ವಿನಾಯಕ್‌ ನಿರ್ದೇಶನದ ‘ಫುಲ್ ಮೀಲ್ಸ್’ ಚಿತ್ರತಂಡದಿಂದ ಯುಗಾದಿ ಅಂಗವಾಗಿ ವಿಶೇಷ ಪೋಸ್ಟರ್‌ ಬಿಡುಗಡೆಯಾಗಿದೆ. ಲಿಖಿತ್‌ ಶೆಟ್ಟಿ, ತೇಜಸ್ವಿನಿ ಶರ್ಮ ಮತ್ತು ಖುಷಿ ರವಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರಕ್ಕೆ ಗುರುಕಿರಣ್‌ ಸಂಗೀತ ಸಂಯೋಜನೆಯಿದೆ.

ಯುಗಾದಿ ಹಬ್ಬಕ್ಕೆ ಹಲವಾರು ಚಿತ್ರತಂಡಗಳು ಹೊಸ ಪೋಸ್ಟರ್‌ಗಳನ್ನ ರಿಲೀಸ್‌ ಮಾಡಿವೆ. ಅಂತೆಯೇ ‘ಫುಲ್ ಮೀಲ್ಸ್’ ಚಿತ್ರತಂಡ ಸಹ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ‘ಸಂಕಷ್ಟಕರ ಗಣಪತಿ’, ‘ಫ್ಯಾಮಿಲಿ ಪ್ಯಾಕ್’, ‘ಅಬ್ಬಬ್ಬ’ ಚಿತ್ರಗಳ ಖ್ಯಾತಿಯ ನಾಯಕ ನಟ ಲಿಖಿತ್ ಶೆಟ್ಟಿ ನಟಿಸಿ, ನಿರ್ಮಿಸುತ್ತಿರುವ ಸಿನಿಮಾ ಇದು. ‘ದಿಯಾ’ ಸಿನಿಮಾ ಖ್ಯಾತಿಯ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಇಬ್ಬರು ನಾಯಕಿಯರು ಒಂದೇ ಬಾಳೆ ಎಲೆಯಲ್ಲಿ ಊಟ ಮಾಡುತ್ತಿರುವ ಪೋಸ್ಟರ್ ಅನ್ನು ಹಬ್ಬದ ದಿನ ಬಿಡುಗಡೆ ಮಾಡಲಾಗಿದೆ. ಹಬ್ಬದ ದಿನ ಎಲ್ಲರೂ ಒಟ್ಟಿಗೆ ಸೇರಿ ಸಂಭ್ರಮಿಸುವ ಪರಿಕಲ್ಪನೆ ಮೇಲೆ ಈ ಪೋಸ್ಟರ್‌ ಮಾಡಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲವು ಕೆಲಸಗಳು ಬಾಕಿಯಿದ್ದು, ಆದಷ್ಟು ಶೀಘ್ರದಲ್ಲಿ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನದಲ್ಲಿ ಚಿತ್ರತಂಡ ತೊಡಗಿಕೊಂಡಿದೆ.

ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥೆ ಹೊಂದಿರುವ ಈ ಚಿತ್ರ ಮನೋರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಎನ್ ವಿನಾಯಕ. ಈ ಚಿತ್ರದ ಮೂಲಕ ಮೊದಲ ಬಾರಿಗೆ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹರೀಶ್ ಗೌಡ ಸಂಭಾಷಣೆ ಬರೆದಿದ್ದು, ಮನೋಹರ್ ಜೋಷಿ ಛಾಯಾಗ್ರಹಣ, ಗುರು ಕಿರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. ರಂಗಾಯಣ ರಘು, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಸೂರಜ್ ಲೋಕ್ರೆ, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ನಾಗೇಂದ್ರ ಅರಸ್, ಮೂಗು ಸುರೇಶ್ ಚಿತ್ರದ ತಾರಾಗಣದಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here