OTTಯಲ್ಲಿ ಸ್ಟ್ರೀಮ್‌ ಆಗುತ್ತಿರುವ ‘ಕಾಂತಾರ’ ಚಿತ್ರದಲ್ಲಿ ‘ವರಾಹ ರೂಪಂ’ ಮೂಲ ಟ್ಯೂನ್‌ ಇಲ್ಲವೆಂದು ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಇದರ ಮಧ್ಯೆ ಈ ಟ್ಯೂನ್‌ಗೆ ಸಂಬಂಧಿಸಿದಂತೆ ಚಿತ್ರದ ಮೇಲಿದ್ದ ಕೇಸನ್ನು ಕೋಝಿಕ್ಕೋಡ್‌ ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ. ಹಾಗಾದರೆ ಮತ್ತೆ ‘ವರಾಹ ರೂಪಂ’ ಒರಿಜಿನಲ್‌ ಟ್ಯೂನ್‌ ಕೇಳಿಸಲಿದೆಯೇ?

ಪ್ರಶಾಂತ್‌ ನೀಲ್‌ ನಿರ್ದೇಶನ, ಯಶ್‌ ಅಭಿನಯದ ‘KGF2’ ಸಿನಿಮಾ ನಂತರ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದ ಕನ್ನಡ ಸಿನಿಮಾ ‘ಕಾಂತಾರ’. ರಿಷಭ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ ಸಿನಿಮಾ ತೆರೆಕಂಡದ್ದು ಸೆಪ್ಟೆಂಬರ್‌ 30ರಂದು. ‘KGF’ ಸರಣಿ ಸಿನಿಮಾಗಳನ್ನು ನಿರ್ಮಿಸಿದ್ದ ಹೊಂಬಾಳೆ ಬ್ಯಾನರ್‌ನವರೇ ತಯಾರಿಸಿದ ಸಿನಿಮಾ ‘ಕಾಂತಾರ’ ಎನ್ನುವುದು ವಿಶೇಷ. ‘ಕಾಂತಾರ’ಗೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯ್ತು. ಈ ಅನಿರೀಕ್ಷಿತ ಯಶಸ್ಸಿನ ಬೆನ್ನಲ್ಲೇ ನಿರ್ಮಾಪಕರು ಚಿತ್ರವನ್ನು ಹಿಂದಿ ಸೇರಿದಂತೆ ದಕ್ಷಿಣದ ಇತರೆ ಭಾಷೆಗಳಿಗೆ ಡಬ್‌ ಮಾಡಿದರು. ಅಕ್ಟೋಬರ್‌ 14ರಂದು ‘ಕಾಂತಾರ’ ಹಿಂದಿ ವರ್ಷನ್‌ ಬಿಡುಗಡೆಯಾಯ್ತು. ಮುಂದಿನ ದಿನಗಳಲ್ಲಿ ಬಿಡುಗಡೆಯಾದ ತಮಿಳು, ತೆಲುಗು, ಮಲಯಾಳಂ ವರ್ಷನ್‌ಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಅಲ್ಲಿನ ಸಿನಿಮಾ ತಂತ್ರಜ್ಞರು ಹಾಗೂ ಕಲಾವಿದರು ಚಿತ್ರದ ಬಗ್ಗೆ ಮೆಚ್ಚುಗೆಯಿಂದ ಮಾತನಾಡಿದರು. PAN ಇಂಡಿಯಾ ಚಿತ್ರವಾಗಿ ‘ಕಾಂತಾರ’ ಎಲ್ಲೆಡೆ ದಾಖಲೆ ಬರೆಯಿತು.

‘ವರಾಹ ರೂಪಂ’ ವಿವಾದ
ಅಲ್ಲಿಯವರೆಗೆ ನಾಗಾಲೋಟದಲ್ಲಿ ಸಾಗುತ್ತಿದ್ದ ‘ಕಾಂತಾರ’ ಚಿತ್ರಕ್ಕೆ ಕೇರಳದ ಥೈಕ್ಕುಡಂ ಬ್ರಿಡ್ಜ್‌ ಮ್ಯೂಸಿಕ್‌ ಬ್ಯಾಂಡ್‌ನಿಂದ ಹಿನ್ನಡೆಯಾಯ್ತು. ಅದು ‘ಕಾಂತಾರ’ ಸಿನಿಮಾದ ಆತ್ಮದಂತಿರುವ ‘ವರಾಹ ರೂಪಂ’ ಹಾಡಿನ ಟ್ಯೂನ್‌ಗೆ ಸಂಬಂಧಿಸಿದ ವಿವಾದ. 2017ರಲ್ಲಿ ತಾನು ಸಂಯೋಜಿಸಿದ್ದ ‘ನವರಸಂ’ ಟ್ಯೂನ್‌ ‘ವರಾಹ ರೂಪಂ’ ನಲ್ಲಿ ಬಳಕೆಯಾಗಿದೆ ಎಂದು ಥೈಕ್ಕುಡಂ ಬ್ರಿಡ್ಜ್‌ ಚಕಾರ ಎತ್ತಿತು. ಕಾಪಿರೈಟ್‌ ಕಾಯ್ದೆಯಡಿ ಕೇರಳದ ಕೋಝಿಕ್ಕೋಡ್‌ ಜಿಲ್ಲಾ ನ್ಯಾಯಾಲಯದಲ್ಲಿ ಅಕ್ಟೋಬರ್‌ 24ರಂದು ‘ಕಾಂತಾರ’ ನಿರ್ಮಿಸಿರುವ ಹೊಂಬಾಳೆ ಬ್ಯಾನರ್‌ ಹಾಗೂ ಚಿತ್ರದ ನಿರ್ದೇಶಕರು ಮತ್ತು ಸಂಗೀತ ಸಂಯೋಜಕರ ವಿರುದ್ಧ ಅವರು ದೂರು ದಾಖಲಿಸಿದರು. ಥೈಕ್ಕುಡಂ ಬ್ರಿಡ್ಜ್‌ ಪರ ನಿಂತ ಕೋಝಿಕ್ಕೋಡ್‌ ಕೋರ್ಟ್‌, ‘ಕಾಂತಾರ’ ತಂಡ ಈ ಹಾಡಿಗೆ ಸಂಬಂಧಿಸಿದಂತೆ ನೈತಿಕ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದಿತು. ಇದು ಅಕ್ಟೋಬರ್‌ 28ರಂದು ಬಂದ ತೀರ್ಪು.

ಮತ್ತೊಂದು ದೂರು
ಇದಾಗಿ ವಾರದ ನಂತರ ಕೇರಳದ ಪಾಲಕ್ಕಾಡ್‌ ಜಿಲ್ಲಾ ನ್ಯಾಯಾಲಯವೂ ‘ಕಾಂತಾರ’ ಚಿತ್ರದ ನಡೆಯನ್ನು ಪ್ರಶ್ನಿಸಿತು. ‘ನವರಸಂ’ ಹಾಡಿನ ಕಾಪಿರೈಟ್‌ ಹೊಂದಿರುವ ಮಾತೃಭೂಮಿ ಪ್ರಿಂಟಿಂಗ್‌ ಅಂಡ್‌ ಪಬ್ಲಿಷಿಂಗ್‌ ಕಂಪನಿ ಲಿಮಿಟೆಡ್‌ ದೂರು ಆಧರಿಸಿ ನೀಡಿದ ತೀರ್ಪು ಇದು. ‘ವರಾಹ ರೂಪಂ’ ಟ್ಯೂನ್‌ ಚಿತ್ರಮಂದಿರಗಳಲ್ಲಿ ಹಾಗೂ OTT ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆಯಾಗುವಂತಿಲ್ಲ ಎನ್ನುವ ತೀರ್ಪಿನಿಂದಾಗಿ ‘ಕಾಂತಾರ’ ತಂಡಕ್ಕೆ ತೀವ್ರ ಹಿನ್ನೆಡೆಯಾಯ್ತು. ಹೊಂಬಾಳೆ ಸಂಸ್ಥೆ ಈ ತೀರ್ಪಿನ ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತಾದರೂ ಇಂಬು ಸಿಗಲಿಲ್ಲ. ಕೇರಳ ಹೈಕೋರ್ಟ್‌ ರಾಜ್ಯದ ಜಲ್ಲಾ ನ್ಯಾಯಾಲಯಗಳ ತೀರ್ಪುಗಳನ್ನು ಎತ್ತಿ ಹಿಡಿಯಿತು. ಈ ಹಾಡಿನ ರಾಗದ ಕುರಿತಾಗಿ ಚರ್ಚೆಗಳು ಶುರುವಾದವು. ಒಂದೇ ರಾಗದಲ್ಲಿ (ತೋಡಿ) ಸಂಯೋಜಿಸಿರುವ ಎರಡು ಹಾಡುಗಳ ಟ್ಯೂನ್‌ನಲ್ಲಿ ಸಾಮ್ಯತೆ ಸಹಜ ಎಂದು ಚಿತ್ರತಂಡದವರು ಸಮರ್ಥಿಸಿಕೊಂಡರು. ತಮ್ಮ ಯಥಾವತ್‌ ಟ್ಯೂನ್‌ ಬಳಕೆ ಮಾಡಿಕೊಂಡಿದ್ದಾರೆ ಎಂದೇ ಥೈಕ್ಕುಡಂ ಬ್ರಿಡ್ಜ್‌ ಮ್ಯೂಸಿಕ್‌ ಬ್ಯಾಂಡ್‌ ವಾದಿಸಿತು.

ಟ್ಯೂನ್‌ ಇಲ್ಲದೆ OTTಗೆ ಬಂತು ಸಿನಿಮಾ
ನ್ಯಾಯಾಲಯದ ಆದೇಶದಂತೆ ಚಿತ್ರದ ನಿರ್ಮಾಪಕರು ‘ವರಾಹ ರೂಪಂ’ ಹಾಡನ್ನು ಯೂಟ್ಯೂಬ್‌ನಿಂದ ತೆಗೆದರು. ಹಾಡಿಗೆ ಸಂಬಂಧಿಸಿದಂತೆ ವಿವಾದ ದೊಡ್ಡ ಮಟ್ಟದಲ್ಲಿ ಬೆಳೆಯುವ ಬಗ್ಗೆ ಹೊಂಬಾಳೆ ಸಂಸ್ಥೆಗೆ ಸೂಚನೆ ಇರಲಿಕ್ಕಿರಲಿಲ್ಲ. ಅವರು ಓಟಿಟಿ ರಿಲೀಸ್‌ಗೆ ಸಿದ್ಧವಾಗಿದ್ದರು. ಕೇರಳ ಹೈಕೋರ್ಟ್‌ ನಡೆಯಿಂದಾಗಿ ಸಿನಿಮಾದ ಆತ್ಮದಂತಿದ್ದ ‘ವರಾಹ ರೂಪಂ’ ಟ್ಯೂನ್‌ ತೆಗೆದು ಬೇರೆ ಸಂಯೋಜನೆಯೊಂದಿಗೆ ಚಿತ್ರವನ್ನು ಓಟಿಟಿಗೆ ಒಪ್ಪಿಸಿದರು. ಪ್ರಸ್ತುತ ಅಮೇಜಾನ್‌ ಪ್ರೈಂನಲ್ಲಿ ಸ್ಟ್ರೀಮ್‌ ಆಗುತ್ತಿರುವ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿನ ಈ ಆಕರ್ಷಕ ಟ್ಯೂನ್‌ ಮಾಯವಾಗಿದೆ. ಕರಾವಳಿಯ ಸಾಂಸ್ಕೃತಿಕ ಆಚರಣೆ ಭೂತಾರಾಧನೆಗೆ ಸಮರ್ಪಕವಾಗಿ ಒಪ್ಪಿದ್ದ ಈ ಟ್ಯೂನ್‌ ತುಂಬಾ ಜನಪ್ರಿಯವಾಗಿತ್ತು. ಇದೀಗ ಓಟಿಟಿಯಲ್ಲಿ ಸಿನಿಮಾ ವೀಕ್ಷಿಸುತ್ತಿರುವ ಜನರು ಈ ಟ್ಯೂನ್‌ ಇಲ್ಲದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಮೂಲ ಟ್ಯೂನ್‌ ಇರಬೇಕಿತ್ತು ಎನ್ನುವುದು ಅವರ ಅಭಿಪ್ರಾಯ.

ಹಾಡಿನ ಬಳಕೆಗೆ ಅನುವು ನೀಡಿದ ಕೋಝಿಕ್ಕೋಡ್‌ ಕೋರ್ಟ್‌
ನಿನ್ನೆ ನಡೆದ ಬೆಳವಣಿಗೆಯಲ್ಲಿ ಹಾಡಿಗೆ ಸಂಬಂಧಿಸಿದಂತೆ ಹೊಂಬಾಳೆ ಸಂಸ್ಥೆಯ ಪರವಾಗಿ ತೀರ್ಪು ಸಿಕ್ಕಿದೆ. ಹಾಡಿಗೆ ಸಂಬಂಧಿಸಿದಂತೆ ಥೈಕ್ಕುಡಂ ಬ್ರಿಡ್ಜ್‌ ಮ್ಯೂಸಿಕ್‌ ಬ್ಯಾಂಡ್‌ ಸಮರ್ಪಕ ದಾಖಲೆ ಒದಗಿಸದ ಕಾರಣ ತೀರ್ಪು ‘ಕಾಂತಾರ’ ಸಿನಿಮಾ ಪರವಾಗಿ ಬಂದಿದೆ. ದೂರನ್ನು ವಜಾ ಗೊಳಿಸಿರುವ ಕೋಝಿಕ್ಕೋಡ್‌ ನ್ಯಾಯಾಲಯ ಹಾಡು ಬಳಕೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ. ಹಾಗೆಂದು ಚಿತ್ರತಂಡ ತತ್ತಕ್ಷಣ ಮೂಲ ಟ್ಯೂನ್‌ ಬಳಕೆ ಮಾಡುವಂತಿಲ್ಲ. ಇದೇ ಹಾಡಿಗೆ ಸಂಬಂಧಿಸಿದಂತೆ ಪಾಲಕ್ಕಾಡ್‌ ಕೋರ್ಟ್‌ನಲ್ಲಿರುವ ದೂರು ಇನ್ನೂ ವಿಚಾರಣೆಯಲ್ಲಿದೆ. ಅಲ್ಲಿನ ತೀರ್ಪು ಕೂಡ ಸಿನಿಮಾ ಪರವಾಗಿ ಬಂದರೆ ಮಾತ್ರ ಸಿನಿಮಾದಲ್ಲಿ ಮೂಲ ಟ್ಯೂನ್‌ ಕೇಳಿಸಲಿದೆ. ಪ್ರತಿಷ್ಠಿತ ಚಿತ್ರನಿರ್ಮಾಣ ಸಂಸ್ಥೆ ಎಂದು ಗುರುತಿಸಿಕೊಂಡಿರುವ ಹೊಂಬಾಳೆ ಬ್ಯಾನರ್‌ ಮತ್ತು ಥೈಕ್ಕುಡಂ ಬ್ರಿಡ್ಜ್‌ ಮ್ಯೂಸಿಕ್‌ ಬ್ಯಾಂಡ್‌ ಇಬ್ಬರಿಗೂ ಇದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಪಾಲಕ್ಕಾಡ್‌ ನ್ಯಾಯಾಲಯದಲ್ಲೂ ತೀರ್ಪು ತಮ್ಮ ಪರವಾಗಿ ಆಗಲಿದೆ ಎನ್ನುವುದು ಚಿತ್ರತಂಡದ ಆಶಯ. ಹಾಗಾಗಲಿ ಎಂದೇ ಸಿನಿಮಾಪ್ರಿಯರು ಅಪೇಕ್ಷಿಸುತ್ತಿದ್ದಾರೆ. ಮುಂದಿನ ವಾರ ಈ ವಿವಾದ ತಾರ್ಕಿಕ ಅಂತ್ಯ ಕಾಣುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ.

Previous articleಟ್ರೈಲರ್‌ | ಮರ್ಡರ್‌ ಮಿಸ್ಟರಿ ಸಿನಿಮಾ ‘ಫ್ಲಾಟ್‌ #9’; ಡಿಸೆಂಬರ್‌ 2ಕ್ಕೆ ತೆರೆಗೆ
Next articleಬೆಳ್ಳಿತೆರೆಗೆ ನಟ ಪ್ರೇಮ್‌ ಪುತ್ರಿ ಅಮೃತಾ; ‘ಟಗರು ಪಲ್ಯ’ ಸಿನಿಮಾದ ನಾಯಕಿ

LEAVE A REPLY

Connect with

Please enter your comment!
Please enter your name here