ಕನ್ನಡ ಸಿನಿಮಾದ ಕಂಟೆಂಟ್‌, ಥಿಯೇಟರ್‌, ಮಾರುಕಟ್ಟೆ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಚಿತ್ರನಿರ್ದೇಶಕ ವೀರು ಮಲ್ಲಣ್ಣ ಮೂಲಭೂತ ಸೌಕರ್ಯಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಫಿಲ್ಮ್ ಸಿಟಿ ಕುರಿತಾಗಿ ಭರವಸೆ ಸಿಗುತ್ತಿವೆಯೇ ಹೊರತು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಚಿತ್ರರಂಗದ ಕುರಿತಾದ ಯಾವ ಚರ್ಚೆಗಳೂ ತಾರ್ಕಿಕ ಅಂತ್ಯ ಕಂಡದ್ದಿಲ್ಲ. ಆಗಬೇಕಾದ ಮತ್ತೊಂದು ಚರ್ಚೆ “Infrastructure ಮೂಲಭೂತ ಸೌಕರ್ಯಗಳು” ಕನ್ನಡ ಚಿತ್ರರಂಗದ ಅತಿ ದೊಡ್ಡ ಕೊರತೆ ಮೂಲಭೂತ ಸೌಕರ್ಯಗಳದ್ದು. ಮದ್ರಾಸಿನಲ್ಲಿ ಬೀಡುಬಿಟ್ಟಿದ್ದ ಕನ್ನಡ ಚಿತ್ರರಂಗವನ್ನು ರಾಜಕುಮಾರ್ ಕಾಲದಲ್ಲಿ ಕರ್ನಾಟಕಕ್ಕೆ ತಂದರು. ಈಗ ಚಿತ್ರರಂಗ ನಿಧಾನಕ್ಕೆ ಹೈದರಾಬಾದಿಗೆ ಶಿಫ್ಟ್ ಆಗುತ್ತಿದೆ. ಅಂದಿನ ಕಾಲದ ಕನ್ನಡ ಚಿತ್ರರಂಗಕ್ಕೆ ಕಂಠೀರವ ಸ್ಟುಡಿಯೋ, ಪ್ರಸಾದ್ ಲ್ಯಾಬ್ ಸಾಕಿತ್ತು. ಸ್ಟುಡಿಯೋ ಆಚೆಗೂ ಚಿತ್ರೀಕರಣಕ್ಕೆ ಸಮಸ್ಯೆಗಳು ಇರ್ತಾ ಇರಲಿಲ್ಲ. ಈಗ ಸ್ಥಿತಿ ಬೇರೆಯಾಗಿದೆ.

ಟೀವಿ ಇಂಡಸ್ಟ್ರಿ ಕೂಡ ದೊಡ್ಡದಾಗಿ ಬೆಳೆದಿರುವುದರಿಂದ, ಸಿನಿಮಾ ಕ್ಯಾನ್ವಾಸುಗಳು ಬದಲಾಗ್ತಿರೋದ್ರಿಂದ ಬೆಂಗಳೂರಿನಲ್ಲಿರುವ ಸ್ಟುಡಿಯೋಗಳು ಸಾಲುವುದಿಲ್ಲ. ಸ್ಟುಡಿಯೋಗಳ ಹೊರಗಡೆ ಚಿತ್ರೀಕರಣ ಸಹ ಕಷ್ಟವಾಗಿದೆ. ಅನೇಕ ಜಾಗಗಳಲ್ಲಿ ಸರಕಾರದಿಂದ ಚಿತ್ರೀಕರಣಕ್ಕೆ ಅನುಮತಿ ಪಡೆಯುವುದೇ ಕಷ್ಟ, ಅಕಸ್ಮಾತ್ ಚಿತ್ರೀಕರಣಕ್ಕೆ ಅನುಮತಿ ಸಿಕ್ಕರೂ ಸ್ಥಳೀಯ ರಾಜಕಾರಣಿಗಳು, ಪೊಲೀಸ್ ಠಾಣೆಗಳನ್ನು ‘ಖುಷಿ’ ಪಡಿಸದೇ ಚಿತ್ರೀಕರಣ ಅಸಾಧ್ಯ. ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ನೀಡಲು ಏಕಗವಾಕ್ಷಿ ಎಂಬುದಾಗಿ ಏನೋ ಮಾಡುತ್ತೇವೆ ಎಂದು ಅನೇಕ ವರ್ಷಗಳಿಂದ ಬಂದ ಸರಕಾರಗಳೆಲ್ಲಾ ಹೇಳಿದರು ಇದುವರೆಗೂ ಅದು ಆಗಿಲ್ಲ. ಫಿಲ್ಮ್ ಸಿಟಿ ಕಟ್ಟುತ್ತೇವೆ ಅಂದರು, ಅದೂ ಆಗಿಲ್ಲ.

ಸರಕಾರ ಫಿಲ್ಮ್ ಸಿಟಿ ಕಟ್ಟುವುದಾದರೆ ಅದು ಎಂದಿಗೂ ಆಗದೇನೋ? ಏಕೆಂದರೆ ಸರಕಾರ ಎಲ್ಲಿ ಸ್ಟುಡಿಯೋ ಕಟ್ಟಬೇಕು ಎಂಬುವ ನಿರ್ಧಾರಕ್ಕೆ ಬರುವುದೇ ಕಷ್ಟ. ರಾಮನಗರದಲ್ಲಿ ಕಟ್ಟುತ್ತೇವೆ ಎಂದರೆ ಮತ್ತೊಬ್ಬರು ದಾವಣಗೆರೆಯಲ್ಲಿ ಕಟ್ಟುತ್ತೇವೆ ಎನ್ನುವರು, ಇನ್ನೊಬ್ಬರು ಶಿವಮೊಗ್ಗದಲ್ಲಿ ಎನ್ನುವರು. ಆಗುವುದೇ ಅನುಮಾನವಿರುವ ಫಿಲ್ಮ್ ಸಿಟಿ ಊರಿಂದ ಊರಿಗೆ ಶಿಫ್ಟ್ ಆಗುತ್ತಿದೆ. ಸರಕಾರ ಒಂದು ಜಾಗ ನಿರ್ಧಾರವಾಗಿ ಫಿಲ್ಮ್ ಸಿಟಿ ಕಟ್ಟಿದರೂ 100 – 200 ಎಕರೆ ಜಾಗದ ಫಿಲ್ಮ್ ಸಿಟಿ ಖಂಡಿತಾ ಸಾಲುವುದಿಲ್ಲ.. ಸುಮಾರು 800 ಎಕರಗಳಷ್ಟು ಜಾಗ, ಸಾವಿರಾರು ಕೋಟಿಗಳ ಹೂಡಿಕೆ ಆಗಬೇಕು. ಸ್ಟುಡಿಯೋ ರೂಪುರೇಷೆಗಳು ಮುಂದಿನ ನೂರು ವರ್ಷಗಳ ದೂರದೃಷ್ಟಿಯಿಂದ ಆಗಬೇಕು. ಫಿಲ್ಮ್ ಸಿಟಿಯ ಒಳಗೂ, ಹೊರಗೂ ಸಿನಿಮಾ ಚಟುವಟಿಕೆಗಳಿಂದಲೂ, ಅದಕ್ಕೆ ಪೂರಕವಾದ ಸಿನಿಮೇತರ ಚಟುವಟಿಕೆಗಳಿಂದಲೂ ಆದಾಯ ಬರುವಂತೆ ಇರಬೇಕು. ಬಹಳ ಮುಖ್ಯವಾಗಿ ಪಾರದರ್ಶಕವಾಗಿರಬೇಕು, ಭ್ರಷ್ಟಮುಕ್ತವಾಗಿರಬೇಕು. ಅದು ಸಿನಿಮಾ ಪ್ರೀತಿ ಇರುವ ಉದ್ಯಮಿಗಳಿಂದ ಅಥವ ಕಾರ್ಪೋರೇಟ್ ಮನಸ್ಸು ಮಾಡಿದರೆ ಆಗುವ ಕೆಲಸ. ರಾಮೋಜಿರಾವ್ ಅವರಿಗೆ ಅಂತಹ ದೂರಾಲೋಚನೆ ಇದ್ದಿದ್ದರಿಂದಲೇ ಹೈದರಾಬಾದ್ ಹೊರವಲಯದಲ್ಲಿ ಎರಡು ಸಾವಿರ ಎಕರೆ ಜಾಗದಲ್ಲಿ ಸ್ಟುಡಿಯೋ ಕಟ್ಟಿದ್ದು, ಇನ್ನೂ ಸಾವಿರಾರು ಎಕರೆ ಜಾಗ ಮೀಸಲಿಟ್ಟಿದ್ದು. ಜಗತ್ತಿನ ಹೆಸರಾಂತ ಸಿನಿಮಾ ಕಲಾನಿರ್ದೇಶಕರುಗಳನ್ನು ಭೇಟಿ ಮಾಡಿ, ಅವರಿಂದ ಸಲಹೆಗಳನ್ನು ಪಡೆದು, ಭಾರತದ ಹೆಸರಾಂತ ಕಲಾನಿರ್ದೇಶಕರು ಮತ್ತು ಆರ್ಕಿಟೆಕ್ಟುಗಳನ್ನು ಬಳಸಿಕೊಂಡು ನಿರ್ಮಿಸಿದ ಫಿಲ್ಮ್ ಸಿಟಿ ಅದು.

ಈಗ ಜಗತ್ತಿನ ಯಾವುದೇ ಭಾಷೆಯ ಚಿತ್ರರಂಗದವರು ಬಂದರೂ ಹೈದರಾಬಾದಿನಲ್ಲಿ ಸಿನಿಮಾ ಮಾಡಿಕೊಂಡು ಹೋಗಬಹುದು, ಬರೀ ನಟರು ಮತ್ತು ಮುಖ್ಯ ತಂತ್ರಜ್ಞರನ್ನು ಕರೆದುಕೊಂಡು ರಾಮೋಜಿ ಫಿಲ್ಮ್ ಸಿಟಿ ಒಳಗೆ ಹೋದರೆ ಸಾಕು, ಚಿತ್ರೀಕರಣಕ್ಕೆ ಅಗತ್ಯವಾದ ಎಲ್ಲವೂ ಅದರೊಳಗೇ ಲಭ್ಯವಿದೆ. ಆ ಒಂದು ಸ್ಟುಡಿಯೋದಿಂದ ಅದರ ಒಳಗೆ ಲಕ್ಷಾಂತರ ಮಂದಿಗೆ, ಹೊರಗೆ ಲಕ್ಷಾಂತರ ಮಂದಿಗೆ ಉದ್ಯೋಗ ಸೃಷ್ಟಿಯಾಗಿದೆ. ರಾಮೋಜಿರಾವ್ ಸ್ಟುಡಿಯೋ ಅಲ್ಲದೆಯೂ ಹೈದರಾಬಾದ್ ಅನ್ನು “ಭಾರತೀಯ ಸಿನಿಮಾ ಹೆಡ್-ಕ್ವಾರ್ಟರ್ಸ್” ಮಾಡಲು ಅಲ್ಲಿನ ಸರಕಾರ ಮತ್ತು ಚಿತ್ರರಂಗ ಒಟ್ಟಾಗಿ ಇನ್ನೂ ದೊಡ್ಡ ದೊಡ್ಡ ಯೋಜನೆಗಳನ್ನು ಹಾಕಿಕೊಳ್ತಿದೆ. ಇನ್ನೂ ಸಾವಿರಾರು ಕೋಟಿಗಳ ಹೂಡಿಕೆ, ಲಕ್ಷಾಂತರ ಉದ್ಯೋಗಸೃಷ್ಟಿಗೆ ಸಿದ್ಧವಾಗ್ತಿದ್ದಾರೆ.. ಅನುಮಾನವೇ ಇಲ್ಲ, ಮುಂದಿನ ಕೆಲವೇ ವರ್ಷಗಳಲ್ಲಿ ಇಡೀ ಭಾರತೀಯ ಚಿತ್ರರಂಗ ಹೈದರಾಬಾದಿನ ಮೇಲೆ ಅವಲಂಬಿತವಾಗುವ ಸ್ಥಿತಿ ನಿರ್ಮಾಣವಾಗುತ್ತದೆ.. ಕನ್ನಡ ಚಿತ್ರರಂಗ ಮತ್ತು ಕರ್ನಾಟಕ ಸರಕಾರ ಅಂತಹ ಯೋಜನೆಗಳ ಬಗ್ಗೆ ಚಿಂತಿಸಬೇಕು.

LEAVE A REPLY

Connect with

Please enter your comment!
Please enter your name here