ರಶ್ಮಿಕಾ ಮಂದಣ್ಣ ನಂತರ ಟಾಲಿವುಡ್‌ ಸಿನಿಮಾಗಳಲ್ಲಿ ಹೆಸರು ಮಾಡಿದ್ದ ನಟಿ ನಭಾ ನಟೇಶ್‌. ಸಿನಿಮಾ ಅವಕಾಶಗಳು ಬರುತ್ತಿರುವಾಗಲೇ ರಸ್ತೆ ಅಪಘಾತವೊಂದರಿಂದ ಗಾಯಗೊಂಡಿದ್ದರು. ಸದ್ಯ ನಭಾ ಚೇತರಿಸಿಕೊಂಡಿದ್ದು, ‘ಸ್ವಯಂಭೂ’ ಸಿನಿಮಾದ ಮೂಲಕ ಸಿನಿಲೋಕದಲ್ಲಿ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದಾರೆ.

‘ಕಾರ್ತಿಕೇಯ’ ಸಿನಿಮಾ ಖ್ಯಾತಿಯ ಟಾಲಿವುಡ್‌ ನಟ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ಚಿತ್ರ ‘ಸ್ವಯಂಭೂ’. ಈ ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ನ ಚಿತ್ರೀಕರಣದ ಭರದಿಂದ ಸಾಗುತ್ತಿದೆ. ಸಹಸ್ರಮಾನಗಳ ಹಿಂದಿನ ಕಥೆಯನ್ನೊಳಗೊಂಡಿರುವ ಈ ಚಿತ್ರದ ಮೂಲಕ ‘ವಜ್ರಕಾಯ’ ಬೆಡಗಿ ಮತ್ತೆ ಬಣ್ಣ ಹಚ್ಚಿದ್ದಾರೆ. ಕನ್ನಡತಿ ನಭಾ ನಟೇಶ್‌ 2023ರಲ್ಲಿ ರಸ್ತೆ ಅಪಘಾತಕ್ಕೀಡಾಗಿ, ಒಂದು ಶಸ್ತ್ರಚಿಕಿತ್ಸೆ ಸಹ ಆಗಿತ್ತು. ಈಗ ಸಂಪೂರ್ಣ ಚೇತರಿಸಿಕೊಂಡಿರುವ ನಭಾ, ‘ಸ್ವಯಂಭೂ’ ಚಿತ್ರದ ಮೂಲಕ ಬಣ್ಣದ ಲೋಕದಲ್ಲಿ ಸೆಕೆಂಡ್‌ ಇನ್ನಿಂಗ್ಸ್‌ ಶುರು ಮಾಡುತ್ತಿದ್ದಾರೆ.

ಶೃಂಗೇರಿ ಸುಂದರಿ ನಭಾ ತೆಲುಗಿನ ‘ಸ್ವಯಂಭೂ’ ಚಿತ್ರತಂಡ ಸೇರಿಕೊಂಡಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಚಿತ್ರತಂಡ ನಭಾ ಅಭಿನಯಿಸುತ್ತಿರುವ ಪಾತ್ರದ ಪೋಸ್ಟರ್‌ ಬಿಡುಗಡೆ ಮಾಡಿದೆ. ಈ ಪೋಸ್ಟರ್‌ನಲ್ಲಿ ರಾಣಿಯಂತೆ ಕಂಗೊಳಿಸುತ್ತಿರುವ ನಭಾ ಲುಕ್‌ಗೆ ಅಭಿಮಾನಿಗಳು ಮನಸೋತಿದ್ದಾರೆ. ಆದರೆ, ನಭಾ ಬಣ್ಣ ಹಚ್ಚಿರುವ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಶಿವರಾಜಕುಮಾರ್‌ ನಟನೆಯ ವಜ್ರಕಾಯ ಚಿತ್ರದ ಮೂಲಕ ಸಿನಿಮಾ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ನಭಾ, ತೆಲುಗಿನಲ್ಲಿ ‘ನನ್ನು ದೋಚುಕುಂದುವಟೆ’ ಚಿತ್ರದ ಮೂಲಕ ಟಾಲಿವುಡ್‌ ಪ್ರವೇಶಿಸಿದ್ದರು. ನಂತರದಲ್ಲಿ ಪೂರಿ ಜಗನ್ನಾಥ್ ನಿರ್ದೇಶನದ ‘ಇಸ್ಮಾರ್ಟ್ ಶಂಕರ್’ ಮೂಲಕ ಪ್ರಖ್ಯಾತಿ ಗಳಿಸಿದ್ದರು.

‘ಸ್ವಯಂಭೂ’ ಎಂದರೆ ಸ್ವಯಂ ಹುಟ್ಟು ಎಂದರ್ಥ. ಈ ಸಿನಿಮಾ ನಿಖಿಲ್ ಸಿದ್ದಾರ್ಥ್ ವೃತ್ತಿಜೀವನದ ಬಿಗ್ ಬಜೆಟ್‌ ಚಿತ್ರವಾಗಿದೆ. ನಿಖಿಲ್‌ ಹುಟ್ಟುಹಬ್ಬದಂದು ಸಿನಿಮಾದ ಪೋಸ್ಟರ್‌ ರಿಲೀಸ್‌ ಮಾಡಲಾಗಿತ್ತು. ಸಂಯುಕ್ತ ಮೆನನ್ ಈ ಚಿತ್ರದ ನಾಯಕಿ. ಪಿಕ್ಸೆಲ್ ಸ್ಟುಡಿಯೋ ನಿರ್ಮಾಣದ ಈ ಚಿತ್ರವನ್ನು ಭರತ್ ಕೃಷ್ಣಮಾಚಾರಿ ನಿರ್ದೇಶನ ಮಾಡುತ್ತಿದ್ದಾರೆ. ಮನೋಜ್ ಪರಮಹಂಸ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ಹಾಗೂ ವಾಸುದೇವ್ ಮುನೆಪ್ಪಗರಿ ಈ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ.

LEAVE A REPLY

Connect with

Please enter your comment!
Please enter your name here