ಶಿವರಾಜಕುಮಾರ್‌ ಅಭಿನಯದ ಬಹುನಿರೀಕ್ಷಿತ ‘ಘೋಸ್ಟ್‌’ ಸಿನಿಮಾ ಈ ವಾರ ತೆರೆಕಂಡಿದೆ. ರವಿತೇಜ ನಟನೆಯ ‘ಟೈಗರ್‌ ನಾಗೇಶ್ವರರಾವ್‌’ ಮತ್ತು ಬಾಲಕೃಷ್ಣರ ‘ಭಗವಂತ್‌ ಕೇಸರಿ’ ತೆಲುಗು ಸಿನಿಮಾಗಳು, ವಿಜಯ್‌ರ ‘ಲಿಯೋ’ ತಮಿಳು ಸಿನಿಮಾ ದಸರಾ ರಜಾ ದಿನಗಳಿಗೆ ಸರಿಯಾಗಿ ತೆರೆಕಂಡಿವೆ.

ಘೋಸ್ಟ್‌ | ಕನ್ನಡ | ಶಿವರಾಜ್‌ ಕುಮಾರ್‌ ಅವರ ಅಕ್ಷನ್‌ – ಥ್ರಿಲ್ಲರ್‌ ಗ್ಯಾಂಗ್‌ಸ್ಟರ್‌ ಸಿನಿಮಾ. ‘ಯುದ್ಧ, ಮಾನವ ಲೋಕದ ಮಾಗದ ಕರಗ, ಇಂತಹ ಯುದ್ಧಗಳಿಂದ, ಸಾಮ್ರಾಜ್ಯಗಳಿಂದ ಕಟ್ಟಿದ್ದಕ್ಕಿಂತ ಅಧಃಪತನವೇ ಜಾಸ್ತಿ. ಸಾಮ್ರಾಜ್ಯ ಕಟ್ಟಿರೋರನ್ನ ಇತಿಹಾಸ ಮರೆತಿರಬಹುದು. ಆದರೆ, ಧ್ವಂಸ ಮಾಡೋ ನನ್ನಂಥವರನ್ನ ಎಂದಿಗೂ ಮರೆತಿಲ್ಲ’ ಈ ರೀತಿಯ ಗ್ಯಾಂಗ್‌ಸ್ಟರ್‌ ಸಂಭಾಷಣೆಗಳು ಸಿನಿಮಾದಲ್ಲಿವೆ. ಚಿತ್ರದಲ್ಲಿ ಫ್ಲ್ಯಾಶ್‌ಬ್ಯಾಕ್ ಕತೆಯ ಜೊತೆಗೆ ಪ್ರಸ್ತುತ ಕಾಲಘಟ್ಟದ ಕತೆ ಕೂಡ ತೆರೆದುಕೊಂಡಿದೆ. ಆ್ಯಕ್ಷನ್ ಮತ್ತು ಥ್ರಿಲ್ಲಿಂಗ್ ದೃಶ್ಯಗಳ ಜೊತೆಗೆ ಸ್ವಲ್ಪ ಪ್ರಮಾಣದ ಸೆಂಟಿಮೆಂಟ್ ಕೂಡ ಬೆರೆಸಿದ್ದಾರೆ ನಿರ್ದೇಶಕ ಶ್ರೀನಿ. ಟಿವಿ ರಿಪೋರ್ಟರ್ ಪಾತ್ರದಲ್ಲಿ ‘ಕೆಜಿಎಫ್’ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಕಾಣಿಸಿಕೊಂಡಿದ್ದಾರೆ. ಶಿವರಾಜಕುಮಾರ್‌ ಈ ಚಿತ್ರದಲ್ಲಿ ಯಂಗ್‌ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅನುಪಮ್‌ ಖೇರ್‌ ಅವರೊಟ್ಟಿಗೆ ಶಿವರಾಜಕುಮಾರ್ ನಡೆದುಕೊಂಡು ಬರುವ ದೃಶ್ಯವೊಂದು ಈಗಾಗಲೇ ಜನಪ್ರಿಯತೆ ಪಡೆದಿದ್ದು, ಅಭಿಮಾನಿಗಳು ಅವರ ಲುಕ್‌ ಇಷ್ಟಪಟ್ಟಿದ್ದಾರೆ. Sandesh Productions ಬ್ಯಾನರ್‌ ಅಡಿಯಲ್ಲಿ ಸಂದೇಶ್‌ ಸಿನಿಮಾ ನಿರ್ಮಿಸಿದ್ದು, ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ ಚಿತ್ರಕ್ಕಿದೆ.

ಪ್ರೇಮಂ 2ಟೂ | ಕನ್ನಡ | ಚಿತ್ರವು ಆಧುನಿಕ ಪ್ರೇಮಕಥಾಹಂದರ. ಶಾಲಾದಿನಗಳಲ್ಲಿ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದ ಇಬ್ಬರು ಪ್ರೇಮಿಗಳು ಮುಂದೆ ಮುಖತಃ ಭೇಟಿಯಾದಾಗ ಸಂಬಂಧವೇ ಇಲ್ಲವೆಂಬುವಂತೆ ವರ್ತಿಸುವ ನಾಯಕಿ, ಅದೇ ಕೊರಗಿನಲ್ಲಿ ದಿನಗಳನ್ನು ಕಳೆಯುತ್ತಿದ್ದ ನಾಯಕನಿಗೆ ಜೊತೆಯಾಗುವ ಇನ್ನೊಬ್ಬ ನಾಯಕಿ, ಮತ್ತೇ ಅವನನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತಾಳೆ. ಹೀಗೆ ಈ ಸಿನಿಮಾ ತ್ರಿಕೋನ ಪ್ರೇಮಕಥೆಯನ್ನು ಹೊಂದಿದೆ. ವಿನಯ್‌ ರತ್ನಸಿದ್ದಿ ನಿರ್ದೇಶಿಸಿ, ನಿರ್ಮಿಸಿ, ನಟಿಸಿದ್ದಾರೆ. ವೈಷ್ಣವಿ, ಶಕುಂತಲಾ, ಸುಶ್ಮಿತಾ ಉರ್ವ್, ಕಾವೇರಿ, ಪ್ರಿಯಾಂಕಾ, ಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಟೈಗರ್‌ ನಾಗೇಶ್ವರ ರಾವ್‌ | ತೆಲುಗು | ರವಿತೇಜ, ಅನುಪಮ್‌ ಖೇರ್‌ ಮತ್ತು ಮುರುಳಿ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಟೈಗರ್ ನಾಗೇಶ್ವರ ರಾವ್’ ಮೂಲ ತೆಲುಗು ಸೇರಿದಂತೆ ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಸ್ಟುವರ್ಟ್‌ಪುರಂನ ಮಾಸ್ಟರ್ ಮೈಂಡ್ ಕ್ರಿಮಿನಲ್, ಕುಖ್ಯಾತ ಕಳ್ಳನ ಜೀವನದ ನೈಜ ಘಟನೆಗಳ ಕತೆ ಇದು. ನಟ ರವಿ ತೇಜ ಅವರ ಮೊದಲ PAN ಇಂಡಿಯಾ ಯೋಜನೆ. ಟೈಗರ್ ನಾಗೇಶ್ವರ ರಾವ್‌ನನ್ನು ಹಿಡಿಯಲು ಮುರುಳಿ ಶರ್ಮಾ ಅವರ ಪೊಲೀಸ್‌ ಪಡೆಯ ಹುಡುಕಾಟದ ಒಂದು ಭಾಗವಾಗಿ ಅನುಪಮ್ ಖೇರ್ ಉನ್ನತ ಶ್ರೇಣಿಯ IB (Intelligence Bureau) ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ. ‘ಕಾಶ್ಮೀರ್ ಫೈಲ್ಸ್’ ನಿರ್ಮಿಸಿದ್ದ ಅಭಿಷೇಕ್ ಅಗರ್‌ವಾಲ್‌ Abhishek Agarwal Arts ಬ್ಯಾನರ್‌ ಅಡಿ ಚಿತ್ರ ನಿರ್ಮಿಸಿದ್ದಾರೆ. ಶ್ರೀಕಾಂತ್ ವಿಸ್ಸಾ ಸಂಭಾಷಣೆ, ಜಿ ವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ, ಆರ್ ಮಾಧಿ ಛಾಯಾಗ್ರಹಣ ಚಿತ್ರಕ್ಕಿದೆ.

ಭಗವಂತ್‌ ಕೇಸರಿ | ತೆಲುಗು | ನಂದಮೂರಿ ಬಾಲಕೃಷ್ಣ, ಶ್ರೀಲೀಲಾ, ಕಾಜಲ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. ಬಾಲಕೃಷ್ಣ ಮಗಳಾಗಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. ತಂದೆಗೆ ತನ್ನ ಮಗಳನ್ನು ಮಿಲಿಟರಿಗೆ ಸೇರಿಸುವ ಕನಸು ಇರುತ್ತದೆ. ಆದರೆ ಅವನ ಮಗಳಿಗೆ ಸೇನೆಯಲ್ಲಿ ಆಸಕ್ತಿ ಇರುವುದಿಲ್ಲ. ಪ್ರತಿ ಬಾರಿಯೂ ಅವಳಿಗೆ ಸೇನೆ ಸೇರಲು ತರಬೇತಿ ನೀಡುವ ಸಂದರ್ಭದಲ್ಲಿ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿರುತ್ತಾಳೆ. ಆದರೆ ತಂದೆ ಹಠ ಬಿಡದೇ ತರಬೇತಿ ಮುಂದುವರೆಸುತ್ತಾನೆ. ಮುಂದೆ ಅವನ ಹಳೆಯ ವೈರಿಗಳೆಲ್ಲ ಅವನ ಮೇಲೆ ದ್ವೇಷ ಸಾಧಿಸಿ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾರೆ. ಇದರ ಮಧ್ಯೆ ಜೈಲಿನಲ್ಲಿ ನಡೆಯುವ ಕೆಲವು ದೃಶ್ಯಗಳು ಹಾಸ್ಯ ಭರಿತವಾಗಿವೆ. ತನ್ನ ಹಳೇ ವೈರಿಗಳೊಂದಿಗೆ ಫೈಟ್‌ ಮಾಡುವ ತನ್ನ ಅಪ್ಪನನ್ನು ನೋಡಿ ಶ್ರೀಲೀಲಾ ಮನಸ್ಸು ಬದಲಾಗುತ್ತದೆಯೋ ಇಲ್ಲವೋ? ಎಂಬುದನ್ನು ಸಿನಿಮಾ ತೋರಿಸಲಿದೆ. Shine Screens ಬ್ಯಾನರ್‌ ಅಡಿ ಸಾಹು ಗರಪತಿ ಮತ್ತು ಹರೀಶ್ ಪೆಡ್ಡಿ ಚಿತ್ರ ನಿರ್ಮಿಸಿದ್ದಾರೆ. ಅನಿಲ್ ರವಿಪುಡಿ ನಿರ್ದೇಶನವಿದೆ.

ಲಿಯೋ | ತಮಿಳು | ವಿಜಯ್‌ ನಟನೆಯ ಬಹುನಿರೀಕ್ಷಿತ ಸಿನಿಮಾ. ಅವರು ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತ್ರಿಷಾ ಚಿತ್ರದ ನಾಯಕಿ. ಅರ್ಜುನ್‌ ಸರ್ಜಾ ಚಿತ್ರದ ಪ್ರಮುಖ ಖಳನಟ. ಲೋಕೇಶ್‌ ಕನಗರಾಜ್‌ ನಿರ್ದೇಶನದ ಸಿನಿಮಾಗೆ ಅನಿರುದ್ಧ ರವಿಚಂದ್ರನ್‌ ಸಂಗೀತ ಸಂಯೋಜಿಸಿದ್ದಾರೆ.

ಗಣಪತ್ | ಹಿಂದಿ | ಟೈಗರ್ ಶ್ರಾಫ್ ಮತ್ತು ಕೃತಿ ಸನೂನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ‌ ಹೈ-ಆಕ್ಟೇನ್-ಆಕ್ಷನ್-ಥ್ರಿಲ್ಲರ್‌ ಸಿನಿಮಾ. ಸಿನಿಮಾದಲ್ಲಿ ಅಮಿತಾಬ್‌ ಬಚ್ಚನ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಟೈಗರ್‌ ಶ್ರಾಫ್‌ರನ್ನು ‘ಗುಡ್ಡು’ ಪಾತ್ರಧಾರಿಯಾಗಿ ಪರಿಚಯಿಸಲಾಗಿದೆ. ಅವನು ಗಣಪತಿಯಂತೆ ಶೂರ ಯೋಧನಾಗಬೇಕು. ಅಸಹಾಯಕರಿಗೆ ಸಹಾಯ ಮಾಡಬೇಕು. ಸಂಕಷ್ಟದಲ್ಲಿರುವವರಿಗೆ ಕರುಣೆ ತೋರಬೇಕು. ಅಮಾಯಕರನ್ನು ದುಷ್ಟರಿಂದ ರಕ್ಷಿಸಬೇಕು ಎಂಬುದು ಅವನ ಬೆಂಬಲಿಗರ ಆಸೆಯಾಗಿರುತ್ತದೆ. ಆ ಸಂದರ್ಭದಲ್ಲಿ ಗುಡ್ಡುಗೆ ಕೃತಿ ಸನೂನ್‌ ಜೊತೆಯಾಗುತ್ತಾಳೆ. ಅಮಿತಾಬ್‌ ಬಚ್ಚನ್‌ ದೊಡ್ಡ ದೈವಭಕ್ತನಾಗಿ ಕಾಣಿಸಿಕೊಂಡಿದ್ದಾರೆ. Pooja Entertainment ಮತ್ತು Good Co. Production ಬ್ಯಾನರ್‌ ಅಡಿಯಲ್ಲಿ ವಶು ಭಗ್ನಾನಿ, ವಿಕಾಸ್ ಬೆಹ್ಲ್, ದೀಪ್ಶಿಖಾ ದೇಶಮುಖ್, ಜಾಕಿ ಭಗ್ನಾನಿ ಚಿತ್ರ ನಿರ್ಮಿಸಿದ್ದಾರೆ. ವಿಶಾಲ್ ಮಿಶ್ರಾ ಮತ್ತು ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿದ್ದು, ಸುಧಾಕರ ರೆಡ್ಡಿ ಯಕ್ಕಂಟಿ ಛಾಯಾಗ್ರಹಣ ನಿರ್ವಹಿಸಿದ್ದಾರೆ.

ಯಾರಿಯಾನ್ ‌2 | ಹಿಂದಿ | ದಿವ್ಯಾ ಖೋಸ್ಲಾ ಕುಮಾರ್ ಮತ್ತು ಯಶ್ ದಾಸ್ ಗುಪ್ತಾ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಯಾರಿಯಾನ್ ‌2’ ಚಿತ್ರವು ಸೋದರ ಸಂಬಂಧಿಗಳ (Cousins) ನಡುವಿನ ಆತ್ಮೀಯತೆಯನ್ನು ಒಳಗೊಂಡಿದೆ. ಈ ಬಂಧ ಶುದ್ಧ ಸ್ನೇಹದಂತೆ ಸಲುಗೆ, ಪ್ರೀತಿ, ತುಂಟತನವೆಲ್ಲವನ್ನು ಒಳಗೊಂಡಿರುತ್ತದೆ. ಹಾಗೂ ವಿವಾಹ ಆಚರಣೆ, ನಂತರ ಅವರ ಮಧ್ಯೆ ಏರ್ಪಡುವ ಮನಸ್ಥಾಪ ಕೊನೆಯಲ್ಲಿ ಅವರ ಅರಿವಿಗೆ ಮೂಡುವ
ಸಂಬಂಧಗಳ ಮೌಲ್ಯ, ಒಬ್ಬರಿಗೊಬ್ಬರು ಬಿಟ್ಟುಕೊಡದ ನಂಟನ್ನು ತೋರಿಸಿದೆ. ಚಿತ್ರದಲ್ಲಿ ‘ಸನ್ನಿ ಸನ್ನಿ’ ಹಾಡು ‌’ಯಾರಿಯಾನ್’ ಚಿತ್ರದ ‘ಪಾನಿ ಪಾನಿ’ ಹಾಡನ್ನು ನೆನಪಿಸುತ್ತದೆ. ‘ಯಾರಿಯಾನ್‌’ ಚಿತ್ರವು ಜನವರಿ 10, 2014 ರಲ್ಲಿ ತೆರೆಕಂಡು ಹೆಚ್ಚು ಜನಪ್ರಿಯತೆ ಗಳಿಸಿತ್ತು. 9 ವರ್ಷದ ಬಳಿಕ ಸೀಕ್ವೆಲ್‌ ಬರುತ್ತಿದೆ.

ಪ್ಯಾರ್‌ ಹೈ ತೋ ಹೈ | ಹಿಂದಿ | ಇಬ್ಬರು ಪ್ರೇಮಿಗಳು ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಾ ಸುಂದರ ಕ್ಷಣಗಳನ್ನು ಒಟ್ಟಿಗೆ ಕಳೆಯುತ್ತಿರುತ್ತಾರೆ. ಇವರಿಬ್ಬರ ಮಧ್ಯೆ ಅಪರಿಚಿತರ ಆಗಮನವಾಗಿ ಅವರ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ನಂತರ ಇವರಿಬ್ಬರು ಬೇರೆಯಾಗಿ ಹೆಚ್ಚು ಸಂಕಟ ಪಡುತ್ತಿರುತ್ತಾರೆ. ಎಲ್ಲಾ ಸಮಸ್ಯೆಗಳನ್ನು ಮೆಟ್ಟಿನಿಂತು ಇವರು ಒಂದಾಗುತ್ತಾರೋ? ಇಲ್ಲವೋ? ಎಂಬುದನ್ನು ಸಿನಿಮಾ ತೋರಿಸಲಿದೆ. ಈ ಚಿತ್ರವನ್ನು ಪ್ರದೀಪ್ ಆರ್ ಕೆ ಚೌಧರಿ ನಿರ್ದೇಶಿಸಿದ್ದಾರೆ. ಸಂಜೀವ್ ಕುಮಾರ್ ಮತ್ತು ರಣಧೀರ್ ಕುಮಾರ್ ಸಹನಿರ್ಮಾಣವಿದೆ. ಚಿತ್ರದಲ್ಲಿ ಕರಣ್ ಹರಿಹರನ್, ಪಾನಿ ಕಶ್ಯಪ್, ಅಭಿಷೇಕ್ ದುಹಾನ್, ವೀಣ್ ಹರ್ಷ್ ಮತ್ತು ರೋಹಿತ್ ಚೌಧರಿ ಪ್ರಮುಖ ಪಾತ್ರಗಳಲ್ಲಿ ಕಾಣಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here