Lyca Productions ನಿರ್ಮಾಣದ ನಿಖಿಲ್‌ ಕುಮಾರಸ್ವಾಮಿ ಸಿನಿಮಾದಲ್ಲಿ ದುನಿಯಾ ವಿಜಯ್‌ ನಟಿಸುವುದು ಅಧಿಕೃತವಾಗಿದೆ. ವಿಜಯ್‌ ಚಿತ್ರದ ಖಳಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ನಟ ನಿಖಿಲ್‌ ತಮ್ಮ Instagram ಖಾತೆಯಲ್ಲಿ ವಿಜಯ್‌ ಅವರೊಂದಿಗಿನ ಫೋಟೊದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾಗೆ ದುನಿಯಾ ವಿಜಯ್ ಸೆರ್ಪಡೆಗೊಂಡಿದ್ದಾರೆ. ವಿಜಯ್ ಅವರು ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದು, ಚಿತ್ರದ ಖಳನಟನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ‘ರೋಮಿಯೋ ಜೂಲಿಯೆಟ್’, ‘ಬೋಗನ್’ ಮತ್ತು ‘ಭೂಮಿ’ ತಮಿಳು ಚಲನಚಿತ್ರಗಳ ನಿರ್ಮಾಪಕ ಲಕ್ಷ್ಮಣ್ ಅವರು ಹೆಸರಿಡದ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಈ ಕುರಿತು ತಮ್ಮ Instagram ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಬ್ಬರೂ ಒಟ್ಟಿಗಿರುವ ಫೋಟೊ ಹಾಕಿದ್ದಾರೆ. ‘Lyca Productions ಬ್ಯಾನರ್‌ ಅಡಿಯಲ್ಲಿ ಪ್ರೊಡಕ್ಷನ್ ನಂ28 ಕುಟುಂಬಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಸ್ಯಾಂಡಲ್ ವುಡ್ ಸಲಗ, ಕರಿಚಿರತೆ ದುನಿಯಾ ವಿಜಯ್ ಅವರಿಗೆ ಸ್ವಾಗತ. ನಮ್ಮ ಸಿನಿಮಾದ ಪ್ರಮುಖ ಪಾತ್ರದಲ್ಲಿ ದುನಿಯಾ ವಿಜಯ್ ಅವರು ನಟಿಸುತ್ತಿದ್ದಾರೆ. ಅವರ ಜೊತೆ ನಾನು ತೆರೆಹಂಚಿಕೊಳ್ಳುತ್ತಿರುವುದು ಸಂತೋಷದ ವಿಚಾರ’ ಎಂದು ನಿಖಿಲ್‌ ಕ್ಯಾಪ್ಶನ್‌ ನೀಡಿದ್ದಾರೆ.

ಇತ್ತೀಚೆಗೆ ತೆರೆಕಂಡ ಬಾಲಕೃಷ್ಣ ನಟನೆಯ ‘ವೀರಸಿಂಹಾರೆಡ್ಡಿ’ ತೆಲುಗು ಚಿತ್ರದ ಖಳನಾಗಿ ದುನಿಯಾ ವಿಜಯ್‌ ನಟಿಸಿದ್ದರು. ಈ ಸಿನಿಮಾ ಮೂಲಕ ಅವರು ತೆಲುಗು, ತಮಿಳು ಸಿನಿಮಾ ಪ್ರೇಕ್ಷಕರಿಗೂ ಪರಿಚಯವಾಗಿದ್ದಾರೆ. ನಿಖಿಲ್‌ ಕುಮಾರಸ್ವಾಮಿ ನಟನೆಯ ನೂತನ ಸಿನಿಮಾ ದೊಡ್ಡ ಮಟ್ಟದಲ್ಲೇ ತಯಾರಾಗುತ್ತಿದೆ. ಈ PAN ಇಂಡಿಯಾ ಪ್ರಾಜೆಕ್ಟ್‌ಗೆ ದುನಿಯಾ ವಿಜಯ್‌ ಉಪಸ್ಥಿತಿ ನೆರವಾಗುವ ಸಾಧ್ಯತೆಗಳಿವೆ. ಎ ಸುಭಾಸ್ಕರನ್ ಒಡೆತನದ Lyca Productions ಈ ಹಿಂದೆ ಸೂಪರ್‌ ಸ್ಟಾರ್ ರಜನಿಕಾಂತ್, ದಳಪತಿ ವಿಜಯ್, ಧನುಷ್, ಚಿಯಾನ್ ವಿಕ್ರಮ್, ಮಮ್ಮುಟಿ, ಐಶ್ವರ್ಯ ರೈ, ನಯನತಾರಾ, ಜಾಹ್ನವಿ ಕಪೂರ್, ಅಕ್ಷಯ್ ಕುಮಾರ್‌ರಂತಹ ನಟ, ನಟಿಯರ ಸಿನಿಮಾಗಳನ್ನು ನಿರ್ಮಿಸಿದೆ. ಈಗ ಈ ಸಂಸ್ಥೆಯು ತನ್ನ ನಿರ್ಮಾಣ ವ್ಯಾಪ್ತಿಯನ್ನು ವಿಸ್ತರಿಸಿದ್ದು, ನಟ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರ ಚಿತ್ರದೊಂದಿಗೆ ಚಂದನವನಕ್ಕೆ ಪದಾರ್ಪಣೆ ಮಾಡಿದೆ. ಇನ್ನು ನಟ ದುನಿಯಾ ವಿಜಯ್‌ ತಮ್ಮ ‘ಭೀಮ’ ಸಿನಿಮಾದ ಪ್ರೊಮೋಷನ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ‘ಭೀಮ’ ಸಿನಿಮಾದ ‘Psych’ ಸಾಂಗ್‌ ಸದ್ಯ ಟ್ರೆಂಡಿಂಗ್‌ನಲ್ಲಿದ್ದು, ಚಿತ್ರದ ಬಿಡುಗಡೆ ದಿನಾಂಕವಿನ್ನೂ ಘೋಷಣೆಯಾಗಬೇಕಿದೆ.

LEAVE A REPLY

Connect with

Please enter your comment!
Please enter your name here