ಸ್ಟಾರ್ ಹೀರೋನ ಚಿತ್ರವೊಂದು ಕೊನೆಯ ಕ್ಷಣದಲ್ಲಿ ಅಡ್ಡಿ ಎದುರಿಸಿರುವ ಸಂದರ್ಭ ಸ್ಯಾಂಡಲ್‌ವುಡ್‌ನಲ್ಲಿ ಇದೇ ಮೊದಲು. ಫೈನಾನ್ಶಿಯರ್ ಕಡೆಯಿಂದ NOC ಸಿಗದಿದ್ದುದೇ ‘ಕೋಟಿಗೊಬ್ಬ 3’ನಿಗೆ ಕಂಟಕವಾಗಿದೆ.
ಸುದೀಪ್ ಅಭಿನಯದ ಬಹುನಿರೀಕ್ಷಿತ ‘ಕೋಟಿಗೊಬ್ಬ 3’ ಸಿನಿಮಾದ ಇಂದಿನ ಮೂರು ಶೋಗಳು ಕ್ಯಾನ್ಸಲ್ ಆಗಿವೆ. ಮುಂಜಾನೆ 7ರ ಫ್ಯಾನ್ ಶೋಗೆಂದು ಬೆಳಗ್ಗೆ ಐದು ಗಂಟೆಯಿಂದಲೇ ಅಭಿಮಾನಿಗಳು ಥಿಯೇಟರ್ ಎದುರು ಜಮಾಯಿಸಿದ್ದರು. ಎಲ್ಲವೂ ಅಂದುಕೊಂಡಂತೆಯೇ ಅಗಿದ್ದರೆ ಈ ಹೊತ್ತಿಗೆ ಸಿನಿಮಾ ಕುರಿತ ಅನಿಸಿಕೆ, ವಿಮರ್ಶೆಗಳು, ಸೋಲು-ಗೆಲುವಿನ ಲೆಕ್ಕಾಚಾರಗಳು ಸಿಗಬೇಕಿತ್ತು. ಆದರೆ ಅನಪೇಕ್ಷಿತ ಸಂದರ್ಭದಲ್ಲಿ ಸಿನಿಮಾದ ಬಿಡುಗಡೆಯೇ ಆಗಲಿಲ್ಲ. ಇದಕ್ಕೆ ನಿರ್ಮಾಪಕ ಸೂರಪ್ಪ ಬಾಬು ಅವರನ್ನೇ ಗಾಂಧಿನಗರದ ಮಂದಿ ನೇರ ಹೊಣೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಸೂರಪ್ಪ ಬಾಬು “ನನ್ನದೇನೂ ತಪ್ಪಿಲ್ಲ, ವಿತರಕರಿಂದಾಗಿ ಮೋಸವಾಯ್ತು” ಎನ್ನುತ್ತಿದ್ದಾರೆ.
UFO, CUBE ಮುಂತಾದವು ಸಿನಿಮಾ ಸ್ಯಾಟಲೈಟ್ ಪ್ರಸಾರ ಮಾಧ್ಯಮಗಳು. ಡಿಜಿಟಲ್ ರೂಪದಲ್ಲಿ ಸಿನಿಮಾ ಪ್ರದರ್ಶಿಸಲು ಥಿಯೇಟರ್‌ಗಳಿಗೆ ಇವುಗಳ ಪರವಾನಗಿ ಅವಶ್ಯ. ‘ಕೋಟಿಗೊಬ್ಬ 3’ ಸಿನಿಮಾಗೆ ಪರವಾನಗಿ ಕೊಡಬೇಕಾಗಿದ್ದರೆ ಫೈನಾನ್ಶಿಯರ್ ಕಡೆಯಿಂದ ಈ ಸ್ಯಾಟಲೈಟ್ ಮಾಧ್ಯಮಗಳಿಗೆ NOC (ನೋ ಅಬ್ಜೆಕ್ಷನ್ ಸರ್ಟಿಫಿಕೇಟ್) ಸಿಗಬೇಕಿತ್ತು. ಆದರೆ ಫೈನಾನ್ಶಿಯರ್ NOC ಕೊಟ್ಟಿಲ್ಲ. ಹಾಗಾಗಿ ಈ ಸ್ಯಾಟಲೈಟ್ ಚಾನೆಲ್‌ಗಳು ಸಿನಿಮಾ ಬಿಡುಗಡೆ ತಡೆಹಿಡಿದಿದೆ. ಇದರಲ್ಲಿ ಥಿಯೇಟರ್‌ನವರ ಪಾತ್ರವೇನೂ ಇರುವುದಿಲ್ಲ. ಅಭಿಮಾನಿಗಳು ಥಿಯೇಟರ್ ಮಾಲೀಕರ ಮೇಲೆ ತಮ್ಮ ಅಸಮಾಧಾನ, ಆಕ್ರೋಷ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ.
ಫೈನಾನ್ಶಿಯರ್ ಏಕೆ NOC ಕೊಟ್ಟಿಲ್ಲ? ನಿರ್ಮಾಪಕ ಸೂರಪ್ಪಬಾಬು ಅವರು ಸಾಲವಾಗಿ ಹಣ ಪಡೆಯುವಾಗ ಚಿತ್ರದ ನೆಗೆಟೀವ್ ಹಕ್ಕುಗಳನ್ನು ಫೈನಾನ್ಶಿಯರ್‌ಗೆ ಬರೆದುಕೊಟ್ಟಿರುತ್ತಾರೆ. ಈಗ ಸಿನಿಮಾ ಬಿಡುಗಡೆ ಹೊತ್ತಿನಲ್ಲಿ ನಿರ್ಮಾಪಕರು ವಿತರಕರಿಗೆ ಸಿನಿಮಾ ಮಾರಾಟ ಮಾಡಿದ್ದರು. ನಾಲ್ಕು ಏರಿಯಾಗಳ ವಿತರಕರು ವ್ಯವಹಾರ ಮಾಡಿದಷ್ಟು ಹಣವನ್ನು ಪೂರ್ತಿಯಾಗಿ ಸಂದಾಯ ಮಾಡಿಲ್ಲ. ಸಿನಿಮಾ ಬಿಡುಗಡೆಯ ದಿನದವರೆಗೂ ವಿತರಕರಿಂದ ಬರಬೇಕಾದ ಸುಮಾರು ಮೂರೂವರೆ ಕೋಟಿ ರೂಪಾಯಿ ನಿರ್ಮಾಪಕರಿಗೆ ಸಂದಾಯವಾಗಿಲ್ಲ. ಹಾಗಾಗಿ ಫೈನಾನ್ಶಿಯರ್‌ಗೆ ಕೊಡಬೇಕಿದ್ದ ಬಾಕಿ ಹಣವನ್ನು ಚುಕ್ತಾ ಮಾಡಲು ನಿರ್ಮಾಪಕರಿಗೆ ಸಾಧ್ಯವಾಗಿಲ್ಲ. ತಮಗೆ ಬರಬೇಕಾದ ಹಣ ಬಾರದ್ದರಿಂದ ಫೈನಾನ್ಶಿಯರ್ NOC ಕೊಟ್ಟಿಲ್ಲ. NOC ಸಿಗದೆ ಇದ್ದುದರಿಂದ ಸ್ಯಾಟಲೈಟ್ ಚಾನಲ್‌ಗಳು ‘ಕೋಟಿಗೊಬ್ಬ3’ ಚಿತ್ರದ ಬಿಡುಗಡೆಯನ್ನು ತಡೆಹಿಡಿದವು. “ಈ ಅವಾಂತರಗಳಿಗೆ ಸೂರಪ್ಪ ಬಾಬು ಅವರೇ ಹೊಣೆ ಹೊರಬೇಕು. ಸರಿಯಾದ ಲೆಕ್ಕಾಚಾರವಿಲ್ಲದೆ ಅವರು ಸಿನಿಮಾ ಬಿಡುಗಡೆಯನ್ನು ನಿಗಧಿ ಮಾಡಬಾರದಾಗಿತ್ತು” ಎಂದು ಗಾಂಧಿನಗರದ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಸುದೀಪ್ ಮಧ್ಯೆ ಬಂದಿದ್ದು, ವಿತರಣೆಯ ಸಮಸ್ಯೆ ಪರಿಹರಿಸಿದ್ದಾರೆ. ನಾಳೆ ಸಿನಿಮಾ ಬಿಡುಗಡೆಯಾಗುವುದಾಗಿ ಘೋಷಿಸಿದ್ದಾರೆ.