಿ’, ‘ಗಣಪ’, ‘ಜೀವಾ’, ‘ಕರಿಯ 2’ ಮತ್ತು ‘ಪಾರಿಜಾತ’ ಚಿತ್ರಗಳ ನಿರ್ಮಾಪಕ ಪರಮೇಶ್ ಕಥೆ ಬರೆದು ನಿರ್ಮಿಸಿರುವ ಈ ಚಿತ್ರದಲ್ಲಿ ‘ಬಿಚ್ಚುಗತ್ತಿ’ ಖ್ಯಾತಿಯ ನಟ ರಾಜವರ್ಧನ್ ಮತ್ತು ನೈನಾ ಗಂಗೂಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಚಿತ್ರಕಥಾಹಂದರವಾಗಿದ್ದು, ಇಬ್ಬರು ಪ್ರೇಮಿಗಳು ಮದುವೆಯಾಗಿ ಜೀವನ ನಡೆಸುವಾಗ ಅವರು ಎದುರಿಸುವ ಕೆಲವು ಸಮಸ್ಯೆಗಳ ಕುರಿತಾಗಿ ಚಿತ್ರದಲ್ಲಿ ತೋರಿಸಲಾಗಿದೆ. ಎಸ್ ದತ್ತಾತ್ರೆಯ ಚಿತ್ರಕಥೆ ಬರೆದು ನಿರ್ದೇಶಿಸಿರುವ ಸಿನಿಮಾದಲ್ಲಿ ಗೋವಿಂದೇ ಗೌಡ, ಮಂಥನ, ಪ್ರಶಾಂತ್, ಸಮೀಕ್ಷಾ ಮತ್ತು ಪ್ರಿಯಾ ತರುಣ್ ಸೇರಿದಂತೆ ಇತರರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಗುವಿನ ಹೂಗಳ ಮೇಲೆ | ಕನ್ನಡ | ವೆಂಕಟ್ ಭಾರದ್ವಾಜ್ ನಿರ್ದೇಶನದ ಈ ಚಿತ್ರದಲ್ಲಿ ಅಭಿ ದಾಸ್ ಮತ್ತು ಶರಣ್ಯಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಅಯ್ಯಂಗಾರ್, ಹರೀಶ್ ಚೌಹಾಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು ಒಂದು ಪ್ರೇಮಕಥೆಯ ಸುತ್ತ ಸುತ್ತುತ್ತದೆ. ಚಿತ್ರವನ್ನು ತೆಲುಗಿನ ನಿರ್ಮಾಪಕ ಕೆ ಕೆ ರಾಧಾ ಮೋಹನ್ Shri Sathya Sai Arts ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದು, ಅಭಿಷೇಕ್ ಅಯ್ಯಂಗಾರ್ ಸಂಭಾಷಣೆ ರಚಿಸಿದ್ದಾರೆ.
ಮಾಯೆ & ಕಂಪನಿ | ಕನ್ನಡ | ಸಂದೀಪ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅರ್ಜುನ್ ಕಿಶೋರ್ ಚಂದ್ರ, ಯಶಶ್ರೀ, ಅನುಷಾ ಆನಂದ್ ಮತ್ತು ಯಾಸಿನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾಮಾಜಿಕ ಮಾಧ್ಯಮ ತಂದೊಡ್ಡುವ ಅನಾಹುತಗಳ ಕುರಿತು ಈ ಸಿನಿಮಾ ಹೇಳಲಿದೆ. ಸಾಮಾಜಿಕ ಮಾಧ್ಯಮಗಳ ಬಳಕೆಯ ಪ್ರಯೋಜನಗಳು ಮತ್ತು ಸಮಸ್ಯೆಗಳ ಹಾಗೂ ಸೈಬರ್ ಕ್ರೈಂ ಕುರಿತಾಗಿ ಚಿತ್ರದಲ್ಲಿ ತಿಳಿಸಲಾಗಿದೆ.
ತೇರಿ ಬಾತೋನ್ ಮೇ ಐಸಾ ಉಲ್ಜಾ ಜಿಯಾ | ಹಿಂದಿ | ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ಈ ಸಿನಿಮಾವನ್ನು ಅಮಿತ್ ಜೋಶಿ ಮತ್ತು ಆರಾಧನಾ ಸಾಹ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಾಹಿದ್ ಸೃಷ್ಟಿಸಿದ ಕೃತಿ ಎಂಬ ರೋಬೋಟ್ ತನ್ನ ಭಾವನೆಗಳನ್ನು ಹೇಗೆ ಬೆಳೆಸಿಕೊಳ್ಳುತ್ತಾಳೆ ಎಂಬ ಕಥೆಯಿದೆ. ಈ ರೊಮ್ಯಾಂಟಿಕ್ ಚಿತ್ರದಲ್ಲಿ ಧರ್ಮೇಂದ್ರ ಮತ್ತು ಡಿಂಪಲ್ ಕಪಾಡಿಯಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು A Maddock Films Production ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್, ಜ್ಯೋತಿ ದೇಶಪಾಂಡೆ ಮತ್ತು ಲಕ್ಷ್ಮಣ್ ಉಟೇಕರ್ ಸಿನಿಮಾ ನಿರ್ಮಿಸಿದ್ದಾರೆ.
ಯಾತ್ರಾ 2 | ತೆಲುಗು | ಮಮ್ಮೂಟಿ ಮತ್ತು ಜೀವಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವರುವ ‘ಯಾತ್ರಾ 2’ ಸಿನಿಮಾವನ್ನು ಮಹಿ ವಿ ರಾಘವ್ ನಿರ್ದೇಶಿಸಿದ್ದಾರೆ. ಈ ಚಿತ್ರವು 2019ರ ಮಮ್ಮೂಟಿ ಅಭಿನಯದ ‘ಯಾತ್ರಾ’ ಚಿತ್ರದ ಮುಂದುವರೆದ ಭಾಗವಾಗಿದ್ದು, ಸಿನಿಮಾ ಆಂಧ್ರದ ಮಾಜಿ ಮುಖ್ಯಮಂತ್ರಿ ವೈ ಎಸ್ ರಾಜಶೇಖರ್ ರೆಡ್ಡಿ ಮತ್ತು ಇಂದಿನ ಮುಖ್ಯಮಂತ್ರಿ ಜಗನ್ ಮೋಹನರೆಡ್ಡಿ ಕುರಿತು ಹೇಳುತ್ತದೆ. ಚಿತ್ರವನ್ನು V Celluloid ಮತ್ತು Three Autumn Leaves ಬ್ಯಾನರ್ ಅಡಿಯಲ್ಲಿ ಶಿವ ಮೇಕಾ ನಿರ್ಮಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದು, ಆರ್ ಮಾಧಿ ಮತ್ತು ಶ್ರವಣ್ ಕಾಟಿಕನೇನಿ ಸಂಕಲನ ಮಾಡಿದ್ದಾರೆ.
ಈಗಲ್ | ತೆಲುಗು | ರವಿತೇಜ ಮತ್ತು ಅನುಪಮ ಪರಮೇಶ್ವರನ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾವನ್ನು ಕಾರ್ತಿಕ್ ಗಟ್ಟಮನೇನಿ ಚಿತ್ರಕಥೆ, ಸಂಕಲನ ಮತ್ತು ನಿರ್ದೇಶನ ಮಾಡಿದ್ದಾರೆ. ಇದೊಂದು ಆಕ್ಷನ್ ಥ್ರಿಲ್ಲರ್ ಕಥಾ ಹಂದರವಾಗಿದ್ದು, ಚಿತ್ರದಲ್ಲಿ ರವಿತೇಜ ಕೊಲೆಗಾರನ ಪಾತ್ರವನ್ನು ನಿರ್ವಹಿಸಿದ್ದಾರೆ. ನವದೀಪ್, ಕಾವ್ಯಾ ಥಾಪರ್ ಶ್ರೀನಿವಾಸ್ ಅವಸರಾಳ, ಮಧುಬಾಲಾ ಮತ್ತು ಅಜಯ್ ಘೋಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಬರವಣಿಗೆಯಲ್ಲಿ ಕಾರ್ತಿಕ್ ಗಟ್ಟಮನೇನಿ ಮತ್ತು ಮಣಿಬಾಬು ಕರಣಂ ಅವರ ಪಾಲ್ಗೊಳ್ಳುವಿಕೆ ಇದೆ. ಚಿತ್ರ People Media Factory ನಿರ್ಮಾಣದಲ್ಲಿ ತಯಾರಾಗಿದೆ.
ಲಾಲ್ ಸಲಾಮ್ | ತಮಿಳು | ರಜಿನೀಕಾಂತ್ ಅಭಿನಯದ ‘ಲಾಲ್ ಸಲಾಮ್’ ಚಿತ್ರವನ್ನು ರಜಿನೀಕಾಂತ್ ಪುತ್ರಿ ಐಶ್ವರ್ಯಾ ರಜಿನೀಕಾಂತ್ ನಿರ್ದೇಶಿಸಿದ್ದು, ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿವಿಧ ಸಮುದಾಯಗಳ ನಡುವೆ ಶಾಂತಿ ಕಾಪಾಡುವಂತಹ ಮೊಯ್ದೀನ್ ಭಾಯಿ ಪಾತ್ರದಲ್ಲಿ ರಜಿನೀಕಾಂತ್ ಕಾಣಿಸಿಕೊಂಡಿದ್ದಾರೆ. ಇದೊಂದು ಕ್ರೀಡಾ ಸಿನಿಮಾವಾಗಿದ್ದು, ಧಾರ್ಮಿಕ ಸಾಮರಸ್ಯ, ಕೋಮುಗಲಬೆಯಂತಹ ವಿಷಯಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಲನಚಿತ್ರದಲ್ಲಿ ಕಪಿಲ್ ದೇವ್ ಕ್ರಿಕೆಟ್ ಕೋಚ್ ಆಗಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಎ ಆರ್ ರೆಹಮಾನ್ ಸಂಗೀತ ಸಂಯೋಜಿಸಿರುವ ಈ ಚಲನಚಿತ್ರದಲ್ಲಿ ಸೆಂಥಿಲ್, ಜೀವಿತಾ, ತಂಬಿ ರಾಮಯ್ಯ, ವಿವೇಕ್ ಪ್ರಸನ್ನ, ತಂಗದುರೈ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವನ್ನು Lyca Productions ಬ್ಯಾನರ್ ಅಡಿಯಲ್ಲಿ ಸುಭಾಸ್ಕರನ್ ಅವರು ನಿರ್ಮಿಸಿದ್ದಾರೆ. ವಿಷ್ಣು ರಂಗಸಾಮಿ
ಛಾಯಾಗ್ರಹಣ, ಪ್ರವೀಣ್ ಭಾಸ್ಕರ್ ಸಂಕಲನವಿದೆ.
The Iron Claw | ಇಂಗ್ಲಿಷ್ | 1980ರ ದಶಕದ ಆರಂಭದಲ್ಲಿ ಕುಸ್ತಿಯ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇತಿಹಾಸವನ್ನು ನಿರ್ಮಿಸಿದ್ದ ವಾನ್ ಎರಿಚ್ ಸಹೋದರರ ನೈಜ ಕಥೆಯಾಧಾರಿತ ಚಲನಚಿತ್ರ ಇದಾಗಿದ್ದು, ಚಿತ್ರವು ದುರಂತದ ನಡುವೆಯೂ ಕುಸ್ತಿಯಲ್ಲಿ ಅಸಾಧಾರಣ ಸಾಧನೆ ಮಾಡಿದ ಸಾಹಸಗಾಥೆಯನ್ನು ಹೇಳಲಿದೆ. ಚಿತ್ರವನ್ನು ಸೇನ್ ಡರ್ಕಿನ್ ನಿರ್ದೇಶಿಸಿದ್ದು, ಮ್ಯಾಥಿವ್ ಹನ್ನಾಮ್ ಸಂಕಲನ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಝಾಕ್ ಎಫ್ರಾನ್, ಕೆವಿನ್ ವಾನ್ ಇರಿಚ್ , ಜೆರೆಮಿ ಅಲೆನ್ ವೈಟ್, ಕೆರ್ರಿ ವಾನ್ ಇರಿಚ್, ಹ್ಯಾರಿಸ್ ಡಿಕಿನ್ಸನ್, ಡೇವಿಡ್ ವಾನ್ ಎರಿಚ್, ಮೌರಾ ಟಿಯರ್ನಿ, ಡೋರಿಸ್ ವಾನ್ ಇರಿಚ್ ಮತ್ತು ಹಾಲ್ಟ್ ಮೆಕ್ಕಾಲನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.