ಶಿವಭಕ್ತ ಬೇಡರ ಕಣ್ಣಪ್ಪನ ಕುರಿತ ತೆಲುಗು ಸಿನಿಮಾ ‘ಕಣ್ಣಪ್ಪ’ ಸೆಟ್ಟೇರಿದೆ. ಹಿರಿಯ ನಟ ಮೋಹನ್‌ ಬಾಬು ಅವರು ತಮ್ಮ ಪುತ್ರ ವಿಷ್ಣು ಮಂಚು ಅವರಿಗಾಗಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶಿಸಲಿರುವ ಚಿತ್ರದ ನಾಯಕಿಯಾಗಿ ನೂಪುರ್ ಸನೋನ್ ನಟಿಸಲಿದ್ದಾರೆ.

ಶಿವಭಕ್ತ ಬೇಡರ ಕಣ್ಣಪ್ಪನ ಕುರಿತಂತೆ ಭಾರತೀಯ ಸಿನಿಮಾ ಇತಿಹಾಸದಲ್ಲಿ ಹಲವು ಸಿನಿಮಾಗಳು ತಯಾರಾಗಿವೆ. ಕನ್ನಡ ಚಿತ್ರರಂಗದ ಮೇರು ನಟ ಡಾ ರಾಜಕುಮಾರ್‌ ನಾಯಕನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದು ಕಣ್ಣಪ್ಪನ ಪಾತ್ರದಲ್ಲಿಯೇ. ಕಾಲಾತೀತ ಕಣ್ಣಪ್ಪನ ಕತೆ ಇದೀಗ ಮತ್ತೆ ತೆರೆಗೆ ಬರುತ್ತಿದೆ. ಯುವ ನಟ ವಿಷ್ಣು ಮಂಚು ಅಭಿನಯದಲ್ಲಿ ತೆಲುಗು ಪೌರಾಣಿಕ ಸಿನಿಮಾ ‘ಕಣ್ಣಪ್ಪ’ ಸೆಟ್ಟೇರಿದೆ. ಶ್ರೀಕ್ಷೇತ್ರ ಕಾಳಹಸ್ತಿಯಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ದೊಡ್ಡ ಬಜೆಟ್‌ನಲ್ಲಿ ತಯಾರಾಗಲಿರುವ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಪ್ರಮುಖರನೇಕರು ಅಭಿನಯಿಸಲಿದ್ದಾರೆ. 24 ಫ್ರೇಮ್ಸ್ ಫ್ಯಾಕ್ಟರಿ ಮತ್ತು ಎವಿಎ ಎಂಟ ರ್‌ಟೇನ್‌ಮೆಂಟ್‌ ಬ್ಯಾನರ್‌ನಡಿ ಈ ಚಿತ್ರವನ್ನು ನಟ ಹಾಗೂ ರಾಜಕಾರಣಿ ಮೋಹನ್ ಬಾಬು ನಿರ್ಮಿಸುತ್ತಿದ್ದಾರೆ. ಬಾಲಿವುಡ್‌ ನಟಿ ನೂಪುರ್‌ ಸನೋನ್‌ ಚಿತ್ರದ ನಾಯಕಿ. ‘A true epic indian tale’ ಅಡಿಟಿಪ್ಪಣಿ ಇರುವ ಸಿನಿಮಾ ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ.

ತಮ್ಮ ನೂತನ ಸಿನಿಮಾ ಕುರಿತು ಮಾತನಾಡುವ ವಿಷ್ಣು ಮಂಚು, ‘ಕಣ್ಣಪ್ಪ ಚಿತ್ರವು ಅಚಲವಾದ ಭಕ್ತಿಯ ಮೇಲೆ ಬೆಳಕು ಚೆಲ್ಲುತ್ತದೆ. ನಾಸ್ತಿಕನಾದ ಕಣ್ಣಪ್ಪನ ವಿಸ್ಮಯಕಾರಿ ರೂಪಾಂತರವು ಈ ಚಿತ್ರದ ಕಥಾವಸ್ತು. ಈಶ್ವರನ ಅಪ್ರತಿಮ ಭಕ್ತನಾಗಿ ಮತ್ತು ಇತಿಹಾಸದ ಅತ್ಯಂತ ಅಸಾಧಾರಣ ಭಕ್ತರಲ್ಲಿ ಒಬ್ಬನಾದ ಕಣ್ಣಪ್ಪನ ಪಾತ್ರ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ’ ಎನ್ನುತ್ತಾರೆ. ಇದೇ ಮೊದಲ ಬಾರಿಗೆ ಅವರು ಪೌರಾಣಿಕ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಖ್ಯಾತ ಚಿತ್ರಸಾಹಿತಿ ಪರುಚೂರಿ ಗೋಪಾಲಕೃಷ್ಣ, ತೋಟ ಪ್ರಸಾದ್, ತೋಟಪಲ್ಲಿ ಸಾಯಿನಾಥ್‌ ಮತ್ತು ಬುರ್ರಾ ಸಾಯಿ ಮಾಧವನ್ ಈ ಸಿನಿಮಾಗೆ ಚಿತ್ರಕಥೆ ಮತ್ತು ಸಂಭಾಷಣೆ ರಚಿಸುತ್ತಿದ್ದಾರೆ. ಮಣಿಶರ್ಮಾ ಮತ್ತು ಸ್ಟೀಫನ್ ದೇವಸ್ಸೆ ಸಂಗೀತ ಹಾಗೂ ಶೆಲ್ಡನ್ ಶಾ ಅವರ ಛಾಯಾಗ್ರಹಣವಿದೆ. ಈ ಹಿಂದೆ ಸ್ಟಾರ್‌ ಪ್ಲಸ್‌ ಚಾನೆಲ್‌ಗೆ ಮಹಾಭಾರತ ಸರಣಿ ನಿರ್ದೇಶಿಸಿದ್ದ ಮುಖೇಶ್‌ ಕುಮಾರ್‌ ಸಿಂಗ್‌ ನಿರ್ದೇಶನದಲ್ಲಿ ‘ಕಣ್ಣಪ್ಪ’ ತಯಾರಾಗಲಿದೆ.

Previous articleರಾಧನಾ ರಾಮ್ ಇನ್ಮುಂದೆ ಆರಾಧನಾ | ಮಾಲಾಶ್ರೀ – ರಾಮು ಪುತ್ರಿ
Next article‘Friday Night Plan’ ಟ್ರೈಲರ್‌ | ಸೆಪ್ಟೆಂಬರ್‌ 1ರಿಂದ Netflixನಲ್ಲಿ ಸ್ಟ್ರೀಮ್‌ ಆಗಲಿದೆ ಸಿನಿಮಾ

LEAVE A REPLY

Connect with

Please enter your comment!
Please enter your name here