ಪ್ರಸ್ತುತ ರಂಗಭೂಮಿ, ಕಿರುತೆರೆ, ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಹಲವರು ‘ಅಭಿನಯ ತರಂಗ’ ರಂಗಶಾಲೆಯ ವಿದ್ಯಾರ್ಥಿಗಳು. ಈ ಹೊತ್ತಿಗೆ ‘ಅಭಿನಯ ತರಂಗ’ಕ್ಕೆ ನಲವತ್ತು ವಸಂತಗಳು ತುಂಬಿವೆ. ‘ತರಂಗೋತ್ಸವ’ ಶೀರ್ಷಿಕೆಯಡಿ ‘ರಂಗಶಂಕರ’ದಲ್ಲಿ ಈ ಮೈಲುಗಲ್ಲನ್ನು ಸಂಭ್ರಮಿಸಲಾಯ್ತು.

ರಂಗಕರ್ಮಿ ಎ.ಎಸ್‌.ಮೂರ್ತಿ ಅವರು ಸ್ಥಾಪಿಸಿದ ಸಂಸ್ಥೆ ‘ಅಭಿನಯ ತರಂಗ’ ರಂಗಶಿಕ್ಷಣ ಸಂಸ್ಥೆಗೆ ನಲವತ್ತು ವರ್ಷ ತುಂಬಿತು. ಈ ಸಂಸ್ಥೆಯಲ್ಲಿ ತರಬೇತಿ ಪಡೆದ ನೂರಾರು ಪ್ರತಿಭಾವಂಗರು ರಂಗಭೂಮಿ, ಕಿರುತೆರೆ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ರಂಗಶಾಲೆಗೆ ನಲವತ್ತು ವರ್ಷ ಪೂರ್ಣಗೊಂಡ ಸಂಭ್ರಮಾಚರಣೆಯನ್ನು ‘ತರಂಗೋತ್ಸವ’ ಶೀರ್ಷಿಕೆಯಡಿ ವಿವಿಧ ಕಾರ್ಯಕ್ರಮಗಳ ಮೂಲಕ ಸೆಲೆಬ್ರೇಟ್‌ ಮಾಡಲಾಯ್ತು. ‘ಅಭಿನಯ ತರಂಗ’ದ ಪ್ರಾಂಶುಪಾಲೆ ಗೌರಿ ದತ್ತು ಅವರ ನೇತೃತ್ವದಲ್ಲಿ ‘ರಂಗ ಶಂಕರ’ದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಟಕೋತ್ಸವ, ವಿಚಾರ ಸಂಕಿರಣ, ರಂಗಗೀತೆಗಳು, ಕವಿಗೋಷ್ಠಿ ನಡೆದವು.

‘ತರಂಗೋತ್ಸವ’ದ ಸಂಭ್ರಮಾಚರಣೆಯ ಕೊನೆಯ ದಿನ ‘ಗಾಡೊ’ ಹಾಗೂ ‘ಕೋರ್ಟ್ ಮಾರ್ಷಲ್’ ನಾಟಕಗಳು ಪ್ರದರ್ಶನಗೊಂಡರೆ, ಹಿರಿಯರಾದ ಕವಿ ಬಿ.ಆರ್. ಲಕ್ಷ್ಮಣ್ ರಾವ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನೆರವೇರಿತು. ಚಲನಚಿತ್ರ ನಿರ್ದೇಶಕರಾದ ಜಯತೀರ್ಥ, ಗೀತ ರಚನೆಕಾರ ನಾಗೇಂದ್ರ ಪ್ರಸಾದ್, ಡಾ.ವಿಜಯಮ್ಮ, ಬಿ.ಸುರೇಶ್ ಮುಂತಾದವರು ಉಪಸ್ಥಿತರಿದ್ದರು. ಅನೇಕ ರಂಗಕರ್ಮಿಗಳು, ರಂಗಾಸಕ್ತರು, ಅಭಿನಯ ತರಂಗದ ಅನೇಕ ಹಿರಿಯ ವಿಧ್ಯಾರ್ಥಿಗಳು ಪಾಲ್ಗೊಂಡರು. ಭಾನುವಾರ ಆಯೋಜನೆಗೊಂಡಿದ್ದ ‘ಕೋರ್ಟ್ ಮಾರ್ಷೆಲ್’ ಮತ್ತು ‘ಗಾಡೊ’ ನಾಟಕಗಳು ರಂಗಾಸಕ್ತರ ಗಮನಸೆಳೆದವು. ಕೆ.ಪಿ.ಲಕ್ಷ್ಮಣ್‌ ರಂಗ ವಿನ್ಯಾಸ ಮಾಡಿ ನಾಟಕಗಳನ್ನು ನಿರ್ದೇಶಿಸಿದ್ದರು. ಸಂಗೀತ ನಿರ್ವಹಣೆ ಪೂರ್ವಿ ಕಲ್ಯಾಣಿ ಅವರದ್ದಾದರೆ ಬೆಳಕು ಮಂಜು ನಾರಾಯಣ್ ಅವರದು.

ಫ್ರೆಂಚ್‌ ನಾಟಕಕಾರ ಸ್ಯಾಮುಯಲ್ ಬೆಕೆಟ್‌ನ ‘ವೇಟಿಂಗ್‌ ಫಾರ್ ಗಾಡೊ’ ಅಬ್ಸರ್ಡ್ ನಾಟಕದ ಕನ್ನಡ ಅವತರಣಿಕೆ ‘ಗಾಡೊ’. ಎ.ಎನ್.ಪ್ರಸನ್ನ ನಿರ್ದೇಶನದ ನಾಟಕ. ಕಾಯುವಿಕೆಯಲ್ಲಿನ ಮನುಷ್ಯನ ಸ್ಥಿತಿಗತಿ, ಹಾಗೇ ತಾನು ಬದುಕುತ್ತಿರುವ ಜಗತ್ತಿನ ವ್ಯವಸ್ಥೆಯಲ್ಲಿ ತುಂಬಿಕೊಂಡಿರುವ ಕೆಡುಕು, ದೇಶದ ಪ್ರಜೆಯಾಗಿ ಮನುಷ್ಯನಾಗಿ ಒಳ್ಳೆ ದಿನಗಳ ಮೇಲೆ ಇಟ್ಟಿರುವ ನಂಬಿಕೆ, ಮನುಷ್ಯರ ಒಂಟಿತನ, ಸಾಮಾಜಿಕ – ಮಾನಸಿಕ ತೊಳಲಾಟವನ್ನು ತೆರೆದಿಟ್ಟ ರಂಗಪ್ರಯೋಗ. ಈಶ್ವರ್, ರೋಹನ್, ರಾಹುಲ್, ಅನನ್ಯ ಮೋಹನ್, ವೈಷ್ಣವಿ, ಅರಬಿಂದ್’ ಗೌತಮ್ ಮುಂತಾದವರು ನಟಿಸಿದ್ದರು.

ಪ್ರದರ್ಶನಗೊಂಡ ಮತ್ತೊಂದು ನಾಟಕ ‘ಕೋರ್ಟ್ ಮಾರ್ಷೆಲ್’. ದೀಪಕ್‌ ಅವರ ‘ಸ್ವದೇಶ್‌’ ನಾಟಕದ ಕನ್ನಡ ಅವತರಣಿಕೆ ಇದು. ಕನ್ನಡೀಕರಿಸಿದವರು ಸಿದ್ದಲಿಂಗ ಪಟ್ಟಣ ಶೆಟ್ಟಿ. ಸೇನಾಧಿಕಾರಿ ಕ್ಯಾಪ್ಟನ್‌ ವರ್ಮಾನನ್ನು ಕೊಂದಿರುವ ಮತ್ತೊಬ್ಬ ಸೇನಾಧಿಕಾರಿ ಕ್ಯಾಪ್ಟನ್‌ ಕಪೂರ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪಿ ‘ಸವಾರ್’ ರಾಮಚಂದ್ರನ ವಿಚಾರಣೆಯೊಂದಿಗೆ ಆರಂಭಗೊಳ್ಳುತ್ತದೆ ನಾಟಕ. ಇಂದಿಗೂ ಸಮಾಜದಲ್ಲಿ ನಾವು ನೋಡುತ್ತಿರುವ ಜಾತಿನಿಂದನೆ, ಅಸ್ಪೃಶ್ಯತೆ, ಸೇನೆಯ ಅಧಿಕಾರ ವ್ಯವಸ್ಥೆಯೊಳಗೂ ಹೇಗಿದೆ ಎಂಬುದು ಮತ್ತು ವಿದ್ಯಾವಂತರೂ ಹೆಣ್ಣಿನ ಮೇಲೆ ಎಸಗಬಹುದಾದ ಶೋಷಣೆ, ಅಧಿಕಾರಿಗಳ ದರ್ಪ ದೌರ್ಜನ್ಯ, ಅಸ್ಪೃಶ್ಯತೆಯ ದೌರ್ಬಲ್ಯ ಎಲ್ಲದನ್ನೂ ಒಳಗೊಂಡಿದೆ. ನಮ್ಮ ವ್ಯವಸ್ಥೆಯಲ್ಲಿ ನಿಜವಾದ ಅಪರಾಧಿಗಳು ಯಾರು ಎಂಬುದನ್ನು ಪ್ರಶ್ನಿಸುತ್ತದೆ. ಪ್ರವೀಣ್ ಕರಡೇರ, ಸಂದೀಪ್, ಜಿ.ಬಿ, ಸೃಜನ್, ಕುಶಾಲ್, ಶರತ್, ರಾಜ್ ಕಿರ್ತಿ, ಅಶ್ವಿನಿ ಮುಂತಾದವರು ನಟಿಸಿದರು.

LEAVE A REPLY

Connect with

Please enter your comment!
Please enter your name here