ಶೋಭಿತಾ ಧೂಳಿಪಾಲ ಮತ್ತು ಅರ್ಜುನ್ ಮಾಥುರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಮೇಡ್ ಇನ್ ಹೆವನ್ 2’ ಸರಣಿ ಈ ವಾರ ಸ್ಟ್ರೀಮ್ ಆಗಲಿದೆ. ವಿವಾದಿತ ಹಿಂದಿ ಸಿನಿಮಾ ‘ಕಾಶ್ಮೀರ್ ಫೈಲ್ಸ್’, ಅದಾ ಶರ್ಮ ನಟನೆಯ ಆಕ್ಷನ್ ಸರಣಿ ‘ಕಮ್ಯಾಂಡೋ’ ಈ ವಾರ ವೀಕ್ಷಕರಿಗೆ ಸಿಗಲಿವೆ.
ನೇಮರ್ | ಮಲಯಾಳಂ | DisneyPlus Hotstar | ಇಂದಿನಿಂದ (ಆಗಸ್ಟ್ 8) | ಇಬ್ಬರು ಸ್ನೇಹಿತರ ಕತೆ. ಅವರು ಪ್ರತಿಯೊಂದು ಸಂದರ್ಭದಲ್ಲೂ ಪರಸ್ಪರ ಜೊತೆಯಾಗಿರುತ್ತಾರೆ. ಶಿಂಟೋನ (ನೆಲ್ಸನ್) ಸಲಹೆಯಂತೆ ಅವನ ಸ್ನೇಹಿತ ಆಕಾಮ್ಶ್ (ಥಾಮಸ್) ಪ್ರೇಯಸಿಯನ್ನು ಮೆಚ್ಚಿಸಲು ಒಂದು ನಾಯಿಯನ್ನು (Indie Dog) ಖರೀದಿಸುತ್ತಾನೆ. ಆದರೆ ಆ ನಾಯಿಯು ಅವರ ಜೀವನ ಮತ್ತು ದಿನನಿತ್ಯದ ವೇಳಾಪಟ್ಟಿಯನ್ನು ತಲೆಕೆಳಗಾಗಿಸುವ ಪೇಚಾಟಕ್ಕೆ ದೂಡುತ್ತದೆ. ತಿಳಿಹಾಸ್ಯದ ಹಿನ್ನೆಲೆಯ ಲವ್‌ಸ್ಟೋರಿ. ಮಾಲಿವುಡ್ ನಟರಾದ ಮ್ಯಾಥ್ಯೂ ಥಾಮಸ್ ಮತ್ತು ನೆಲ್ಸನ್ ಗಫೂರ್ ಜೊತೆಯಾಗಿ ನಟಿಸುತ್ತಿರುವ ಮೂರನೇ ಚಿತ್ರ. ಈ ಹಿಂದೆ ಇವರು ‘ತಣ್ಣೀರ್ ಮಥನ್ ದಿನಂಗಲ್’ (2019), ‘ಜೋ ಅಂಡ್ ಜೋ’ (2022) ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಸುಧಿ ಮ್ಯಾಡಿಸನ್ ‘ನೇಮರ್’ ಬರೆದು ನಿರ್ದೇಶಿಸಿದ್ದಾರೆ.
ಪೋರ್ ಥೋನ್ಸಿಲ್ | ತಮಿಳು | SonyLIV | ಆಗಸ್ಟ್ 11ರಿಂದ | ಚಿತ್ರದಲ್ಲಿ ಒಬ್ಬ ಹಿರಿಯ ಪೋಲೀಸ್ ಅಧಿಕಾರಿ ಮತ್ತು ಅವನ ಟ್ರೈನಿ, ಕೊಲೆ ಪ್ರಕರಣಗಳ ತನಿಖೆ ಮಾಡುತ್ತಿರುತ್ತಾರೆ. ಅವರ ತನಿಖೆಗಳೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿರುತ್ತವೆ. ಇದರ ಹಿಂದೆ ಒಬ್ಬ ಮನೋರೋಗಿಯ ಕೈವಾಡವಿರುವುದನ್ನು ಅರಿತ ಅವರು ಅವನನ್ನು ಬಂದಿಸುತ್ತಾರೆಯೇ ಎಂಬ ಕುತೂಹಲವೇ ಚಿತ್ರದ ಕಥೆ. ಚಿತ್ರದಲ್ಲಿ ಶರತ್ ಕುಮಾರ್, ಅಶೋಕ್ ಸೆಲ್ವನ್ ಮತ್ತು ನಿಖಿಲಾ ವಿಮಲ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಘ್ನೇಶ್ ನಿರ್ದೇಶನದ ಚಿತ್ರವನ್ನು ಸಮೀರ್ ನಾಯರ್, ದೀಪಕ್ ಸೇಗಲ್, ಮುಖೇಶ್ ಆರ್ ಮೆಹ್ತಾ, ಸಿವಿ ಸಾರಥಿ, ಪೂನಂ ಮೆಹ್ರಾ ಮತ್ತು ಸಂದೀಪ್ ಮೆಹ್ರಾ ನಿರ್ಮಿಸಿದ್ದಾರೆ.
ಕಾಶ್ಮೀರ್ ಫೈಲ್ಸ್ | ಹಿಂದಿ | ZEE5 | ಆಗಸ್ಟ್ 11ರಿಂದ | ವಿವೇಕ್ ಅಗ್ನಿಹೋತ್ರಿ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ನೈಜ ಘಟನೆಗಳ ಪ್ರೇರಣೆಯಿಂದ ಚಿತ್ರಕಥೆ ಮಾಡಿರುವುದಾಗಿ ನಿರ್ದೇಶಕರು ಹೇಳಿಕೊಳ್ಳುತ್ತಾರೆ. ಕಾಶ್ಮೀರದಿಂದ ಕಾಶ್ಮೀರಿ ಹಿಂದೂಗಳ ನಿರ್ಗಮನದ ಸಮಯಗಳಲ್ಲಿ ಯಾರ ಗಮನಕ್ಕೂ ಬಾರದ ವಿವಿಧ ಸೂಕ್ಷ್ಮ ಅಂಶಗಳನ್ನು ಹೊಂದಿರುವ ಕತೆ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿವಾದಕ್ಕೆ ಕಾರಣವಾದ ಘಟನೆಗಳನ್ನು ಸಹ ಹೊಂದಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪಲ್ಲವಿ ಜೋಷಿ ಇದ್ದಾರೆ. ಚಿತ್ರದ ನಿರ್ಮಾಣದಲ್ಲಿ Zee Studios ಸಹಯೋಗವಿದೆ.
ದಿ ಜೆಂಗಬುರು ಕರ್ಸ್ | ಹಿಂದಿ | Amazon Prime | ಆಗಸ್ಟ್ 11ರಿಂದ | ಭಾರತದ ಮೊದಲ cli-fi ಸರಣಿ ‘ದಿ ಜೆಂಗಬುರು ಕರ್ಸ್’, ಒಡಿಶಾದ ಒಂದು ಸಣ್ಣ ಪಟ್ಟಣದಲ್ಲಿ ನಡೆದಿರುವ ಘಟನೆಯನ್ನು ಒಳಗೊಂಡಿದೆ. ಈ ಸರಣಿಯು ಲಂಡನ್ ಮೂಲದ ಹಣಕಾಸು ವಿಶ್ಲೇಷಕಿ ಪ್ರಿಯಾ ದಾಸ್ ಅವರ ಸುತ್ತ ಸುತ್ತುತ್ತದೆ. ಆಕೆಯ ತಂದೆ ಪ್ರೊಫೆಸರ್ ದಾಸ್ ನಿಗೂಢವಾಗಿ ಕಣ್ಮರೆಯಾಗುತ್ತಾರೆ. ಆಗ ಪ್ರಿಯಾ ಒಡಿಶಾಗೆ ಬರಲೇಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಅವಳು ತನ್ನ
ತಂದೆಯ ಸಾವಿನ ಕಾರಣವನ್ನು ಹುಡುಕ ಹೊರಟಾಗ, ವಿಚಿತ್ರವಾದ ಘಟನೆಗಳು ಸಂಭವಿಸುತ್ತವೆ. ಆಗ ಸ್ಥಳೀಯ ಬೊಂಡಿಯಾ ಬುಡಕಟ್ಟು ಮತ್ತು ಒಡಿಶಾದ ಗಣಿಗಾರಿಕೆ ರಾಜ್ಯಗಳ ನಡುವಿನ ಸಂಶಯಾಸ್ಪದ ನಂಟನ್ನು ಸರಣಿ ತೆರೆದಿಡುತ್ತದೆ. ಈ ಸರಣಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಪಡೆದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ನೀಲಾ ಮಾಧಬ್ ಪಾಂಡಾ ಬರೆದು ನಿರ್ದೇಶಿಸಿದ್ದಾರೆ. Studio Next ನಿರ್ಮಿಸಿದೆ. ಮಯಾಂಕ್ ತಿವಾರಿ ಛಾಯಾಗ್ರಹಣ ಮಾಡಿದ್ದು, ಅಲೋಕಾನಂದ ದಾಸ್‌ಗುಪ್ತ ಸಂಗೀತ ಸಂಯೋಜಿಸಿದ್ದಾರೆ. ಫರಿಯಾ ಅಬ್ದುಲ್ಲಾ, ನಾಸರ್, ಮಕರಂದ್ ದೇಶಪಾಂಡೆ, ಸುದೇವ್ ನಾಯರ್, ದೀಪಕ್ ಸಂಪತ್ ಮತ್ತು ಹಿತೇಶ್ ದವೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮೇಡ್ ಇನ್ ಹೆವನ್ 2 | ಹಿಂದಿ | Amazon Prime | ಆಗಸ್ಟ್ 11ರಿಂದ | ಶೋಭಿತಾ ಧೂಳಿಪಾಲ ಮತ್ತು ಅರ್ಜುನ್ ಮಾಥುರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಮೇಡ್ ಇನ್ ಹೆವನ್ 2’ ಸರಣಿಯನ್ನು ಅಲಂಕೃತ ಶ್ರೀವಾಸ್ತವ, ನೀರಜ್ ಘಯ್ವಾನ್, ನಿತ್ಯಾ ಮೆಹ್ರಾ, ರೀಮಾ ಕಾಗ್ತಿ ಮತ್ತು ಜೋಯಾ ಅಖ್ತರ್ ನಿರ್ದೇಶಿಸಿದ್ದಾರೆ. ಸರಣಿಯಲ್ಲಿ ಇಬ್ಬರು ವೆಡ್ಡಿಂಗ್ ಪ್ಲಾನರ್‌ಗಳಾದ ಅರ್ಜುನ್ ಮತ್ತು ಶೋಭಿತಾ, ಭಾರತೀಯ ವಿವಾಹ ಪದ್ದತಿಗಳ ಹಿನ್ನೆಲೆಯನ್ನು
ಯೋಜಿಸುವ ಪ್ಲಾನರ್‌ಗಳಾಗಿ ಪಾತ್ರ ನಿರ್ವಹಿಸಿದ್ದಾರೆ. ಸೀಸನ್ 2ನಲ್ಲಿ ಮೃಣಾಲ್ ಠಾಕೂರ್, ಶಿಬಾನಿ ದಾಂಡೇಕರ್, ರಾಧಿಕಾ ಆಪ್ಟೆ, ಸಾರಾ ಜೇನ್ ಡಯಾಸ್, ಝೈನ್ ಮೇರಿ ವಧುಗಳಾಗಿ ಕಾಣಿಸಿಕೊಂಡಿದ್ದಾರೆ. ಫರ್ಹಾನ್ ಅಖ್ತರ್ ಅವರ ಎಕ್ಸೆಲ್ ಮೀಡಿಯಾ ಮತ್ತು ಎಂಟರ್‌ಟೇನ್‌ಮೆಂಟ್ ಬ್ಯಾನರ್‌ನಡಿ ರಿತೇಶ್ ಸಿಧ್ವಾನಿ, ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ಅವರ ಟೈಗರ್ ಬೇಬಿ ಫಿಲ್ಮ್ಸ್ ನಿರ್ಮಿಸಿದೆ. ಸರಣಿಯ ಮೊದಲ ಸೀಸನ್ 2019ರ ಮಾರ್ಚ್‌ನಲ್ಲಿ ಸ್ಟ್ರೀಮ್ ಆಗಿತ್ತು. ಈ ಸರಣಿ ಪ್ರತಿಷ್ಠಿತ Emmy ಪ್ರಶಸ್ತಿ ಮತ್ತು ‘ITA’ (Indian Television Academy Awards) ಪ್ರಶಗಳಿಗೆ ನಾಮನಿರ್ದೇಶನಗೊಂಡಿತ್ತು.
ಕಮ್ಯಾಂಡೋ | ಹಿಂದಿ | Disneyplus Hotstar | ಆಗಸ್ಟ್ 11ರಿಂದ | ಪಾಕಿಸ್ತಾನದ ಸಹಿವಾಲ್ ಜೈಲ್‌ನಲ್ಲಿ ಸಿಲುಕಿಕೊಂಡ ತನ್ನ ಯೋಧ ಸಹೋದರನನ್ನು ಬಿಡಿಸಲು ಪ್ರಾಣದ ಹಂಗನ್ನು ತೊರೆದು ಹೋಗುವ ಪ್ರೇಮ್‌ಗೆ ಆಕ್ಷನ್ ಕ್ವೀನ್‌ನಂತೆ ಅದಾ ಶರ್ಮಾ ಜೊತೆಯಾಗುತ್ತಾರೆ. ಅದಾ ಶರ್ಮಾ ಮತ್ತು ಪ್ರೇಮ್ ಪಾಕಿಸ್ತಾನದ ಗಡಿ ದಾಟಿ ಉಗ್ರರಿಂದ ಯಾವ ರೀತಿ ತನ್ನ ಸಹೋದರನನ್ನು ಬಿಡಿಸಿ ಕರೆತರುತ್ತಾರೆಂದು ಸರಣಿ ತೋರಿಸಲಿದೆ. ಈ ಹೈ-ಆಕ್ಟೇನ್, ಪವರ್-ಪ್ಯಾಕ್ಡ್ ಹಿಂದಿ ವೆಬ್ ಸರಣಿಯನ್ನು ವಿಪುಲ್ ಅಮೃತ್‌ಲಾಲ್ ಷಾ ರಚಿಸಿ ನಿರ್ದೇಶಿಸಿದ್ದಾರೆ. ಸನ್‌ಶೈನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್‌ನಡಿ ಇವರೇ ನಿರ್ಮಿಸಿದ್ದಾರೆ. ವೈಭವ್ ತತ್ವವಾದಿ, ಶ್ರೇಯಾ ಸಿಂಗ್ ಚೌಧರಿ, ಅಮಿತ್ ತಿಗ್ಮಾನ್ಶು ಧುಲಿಯಾ, ಸಿಯಾಲ್, ಮುಖೇಶ್ ಛಾಬ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.