ಆಸ್ಕರ್‌ ಗೌರವಕ್ಕೆ ಪಾತ್ರವಾದ ಮೊದಲ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ‘RRR’ ಪಾತ್ರವಾಗಿದೆ. ಸಿನಿಮಾದ ‘ನಾಟು ನಾಟು’ ಹಾಡು Best Original Song ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿಗೆ ಭಾಜನವಾಗಿದ್ದು, ಚಿತ್ರತಂಡಕ್ಕೆ ಎಲ್ಲೆಡೆಯಿಂದ ಅಭಿನಂದನೆ ಸಲ್ಲುತ್ತಿದೆ.

ಭಾರತೀಯ ಸಿನಿಮಾ ಸಂದರ್ಭದಲ್ಲೇ ಇದು ವಿಶೇಷ ಸಂದರ್ಭ. ಆಸ್ಕರ್‌ ಗೌರವಕ್ಕೆ ಪಾತ್ರವಾದ ಮೊದಲ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಗೆ ‘RRR’ ಪಾತ್ರವಾಗಿದೆ. ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆಯ ಈ ಸಿನಿಮಾದ ‘ನಾಟು ನಾಟು’ ಹಾಡು Best Original Song ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿಗೆ ಭಾಜನವಾಗಿದೆ. ಅಮೆರಿಕ ಲಾಂಸ್‌ ಏಂಜಲೀಸ್‌ನಲ್ಲಿ ನಡೆಯುತ್ತಿರುವ 95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭ ಇದಕ್ಕೆ ಸಾಕ್ಷಿಯಾಗಿದ್ದು, ಎಲ್ಲೆಡೆಯಿಂದ ಚಿತ್ರತಂಡಕ್ಕೆ ಭರಪೂರ ಮೆಚ್ಚುಗೆ, ಅಭಿನಂದನೆ ವ್ಯಕ್ತವಾಗುತ್ತಿವೆ.

ಬೆಸ್ಟ್‌ ಒರಿಜಿನಲ್‌ ಸಾಂಗ್‌ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದ ಇತರೆ ಹಾಡುಗಳೆಂದರೆ – Tell It Like A Woman ಸಿನಿಮಾದ ‘Applause’ ಸಾಂಗ್‌, Top Gun: Maverick ಚಿತ್ರದ Hold My Hand ಹಾಡು, Black Panther: Wakanda Forever ಚಿತ್ರದಿಂದ Lift Me Up ಮತ್ತು Everything Everywhere All At Once ಚಿತ್ರದಿಂದ This is Life. ಈ ಸ್ಪರ್ಧೆಯಲ್ಲಿ ‘ನಾಟು ನಾಟು’ ಗೆಲುವಿನ ದಾಖಲೆ ಬರೆಯಿತು. ಸಂಗೀತ ಸಂಯೋಜಕ ಕೀರವಾಣಿ ಮತ್ತು ಗೀತರಚನೆಕಾರ ಚಂದ್ರಬೋಸ್‌ ಪ್ರಶಸ್ತಿ ಸ್ವೀಕರಿಸಿ ಅಕಾಡೆಮಿಗೆ ಧನ್ಯವಾದ ಹೇಳಿದರು. ಈ ಹಿಂದೆ ‘ಸ್ಲಂಡಾಗ್‌ ಮಿಲಿಯನೇರ್‌’ ಇಂಗ್ಲಿಷ್‌ ಸಿನಿಮಾದ ‘ಜೈ ಹೋ’ ಹಾಡಿಗೆ ಸಂಗೀತ ಸಂಯೋಜಕ ಎ.ಆರ್‌.ರೆಹಮಾನ್‌ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. ಗುಲ್ಜಾರ್‌ ರಚನೆಯ ಈ ಹಾಡು Best Original Scrore ಮತ್ತು Original Song ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿತ್ತು. ಇದೀಗ ಆಸ್ಕರ್‌ಗೆ ಪಾತ್ರವಾದ ಮೊದಲ ಚಿತ್ರವಾಗಿ ‘RRR’ ದಾಖಲಾಗಿದೆ. ಆಸ್ಕರ್‌ ಸಮಾರಂಭದ ವೇದಿಕೆಯಲ್ಲಿ ‘ನಾಟು ನಾಟು’ ಹಾಡಿಗೆ ಕಲಾವಿದರು ನರ್ತಿಸಿದರು. ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ‘ನಾಟು ನಾಟು’ ಪರಿಚಯಿಸಿದ್ದು ವಿಶೇಷ.

ಕೆಲವೇ ದಿನಗಳ ಹಿಂದೆ ‘ನಾಟು ನಾಟು’ ಹಾಡು ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಪಡೆದುಕೊಂಡಿತ್ತು. ಈ ಮೂಲಕ ಗೋಲ್ಡನ್‌ ಗ್ಲೋಬ್‌ ಪಡೆದ ಮೊದಲ ಭಾರತೀಯ ಸಿನಿಮಾ ಎನ್ನುವ ಪಟ್ಟವೂ ‘RRR’ ಪಾಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ಮತ್ತು ಕೊಮರಂ ಭೀಮ್‌ ಅವರ ಪ್ರೇರಣೆಯಿಂದ ರೂಪಿಸಿದ್ದ ಸಿನಿಮಾದಲ್ಲಿ ಜ್ಯೂನಿಯರ್‌ ಎನ್‌ಟಿಆರ್‌, ರಾಮ್‌ ಚರಣ್‌ ತೇಜಾ, ಅಜಯ್‌ ದೇವಗನ್‌, ಅಲಿಯಾ ಭಟ್‌, ಒಲಿವಿಯಾ ಮೋರಿಸ್‌, ಅಲಿಸನ ಡೂಡಿ, ರೇ ಸ್ಟೀವನ್‌ಸನ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಎಸ್‌.ಎಸ್‌.ರಾಜಮೌಳಿ ನಿರ್ದೇಶನದಲ್ಲಿ ತಯಾರಾದ ಸಿನಿಮಾ ಬಾಕ್ಸ್‌ ಆಫೀಸಿನಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ಇದೀಗ ಆಸ್ಕರ್‌ ಗೌರವ ಲಭಿಸಿದ್ದು, ಚಿತ್ರತಂಡಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

LEAVE A REPLY

Connect with

Please enter your comment!
Please enter your name here