ಗಣೇಶ್, ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಬಾನದಾರಿಯಲ್ಲಿ’ ಈ ವಾರ ತೆರೆಕಂಡಿದೆ. ಜಗ್ಗೇಶ್, ಧನಂಜಯ ನಟನೆಯ ‘ತೋತಾಪುರಿ 2’ ಕೂಡ ತೆರೆಗೆ ಬಂದಿದೆ. ಮಮ್ಮೂಟಿ ಅವರ ‘ಕಣ್ಣೂರು ಸ್ಕ್ವಾಡ್’ ಮಲಯಾಳಂ ಸಿನಿಮಾ, ರಾಮ್ ಪೋತಿನೇನಿ ನಟನೆಯ ‘ಸ್ಕಂದ’, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವಾಕ್ಸಿನ್ ವಾರ್’, ಕಂಗನಾ ರನಾವತ್ ನಟನೆಯ ‘ಚಂದ್ರಮುಖಿ 2’ ತಮಿಳು ಸಿನಿಮಾ ಈ ವಾರದ ಇತರೆ ಆಕರ್ಷಣೆಗಳು.
ತೋತಾಪುರಿ 2 | ಕನ್ನಡ | ಜಗ್ಗೇಶ್, ಧನಂಜಯ್ ಮತ್ತು ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. ಧರ್ಮದ ಹೆಸರಲ್ಲಿ ಕಲಹಗಳು ನಡೆಯುವುದು ಹೊಸದೇನಲ್ಲ, ಅವುಗಳನ್ನು ಮೀರಿ ಬದುಕಬೇಕು. ಸಮಾಜದಲ್ಲಿ ಸಾಮರಸ್ಯ ತರಬೇಕು ಎನ್ನುವ ಸಂದೇಶವನ್ನು ‘ತೋತಾಪುರಿ 2’ ಸಿನಿಮಾ ವಿವರಿಸಲಿದೆ. ನಿರ್ದೇಶಕ ವಿಜಯಪ್ರಸಾದ್ ತಮ್ಮ ಎಂದಿನ ಕಚಗುಳಿ ಸಂಭಾಷಣೆಗಳೊಂದಿಗೆ ಸಿನಿಮಾ ಹೆಣೆದಿದ್ದಾರೆ. ಚಿತ್ರದಲ್ಲಿ ಈರೇಗೌಡ (ಜಗ್ಗೇಶ್) ಕೃಷಿಕ ಹಾಗೂ ಟೈಲರ್ ಆಗಿ ಪಾತ್ರ ನಿರ್ವಹಿಸಿದ್ದಾರೆ. ಆತನಿಗೆ ಶಕೀಲಾ ಬಾನು (ಅದಿತಿ ಪ್ರಭುದೇವ) ಮೇಲೆ ಪ್ರೀತಿ ಹುಟ್ಟುತ್ತದೆ. ಈ ಚಿತ್ರದ ಕೊನೆಯಲ್ಲಿ ಧನಂಜಯ್ ಕಾಣಿಸಿಕೊಂಡಿದ್ದರು. ಎರಡನೇ ಭಾಗದಲ್ಲಿ ಇದೇ ಕಥೆ ಮುಂದುವರಿದಿದೆ. Suresh Arts Pvt Ltd ಮತ್ತು Moniflix Studios ಬ್ಯಾನರ್ ಅಡಿಯಲ್ಲಿ ಕೆ ಎ ಸುರೇಶ್ ಸಿನಿಮಾ ನಿರ್ಮಿಸಿದ್ದಾರೆ.
ಬಾನದಾರಿಯಲ್ಲಿ | ಕನ್ನಡ | ಗಣೇಶ್, ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ರೋಮ್ಯಾಂಟಿಕ್ ಪ್ರೇಮ ಕಥೆ. ಪ್ರೀತಂ ಗುಬ್ಬಿ ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಆಫ್ರಿಕಾದ ಒಂದು ಬುಡಕಟ್ಟು ಜನಾಂಗದವರು ದಾಳಿ ಮಾಡುವ ದೃಶ್ಯಗಳು ಚಿತ್ರದಲ್ಲಿವೆ. ರಂಗಾಯಣ ರಘು ಅವರು ರುಕ್ಮಿಣಿ ತಂದೆಯಾಗಿ ಕಾಣಿಸಿಕೊಂಡಿದ್ದು, ಯಾವುದೋ ಮನಸ್ಥಾಪದಿಂದ ರಂಗಾಯಣ ರಘು ಮತ್ತು ಗಣೇಶ್ ಮಧ್ಯೆ ಕಲಹ ಏರ್ಪಡುತ್ತದೆ. ಇವರಿಬ್ಬರ ಕಲಹದಲ್ಲಿ ನಾಯಕ – ನಾಯಕಿಯ ಪ್ರೀತಿ ಏನಾಗುತ್ತದೆ ಎನ್ನುವುದು ಕತೆ. ಚಿತ್ರದಲ್ಲಿ ಸಮುದ್ರ ಹಾಗೂ ಕಾಡಿನ ಮನಮೋಹಕ ನೋಟ ಮತ್ತು ಅಲ್ಲಿನ ಪ್ರಾಣಿಗಳನ್ನು ತೋರಿಸಲಾಗಿದೆ.
ಸ್ಕಂದ | ತೆಲುಗು | ರಾಮ್ ಪೋತಿನೇನಿ ಮತ್ತು ಕನ್ನಡತಿ ಶ್ರೀಲೀಲಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ಬೋಯಪತಿ ಶ್ರೀನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ತಮನ್ ಎಸ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ರಾಮ್ ಪೋತಿನೇನಿ ಮಾಸ್ ಲುಕ್‌ನಲ್ಲಿ ತೆಲಂಗಾಣದ ಸ್ಥಳೀಯ ಯುವಕನಾಗಿ ಕಾಣಿಸಿಕೊಂಡಿದ್ದಾರೆ. ಶ್ರೀಲೀಲಾ ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಸಾಯಿ ಮಂಜ್ರೇಕರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. Srinivasaa Silver Screen ಬ್ಯಾನರ್‌ನಡಿ ಶ್ರೀನಿವಾಸ ಚಿತ್ತೂರಿ ಚಿತ್ರ ನಿರ್ಮಿಸಿದ್ದಾರೆ. ಮೂಲ ತೆಲುಗು ಸೇರಿದಂತೆ ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ.
ಪೆದ್ದ ಕಾಪು Part 1 | ತೆಲುಗು | ತನ್ನ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಹಳ್ಳಿಯ ಪ್ರಬಲ ವ್ಯಕ್ತಿಗಳಿಗೆ ಸವಾಲು ಹಾಕಿ ನಿಲ್ಲುವ ಯುವಕನ ಕಥೆಯನ್ನು ಚಿತ್ರ ಹೇಳುತ್ತದೆ. ಈ ಆಕ್ಷನ್ ಥ್ರಿಲ್ಲರ್ ಚಲನಚಿತ್ರವನ್ನು ಶ್ರೀಕಾಂತ್ ಅಡ್ಡಾಳ ನಿರ್ದೇಶಿಸಿದ್ದು, ವಿರಾಟ್ ಕರ್ಣ, ಪ್ರಗತಿ ಶ್ರೀವಾಸ್ತವ, ರಾವ್ ರಮೇಶ್ ಮತ್ತು ತನಿಕೆಲ್ಲ ಭರಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಂದ್ರಮುಖಿ 2 | ತಮಿಳು | ರಾಘವ ಲಾರೆನ್ಸ್ ಮತ್ತು ಕಂಗನಾ ರನಾವತ್ ಅಭಿನಯದ ಬಹುನಿರೀಕ್ಷಿತ ಚಿತ್ರವನ್ನು ಪಿ ವಾಸು ನಿರ್ದೇಶಿಸಿದ್ದಾರೆ. ‘ಚಂದ್ರಮುಖಿ’ ಚಿತ್ರದಲ್ಲಿ ತೋರಿಸಿದ್ದ ಅದೇ ಬೃಹತ್ ಬಂಗಲೆಯು ಸಮಸ್ಯೆಗೆ ಸಿಲುಕುವುದು ಕಂಡು ಬರುತ್ತದೆ. ಆ ಬಂಗಲೆಯ ಒಂದು ಕೋಣೆಗೆ ಯಾರಿಗೂ ಪ್ರವೇಶಿಸದಂತೆ ಸ್ವಾಮೀಜಿಯೊಬ್ಬರು ಸೂಚಿಸುತ್ತಾರೆ. ಅಲ್ಲಿ ಚಂದ್ರಮುಖಿಯ ಆತ್ಮ ಬಂಧಿಯಾಗಿರುತ್ತದೆ. ಚಿತ್ರದಲ್ಲಿ ವಡಿವೇಲು, ರಾಧಿಕಾ ಶರತ್‌ಕುಮಾರ್, ಲಕ್ಷ್ಮಿ ಮೆನನ್, ಮಿಥುನ್ ಶ್ಯಾಮ್, ಮಹಿಮಾ ನಂಬಿಯಾರ್, ರಾವ್ ರಮೇಶ್, ವಿಘ್ನೇಶ್, ರವಿ ಮರಿಯಾ, ಸುರೇಶ್ ಮೆನನ್, ಟಿ ಎಂ ಕಾರ್ತಿಕ್ ಮತ್ತು ಸುಭಿಕ್ಷಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಂ ಎಂ ಕೀರವಾಣಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. Lyca Productions ಬ್ಯಾನರ್ ಸಂಸ್ಥಾಪಕ ಸುಭಾಸ್ಕರನ್ ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಿಸಿದ್ದಾರೆ.
ಇರೈವನ್ | ತಮಿಳು | ಜಯಂ ರವಿ ಮತ್ತು ರಾಹುಲ್ ಬೋಸ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. 12 ಯುವತಿಯರನ್ನು ಕ್ರೂರ ರೀತಿಯಲ್ಲಿ ಕೊಂದ, ಸೈಕೋ ‘ಸ್ಮೈಲೀ ಕಿಲ್ಲರ್’ ಬ್ರಹ್ಮಾವರ (ರಾಹುಲ್ ಬೋಸ್) ಪೊಲೀಸರ ಉಸ್ತುವಾರಿಯಲ್ಲಿ ಮನೋಶಾಸ್ತ್ರಜ್ಞರಿಂದ ಚಿಕಿತ್ಸೆಗೆ ಒಳಪಟ್ಟಿರುತ್ತಾನೆ. ಆತನಿಗೆ ಕೊಲೆಗಳ ಬಗ್ಗೆ ಯಾವುದೇ ಪಶ್ಚಾತಾಪವಿರುವುದಿಲ್ಲ. ಯುವತಿಯರನ್ನು ಕರುಣೆಯಿಲ್ಲದೇ ಕೊಲ್ಲುತ್ತಿರುತ್ತಾನೆ. ಮತ್ತೊಂದೆಡೆ ಅರ್ಜುನ್ ಎಂಬ ಒಬ್ಬ ಪೊಲೀಸ್ ಅಧಿಕಾರಿ ಕೊಲೆಯಾದ ಯುವತಿಯರ ಕಟುಂಬಗಳಿಗೆ ನ್ಯಾಯ ಒದಗಿಸುವ ಭರದಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಬ್ರಹ್ಮಾವರನ್ನು ಎನ್‌ಕೌಂಟರ್ ಮಾಡಲು ಮುಂದಾಗಿ, ಅನಾಹುತ ಮಾಡಿಕೊಳ್ಳುತ್ತಾನೆ. ನಂತರ ಪೊಲೀಸ್ ಕೆಲಸದಿಂದ ಅಮಾನತ್ತುಗೊಂಡು ಇಲಾಖೆಯಿಂದ ಬಂಧಿಸಲ್ಪಡುತ್ತಾನೆ. ಆಸ್ಪತ್ರೆಯಿಂದ ತಪ್ಪಿಸಿಕೊಂಡ ʼಸ್ಮೈಲೀ ಕಿಲ್ಲರ್ʼ ಬ್ರಹ್ಮಾವರ ತನ್ನ ಸರಣಿ ಕೊಲೆಗಳನ್ನು ಮುಂದುವರೆಸುತ್ತಾನೆ. ಚಿತ್ರದ ಕಥಾವಸ್ತುವು ಬ್ರಹ್ಮಾವರನನ್ನು ಅರ್ಜುನ್ ಬೇಟೆಯಾಡುವುದರ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ, ನರೇನ್, ಚಾರ್ಲಿ, ವಿನೋತ್ ಕಿಶನ್, ವಿಜಯಲಕ್ಷ್ಮಿ, ಅಳಗಂ ಪೆರುಮಾಳ್, ಬಗ್ಸ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. Passion Studios ಬ್ಯಾನರ್ ಅಡಿಯಲ್ಲಿ ಸುಧನ್ ಸುಂದರಂ ಮತ್ತು ಜಯರಾಮ್. ಜಿ ಚಿತ್ರವನ್ನು ನಿರ್ಮಿಸಿದ್ದು, ಯುವನ್ ಶಂಕರ್ ರಾಜಾ ಸಂಗೀತ ಸಂಯೋಜನೆ, ಹರಿ ಕೆ ವೇದಾಂತ್ ಛಾಯಾಗ್ರಹಣ, ಮಣಿಕಂದ ಬಾಲಾಜಿ ಸಂಕಲನ ಸಿನಿಮಾಗಿದೆ. ‘ಥಣಿ ಒರುವನ್’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ನಯನತಾರಾ ಮತ್ತು ಜಯಂ ರವಿ ಈ ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಛಾವರ್ | ಮಲಯಾಳಂ | ಟಿನು ಪಪ್ಪಚ್ಚನ್, ಬೋಬನ್, ಜಸ್ಟಿನ್ ವರ್ಗೀಸ್, ಅರುಣ್ ನಾರಾಯಣ ಮತ್ತು ಕುಂಚಾಕೋ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಛಾವರ್’ ಕೇರಳ ಪ್ರದೇಶದಲ್ಲಿ ನಿರಂತರವಾಗಿ ಪರಸ್ಪರ ಭಿನ್ನಾಭಿಪ್ರಾಯ ಹೊಂದಿರುವ ಎರಡು ಗ್ಯಾಂಗ್‌ಗಳ ಕಥೆಯನ್ನು ವಿವರಿಸುತ್ತದೆ. ಗುಂಪು ಹಿಂಸಾಚಾರ ಸಮುದಾಯದ ಒಟ್ಟಾರೆ ಪ್ರಭಾವ ಮತ್ತು ಗುಂಪು ಸದಸ್ಯರ ವೈಯಕ್ತಿಕ ಕಲಹ ಇವೆಲ್ಲವನ್ನು ಸಿನಿಮಾ ಒಳಗೊಂಡಿದೆ. Arun Narayan Productions, Kavya Film Company ಬ್ಯಾನರ್ ಅಡಿಯಲ್ಲಿ ಅರುಣ್ ನಾರಾಯಣ್, ವೇಣು ಕುನ್ನಪ್ಪಿಳ್ಳಿ ಚಿತ್ರ ನಿರ್ಮಿಸಿದ್ದಾರೆ. ಹಾಗೂ ಟಿನು ಪಪ್ಪಚ್ಚನ್ ನಿರ್ದೇಶಿಸಿದ್ದಾರೆ. ಜಿಂಟೋ ಜಾರ್ಜ್ ಛಾಯಾಗ್ರಹಣ, ಜಾಯ್ ಮ್ಯಾಥ್ಯೂ ಚಿತ್ರಕಥೆ, ನಿಶಾದ್ ಯೂಸುಫ್ ಸಂಕಲನ ಚಿತ್ರಕ್ಕಿದೆ.
ಕಣ್ಣೂರು ಸ್ಕ್ವಾಡ್ | ಮಲಯಾಳಂ | ರಾಬಿ ವರ್ಗೀಸ್ ರಾಜ್ ನಿರ್ದೇಶನದ ಈ ಚಿತ್ರದಲ್ಲಿ ಮಮ್ಮುಟ್ಟಿ ತನಿಖಾ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕನ್ನಡಿಗ ಕಿಶೋರ್ ಅವರು ಮಮ್ಮುಟ್ಟಿಯ ಉನ್ನತ ಅಧಿಕಾರಿಯಾಗಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ನೈಜ ಘಟನೆಯಾಧಾರಿತ ಇನ್ವೆಸ್ಟಿಗೇಟಿವ್-ಥ್ರಿಲ್ಲರ್ ಚಿತ್ರದಲ್ಲಿ ಮಮ್ಮುಟ್ಟಿ ಕಾನೂನು ಉಲ್ಲಂಘಿಸಿರುವ ಕ್ರಿಮಿನಲ್ ಗುಂಪಿನ ಹುಡುಕಾಟದಲ್ಲಿರುವ ಪೊಲೀಸ್ ತಂಡವನ್ನು ಮುನ್ನಡೆಸಿ ವಿಜಯವನ್ನು ಸಾಧಿಸುವ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ವಿಜಯ ರಾಘವನ್, ರೋನಿ ಡೇವಿಡ್ ರಾಜ್, ಅಜೀಜ್ ನೆಡುಮಂಗಡ, ಶಬರೀಶ್ ವರ್ಮಾ, ಶರತ್ ಸಭಾ, ಮತ್ತು ಸನ್ನಿ ವೇನ್ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ದುಲ್ಕರ್ ಸಲ್ಮಾನ್ ಅವರ Mammootty Kampany ಬ್ಯಾನರ್ ಅಡಿಯಲ್ಲಿ ಜಾರ್ಜ್ ಸೆಬಾಸ್ಟಿಯನ್ ನಿರ್ಮಿಸಿದ್ದಾರೆ. ಚಿತ್ರಕಥೆಯನ್ನು ಮಹಮದ್ ಶಫಿ ರಚಿಸಿದ್ದು, ಮಹಮದ್ ರಾಹಿಲ್ ಛಾಯಾಗ್ರಹಣ, ಸುಶಿನ್ ಶ್ಯಾಮ್ ಸಂಗೀತ ಸಂಯೋಜನೆಯಿದೆ. ಕೇರಳ ಮತ್ತು ಮಹಾರಾಷ್ಟ್ರದ ಸ್ಥಳಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ.
ದಿ ವಾಕ್ಸಿನ್ ವಾರ್ | ಹಿಂದಿ | ರಾಷ್ಟ್ರ ಪ್ರಶಸ್ತಿ ವಿಜೇತ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಖ್ಯಾತಿಯ ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರ. ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೋ-ವಾಕ್ಸಿನ್ ಅಭಿವೃದ್ಧಿಯ ಕುರಿತ ನೈಜ ಕಥೆಯನ್ನು ಸಿನಿಮಾ ಹೇಳಲಿದೆ. ಹಿರಿಯ ವಿಜ್ಞಾನಿ (ನಾನಾ ಪಾಟೇಕರ್) ಲಸಿಕೆಯನ್ನು ಕಂಡು ಹಿಡಿಯುವುದಾಗಿ ಭರವಸೆ ನೀಡುತ್ತಾರೆ. ಈ ವಿಷಯವನ್ನು ರಾಷ್ಟ್ರೀಯ ಭದ್ರತೆಯ ಹಿತಾಸಕ್ತಿಗೋಸ್ಕರ ರಹಸ್ಯವಾಗಿಡಲು ಉನ್ನತ ಅಧಿಕಾರಿಗಳನ್ನು ವಿಜ್ಞಾನಿಗಳು ಒತ್ತಾಯಿಸುತ್ತಾರೆ. ಭಾರತದಲ್ಲಿರುವ ಈ ವೈದ್ಯಕೀಯ ಮೂಲಸೌಕರ್ಯವು 130 ಕೋಟಿ ಜನಸಂಖ್ಯೆಯನ್ನು ಉಳಿಸಬಹುದೇ? ‘ಇಲ್ಲ, ಭಾರತದಿಂದ ಈ ಕಾರ್ಯ ಅಸಾಧ್ಯ’ ಎಂದು ಪತ್ರಕರ್ತೆ (ರೈಮಾ ಸೇನ್) ಹೇಳುತ್ತಾಳೆ. ಕೋವಿಡ್‌ಗಾಗಿ ಲಸಿಕೆ ಕಂಡುಹಿಡಿಯಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವ ವಿಜ್ಞಾನಿಗಳ ಸಾಹಸವನ್ನು ಚಿತ್ರದಲ್ಲಿ ತೋರಿಸಲಾಗಿದೆ.